‘ಬ್ರೇಕ್‌ಫಾಸ್ಟ್ ಪಾಲಿಟಿಕ್ಸ್’ನಿಂದ ಒಗ್ಗಟ್ಟಿನ ಸಂದೇಶ ರವಾನಿಸಿದ ಸಿದ್ದು – ಡಿಕೆಶಿ!

ಸಿದ್ದರಾಮಯ್ಯ, ಡಿ.ಕೆ.ಶಿ ನಡುವೆ ನಾಯಕತ್ವ ಬದಲಾವಣೆಯ ವಿಷಯದಲ್ಲಿ ನಡೆಯುತ್ತಿದ್ದ ಮುಸುಕಿನ ಗುದ್ದಾಟದ ನಡುವೆ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
karnataka congress power sharing


ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಬಣಗಳ ನಡುವೆ ‘ನಾಯಕತ್ವ ಬದಲಾವಣೆ’ಯ ವಿಷಯದಲ್ಲಿ ನಡೆಯುತ್ತಿದ್ದ ಮುಸುಕಿನ ಗುದ್ದಾಟದಲ್ಲಿ ಈಗ ಇಬ್ಬರೂ ನಾಯಕರ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ ಕುತುಹಲಕ್ಕೆ ಕಾರಣವಾಗಿದೆ.

ಈ ಭಿನ್ನಾಭಿಪ್ರಾಯಗಳಿಗೆ ತೆರೆ ಎಳೆಯುವ ಪ್ರಯತ್ನವಾಗಿ, ಪಕ್ಷದ ಹೈಕಮಾಂಡ್‌ನ ಸ್ಪಷ್ಟ ಸೂಚನೆಯ ಮೇರೆಗೆ, ಶನಿವಾರದಂದು ಬೆಂಗಳೂರಿನ ಸಿಎಂ ಸಿದ್ದರಾಮಯ್ಯ ಅವರ ‘ಕಾವೇರಿ’ ನಿವಾಸದಲ್ಲಿ ಉಭಯ ನಾಯಕರು ಉಪಹಾರ ಸಭೆ ನಡೆಸಿದ್ದಾರೆ.

ಒಗ್ಗಟ್ಟು ಪ್ರದರ್ಶಿಸಿದ ನಾಯಕರು:

ನಾಯಕತ್ವ ಹಂಚಿಕೆಯ ವದಂತಿಗಳು ಬಲವಾಗುತ್ತಿದ್ದಂತೆ, ನವೆಂಬರ್ 29ರಂದು ನಡೆದ ಈ ಉಪಹಾರ ಸಭೆಯು ರಾಜಕೀಯ ವಲಯದಲ್ಲಿ ಒಂದು ಮಹತ್ವದ ಬೆಳವಣಿಗೆಯಾಗಿದೆ. ಸಭೆಯ ನಂತರ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣವಾದ ‘ಎಕ್ಸ್’ (X) ನಲ್ಲಿ ಉಪಹಾರ ಸೇವಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ಕಾಂಗ್ರೆಸ್‌ನಲ್ಲಿ ಸದ್ಯಕ್ಕೆ ಎಲ್ಲವೂ ಸರಿ ಇದೆ ಎಂಬ ಒಗ್ಗಟ್ಟಿನ ಸಂದೇಶವನ್ನು ರವಾನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು, “ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಜೊತೆ ಬೆಳಗ್ಗಿನ ಉಪಹಾರ ಸೇವಿಸುತ್ತಾ, ಕೆಲಹೊತ್ತು ಮಾತುಕತೆ ನಡೆಸಿದೆ” ಎಂದು ಬರೆದಿದ್ದಾರೆ. ಇದಕ್ಕೆ ಪೂರಕವಾಗಿ, ಡಿ.ಕೆ. ಶಿವಕುಮಾರ್ ಅವರೂ ಸಹ ಮುಖ್ಯಮಂತ್ರಿಯವರೊಂದಿಗಿನ ಫೋಟೋವನ್ನು ಹಂಚಿಕೊಂಡು, “ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರನ್ನು ಇಂದು ಅವರ ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಉಪಾಹಾರ ಸಭೆ ನಡೆಸಲಾಯಿತು. ಕರ್ನಾಟಕದ ಆದ್ಯತೆಗಳು ಮತ್ತು ಮುಂದಿನ ಯೋಜನೆಗಳ ಕುರಿತು ಫಲಪ್ರದವಾದ ಚರ್ಚೆ” ಎಂದು ತಿಳಿಸಿದ್ದಾರೆ.

ಹೈಕಮಾಂಡ್ ಮಧ್ಯಪ್ರವೇಶ: ಸಂಧಾನದ ಒತ್ತಡ

ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಂಡ ಬಳಿಕ ಸಿಎಂ ಸ್ಥಾನವನ್ನು ಡಿಕೆ ಶಿವಕುಮಾರ್‌ಗೆ ಹಸ್ತಾಂತರಿಸುವ ಕುರಿತು ‘ಅಧಿಕಾರ ಹಂಚಿಕೆ ಸೂತ್ರ’ದ ಬಗ್ಗೆ ಚರ್ಚೆಗಳು ಮತ್ತೆ ತೀವ್ರಗೊಂಡಿದ್ದವು. ಡಿಕೆಶಿ ಬೆಂಬಲಿಗರು ಈ ಸಂಬಂಧ ಹೈಕಮಾಂಡ್ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದ್ದರು. ಹೀಗಾಗಿ, ಪರಿಸ್ಥಿತಿ ಕೈಮೀರುತ್ತಿದ್ದಂತೆ, ಪಕ್ಷದ ಕೇಂದ್ರ ನಾಯಕರು (ಹೈಕಮಾಂಡ್) ಮಧ್ಯಪ್ರವೇಶಿಸಿ, ಸಿಎಂ ಮತ್ತು ಡಿಸಿಎಂ ಇಬ್ಬರಿಗೂ ಪರಸ್ಪರ ಭೇಟಿಯಾಗಿ ಸೌಹಾರ್ದಯುತವಾಗಿ ಮಾತುಕತೆ ನಡೆಸುವಂತೆ ಸೂಚಿಸಿದ್ದರು.

ಸಭೆಗೆ ಮುನ್ನವೇ, ಇಬ್ಬರೂ ನಾಯಕರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದು, ಹೈಕಮಾಂಡ್‌ನ ಯಾವುದೇ ಅಂತಿಮ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದು ಹೇಳಿದ್ದಾರೆ. “ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಹೈಕಮಾಂಡ್ ಏನು ಹೇಳುತ್ತದೋ ಅದನ್ನು ನಾನು ಸ್ವೀಕರಿಸುತ್ತೇನೆ” ಎಂದು ಸಿದ್ದರಾಮಯ್ಯ ಹೇಳಿದ್ದರೆ, ಡಿಕೆ ಶಿವಕುಮಾರ್ ಅವರು “ನಾನು ಯಾವುದೇ ಆತುರದಲ್ಲಿಲ್ಲ, ಪಕ್ಷವೇ ಎಲ್ಲವನ್ನೂ ನಿರ್ಧರಿಸುತ್ತದೆ” ಎಂದು ಹೇಳುವ ಮೂಲಕ, ನಾಯಕತ್ವದ ವಿಷಯವನ್ನು ಹೈಕಮಾಂಡ್‌ಗೆ ಬಿಟ್ಟಿದ್ದಾರೆ.

ಉಪಹಾರ ಸಭೆಯಲ್ಲಿ ಚರ್ಚೆಯಾದ ವಿಷಯಗಳು:

ಉಭಯ ನಾಯಕರು ಉಪಾಹಾರದ ವೇಳೆ ಕೇವಲ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಮಾತ್ರವಲ್ಲದೆ, ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ವಿರೋಧ ಪಕ್ಷಗಳನ್ನು ಎದುರಿಸುವ ತಂತ್ರಗಳು, ಸರ್ಕಾರದ ಮುಂದಿನ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಲೋಕಸಭಾ ಚುನಾವಣೆಗೆ ಪಕ್ಷವನ್ನು ಬಲಪಡಿಸುವಂತಹ ವಿಷಯಗಳ ಬಗ್ಗೆಯೂ ಗಂಭೀರವಾಗಿ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಲವೊಂದು ಮೂಲಗಳ ಪ್ರಕಾರ, ಭಾನುವಾರ ಅಥವಾ ಸೋಮವಾರದಂದು ಇಬ್ಬರೂ ನಾಯಕರು ದೆಹಲಿಗೆ ತೆರಳಿ ಹೈಕಮಾಂಡ್‌ನ ಪ್ರಮುಖ ನಾಯಕರನ್ನು ಭೇಟಿಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ | ಸಾಮಾಜಿಕ ಜಾಲತಾಣದಲ್ಲಿ ತಾರಕ್ಕೇರಿದ ಸಿಎಂ- ಡಿಸಿಎಂ ಕುರ್ಚಿ ಕದನ?

ಸದ್ಯಕ್ಕೆ, ಉಪಹಾರ ಸಭೆಯ ಮೂಲಕ ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡುವ ಇಚ್ಛೆಯನ್ನು ಪ್ರದರ್ಶಿಸಿದ್ದಾರೆ. ಆದರೂ, ‘ಅಧಿಕಾರ ಹಂಚಿಕೆ’ ಕುರಿತ ಅಂತಿಮ ನಿರ್ಧಾರವು ಹೈಕಮಾಂಡ್‌ನ ಮುಂದಿನ ನಡೆಯನ್ನೇ ಅವಲಂಬಿಸಿದೆ ಎಂಬುದು ಸ್ಪಷ್ಟ. ರಾಜ್ಯ ಕಾಂಗ್ರೆಸ್‌ನ ಈ ‘ಬ್ರೇಕ್‌ಫಾಸ್ಟ್ ಪಾಲಿಟಿಕ್ಸ್’ ಸದ್ಯಕ್ಕೆ ರಾಜಕೀಯ ಬಿಕ್ಕಟ್ಟಿಗೆ ತಾತ್ಕಾಲಿಕ ವಿರಾಮ ನೀಡಿದೆ.

Share:

ಮತ್ತಷ್ಟು ಸುದ್ದಿ

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »