“ನಾನು, ಸತೀಶ್ ಜಾರಕಿಹೊಳಿ, ಮಹದೇವಪ್ಪರೊಂದಿಗಿನ ಸಭೆಯು ಯಾವುದೇ ರಾಜಕೀಯ ಮೀಟಿಂಗ್ ಅಲ್ಲ” ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ. ಗುರುವಾರ ಸತೀಶ್ ಜಾರಕಿಹೊಳಿ ಅವರ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಸಭೆಯು ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಈ ಸಭೆಯು ಸಾಮಾನ್ಯ ಸ್ನೇಹಿತರ ಚರ್ಚೆಯಾಗಿಯೇ ನಡೆದಿದ್ದು, ಇದರಲ್ಲಿ ಯಾವುದೇ ವಿಶೇಷ ರಾಜಕೀಯ ಉದ್ದೇಶವಿಲ್ಲ ಎಂದು ಅವರು ಹೇಳಿದ್ದಾರೆ. ಈ ಹೇಳಿಕೆಯು ಕಾಂಗ್ರೆಸ್ ಪಕ್ಷದ ಆಂತರಿಕ ರಾಜಕೀಯ ಚಂಚಲತೆಯ ಹಿನ್ನೆಲೆಯಲ್ಲಿ ಮಹತ್ವದ್ದಾಗಿದೆ, ಏಕೆಂದರೆ ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ನಾಯಕತ್ವ ಬದಲಾವಣೆಯ ಕುರಿತು ಗುಸುಗುಸು ಮಾತುಗಳು ತೀವ್ರಗೊಂಡಿವೆ.
ಗುರುವಾರ (ಅಕ್ಟೋಬರ್ 9) ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಅಪಾರ್ಟ್‌ಮೆಂಟ್‌ನಲ್ಲಿ ಗೃಹ ಸಚಿವ ಪರಮೇಶ್ವರ, ಸಚಿವರಾದ ಎಚ್.ಸಿ. ಮಹದೇವಪ್ಪ ಅವರೊಂದಿಗೆ ಸಭೆ ನಡೆಸಿದರು. ಈ ಸಭೆಯು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅನುಪಸ್ಥಿತಿಯಲ್ಲಿ ನಡೆದಿದ್ದರಿಂದ, ಇದು ಸಂಪುಟ ಪುನರ್‌ರಚನೆ ಅಥವಾ ನಾಯಕತ್ವ ಬದಲಾವಣೆಯ ರಹಸ್ಯ ಚರ್ಚೆಯಾಗಿರಬಹುದು ಎಂಬ ಊಹಾಪೋಹಗಳು ಉಂಟಾಗಿದೆ.
ಇದನ್ನೂ ಓದಿ | ಸಿದ್ದರಾಮಯ್ಯರ ಔತಣಕೂಟ: ನವೆಂಬರ್‌ನಲ್ಲಿ ಸಂಪುಟ ಪುನರ್‌ರಚನೆ?
ಈ ವಿಚಾರವಾಗಿ ಪರಮೇಶ್ವರ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ಆ ಸಭೆಯಲ್ಲಿ ಯಾವುದೇ ವಿಶೇಷವಿಲ್ಲ. ಮಾಧ್ಯಮಗಳಿಗೆ ಹೇಗೆ ಕಾಣುತ್ತದೆ ಗೊತ್ತಿಲ್ಲ. ಹಾಗೆ ಸಭೆ ಮಾಡಿರೋದು ಮೊದಲ ಬಾರಿ ಅಲ್ಲ. ಅನೇಕ ಬಾರಿ ನಾನು ಜಾರಕಿಹೊಳಿ, ಮಹದೇವಪ್ಪರೊಂದಿಗೆ ಸಭೆ ಮಾಡಿದ್ದೇವೆ. ನಾವೆಲ್ಲ ಸ್ನೇಹಿತರು. ಕೆಲವು ವಿಷಯಗಳು ಚರ್ಚೆ ಮಾಡಬೇಕು ಅಂದಾಗ ಭೇಟಿ ಮಾಡುತ್ತೇವೆ. ಅದು ಪೊಲಿಟಿಕಲ್ ಮೀಟಿಂಗ್ ಅಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.







