ಭಾರತದಾದ್ಯಂತ ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ಒಂದೇ ಹೆಸರನ್ನು ಉಚ್ಚರಿಸುತ್ತಿವೆ. ಅದು ಶಫಾಲಿ ವರ್ಮಾ. ಹರಿಯಾಣದ ಸಣ್ಣ ಹಳ್ಳಿಯಿಂದ ಹೊರಟ ಆ ಹುಡುಗಿ, 87 ರನ್‌ಗಳ ಇನ್ನಿಂಗ್ಸ್ ಮತ್ತು ಮುಖ್ಯ ವಿಕೆಟ್‌ಗಳನ್ನು ಪಡೆದು ದಕ್ಷಿಣ ಆಫ್ರಿಕಾವನ್ನು ಮಣಿಸಿ, 2025ರ ಐಸಿಸಿ ಮಹಿಳೆಯರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತಕ್ಕೆ ಮೊದಲ ಕಿರೀಟ ತಂದುಕೊಟ್ಟರು; ಪ್ಲೇಯರ್ ಆಫ್ ದಿ ಮ್ಯಾಚ್ ಆದ ಆ ಧೀರತೆಯ ಹೆಸರು ಕೇಳಿದೊಡನೆಯೇ ಈಕೆ ಭಾರತೀಯಳು ಎನ್ನುವ ಗರ್ವ ಮತ್ತು ಸ್ಫೂರ್ತಿ ಒಟ್ಟಿಗೇ ಮೂಡುತ್ತದೆ. ಏಕೆಂದರೆ ಶಫಾಲಿಯ ಕಥೆ ಭಾರತದ ಹೊಸ ಇತಿಹಾಸ.
ಬಾಲ್ಯದ ಕನಸುಗಳು

ಹರಿಯಾಣದ ರೋಥಕ್‌ನಂತಹ ಸಣ್ಣ ನಗರದಲ್ಲಿ, 2004ರ ಜನವರಿ 28ರಂದು ಜನಿಸಿದ ಶಫಾಲಿ ವರ್ಮಾ, ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ಮಗಳು. ತಂದೆ ಸಂಜೀವ್ ವರ್ಮಾ ಅವರು ಒಂದು ಚಿಕ್ಕ ಅಂಗಡಿ ನಡೆಸುತ್ತಿದ್ದು ತಾಯಿ ಪ್ರವೀಣ ಬಾಲಾ ಅವರು ಗೃಹಿಣಿಯಾಗಿ ಕುಟುಂಬವನ್ನು ನೋಡಿಕೊಳ್ಳುತ್ತಿದ್ದರು. ಒಬ್ಬ ಚಿಕ್ಕ ಸಹೋದರನೊಂದಿಗೆ ಬೆಳೆದ ಆಕೆ, ಬಾಲ್ಯದಿಂದಲೇ ಕ್ರಿಕೆಟ್‌ಗೆ ಆಕರ್ಷಿತರಾಗಿದ್ದರು.
ಐದನೇ ವಯಸ್ಸಿನಲ್ಲಿಯೇ ಬ್ಯಾಟ್ ಹಿಡಿದು ಗಲ್ಲಿಯಲ್ಲಿ ಆಟವಾಡುತ್ತಿದ್ದ ಅವರು, ಎಂಟು ವರ್ಷಕ್ಕೆ ಕ್ರಿಕೆಟ್ ಅಕಾಡೆಮಿಗೆ ಸೇರಿದರು. ಆಗಲೇ ಅವರ ಆಕ್ರಮಣಕಾರಿ ಬ್ಯಾಟಿಂಗ್‌ನಲ್ಲಿ ಸ್ಪಿನ್ ಬೌಲರ್‌ಗಳನ್ನು ದೂರ ತಳ್ಳುವ ನಿರ್ಭೀತತೆ ತರಬೇತುದಾರರ ಗಮನ ಸೆಳೆಯಿತು.
ಹರಿಯಾಣದ ರಾಜ್ಯ ತಂಡದಲ್ಲಿ ಆಟವಾಡುತ್ತಾ, ಆಕೆ ತನ್ನ ಪ್ರತಿಭೆಯನ್ನು ತೋರಿಸಿದರು. 2018ರಲ್ಲಿ 14 ವರ್ಷ ವಯಸ್ಸಿನಲ್ಲೇ ಭಾರತದ U-19 ತಂಡಕ್ಕೆ ಸೇರಿದ್ದು, ಅವರ ಜೀವನದ ಮೊದಲ ದೊಡ್ಡ ಹಂತವಾಗಿತ್ತು. ರೋಥಕ್‌ನಂತಹ ಸ್ಥಳದಲ್ಲಿ ಮಹಿಳಾ ಕ್ರಿಕೆಟ್ ಇನ್ನೂ ಹೊಸತನದಲ್ಲಿದ್ದ ಸಮಯದಲ್ಲಿ, ಆಕೆಯಂತಹ ಒಂದು ತಾರೆಯ ಉದಯವು ಸ್ಥಳೀಯ ಯುವತಿಯರಿಗೆ ಹೊಸ ಬೆಳಕನ್ನು ತಂದಿತು. ಅವರ ರೋಲ್ ಮಾಡೆಲ್ ಸಚಿನ್ ಟೆಂಡುಲ್ಕರ್. ಅವರ ಆದರ್ಶದಿಂದಲೇ ಶಫಾಲಿಯವರು ಬ್ಯಾಟಿಂಗ್‌ನಲ್ಲಿ ಧೈರ್ಯವನ್ನು ಬೆಳೆಸಿಕೊಂಡರು. ಚಿಕ್ಕ ವಯಸ್ಸಿನಲ್ಲಿ ಹುಡುಗರ ತಂಡಗಳಲ್ಲಿ ಆಟವಾಡಲು ಶಫಾಲಿಯವರ ತಾಯಿ ತಂದೆ ಇವರ ತಲೆ ಕೂದಲನ್ನು ಕತ್ತರಿಸಿ ಹುಡುಗನಂತೆ ಮಾಡಿದ್ದರು. ಆಗ ಆಕೆ ಒಂದು U-12 ಟೂರ್ನಿಯಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಆಯ್ಕೆಯಾಗಿ, ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದರು.

ಡೆಬ್ಯೂನ ಧಾವಂತ: ಯುವತನದ ರೆಕಾರ್ಡ್‌ಗಳ ರಾಣಿ
ದೊಡ್ಡ ಕ್ರಿಕೆಟ್ ಮೈದಾನಕ್ಕೆ ಶಫಾಲಿ ವರ್ಮಾ ಅವರ ಪ್ರವೇಶವು ಇಂದು ಇತಿಹಾಸಕ್ಕೆ ಸೇರಿದೆ. 2019ರ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ T20I ಸರಣಿಯಲ್ಲಿ ಡೆಬ್ಯೂ ಮಾಡಿದರು. ಆ ಮ್ಯಾಚ್‌ನಲ್ಲಿ 49 ಬೌಲ್‌ಗಳಲ್ಲಿ 73 ರನ್‌ಗಳನ್ನು ಗಳಿಸಿ, ಮಹಿಳಾ T20Iಯಲ್ಲಿ ಅತ್ಯಂತ ಯುವ ವೈಯಕ್ತಿಕ ಸ್ಕೋರ್ ರೆಕಾರ್ಡ್ ಸ್ಥಾಪಿಸಿದರು. ಅವರ ಬ್ಯಾಟಿಂಗ್ನಲ್ಲಿ ಆರಂಭದ ಓವರ್‌ಗಳಲ್ಲಿರುವ ಧಾವಂತ, ಸ್ಪಿನ್‌ಗೆ ವಿರುದ್ಧ ಶಕ್ತಿಶಾಲಿ ಪ್ರದರ್ಶನ ಭಾರತೀಯ ಮಹಿಳಾ ಕ್ರಿಕೆಟ್‌ಗೆ ಹೊಸ ಉತ್ತೇಜನ ತಂದಿತು.
ಆನಂತರ, ಮಹಿಳಾ T20Iಯಲ್ಲಿ 1000 ರನ್‌ಗಳನ್ನು ಗಳಿಸುವ ಅತ್ಯಂತ ಯುವ ಕ್ರಿಕೆಟರ್ ಎಂದು ಮುಂದುವರಿದರು. ಇದುವರೆಗೆ 91 T20I ಮ್ಯಾಚ್‌ಗಳಲ್ಲಿ ಸ್ಟ್ರೈಕ್ ರೇಟ್ 129ಕ್ಕೆ ಹತ್ತಿರವಾಗಿ ಆಟವಾಡಿದ್ದಾರೆ. ಶಫಾಲಿಯವರ ನಾಯಕತ್ವದಲ್ಲಿ 2023ರ ಐಸಿಸಿ U-19 ಮಹಿಳೆಯರ T20 ವರ್ಲ್ಡ್ ಕಪ್‌ನಲ್ಲಿ ಭಾರತವನ್ನು ಮೊದಲ ಬಾರಿಗೆ ಗೆಲ್ಲಿಸಿ ಕೊಟ್ಟರು. ಆ ಟೂರ್ನಿಯಲ್ಲಿ ಅವರ ಪ್ರದರ್ಶನವು ಐತಿಹಾಸಿಕವಾಗಿತ್ತು.
ವುಮನ್ಸ್ ಪ್ರೀಮಿಯರ್ ಲೀಗ್ (WPL)ಯಲ್ಲಿ ಡೆಲ್ಹಿ ಕ್ಯಾಪಿಟಲ್ಸ್ ತಂಡದ ಎರಡನೇ ಅತ್ಯಧಿಕ ರನ್ ಸ್ಕೋರರ್ ಆಗಿ, ಆಕೆಯ ಆಕ್ರಮಣಾತ್ಮಕ ಶೈಲಿ ಲೀಗ್‌ಗೆ ಹೊಸ ಆಯಾಮವನ್ನು ನೀಡಿತು. 2024ರ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತೀಯ ಮಹಿಳೆಯರಲ್ಲಿ ಎರಡನೇ ಡಬಲ್ ಸೆಂಚುರಿ (205 ರನ್‌ಗಳು) ಸ್ಥಾಪಿಸಿದರು, ಇದು ಮಿಥಾಲಿ ರಾಜ್ ಅವರ ನಂತರದ ದೊಡ್ಡ ಗುರುತಾಯಿತು.

ಸವಾಲುಗಳು:
ಶಫಾಲಿಯ ಗೆಲುವಿನ ಹಿಂದೆ ಇದೆ ಹಲವು ಕಷ್ಟಗಳ ಕಥೆ. ಅದರಲ್ಲಿ 2024ರಲ್ಲಿ ಭಾರತ ತಂಡದಿಂದ ಹೊರಬೀಳುವುದು ಅವರ ಜೀವನದ ಅತ್ಯಂತ ಕಠಿಣ ಕ್ಷಣವಾಗಿತ್ತು. ಇದಕ್ಕೂ ಎರಡು ದಿನ ಮುಂಚೆ ತಂದೆ ಸಂಜೀವ್ ವರ್ಮಾ ಅವರಿಗೆ ಹೃದಯಾಘಾತ ಸಂಭವಿಸಿತ್ತು; ಆಕೆ ತಂಡದಿಂದ ಹೊರಬಿದ್ದ ಸುದ್ದಿಯನ್ನು ತಂದೆಯಿಂದ ಮರೆಮಾಚಲಾಯಿತು, ಏಕೆಂದರೆ ಕುಟುಂಬದ ಬೆಂಬಲವೇ ಅವರಿಗಿರುವ ಏಕೈಕ ಶಕ್ತಿಯಾಗಿತ್ತು. ಆ ವರ್ಷ ನಿರಂತರ ಹೋರಾಟ ಮಾಡಿ ನೆಟ್ ಪ್ರ್ಯಾಕ್ಟೀಸ್‌ಗಳಲ್ಲಿ ದಿನವಿಡೀ ಕಳೆಯುತ್ತಿದ್ದರು. ಇಂತಹ ಕಷ್ಟದ ಸಮಯದಲ್ಲಿ ತಾಯಿ ಪ್ರಮೀಳಾ ಮತ್ತು ಸಹೋದರನ ಬೆಂಬಲ ಮತ್ತೆ ಅವರನ್ನು ಗಟ್ಟಿಗೊಳಿಸಿತು. ಆ ಹೋರಾಟದಲ್ಲಿ ಆಕೆ ಹೆಚ್ಚು ದೃಢಗೊಂಡರು. ಅದು 2025ರಲ್ಲಿ ಫಲ ಕೊಟ್ಟಿತು.
2024ರಲ್ಲಿ ಭಾರತದ ಹಿರಿಯ ತಂಡದಿಂದ ಹೊರಬಿದ್ದ ನಂತರ, ಆಕೆ ಹರಿಯಾಣ ತಂಡದ ಪರ ಈ ರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿ 527 ರನ್ ಮತ್ತು 414 ರನ್ ಗಳಿಸಿ, ತನ್ನ ಫಾರ್ಮ್ ಸಾಬೀತುಪಡಿಸಿ ಪುನರಾಗಮನ ಮಾಡಿದರು.
ವರ್ಲ್ಡ್ ಕಪ್ ಗೌರವ: ಪುನರಾಗಮನದ ಮಹತ್ವದ ಕ್ಷಣ
2025ರ ಐಸಿಸಿ ಮಹಿಳೆಯರ ಏಕದಿನ ವಿಶ್ವಕಪ್ ಎನ್ನುವುದು ಶಫಾಲಿ ವರ್ಮಾ ಅವರ ಜೀವನದ ಮಹತ್ತರವಾದ ತಿರುವಾಗಿತ್ತು. ಟೂರ್ನಿಯ ಲೀಗ್ ಹಂತದಲ್ಲಿ ಪ್ರತೀಕಾ ರಾವಳ್ ಗಾಯಗಳು ಸಂಭವಿಸಿ ಹೊರಬಿದ್ದಾಗ, ಶಫಾಲಿಗೆ ತಕ್ಷಣ ತಂಡಕ್ಕೆ ಸೇರಲು ಕರೆ ಬಂದಿತು. ಆರಂಭದಲ್ಲಿ ಸ್ವಲ್ಪ ಆತಂಕವಾದರೂ ಕೂಡ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ನಂಬಿಕೆಯು ಆಕೆಯನ್ನು ಶಾಂತಗೊಳಿಸಿತು.

ಫೈನಲ್ ಮ್ಯಾಚ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 87 ರನ್‌ಗಳ ಇನಿಂಗ್ಸ್‌ನೊಂದಿಗೆ ಆರಂಭದ ಟೋನ್ ಹೊಂದಿಸಿ, ಆಕೆಯ ಬೌಲಿಂಗ್‌ನಿಂದ 2 ವಿಕೆಟ್‌ಗಳನ್ನು ಪಡೆದು ಭಾರತದ 52 ರನ್‌ಗಳ ವಿಜಯವನ್ನು ಖಚಿತಪಡಿಸಿದರು. ಭಾರತವು ಮೊದಲ ಬಾರಿಗೆ ಟ್ರೋಫಿ ಗೆದ್ದಿತು. ಆ ಗೆಲುವು ಆಕೆಯ ಕಷ್ಟಸಾಧನೆಯ ಪ್ರತಿಫಲವಾಗಿತ್ತು.
ವಿಶ್ವ ಕಪ್ ಗೆದ್ದ ನಂತರ ರೋಥಕ್‌ನ ಪ್ರತಿ ರಸ್ತೆಗಳಲ್ಲಿ ಜನರ ಚಪ್ಪಾಳೆಗಳು, ಕುಟುಂಬದವರ ಭಾವುಕ ಕ್ಷಣಗಳು. ಅದು ಆಕೆಯ ಜೀವನದ ಅತ್ಯುತ್ತಮ ಭಾಗವಾಗಿತ್ತು. “ನಾನು ಕೇವಲ ಆಟವಾಡುತ್ತಿದ್ದೆ” ಎಂದು ಶಫಾಲಿ ವರ್ಮಾ ಎಂದಿದ್ದಾರೆ .ಅದು ಆಕೆಯ ಸರಳತೆಯನ್ನು ತೋರುತ್ತದೆ. ಈ ಪುನರಾಗಮನವು ಆಕೆಯನ್ನು ದೇಶದ ಹೃದಯಸ್ಥಾನಕ್ಕೆ ತಂದಿದೆ. ಸ್ಮೃತಿ ಮಂಧನಾ ಅವರೊಂದಿಗೆ 104 ರನ್‌ಗಳ ಓಪನಿಂಗ್ ಪಾರ್ಟನರ್ ಆಕೆಯ ಕೊಡುಗೆಯ ಒಂದು ಭಾಗವಾಗಿತ್ತು.
ಇದನ್ನೂ ಓದಿ | ದೀಪ್ತಿ ಶರ್ಮಾ : ಆಗ್ರಾದಿಂದ ವಿಶ್ವಕಪ್‌ವರೆಗಿನ ಹೃದಯಸ್ಪರ್ಶಿ ಪಯಣ
ಪರಂಪರೆ ಮತ್ತು ಪ್ರೇರಣೆ: ಭವಿಷ್ಯದ ತಾರೆಗಳ ಬೆಳಕು
ಇಂದು 21 ವರ್ಷ ವಯಸ್ಸಿನ ಶಫಾಲಿ, ಭಾರತದ ಮಹಿಳಾ ತಂಡದ ಮುಖ್ಯ ಆಟಗಾರ್ತಿಯಾಗಿದ್ದಾರೆ. ಆಕೆಗೆ ಕ್ರಿಕೆಟ್ ಆಟಕ್ಕಿಂತ ಹೆಚ್ಚು. ಸಣ್ಣ ಹಳ್ಳಿಯ ಯುವತಿ ಕುಟುಂಬದ ಬೆಂಬಲದೊಂದಿಗೆ ಕಷ್ಟಗಳನ್ನು ಎದುರಿಸಿ, ದೇಶಕ್ಕೆ ಗೌರವ ತಂದುಕೊಟ್ಟರು. ಇದು ಎಲ್ಲರ ಹೃದಯಕ್ಕೆ ಸ್ಪರ್ಶಿಸುತ್ತದೆ. ಭವಿಷ್ಯದ ತಾರೆಗಳು ಇವರಂತಾಗಲು ಕನಸು ಕಾಣುತ್ತಾರೆ; ಯುವತಿಯರು ಕ್ರಿಕೆಟ್ ಕ್ಷೇತ್ರದಲ್ಲಿ ಧೈರ್ಯ ಮತ್ತು ಕೆಲಸದ ಮಹತ್ವವನ್ನು ಕಲಿಯುತ್ತಾರೆ. ರೋಥಕ್‌ನಿಂದ ಉದಯಿಸಿ, ಭಾರತದ ಮಹಿಳಾ ಕ್ರಿಕೆಟ್‌ಗೆ ಹೊಸ ಆಯಾಮವನ್ನು ನೀಡಿದ್ದಾರೆ. ಅವರ ಬ್ಯಾಟ್‌ನಿಂದ ಹೊಡೆದ ಪ್ರತಿ ರನ್, ಒಂದು ಸಂದೇಶ: ಕಷ್ಟಗಳು ತಾತ್ಕಾಲಿಕ, ಶ್ರಮವೇ ಶಾಶ್ವತ ಗೆಲುವು.







