“ಆರ್‌ಎಸ್‌ಎಸ್‌ನ ಚಟುವಟಿಕೆಗಳು ದೇಶದ ಜಾತ್ಯತೀತತೆ ಮತ್ತು ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿವೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಕ್ಟೋಬರ್ 12ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಸರ್ಕಾರಿ ಸ್ಥಳಗಳಲ್ಲಿ ನಿಷೇಧಿಸಲು ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ. ಈ ಕುರಿತು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಬೆನ್ನಲ್ಲೇ, ಮುಖ್ಯಮಂತ್ರಿಗಳು ಮುಖ್ಯ ಕಾರ್ಯದರ್ಶಿಗಳಿಗೆ ಈ ವಿಷಯವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರು ಬರೆದ ಪತ್ರದಲ್ಲಿ, ಸರ್ಕಾರಿ ಶಾಲೆಗಳು, ಕಾಲೇಜುಗಳು, ಉದ್ಯಾನಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ನ ಶಾಖೆ, ಸಾಂಘಿಕ್ ಅಥವಾ ಸಭೆಗಳನ್ನು ನಡೆಸದಂತೆ ನಿಷೇಧ ಹೇರಬೇಕು ಎಂದು ಕೋರಿದ್ದಾರೆ. ಈ ಪತ್ರ ಭಾನುವಾರ ಮಾಧ್ಯಮಗಳಿಗೆ ಸಿಕ್ಕಿದ್ದು, ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆರ್‌ಎಸ್‌ಎಸ್‌ನ ಚಟುವಟಿಕೆಗಳು ದೇಶದ ಜಾತ್ಯತೀತತೆ ಮತ್ತು ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿವೆ ಎಂದು ಖರ್ಗೆ ಆರೋಪಿಸಿದ್ದಾರೆ. ಈ ಸಂಘಟನೆಯು ಜನರ ನಡುವೆ ದ್ವೇಷವನ್ನು ಹರಡುತ್ತದೆ ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಈ ವಿಷಯವು ಆರ್‌ಎಸ್‌ಎಸ್‌ನ ಶತಾಬ್ದಿ ಸಂಭ್ರಮದ ಸಂದರ್ಭದಲ್ಲಿ ಬಂದಿದೆ .
ಸಿದ್ದರಾಮಯ್ಯನವರು ಈ ಒತ್ತಾಯಕ್ಕೆ ತಕ್ಷಣ ಸ್ಪಂದಿಸಿದ್ದಾರೆ. ಅವರು ಭಾನುವಾರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ನ ಯಾವುದೇ ಚಟುವಟಿಕೆಗೆ ಅವಕಾಶ ನೀಡಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ನಿರ್ದೇಶನವು ಕಾಂಗ್ರೆಸ್ ಸರ್ಕಾರದ ಜಾತ್ಯತೀತ ನೀತಿಯ ಭಾಗವಾಗಿದೆ. ಇದರಿಂದ ರಾಜ್ಯದಲ್ಲಿ ಧಾರ್ಮಿಕ ಸಾಮರಸ್ಯವನ್ನು ಕಾಪಾಡಬಹುದು ಎಂದು ಸರ್ಕಾರ ಭಾವಿಸಿದೆ.
ಇದನ್ನೂ ಓದಿ | ಒಂದು ಶೂ, ಒಂದು ಗುಂಡು ಹೇಳಿದ ಜಾತೀಯತೆಯ ಕ್ರೂರ ಕತೆ
ಈ ಬೆಳವಣಿಗೆಗೆ ಬಿಜೆಪಿ ತೀವ್ರವಾಗಿ ಪ್ರತಿಕ್ರಿಯಿಸಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿಯ್. ವೈ. ವಿಜಯೇಂದ್ರ ಅವರು ಈ ಒತ್ತಾಯವನ್ನು ಖಂಡಿಸಿದ್ದಾರೆ. ಈ ಕ್ರಮವನ್ನು “ಬುದ್ಧಿಹೀನ” ಎಂದು ಕರೆದ ಅವರು, ಕಾಂಗ್ರೆಸ್‌ಗೆ ತಿರುಗೇಟು ನೀಡುವುದಾಗಿ ಹೇಳಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಆರ್‌ಎಸ್‌ಎಸ್‌ನಂತಹ ಸಂಘಟನೆಗಳನ್ನು ನಿಷೇಧಿಸುವುದರಿಂದ ಯಾವುದೇ ಬದಲಾವಣೆ ಆಗದು ಎಂದು ತಿಳಿಸಿದ್ದಾರೆ. ಅವರ ಪ್ರಕಾರ, ರಾಜ್ಯದ ಬಹುತೇಕ ಶಾಸಕರು ಈ ಐಡಿಯಾಲಜಿಯಿಂದ ಬಂದವರಾಗಿದ್ದಾರೆ. ಬಿಜೆಪಿ ಈ ಕ್ರಮವನ್ನು “ಹಿಂದೂ ವಿರೋಧಿ” ಎಂದು ಕರೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಭಾರೀ ಚರ್ಚೆಗೆ ಕಾರಣವಾಗಿದೆ. ಆರ್‌ಎಸ್‌ಎಸ್ ಕೂಡ ಈ ನಿರ್ದೇಶನವನ್ನು “ಸ್ವಾತಂತ್ರ್ಯದ ಮೇಲಿನ ದಾಳಿ” ಎಂದು ಟೀಕಿಸಿದೆ.
ಈ ವಿವಾದವು ಕರ್ನಾಟಕದ ರಾಜಕೀಯದಲ್ಲಿ ಹೊಸ ತಿರುವು ತಂದಿದೆ. ಕಾಂಗ್ರೆಸ್ ಸರ್ಕಾರ ತನ್ನ ಜಾತ್ಯತೀತ ನೀತಿಯನ್ನು ಬಲಪಡಿಸಲು ಈ ಕ್ರಮ ಕೈಗೊಂಡಿದೆ. ಆದರೆ, ಆರ್‌ಎಸ್‌ಎಸ್ ತನ್ನ ಶತಾಬ್ದಿ ಸಂಭ್ರಮವನ್ನು ರಾಜ್ಯಾದ್ಯಂತ ಆಚರಿಸುತ್ತಿದ್ದು, ಇದು ರಾಜಕೀಯ ಉದ್ವಿಗ್ನತೆಯನ್ನು ಹೆಚ್ಚಿಸಿದೆ.







