ರಾಷ್ಟ್ರೀಯ ರಾಜಕೀಯದಲ್ಲಿ ಬಿಹಾರ ವಿಧಾನಸಭಾ ಚುನಾವಣೆ ಮಹತ್ವದ ಪರಿಣಾಮ ಬೀರಲಿದೆ. 243 ಸೀಟುಗಳಿಗೆ ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಫಲಿತಾಂಶ ನವೆಂಬರ್ 14ರಂದು ಪ್ರಕಟವಾಗಲಿದೆ. ಎನ್‌ಡಿಎ ಮೈತ್ರಿಕೂಟದಲ್ಲಿ ಸೀಟು ಹಂಚಿಕೆಯಿಂದ ಭಿನ್ನಾಭಿಪ್ರಾಯಗಳು ಉಂಟಾಗಿದ್ದು, ಜನ್ ಸುರಾಜ್ ಪಕ್ಷದ ಪ್ರಶಾಂತ್ ಕಿಶೋರ್ ಹೊಸ ತಂತ್ರದೊಂದಿಗೆ ಕಣದಲ್ಲಿದ್ದಾರೆ. ಮಹಾಗಠಬಂಧನ್‌ನಲ್ಲಿಯೂ ಒಳಗಿನ ಸಂಘರ್ಷಗಳು ತೀವ್ರಗೊಂಡಿವೆ.
ಪ್ರಶಾಂತ್ ಕಿಶೋರ್‌ರ ರಣತಂತ್ರ
ಪ್ರಶಾಂತ್ ಕಿಶೋರ್‌ರ ಜನ್ ಸುರಾಜ್ ಪಕ್ಷವು ಚುನಾವಣೆಯಲ್ಲಿ ಹೊಸ ಆಯಾಮವನ್ನು ತಂದಿದೆ. ಕಿಶೋರ್ ಸ್ಪರ್ಧಿಸದಿರಲು ನಿರ್ಧರಿಸಿದ್ದು, ಪಕ್ಷದ ಸಂಘಟನೆಗೆ ಒತ್ತು ನೀಡುವುದಾಗಿ ತಿಳಿಸಿದ್ದಾರೆ. ಜನ್ ಸುರಾಜ್ 117 ಅಭ್ಯರ್ಥಿಗಳನ್ನು ಘೋಷಿಸಿದ್ದು, ರಘೋಪುರದಿಂದ ಚಂಚಲ್ ಸಿಂಗ್ ಸ್ಪರ್ಧಿಸುತ್ತಾರೆ.
ಕಿಶೋರ್ ಎನ್‌ಡಿಎಯ ಒಳಗಿನ ಗೊಂದಲವನ್ನು ಟೀಕಿಸಿದ್ದಾರೆ. ಜೆಡಿಯು ಕೇವಲ 25 ಸೀಟುಗಳನ್ನು ಗೆಲ್ಲಬಹುದು ಮತ್ತು ನಿತೀಶ್ ಕುಮಾರ್ ಮತ್ತೆ ಸಿಎಂ ಆಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಜನ್ ಸುರಾಜ್ 150ಕ್ಕಿಂತ ಕಡಿಮೆ ಸೀಟುಗಳು ಬಂದರೆ ಸೋಲು ಎಂದು ಪರಿಗಣಿಸುವುದಾಗಿ ಹೇಳಿದ್ದಾರೆ. ಅಧಿಕಾರಕ್ಕೆ ಬಂದರೆ, 100 ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಆಸ್ತಿ ವಶಪಡಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಕಿಶೋರ್‌ರ ತಂತ್ರವು ಯುವ ಓಟರ್‌ಗಳನ್ನು ಮತ್ತು ಭ್ರಷ್ಟಾಚಾರದ ವಿರುದ್ಧ ಕೋಪಗೊಂಡಿರುವ ಜನರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ. ಆರ್‌ಜೆಡಿ ಇದನ್ನು “ಸೋಲಿನ ಸ್ವೀಕಾರ” ಎಂದು ಟೀಕಿಸಿಸಿದೆ.
ಬಿಜೆಪಿಯ ಸೀಟು ವಿತರಣೆ ಮತ್ತು ಎನ್‌ಡಿಎ ಗೊಂದಲ
ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಮತ್ತು ಜೆಡಿಯು ತಲಾ 101 ಸೀಟುಗಳನ್ನು ಹಂಚಿಕೊಂಡಿವೆ. ಎಲ್‌ಜೆಪಿ(ಆರ್‌ವಿ)ಗೆ 29 ಸೀಟುಗಳು, ಆರ್‌ಎಲ್‌ಎಮ್‌ಗೆ 6 ಸೀಟುಗಳು ಮತ್ತು ಎಚ್‌ಎಎಮ್‌ಗೆ 6 ಸೀಟುಗಳು ಸಿಕ್ಕಿವೆ. ಬಿಜೆಪಿ 71 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಿಸಿದ್ದು, ಉಪಮುಖ್ಯಮಂತ್ರಿ ಸಮ್ರಾಟ್ ಚೌಧರಿ ತರಪೂರ್, ವಿಜಯ್ ಸಿನ್ಹಾ ಲಖಿಸರೈ ಮತ್ತು ರೇಣು ದೇವಿ ಬೆಟ್ಟಿಯಾದಿಂದ ಸ್ಪರ್ಧಿಸುತ್ತಾರೆ. ಜೆಡಿಯು 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮಹೇಶ್ವರ್ ಹಜಾರಿ ಕಲ್ಯಾಣಪುರ ಮತ್ತು ಅನಂತ್ ಸಿಂಗ್ ಮೊಕಾಮಾದಿಂದ ಕಣಕ್ಕಿಳಿದಿದ್ದಾರೆ.
ಆದರೆ, ಸೀಟು ಹಂಚಿಕೆಯಿಂದ ಎನ್‌ಡಿಎಯಲ್ಲಿ ಅಸಮಾಧಾನ ಮೂಡಿದೆ. ಆರ್‌ಎಲ್‌ಎಮ್ ಮುಖ್ಯಸ್ಥ ಉಪೇಂದ್ರ ಕುಶ್ವಾಹಾ, ಮಹುವಾ ಸೀಟು ಎಲ್‌ಜೆಪಿ(ಆರ್‌ವಿ)ಗೆ ನೀಡಿದ್ದಕ್ಕೆ ಬೇಸರಗೊಂಡಿದ್ದಾರೆ. ಅವರು ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಚರ್ಚಿಸಿದ್ದಾರೆ. ಜೆಡಿಯು ಶಾಸಕ ಗೋಪಾಲ್ ಮಂಡಲ್ ಸಿಎಂ ನಿವಾಸದ ಮುಂದೆ ಧರಣಿ ನಡೆಸಿದ್ದಾರೆ, ಮತ್ತು ಸಂಸದ ಅಜಯ್ ಕುಮಾರ್ ಮಂಡಲ್ ರಾಜೀನಾಮೆ ಸಲ್ಲಿಸಿದ್ದಾರೆ. ಎಸ್‌ಬಿಎಸ್‌ಪಿ ಪಕ್ಷ ಎನ್‌ಡಿಎದಿಂದ ಹೊರಬಂದು ಸ್ವತಂತ್ರವಾಗಿ ಸ್ಪರ್ಧಿಸುತ್ತಿದೆ. ಪ್ರಧಾನಿ ಮೋದಿ ಅಕ್ಟೋಬರ್ 15ರಂದು ಬೂತ್ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ, ಬಿಜೆಪಿಯ ಚೈತನ್ಯ ಹೆಚ್ಚಿಸುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ | ಬಿಹಾರ್ ಚುನಾವಣೆ ವೇಳೆಯೇ ಲಾಲು ಯಾದವ್ ಕುಟುಂಬಕ್ಕೆ ದೊಡ್ಡ ಆಘಾತ!
ಜೆಡಿಯು ಮತ್ತು ಕಾಂಗ್ರೆಸ್‌ನ ಒಳಗಿನ ಸಂಘರ್ಷ
ಮಹಾಘಠಬಂಧನ್‌ನಲ್ಲಿ ಸೀಟು ಹಂಚಿಕೆ ಗೊಂದಲ ಮುಂದುವರಿದಿದೆ. ಆರ್‌ಜೆಡಿ ಕಾಂಗ್ರೆಸ್‌ಗೆ 58 ಸೀಟುಗಳನ್ನು ನೀಡಲು ಸಿದ್ಧವಿದೆ, ಆದರೆ ಕಾಂಗ್ರೆಸ್ 70 ಸೀಟುಗಳನ್ನು ಕೇಳಿದೆ. ಸಿಪಿಐ(ಎಂಎಲ್) 30 ಸೀಟುಗಳನ್ನು ಬಯಸಿದ್ದರೂ, ಆರ್‌ಜೆಡಿ 19 ಸೀಟುಗಳನ್ನು ಒಡ್ಡಿದೆ. ದೆಹಲಿಯಲ್ಲಿ ಎರಡು ಸುತ್ತಿನ ಸಭೆಗಳ ನಂತರವೂ ಒಪ್ಪಂದವಾಗಿಲ್ಲ. ತೇಜಸ್ವಿ ಯಾದವ್ ರಘೋಪುರದಿಂದ ನಾಮಪತ್ರ ಸಲ್ಲಿಸಲಿದ್ದಾರೆ. ಆರ್‌ಜೆಡಿ ನಾಯಕ ಮೃತ್ಯುಂಜಯ್ ತಿವಾರಿ, ಬಿಜೆಪಿ ಜೆಡಿಯುವನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ. ಜೆಡಿಯು ಒಳಗಿನ ಸಂಘರ್ಷವೂ ತೀವ್ರಗೊಂಡಿದೆ. ಗೋಪಾಲ್ ಮಂಡಲ್‌ರ ಧರಣಿ ಮತ್ತು ಅಜಯ್ ಕುಮಾರ್ ಮಂಡಲ್‌ರ ರಾಜೀನಾಮೆ ಪಕ್ಷಗಳ ಒಳಗಿನ ಒಡಕನ್ನು ಎತ್ತಿ ತೋರಿಸುತ್ತವೆ.







