“ಗಡ್ಡಪ್ಪ ನನ್ನ ಸೋದರ ಮಾವ. ಚಿಕ್ಕವಯಸ್ಸಿನಿಂದಲೂ ಅವರೊಂದು ಆಕರ್ಷಣೆ. ಆಗಲೇ ಅವರ ಗಡ್ಡ ನಮಗೆ ಕುತೂಹಲದ ವಿಷಯವಾಗಿತ್ತು. ಅವರ ರೀತಿ ಯಾರೂ ಗಡ್ಡ ಬಿಟ್ಟಿರಲಿಲ್ಲ. ಪಾಂಡವಪುರ-ಮಂಡ್ಯ ಮುಖ್ಯರಸ್ತೆಯಲ್ಲಿ ಮನೆ ಇದೆ. ಆಗ ನೊದೆಕೊಪ್ಪಲು ಊರೊಳಗೆ ಮನೆ ಇತ್ತು. ಗುಡಿಸಿನಲ್ಲಿ ಟೀ ಅಂಗಡಿ ನಡೆಸುತ್ತಿದ್ದರು. ಊರಲ್ಲಿ ಅದೊಂದೆ ಹೋಟೆಲ್, ಎಲ್ಲ ಗಂಡಸರು ಅಲ್ಲೇ ಕೂತಿರುತ್ತಿದ್ದರು. ಅಪ್ಪ ಅಲ್ಲಿ ಕೂತಿದ್ದರೆ, ಕರೆಯೋಕೆ ಹೋಗುತ್ತಿದ್ದೆ. ಹಾಗೇ ಹೋದಾಗಲೆಲ್ಲಾ ಮಾವನ ಗಡ್ಡವನ್ನೇ ನೋಡುತ್ತಿದ್ದೆ.”
ಬುಧವಾರ ನಿಧನರಾದ ನಮ್ಮೆಲ್ಲರಿಗೆ ಗಡ್ಡಪ್ಪ ಎಂದೇ ಪರಿಚಿತರಾದ ಚನ್ನೇಗೌಡ ಅವರನ್ನು ನೆನಪಿಸಿಕೊಂಡು, ಚಿತ್ರ ನಿರ್ದೇಶಕರು ಹಾಗೂ ‘ತಿಥಿ’ ಚಿತ್ರದ ಕತೆಗಾರ, ಸಂಭಾಷಣೆಗಾರ ಈರೇಗೌಡ ಹಂಚಿಕೊಂಡ ಮಾತುಗಳಿವು. ಸಂಬಂಧಿಯಾಗಿದ್ದ ಗಡ್ಡಪ್ಪ ಅವರನ್ನು ಬಾಲ್ಯದಿಂದಲೂ ನೋಡುತ್ತಾ ಬೆಳೆದ ಈರೇಗೌಡ ತಮ್ಮ ನೆನಪುಗಳನ್ನು ಸಮಾಚಾರ.ಕಾಮ್‌ನೊಂದಿಗೆ ಹಂಚಿಕೊಂಡರು.

“ಹೀಗಿರುವಾಗ ಒಂದು ದಿನ, ಊರಿಂದ ಹೊರಗೆ ಬಂದು ಮನೆ ಮಾಡಿಕೊಂಡು ನೆಲೆಸಿದರು. ನಾಲ್ಕು ಜನ ಹೆಣ್ಣು ಮಕ್ಕಳು ಅವರಿಗೆ. ನಾವು ಎಮ್ಮೆ ಮೇಯಿಸಲು ಹೋಗುತ್ತಿದ್ದ ಜಾಗ. ಅಂತಹ ಜಾಗದಲ್ಲಿ ಅವರು ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದರು. ಕರೆಂಟ್ ಇರಲಿಲ್ಲ. ಜನರ ಓಡಾಟವಿಲ್ಲ. ಅವರ ಧೈರ್ಯ ನೋಡಿ ಆಶ್ಚರ್ಯವಾಗಿತ್ತು. ಅವರ ವ್ಯಕ್ತಿತ್ವ ನನಗೆ ಬೆರಗು ಹುಟ್ಟಿಸಿತ್ತು. ತಮ್ಮೆಲ್ಲಾ ಕಷ್ಟಗಳ ನಡುವೆ ತಮ್ಮೆಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿದರು. ಅದೇ ನಮಗೆ ಸ್ಫೂರ್ತಿಯಾಗಿತ್ತು”
“ನಾನು ಸಿನಿಮಾ ಜಗತ್ತಿಗೆ ಕಾಲಿಟ್ಟ ಮೇಲೆ, ರಾಮ್‌ನೊಂದಿಗೆ ಕೆಲಸ ಆರಂಭಿಸಿದ ಮೇಲೆ, ಮೊದಲು ಪರಿಚಯಿಸಿದ್ದೇ ಗಡ್ಡಪ್ಪ ಅವರನ್ನು. ರಾಮ್‌ಗೆ ಗಡ್ಡಪ್ಪ ಅವರು ಬಹಳ ಇಷ್ಟವಾದರು. ಅವರಿಗೆ ಸಿನಿಮಾದಲ್ಲಿ ನಟಿಸುವ ಆಸಕ್ತಿ ಇದ್ದವರೇನಲ್ಲ. ನಾನು ಮೈದುನನ ಮಗ ಎಂಬ ವಿಶ್ವಾಸದಿಂದ ನಟಿಸುವುದಕ್ಕೆ ಒಪ್ಪಿದರು. ಹಣ, ಸಿನಿಮಾ ಮೇಲಿನ ಆಸಕ್ತಿ ಯಾವುದೂ ಕಾರಣವಾಗಿರಲಿಲ್ಲ.”
“ಅವರಿಗೆ ಸಿನಿಮಾ ಬಗ್ಗೆ ಆಸಕ್ತಿ ಇತ್ತು. ಹೊಟೆಲ್‌ಗೆ ಬೇಕಾದ ದಿನಸಿ ಖರೀದಿಸಲು ಮಂಡ್ಯಕ್ಕೆ ಹೋದಾಗ ಸಿನಿಮಾಗಳನ್ನುನೋಡಲು ಹೋಗುತ್ತಿದ್ದರು ಎಂದಷ್ಟೇ ಗೊತ್ತು. ನನ್ನ ಮೇಲಿನ ಪ್ರೀತಿಯ ಕಾರಣಕ್ಕೆ ಅವರು ನಟಿಸಲು ಒಪ್ಪಿಕೊಂಡರು. ಆದರೆ ತಿಥಿ ಸಿನಿಮಾದ ಪಾತ್ರ ಹೇಗಿತ್ತು ಅಂದ್ರೆ, ಅವರು ನಟಿಸುವುದಕ್ಕೆ ಹೆಚ್ಚಿನ ಶ್ರಮ ಹಾಕಬೇಕಿರಲಿಲ್ಲ. ಅವರು ಹೇಗಿದ್ದರೋ ಹಾಗೇ ಇದ್ದರೆ ಸಾಕಿತ್ತು. “
“ಅವರಿಗೆ ನಮ್ಮ ಡೈಲಾಗ್‌ಗಳನ್ನು ಹೇಳುವುದು ಸವಾಲಾಗಿತ್ತು. ಅವರ ಮುಂದೆ ಯಾವುದೇ ನಟರನ್ನು ನಿಲ್ಲಿಸದೇ ನಟಿಸುವುದಕ್ಕೆ ಅವಕಾಶ ಮಾಡಿಕೊಡುತ್ತಿದ್ದವು. ಅವರು ವಯಸ್ಸನ್ನೂ ಗಮನಿಸದಲ್ಲಿರಿಸಿಕೊಂಡು ಚಿತ್ರದಲ್ಲಿ ಅವರನ್ನು ತೊಡಗಿಸಿಕೊಂಡೆವು. ಆದರೆ ನನ್ನ ಮಾವ, ಗಡ್ಡಪ್ಪನವರಿಗೂ ಒಂದು ಜವಾಬ್ದಾರಿಯ ಭಾವನೆ ಇತ್ತು. ನನ್ನೊಬ್ಬನಿಗೋಸ್ಕರ್ ಇಡೀ ಚಿತ್ರ ತಂಡ ಕಷ್ಟಪಡುತ್ತಿದೆ. ನನ್ನಿಂದ ಯಾರಿಗೂ ತೊಂದರೆಯಾಗಬಾರದು ಎನ್ನುತ್ತಿದ್ದರು. ಯಾವುದೇ ಹೊತ್ತಿನಲ್ಲೂಸಿದ್ಧರಿರುತ್ತಿದ್ದರು. ಚಿತ್ರೀಕರಣದ ಸಂದರ್ಭದಲ್ಲಿ ಒಮ್ಮೆಯೂ ಯಾವುದೇ ತೊಂದರೆಯಾಗಲಿಲ್ಲ.”

“ತಿಥಿ ಚಿತ್ರದ ಯಶಸ್ಸಿನ ನಂತರ ಅವರಿಗೆ ಹಲವು ಸಿನಿಮಾಗಳ ಅವಕಾಶಗಳು ಹುಡುಕಿಕೊಂಡು ಬಂದವು. ಸೂಕ್ತ ಅಭಿರುಚಿ ಇಲ್ಲದ ಚಿತ್ರಗಳಲ್ಲೂ ಅವರು ನಟಿಸುತ್ತಿದ್ದಾರೆ ಎಂದೆಲ್ಲಾ ಕೆಲವು ದೂರಿದ್ದರು. ಇದು ಕೇಳಿಸಿಕೊಂಡು ಬೇಜಾರಾಗಿತ್ತು. ಕಲಾವಿದರಾಗಿ ಗುರುತಿಸಿಕೊಂಡಿದ್ದರು, ನಟನೆಯ ಅವಕಾಶಗಳು ಯಾವುದೇ ಬಂದರು ಒಪ್ಪಿಕೊಳ್ಳಬೇಕು ಎಂದು ನಾನೂ ಭಾವಿಸಿದ್ದೆ. ಆಯ್ಕೆಯ ಸಂದರ್ಭದಲ್ಲಿ ನನ್ನೊಂದಿಗೂ ಚರ್ಚಿಸಿದ್ದರು. ಆ ವಯಸ್ಸಿನಲ್ಲಿ, ಅಷ್ಟೊಂದು ಅವಕಾಶಗಳು ಬಂದಿದ್ದು ಮೆಚ್ಚಬೇಕಾದ್ದೆ.”
“ಇನ್ನೊಂದು ಕಡೆ, ಜೀವನದುದ್ದಕ್ಕೂ ಕಷ್ಟಪಟ್ಟು, ನಾಲ್ಕು ಮಕ್ಕಳ ಮದುವೆ ಮಾಡಿ, ಅರೋಗ್ಯದ ಸಮಸ್ಯೆ ಎದುರಿಸುತ್ತಿದ್ದ ಮಾವನಿಗೆ ಆರ್ಥಿಕ ಭದ್ರತೆಯ ಕಾರಣಕ್ಕೂ ಅವರಿಗೆ ಬಂದ ಅವಕಾಶಗಳು ಅನುಕೂಲ ಮಾಡಿಕೊಟ್ಟವು. ಆಗಲೇ ಹೇಳಿದಂತೆ ಯಾರನ್ನು ಅವಲಂಬಿಸಿದ ಮಾವ ತಮ್ಮದೇ ಪ್ರತಿಭೆಯಿಂದ ಬದುಕಿಗೆ ಆಧಾರ ಕಂಡುಕೊಂಡರು.”
“ತಿಥಿ ಚಿತ್ರದ ಮುಗಿಯುವ ಹೊತ್ತಿಗೆ, ಅವರ ಹೃದಯದಲ್ಲಿ ಐದು ಕಡೆಗಳಲ್ಲಿ ಬ್ಲಾಕೇಜ್ ಇರುವುದು ಗೊತ್ತಾಯಿತು. ಶಸ್ತ್ರಚಿಕಿತ್ಸೆ ಮಾಡಿಸಬೇಕಿತ್ತು. ಆದರೆ ವೈದ್ಯರು ಅಪಾಯ ಇರುವುದರಿಂದ ಶಸ್ತ್ರ ಚಿಕಿತ್ಸೆ ಬೇಡ ಎಂದಿದ್ದರು. ಅಂತಹ ಪರಿಸ್ಥಿತಿಯಲ್ಲಿದ್ದ ವ್ಯಕ್ತಿಗೆ ಒದಗಿ ಬಂದ ಸಣ್ಣ ಅವಕಾಶಗಳು ನೆರವಾದವು. ಕಲಾವಿದರಾಗಿ ಅವರು ಸಂಪಾದಿಸಿದ್ದು ಅದು. ಆದರೆ ಅವರನ್ನು ಹಾಗೇ ದುಡಿಸಿಕೊಂಡವರ ಬಗ್ಗೆ ಬೇಸರವಿದೆ. ನನಗೇ ಅವರನ್ನು ಮತ್ತೊಮ್ಮೆ ಸಿನಿಮಾದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಯೋಚನೆ ಇರಲಿಲ್ಲ.”
“ಇಪ್ಪತ್ತು ದಿನಗಳ ಹಿಂದೆ ಅವರನ್ನು ಭೇಟಿಯಾಗಿದ್ದೇ ಕಡೆಯ ಭೇಟಿ. ನಟರಾಗಿ ನೋಡಿದ್ದೇ ಕಡಿಮೆ ಸಮಯ. ಅವರನ್ನು ಒಬ್ಬ ಬೆರಗಿನ ವ್ಯಕ್ತಿಯಾಗಿ ನಾನು ನೋಡುತ್ತಾ ಬೆಳೆದವನು. ಬಾಲ್ಯದ ನೆನಪುಗಳು ನನ್ನೊಳಗೆ ಸದಾ ಹಸಿರಾಗಿರುವಂತಹದ್ದು. ನನ್ನ ಪಾಲಿಗೆ ಬದುಕಿನ ಪಾಠ.”







