17ನೇ ಬಜೆಟ್ ನಾನೇ ಮಂಡಿಸುತ್ತೇನೆ: ಸಿದ್ದರಾಮಯ್ಯ ಘೋಷಣೆ!

ಸಿಎಂ ಸಿದ್ದರಾಮಯ್ಯ ಮುಂದಿನ ವರ್ಷ ತಾವೇ ರಾಜ್ಯದ 17ನೇ ಬಜೆಟ್ ಮಂಡಿಸುವುದಾಗಿ ಘೋಷಿಸಿ, ತಮ್ಮ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂಬುದನ್ನು ತಿಳಿಸಿದ್ದಾರೆ.
siddaramaiah 17th budget

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ವರ್ಷ ತಾವೇ ರಾಜ್ಯದ 17ನೇ ಬಜೆಟ್ ಮಂಡಿಸುವುದಾಗಿ ಘೋಷಿಸಿ, ತಮ್ಮ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ತುಂಬಾ ದಿನಗಳಿಂದ ನಡೆಯುತ್ತಿದ್ದ ಚರ್ಚೆಗೆ ಪೂರ್ಣವಿರಾಮವಿಟ್ಟಂತಾಗಿದೆ.

ನವೆಂಬರ್ 19ರಂದು ಬೆಂಗಳೂರಿನ ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ನಡೆದ ಎಲ್.ಜಿ. ಹಾವನೂರ್ ಅವರ ಮೊದಲ ಹಿಂದುಳಿದ ವರ್ಗಗಳ ಆಯೋಗದ ವರದಿ ಸಲ್ಲಿಕೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಈ ಮಾತುಗಳನ್ನಾಡಿದ್ದಾರೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಾವಿರಾರು ಹಿಂದುಳಿದ ವರ್ಗಗಳ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಮೊದಲು ಹಾವನೂರ್ ವರದಿಯ ಮಹತ್ವವನ್ನು ನೆನಪಿಸಿ. 1975ರಲ್ಲಿ ದೇವರಾಜ ಅರಸು ಸರ್ಕಾರದಲ್ಲಿ ರಚಿತವಾದ ಈ ಆಯೋಗ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವಲ್ಲಿ ಐತಿಹಾಸಿಕ ಹೆಜ್ಜೆಯಿಟ್ಟಿತು. “ಈ ವರದಿಯನ್ನು ದೇವರಾಜ ಅರಸು ಅವರು ‘ಹಿಂದುಳಿದ ವರ್ಗಗಳ ಬೈಬಲ್’ ಎಂದು ಕರೆದಿದ್ದರು. ಸುಪ್ರೀಂ ಕೋರ್ಟ್ ಸಹ ಹಲವು ಬಾರಿ ಈ ವರದಿಯನ್ನು ಉಲ್ಲೇಖಿಸಿ ಪ್ರಶಂಸಿಸಿದೆ” ಎಂದು ಸಿಎಂ ಹೇಳಿದರು.

ಇದೇ ಸಮಯದಲ್ಲಿ ತಮ್ಮ ವೈಯಕ್ತಿಕ ಪಯಣದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, “ನಾನು ಮೊದಲ ಬಾರಿಗೆ 1985ರಲ್ಲಿ ಹಣಕಾಸು ಸಚಿವನಾದಾಗ ಪತ್ರಿಕೆಯೊಂದು ಬರೆದಿತ್ತು – ‘ಈ ಕುರುಬ ಸಿದ್ದರಾಮಯ್ಯನಿಗೆ ನೂರು ಕುರಿಗಳನ್ನು ಎಣಿಸಲೂ ಬರುವುದಿಲ್ಲ, ಇವನು ರಾಜ್ಯದ ಬಜೆಟ್ ಹೇಗೆ ಮಂಡಿಸುತ್ತಾನೆ?’ ಎಂದು. ಆ ಅಪಹಾಸ್ಯದ ಮಾತುಗಳನ್ನು ನಾನು ಸವಾಲಾಗಿ ಸ್ವೀಕರಿಸಿದೆ. ಇಂದು ನಾನು 16 ಬಜೆಟ್‌ಗಳನ್ನು ಮಂಡಿಸಿ ದಾಖಲೆ ಬರೆದಿದ್ದೇನೆ. ಮುಂದಿನ ವರ್ಷ ನನ್ನ 17ನೇ ಬಜೆಟ್ ಮಂಡಿಸುತ್ತೇನೆ” ಎಂದು ಘೋಷಿಸಿದರು. ಈ ಮಾತುಗಳು ಕಾರ್ಯಕ್ರಮದಲ್ಲಿ ದೊಡ್ಡ ಚಪ್ಪಾಳೆಗೆ ಕಾರಣವಾದವು.

ಈ ಘೋಷಣೆಯು ರಾಜ್ಯದಲ್ಲಿ ಸಿಎಂ ಸ್ಥಾನದ ಬದಲಾವಣೆಯ ಬಗ್ಗೆ ಇದ್ದ ಎಲ್ಲ ಊಹಾಪೋಹಗಳಿಗೆ ತಿಲಾಂಜಲಿ ನೀಡಿದೆ. ಕಾಂಗ್ರೆಸ್ ಹೈಕಮಾಂಡ್ ಜೊತೆಗಿನ ಚರ್ಚೆ, ಡಿ.ಕೆ. ಶಿವಕುಮಾರ್ ಅವರೊಂದಿಗಿನ ಸಂಬಂಧ, ಎಲ್ಲವನ್ನೂ ದಾಟಿ ಸಿದ್ದರಾಮಯ್ಯನವರು ತಾವೇ ಪೂರ್ಣ ಅವಧಿ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂಬ ದೃಢ ಸಂದೇಶ ನೀಡಿದ್ದಾರೆ.

ಹಿಂದುಳಿದ ವರ್ಗಗಳ ಯುವಕರ ಬಗ್ಗೆ ಸಿದ್ದು ಬೇಸರ

ಹಿಂದುಳಿದ ವರ್ಗಗಳ ಸಮುದಾಯದ ಬಗ್ಗೆಯೂ ಸಿದ್ದರಾಮಯ್ಯ ಮನಸ್ಸಿನ ಮಾತುಗಳನ್ನು ಹೊರಹಾಕಿದರು. “ಧರ್ಮದ ಹೆಸರಿನಲ್ಲಿ ಯುದ್ಧಕ್ಕೆ ಹೋಗಿ ಸಾಯುವವರಲ್ಲಿ ಹೆಚ್ಚಿನವರು ಹಿಂದುಳಿದ ವರ್ಗಗಳವರೇ. ಆದರೆ ಸ್ವಾರ್ಥಕ್ಕಾಗಿ ಅವರೇ ಬಿಜೆಪಿ-ಆರ್‌ಎಸ್‌ಎಸ್ ಸೇರಿ ಹೆಡ್ಗೇವಾರ್‌ಗಿಂತ ಉಗ್ರವಾಗಿ ಮಾತನಾಡುತ್ತಾರೆ. ಇದು ದುರಂತ” ಎಂದು ಬೇಸರ ವ್ಯಕ್ತಪಡಿಸಿದರು. ಮನುಸ್ಮೃತಿಯ ಕೆಲವು ಶ್ಲೋಕಗಳನ್ನು ಓದಿ, ಜಾತಿ ವ್ಯವಸ್ಥೆ ಇನ್ನೂ ಬೇರೂರಿರುವುದನ್ನು ಎತ್ತಿ ತೋರಿಸಿದರು.

ಇದನ್ನೂ ಓದಿ | ಸಂಪುಟ ಪುನರ್‌ರಚನೆ : ಸಿದ್ದು ಸಿಎಂ ಸ್ಥಾನ ಉಳಿಸಿಕೊಳ್ಳುವ ರಣನೀತಿ!

ಹಾವನೂರ್ ಅವರ ಬದುಕಿನ ಕಥೆಯನ್ನು ನೆನಪಿಸಿದ ಸಿಎಂ, “ಅವರು ಬಡ ದಲಿತ ಕುಟುಂಬದಲ್ಲಿ ಹುಟ್ಟಿ, ಗ್ರಾಮದಲ್ಲಿ ಶಿಕ್ಷಣ ಪಡೆದು, ಸಮುದಾಯದ ಮೊದಲ ವಕೀಲರಾದರು. ಅವಕಾಶ ಸಿಕ್ಕರೆ ಯಾರೇ ಆಗಲಿ ದೊಡ್ಡ ಸಾಧನೆ ಮಾಡಬಹುದು” ಎಂದು ಹೇಳಿದರು. ತಾವು 1991ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋತಾಗ ಹಾವನೂರ್ ಅವರು ತಮ್ಮ ಪ್ರಚಾರಕ್ಕೆ ಬಂದಿದ್ದ ಘಟನೆಯನ್ನು ಭಾವುಕವಾಗಿ ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೈರಾಗಿದ್ದುದು ಎಲ್ಲರ ಗಮನ ಸೆಳೆಯಿತು. ಆದರೆ ಹಿಂದುಳಿದ ವರ್ಗಗಳ ಹಲವು ಶಾಸಕರು, ಮುಖಂಡರು ಉಪಸ್ಥಿತರಿದ್ದರು.

Share:

ಮತ್ತಷ್ಟು ಸುದ್ದಿ

ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮ

ಅಲೆದಾಟ ಮುಕ್ತ ಆಡಳಿತದತ್ತ ಮೇಲುಕೋಟೆ ಮನೆ ಬಾಗಿಲಿಗೇ ಬಂದ ‘ಸರ್ಕಾರಿ ಸೇವೆ’ ಕಾರ್ಯಕ್ರಮ  ತಂತ್ರಜ್ಞಾನದ ಅರಿವನ್ನು ಆಡಳಿತ ಯಂತ್ರಕ್ಕೆ ವರ್ಗಾಯಿಸಿದ

ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಲು ಮನವಿ

ಕಾಂಗ್ರೆಸ್‌ ಹೈಕಮಾಂಡ್‌ಗೆ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ಒತ್ತಾಯ ಮೈಸೂರು: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ

ಮುಂದೆ ಓದಿ »

ಬೆಂಗಳೂರಿನಲ್ಲಿ ಮೇ 25 ರಂದು 3ನೇ ಕರ್ನಾಟಕ ಸಂಘಟಕರ ಸಮಾವೇಶ

ಸಾಂಸ್ಕೃತಿಕ ನೀತಿ ಜಾರಿ ಮತ್ತು ಅಕಾಡೆಮಿಗಳ ಬಲವರ್ಧನೆಗೆ ಆಗ್ರಹಿಸಿ ರಂಗಕರ್ಮಿಗಳು ಹಾಗೂ ಸಾಂಸ್ಕೃತಿಕ ಸಂಘಟಕರ ಬೃಹತ್‌ ಸಮಾಲೋಚನೆ ಬೆಂಗಳೂರು: ಕರ್ನಾಟಕ

ಮುಂದೆ ಓದಿ »

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »