ಕ್ರಿಕೆಟ್ ಬ್ಯಾಟ್‌ಗೆ ಚಂಡು ಬಂದು ಬಿದ್ದಾಗ ಆಕ ಶಬ್ದ ಮತ್ತು ಬೌಲಿಂಗ್ ಮಾಡಿದವರ ಹೃದಯ ಮಿಡಿತದ ಶಬ್ದ ಎರಡು ಒಂದೇ ತರಹವಿರುತ್ತದೆ. ಬೌಲಿಂಗ್ ರನ್‌ಅಪ್‌ನಲ್ಲಿರುವವರ ಎದೆಯ ಧ್ವನಿ, ಮತ್ತು ಗೆಲುವಿನ ಕ್ಷಣದಲ್ಲಿ ಹರಿಯುವ ಕಣ್ಣೀರುಗಳು, ಇವೆಲ್ಲವೂ ಒಂದು ದೇಶದ ಕನಸುಗಳನ್ನು ನೆರವೇರಿಸುವ ಹೊಸ ಕಥೆಯ ಹಂದರಗಳು. ಆ ಕಥೆಯ ಮುಖ್ಯ ಪಾತ್ರವಾಗಿ ನಿಂತು, ಭಾರತೀಯ ಮಹಿಳಾ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿದವರಲ್ಲಿ ದೀಪ್ತಿ ಶರ್ಮಾ ಕೂಡ ಒಬ್ಬರು. ಅವರ ಕಥೆ ಕೇವಲ ಕ್ರಿಕೆಟ್ ಸ್ಕೋರ್‌ಬೋರ್ಡ್‌ನ ಸಂಖ್ಯೆಗಳಲ್ಲಿ ಮಾತ್ರವಿಲ್ಲ, ಅದು ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಹುಡುಗಿ ಹೇಗೆ ಕಷ್ಟಗಳನ್ನು ದಾಟಿ, ದೇಶಕ್ಕೆ ಹೆಮ್ಮೆಯ ಚಿನ್ನವನ್ನು ತಂದುಕೊಟ್ಟರು ಎಂಬ ಹೃದಯಸ್ಪರ್ಶಿ ಗಾಥೆ. ಇಂದು, 2025ರ ವಿಶ್ವಕಪ್ ಚಾಂಪಿಯನ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರ ಕಥೆ, ಪ್ರತಿ ಭಾರತೀಯ ಹುಡುಗಿಯರಿಗೆ ಸ್ಫೂರ್ತಿಯ ದೀಪವಾಗಿದೆ.
ಬಾಲ್ಯ:

ದೀಪ್ತಿ ಶರ್ಮಾ ಅವರು 1997 ರ ಸೆಪ್ಟೆಂಬರ್ 24 ರಂದು ಉತ್ತರ ಪ್ರದೇಶದ ಆಗ್ರಾದಲ್ಲಿ ಜನಿಸಿದರು. ಆಗ್ರಾ, ತಾಜ್ ಮಹಲ್‌ನ ನಗರವಾಗಿದ್ದರೂ, ಅಲ್ಲಿ ಕ್ರಿಕೆಟ್ ಎಂಬ ಕನಸುಗಳು ಸುಲಭವಾಗಿ ಹುಟುವುದಿಲ್ಲ. ಸಾಮಾನ್ಯ ಕುಟುಂಬದಲ್ಲಿ ಬೆಳೆದ ದೀಪ್ತಿ, ಬಾಲ್ಯದಿಂದಲೇ ಕ್ರಿಕೆಟ್‌ಗೆ ಆಕರ್ಷಿತರಾಗಿದ್ದರು. ಅವರ ಕುಟುಂಬವು ಅವರ ಕ್ರಿಕೆಟ್ ಕನಸನ್ನು ಬೆಂಬಲಿಸಿತು, ಆದರೆ ಅದರೊಂದಿಗೆ ಬಂದಿದ್ದವು ಅನೇಕ ಸವಾಲುಗಳು.
ಕ್ರಿಕೆಟ್ ಕನಸುಗಳ ಆರಂಭ:
ಉತ್ತರ ಪ್ರದೇಶದಂತಹ ಪ್ರದೇಶದಲ್ಲಿ ಮಹಿಳಾ ಕ್ರಿಕೆಟ್ ಸಾಧನೆಗಳಿಗೆ ಅವಕಾಶಗಳು ಕಡಿಮೆಯೇ ಇರುತ್ತವೆ. ಅಂತಹದ್ದರಲ್ಲಿ ದೀಪ್ತಿ ಆರಂಭದಲ್ಲಿ ಸ್ಥಳೀಯ ತಂಡಗಳಲ್ಲಿ ಆಡುತ್ತಾ, ತನ್ನ ಆಟವನ್ನು ಸುಧಾರಿಸಿಕೊಂಡು ಹೋಗುತ್ತಿದ್ದರು. ಅವರು ಬ್ಯಾಟಿಂಗ್ ಮಾಡುವ ವಿಧಾನ ಮತ್ತು ಬೌಲಿಂಗ್‌ನಲ್ಲಿ ತೋರುವ ಚತುರತೆ, ಶೀಘ್ರದಲ್ಲೇ ಎಲ್ಲರ ಗಮನ ಸೆಳೆಯಿತು. ದೀಪ್ತಿ ಶರ್ಮಾ ಅವರು 2014 ರ ನವೆಂಬರ್ 21 ರಂದು ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಮೊದಲ ಬಾರಿಗೆ ಆಯ್ಕೆಯಾಗಿ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ವಿಶ್ವಮಟ್ಟದಲ್ಲಿ ಮೊದಲ ಬಾರಿಗೆ ಪ್ರವೇಶ ಮಾಡಿದರು. ಆ ಪಂದ್ಯದಲ್ಲಿ ಅವರು 2 ವಿಕೆಟ್‌ಗಳನ್ನು ಪಡೆದು ಗಮನ ಸೆಳೆದರು. ಆದರೆ ಇದು ಕೇವಲ ಆರಂಭದ ಹೆಜ್ಜೆಯಷ್ಟೇ ಆಗಿತ್ತು. ನಿಜವಾದ ಸವಾಲುಗಳು, ಸ್ಥಿರತೆಯ ಹುಡುಕಾಟ, ವಿಶ್ವಕಪ್‌ಗಳಲ್ಲಿ ಒತ್ತಡ, ಮತ್ತು ಆಲ್‌ರೌಂಡರ್ ಆಗಿ ತಮ್ಮನ್ನು ಸಾಬೀತುಪಡಿಸಿಕೊಳ್ಳುವ ಹೋರಾಟ ಇನ್ನೂ ಮುಂದಿತ್ತು.

ಸವಾಲುಗಳು:
ಮಹಿಳಾ ಕ್ರಿಕೆಟ್‌ನಲ್ಲಿ ದೀಪ್ತಿಯ ಪಯಣವು ಸುಗಮವಾಗಿರಲಿಲ್ಲ. ಆರಂಭದಲ್ಲಿ ಅವರು ಏಕದಿನ (ODI) ಮತ್ತು T-20 ಫಾರ್ಮ್ಯಾಟ್‌ಗಳಲ್ಲಿ ಸ್ಥಿರ ಪ್ರದರ್ಶನ ನೀಡುವುದು ಒಂದು ದೊಡ್ಡ ಸವಾಲಾಗಿತ್ತು. ಬ್ಯಾಟಿಂಗ್‌ನಲ್ಲಿ ಉತ್ತಮ ರನ್ ಮತ್ತು ಬೌಲಿಂಗ್‌ನಲ್ಲಿ ಸ್ಪಿನ್‌ನ ಮೂಲಕ ನಿಯಂತ್ರಣವನ್ನು ಕಾಯ್ದುಕೊಳ್ಳುವಲ್ಲಿ ಗಮನ ಹರಸುತ್ತಿದ್ದರು. 2017 ರಲ್ಲಿ, ದಕ್ಷಿಣ ಆಫ್ರಿಕಾದಲ್ಲಿ ನಡೆದ ಕ್ವಾಡ್ರಾಂಗುಲರ್ ಸರಣಿಯಲ್ಲಿ ಐರ್ಲೆಂಡ್ ವಿರುದ್ಧದ ODI ಪಂದ್ಯದಲ್ಲಿ ಅವರು 188 ರನ್‌ಗಳ ಐತಿಹಾಸಿಕ ಬ್ಯಾಟಿಂಗ್ ಮಾಡುವುದರ ಮೂಲಕ ಮೊದಲ ವಿಶ್ವ ಮಟ್ಟದಲ್ಲಿ ಶತಕವನ್ನು ಸಾಧಿಸಿದರು, ಇದು ಮಹಿಳಾ ODIಗಳಲ್ಲಿ ಎರಡನೇ ಅತಿ ಹೆಚ್ಚು ಒಂದು ಇನ್ನಿಂಗ್ಸ್ ಸ್ಕೋರ್ ಆಗಿತ್ತು. ಇದು ಪುನಂ ರೌತ್‌ರೊಂದಿಗಿನ 320 ರನ್‌ಗಳ ಓಪನಿಂಗ್ ಪಾಲುಗಾರಿಕೆಯೊಂದಿಗೆ ವಿಶ್ವ ದಾಖಲೆಯನ್ನು ನಿರ್ಮಿಸಿತು ಮತ್ತು ಎಲ್ಲರನ್ನೂ ಆಶ್ಚರ್ಯಗೊಳಿಸಿತು. ಆದರೂ, ವಿಶ್ವಕಪ್‌ಗಳಲ್ಲಿ ಭಾರತ ತಂಡದ ಹಿಂದಿನ ವೈಫಲ್ಯಗಳು, ಅದರಲ್ಲೂ, ವಿಶೇಷವಾಗಿ 2017ರ ವಿಶ್ವಕಪ್‌ನಲ್ಲಿ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ 9 ರನ್‌ಗಳ ಸೋಲು, ಮತ್ತು 2022ರ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೆ ತಲುಪದೆ ಗ್ರೂಪ್ ಸ್ಟೇಜ್‌ನಲ್ಲಿ ಸೌತ್ ಆಫ್ರಿಕಾದ ವಿರುದ್ಧದ ಸೋಲುಗಳೆಲ್ಲವು ದೀಪ್ತಿಯನ್ನು ಹೆಚ್ಚು ಬಲಿಷ್ಠರನ್ನಾಗಿ ಮಾಡಿದವು.
ಈ ನಿರಾಶೆಗಳಿಂದ ಪಾಠ ಕಲಿತ ಅವರು, ತಮ್ಮ ಪ್ರಯತ್ನವನ್ನು ಹೆಚ್ಚಿಸಿ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಹಂತಗಳಲ್ಲೂ ಸಮತೋಲನವನ್ನು ಕಾಯ್ದುಕೊಂಡರು. ಉದಾಹರಣೆಗೆ, ಬ್ಯಾಟಿಂಗ್‌ನಲ್ಲಿ ಚುರುಕು ಇನ್ನಿಂಗ್ಸ್ ಮತ್ತು ಬೌಲಿಂಗ್‌ನಲ್ಲಿ ಆಫ್-ಸ್ಪಿನ್‌ನ ಮೂಲಕ ಹೆಚ್ಚಿನ ವಿಕೆಟ್‌ಗಳು ಪಡೆಯುವತ್ತ ಗಮನ ಹರಿಸಿದರು. ಉತ್ತರ ಪ್ರದೇಶ ವಾರಿಯರ್ಜ್ (UP Warriorz) ತಂಡದೊಂದಿಗೆ ವುಮನ್ಸ್ ಪ್ರೀಮಿಯರ್ ಲೀಗ್ (WPL)ಲ್ಲಿ ಆಡುತ್ತಾ, ಅವರು ದೇಶೀಯ ಮಟ್ಟದಲ್ಲಿ ತಮ್ಮ ಆಲ್‌ರೌಂಡ್ ಕೌಶಲ್ಯವನ್ನು ಪರೀಕ್ಷಿಸಿಕೊಂಡರು. 2023ರ ಮೊದಲ WPL ಹರಾಜಿನಲ್ಲಿ ₹2.6 ಕೋಟಿಗೆ ಖರೀದಿಸಲ್ಪಟ್ಟ ಅವರು, 2024ರಲ್ಲಿ ಹ್ಯಾಟ್-ಟ್ರಿಕ್ ಪಡೆದ ಮೊದಲ ಭಾರತೀಯ ಬೌಲರ್ ಆದರು. ಜೊತೆಗೆ MVP ಪ್ರಶಸ್ತಿ ಗೆದ್ದರು.

ಆಧ್ಯಾತ್ಮಿಕ ನಂಬಿಕೆ ಮತ್ತು ಸರ್ಕಾರಿ ಗೌರವ:
ದೀಪ್ತಿ ಶರ್ಮಾಳ ಕಥೆಯಲ್ಲಿ ಕ್ರಿಕೆಟ್ ಮಾತ್ರವಲ್ಲ, ಬೇರೆ ವಿಷಯಗಳೂ ಇವೆ. ಕಷ್ಟ ಬಂದಾಗ ಅವರಿಗೆ ಬಲ ನೀಡಿದ್ದು ಅವರ ನಂಬಿಕೆಗಳು. ಅವರ ಕೈಯಲ್ಲಿ ಹನುಮಂತನ ಟ್ಯಾಟೂ ಇದೆ. ಇನ್‌ಸ್ಟಾಗ್ರಾಂನಲ್ಲಿ ‘ಜೈ ಶ್ರೀರಾಮ್’ ಎಂದು ಬರೆದಿದ್ದಾರೆ. ಈ ನಂಬಿಕೆಯಿಂದ ಅವರು ಮೈದಾನದಲ್ಲಿ ಧೈರ್ಯ ತೋರಿದರು. ವಿಶ್ವಕಪ್ ಗೆದ್ದ ನಂತರ ಪ್ರಧಾನಮಂತ್ರಿ ಮೋದಿ ಅವರೊಂದಿಗೆ ಮಾತಾಡಿದರು. ದೀಪ್ತಿ ಹೇಳಿದರು: “ಕಷ್ಟದಲ್ಲಿ ಹನುಮಂತನ ಹೆಸರು ನೆನಪಾದರೆ ಶಕ್ತಿ ಬರುತ್ತದೆ.” ಮೋದಿ ಅವರೂ ಒಪ್ಪಿದರು. ಉತ್ತರ ಪ್ರದೇಶ ಸರ್ಕಾರ ಅವರನ್ನು 2025 ಜನವರಿಯಲ್ಲಿ ಡಿಎಸ್‌ಪಿ (ಉಪ ಪೊಲೀಸ್ ಅಧಿಕಾರಿ) ಆಗಿ ನೇಮಿಸಿತು (ಏಷ್ಯನ್ ಗೇಮ್ಸ್ ಚಿನ್ನ ಮತ್ತು ಇತರ ಸಾಧನೆಗಳಿಗಾಗಿ). ₹3 ಕೋಟಿ ಬಹುಮಾನವೂ ನೀಡಿತು. ಇದು ಕ್ರಿಕೆಟ್‌ನಿಂದ ಸಮಾಜ ಸೇವೆಗೆ ಹೊಸ ದಾರಿ ತೆರೆದಿತು. ದೀಪ್ತಿ ಈ ಹೊಸ ಕೆಲಸವನ್ನು ಸ್ವೀಕರಿಸಿ, ಜೀವನದ ಹೊಸ ಅಧ್ಯಾಯ ಶುರು ಮಾಡಿದ್ದಾರೆ.

ಇದನ್ನೂ ಓದಿ | ಸ್ಮೃತಿ ಮಂಧಾನ: ತಾಯಿಯ ಹೃದಯದಲ್ಲಿ ಸ್ಮೃತಿಯ ಶತಕ
ಸ್ಫೂರ್ತಿಯ ಸಂಕೇತ:
ದೀಪ್ತಿ ದೀಪ್ತಿಯ ಆಟವು ಕೇವಲ ವೈಯಕ್ತಿಕ ಸಾಧನೆಯಲ್ಲ, ಅದು ಒಂದು ದೊಡ್ಡ ಬದಲಾವಣೆಯ ಸಂಕೇತ. ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ, ಹುಡುಗಿಯರು ದೊಡ್ಡ ಕನಸು ಕಾಣುವಂತೆ ಅವರು ಪ್ರೇರಣೆಯಾಗಿದ್ದಾರೆ. ದೀಪ್ತಿಯ ಪಾಲಿಗೆ, ಗೌರವಗಳು ಕೇವಲ ಮೈಲುಗಲ್ಲುಗಳು. ಅವರು ತಮ್ಮ ಆಟದ ಮೂಲಕ, ಮಹಿಳಾ ಕ್ರಿಕೆಟ್‌ನಲ್ಲಿ ಸಮಾನತೆ ಮತ್ತು ಅವಕಾಶಗಳ ಬಗ್ಗೆ ಮಾತನಾಡುತ್ತಿದ್ದಾರೆ. ಟೂರ್ನಿಯಲ್ಲಿ ತೋರಿದ ಅವರ ಧೈರ್ಯ, ತಂಡದ ಸಹಕಾರ ಮತ್ತು ವೈಯಕ್ತಿಕ ಹೋರಾಟ ಇವೆಲ್ಲವೂ ಒಂದು ಉದಾಹರಣೆ. ದೀಪ್ತಿ ಶರ್ಮಾಳ ಜೀವನವು ಒಂದು ದೊಡ್ಡ ಪಾಠ. ಆಗ್ರಾದ ಸಾಮಾನ್ಯ ಹುಡುಗಿಯಿಂದ 2025ರ ವಿಶ್ವ ಚಾಂಪಿಯನ್ ಆದ ಈ ಪಯಣ ಎಲ್ಲರಿಗೂ ಸ್ಪೂರ್ತಿ. ಕನಸುಗಳು ದೊಡ್ಡವು, ಆದರೆ ಅವುಗಳನ್ನು ಸಾಧಿಸಲು ಬೇಕಾದದ್ದು ದೃಢ ಸಂಕಲ್ಪ. ಇಂದು ಡಿಎಸ್‌ಪಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ದೀಪ್ತಿ, ಕ್ರಿಕೆಟ್ ಮೈದಾನದ ಹೊರಗೂ ತನ್ನ ಶಕ್ತಿಯನ್ನು ಹಂಚುತ್ತಿದ್ದಾರೆ. ಅವರ ಕಥೆ ಭಾರತದ ಮಹಿಳಾ ಕ್ರಿಕೆಟ್‌ನ ಭವಿಷ್ಯಕ್ಕೆ ಬೆಳಕಾಗಿದೆ.








