ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಭಾರೀ ದುರಂತ ಸಂಭವಿಸಿದೆ. ಕೇವಲ ಎರಡು ದಿನಗಳ ಅವಧಿಯಲ್ಲಿ ಒಟ್ಟು 28 ಕೃಷ್ಣಮೃಗಗಳು ಅನುಮಾನಾಸ್ಪದವಾಗಿ ಮೃತಪಟ್ಟಿವೆ. ಮೃಗಾಲಯದಲ್ಲಿ ಒಟ್ಟು 38 ಕೃಷ್ಣಮೃಗಗಳಿದ್ದು, ಇದರಲ್ಲಿ ಬಹುತೇಕ (ಶೇಕಡಾ70ಕ್ಕೂ ಹೆಚ್ಚು) ಸಾವನ್ನಪ್ಪಿರುವುದು ಅರಣ್ಯ ಇಲಾಖೆ ಮತ್ತು ಪ್ರಾಣಿ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ.
ನವೆಂಬರ್ 13ರಂದು ಮೊದಲು 8 ಕೃಷ್ಣಮೃಗಗಳು ಸಾವನ್ನಪ್ಪಿದ್ದವು. ಈಗಾಗಲೇ ಮರಣೋತ್ತರ ಪರೀಕ್ಷೆ ನಡೆಸಿ, ವಿಸೆರಾ ಸ್ಯಾಂಪಲ್‌ಗಳನ್ನು ಮೈಸೂರಿನ ಇನ್‌ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಅಂಡ್ ವೆಟರ್ನರಿ ಬಯೋಲಾಜಿಕಲ್ಸ್ (IAHVB) ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ವರದಿ ಬರಲು ಮುನ್ನವೇ ನವೆಂಬರ್ 15ರ ಶನಿವಾರ ಒಂದೇ ದಿನ ಮತ್ತಷ್ಟು 20 ಕೃಷ್ಣಮೃಗಗಳು ಮೃತಪಟ್ಟಿವೆ ಎಂದು ಮೃಗಾಲಯದ ಸಹಾಯಕ ನಿರ್ದೇಶಕ (ಎಸಿಎಫ್) ನಾಗರಾಜ್ ಬಾಳೆಹೊಸೂರು ತಿಳಿಸಿದ್ದಾರೆ.
ಮೃತಪಟ್ಟ ಕೃಷ್ಣಮೃಗಗಳು ಹೆಚ್ಚಿನವು 4-5 ವರ್ಷ ವಯಸ್ಸಿನವುಗಳಾಗಿದ್ದು, ಆಕಸ್ಮಿಕವಾಗಿ ದೇಹದಲ್ಲಿ ನೀರು ಕಡಿಮೆಯಾಗಿ, ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಅಧಿಕಾರಿಗಳ ಪ್ರಕಾರ, ಬ್ಯಾಕ್ಟೀರಿಯಾ ಇನ್ಫೆಕ್ಷನ್ (ಹೆಮೋರಾಜಿಕ್ ಸೆಪ್ಟಿಸೀಮಿಯಾ ಅಥವಾ ಪೇಸ್ಚುರೆಲ್ಲಾ ಬ್ಯಾಕ್ಟೀರಿಯಾ) ಅಥವಾ ಮಾರಣಾಂತಿಕ ವೈರಸ್ ಸೋಂಕು ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಘಟನೆ ಬೆಳಕಿಗೆ ಬಂದ ತಕ್ಷಣ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ಪ್ರಾಣಿಗಳ ದೇಹಗಳನ್ನು ಮೃಗಾಲಯದ ಆವರಣದಲ್ಲೇ ಸುಟ್ಟು ಹಾಕಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಉಳಿದ 10 ಕೃಷ್ಣಮೃಗಗಳನ್ನು ಪ್ರತ್ಯೇಕಿಸಿ, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಮೃಗಾಲಯದ ಇತರ ಪ್ರಾಣಿಗಳಿಗೆ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ | ಮಲೆ ಮಹದೇಶ್ವರದಲ್ಲಿ ಐದು ಹುಲಿಗಳ ಸಾವು: ವಿಷ ಪ್ರಾಶನದ ಶಂಕೆ
ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯವು ಸುಮಾರು 32 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿದ್ದು, ಹುಲಿ, ಸಿಂಹ, ಚಿರತೆ, ಕರಡಿ ಸೇರಿದಂತೆ ಹಲವು ವನ್ಯ ಪ್ರಾಣಿಗಳಿಗೆ ಆಶ್ರಯ ನೀಡುತ್ತದೆ. ಕೃಷ್ಣಮೃಗಗಳು ಇಲ್ಲಿ ಪ್ರಮುಖ ಆಕರ್ಷಣೆಯಾಗಿದ್ದವು. ಈ ಘಟನೆಯಿಂದ ಪ್ರಾಣಿ ಪ್ರೇಮಿಗಳು ಮತ್ತು ಪರಿಸರವಾದಿಗಳು ಆಘಾತಕ್ಕೊಳಗಾಗಿದ್ದಾರೆ. ಕೃಷ್ಣಮೃಗ (Antilope cervicapra) ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಶೆಡ್ಯೂಲ್-1ರಡಿ ಸಂರಕ್ಷಿತ ಪ್ರಾಣಿಯಾಗಿದ್ದು, ಇಂತಹ ಸಾಮೂಹಿಕ ಸಾವು ದುರದೃಷ್ಟಕರ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.







