ಸ್ಮಾರ್ಟ್‌ಫೋನ್‌ಗಳಲ್ಲಿ ‘ಸಂಚಾರ್ ಸಾಥಿ’ ಅಪ್ಲಿಕೇಶನ್ ಅನ್ನು ಕಡ್ಡಾಯವಾಗಿ ಪ್ರೀ-ಇನ್‌ಸ್ಟಾಲ್ ಮಾಡಬೇಕು ಎಂದು ದೂರಸಂಪರ್ಕ ಇಲಾಖೆ (DoT) ಹೊರಡಿಸಿದ್ದ ಆದೇಶವನ್ನು ಕೇಂದ್ರ ಸರ್ಕಾರವು ಕೆಲವೇ ದಿನಗಳಲ್ಲಿ ಹಿಂತೆಗೆದುಕೊಂಡಿದೆ. ಕಡ್ಡಾಯ ಅಳವಡಿಕೆ ಕುರಿತು ದೇಶಾದ್ಯಂತ ಗೌಪ್ಯತೆ ಮತ್ತು ಸಂಭಾವ್ಯ ಸರ್ಕಾರಿ ಕಣ್ಗಾವಲು ಆತಂಕಗಳು ಉಂಟಾದ ಹಿನ್ನೆಲೆಯಲ್ಲಿ, ಸರ್ಕಾರವು ಸಾರ್ವಜನಿಕ ಒತ್ತಡಕ್ಕೆ ಮಣಿದು ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.
ಬುಧವಾರ ಸಂವಹನ ಸಚಿವಾಲಯವು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, “ಸಂಚಾರ್ ಸಾಥಿ ಅಪ್ಲಿಕೇಶನ್‌ಗೆ ಹೆಚ್ಚಿನ ವಿರೋಧವಾಗುತ್ತಿರುವ ಕಾರಣದಿಂದಾಗಿ, ಮೊಬೈಲ್ ತಯಾರಕರಿಗೆ ಪ್ರೀ-ಇನ್‌ಸ್ಟಾಲೇಷನ್ ಕಡ್ಡಾಯಗೊಳಿಸದಿರಲು ಸರ್ಕಾರ ನಿರ್ಧರಿಸಿದೆ” ಎಂದು ತಿಳಿಸಿದೆ.
ನವೆಂಬರ್ 28 ರಂದು ದೂರಸಂಪರ್ಕ ಇಲಾಖೆಯು ಹೊರಡಿಸಿದ್ದ ಆದೇಶವು, ಭಾರತದಲ್ಲಿ ಮಾರಾಟವಾಗುವ ಅಥವಾ ತಯಾರಿಸಲಾಗುವ ಎಲ್ಲಾ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಅಪ್ಲಿಕೇಶನ್ ಅನ್ನು ಪೂರ್ವಭಾವಿಯಾಗಿ ಅಳವಡಿಸಬೇಕು ಮತ್ತು ಹಳೆಯ ಸಾಧನಗಳಿಗೆ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ತಲುಪಿಸಬೇಕು ಎಂದು ನಿರ್ದೇಶಿಸಿತ್ತು.
ಈ ಆದೇಶವು ತಕ್ಷಣವೇ ತೀವ್ರ ರಾಜಕೀಯ ಮತ್ತು ಸಾರ್ವಜನಿಕ ವಿವಾದಕ್ಕೆ ಕಾರಣವಾಯಿತು
ಗೌಪ್ಯತೆ ಉಲ್ಲಂಘನೆ: ವಿರೋಧ ಪಕ್ಷದ ನಾಯಕರು ಮತ್ತು ನಾಗರಿಕ ಸಮಾಜದ ಕಾರ್ಯಕರ್ತರು, ಕಡ್ಡಾಯವಾಗಿ ಸರ್ಕಾರಿ ಅಪ್ಲಿಕೇಶನ್ ಅನ್ನು ಅಳವಡಿಸುವುದು ನಾಗರಿಕರ ಖಾಸಗಿ ಹಕ್ಕಿನ ಮೇಲೆ ನೇರ ದಾಳಿ ಮತ್ತು ಕಣ್ಗಾವಲು ಸಾಧನವಾಗಬಹುದು ಎಂದು ವಿರೋಧ ಪಕ್ಷ ಮತ್ತು ನಾಗರಿಕರು ತೀವ್ರ ಟೀಕೆ ಮಾಡಿದರು.
ಕಂಪನಿಗಳ ಆತಂಕ: ಆ್ಯಪಲ್ ಮತ್ತು ಗೂಗಲ್ ನಂತಹ ಪ್ರಮುಖ ಜಾಗತಿಕ ಸ್ಮಾರ್ಟ್‌ಫೋನ್ ತಯಾರಕರು, ಯಾವುದೇ ದೇಶದಲ್ಲಿ ರಾಜ್ಯ-ಮಾಲೀಕತ್ವದ ಅಪ್ಲಿಕೇಶನ್‌ಗಳನ್ನು ತಮ್ಮ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ (iOS ಮತ್ತು Android) ಕಡ್ಡಾಯವಾಗಿ ಪ್ರೀ-ಲೋಡ್ ಮಾಡುವ ಪೂರ್ವನಿದರ್ಶನವಿಲ್ಲ. ಇದು ಕಾರ್ಯಾಚರಣೆಯ ಸವಾಲುಗಳನ್ನು ಮತ್ತು ಭಾರತಕ್ಕಾಗಿ ನಿರ್ದಿಷ್ಟವಾಗಿ ಸಾಫ್ಟ್‌ವೇರ್ ಕಸ್ಟಮೈಸೇಷನ್ ಮಾಡುವ ಅಗತ್ಯವನ್ನು ಉಂಟುಮಾಡುತ್ತದೆ ಎಂದು ಕಂಪನಿಗಳು ಆತಂಕ ವ್ಯಕ್ತಪಡಿಸಿದ್ದವು.
ಸರ್ಕಾರದ ಸಮರ್ಥನೆ ಮತ್ತು ಹಿಂಪಡೆಯುವಿಕೆಯ ಕಾರಣ
ವಿವಾದ ತಾರಕಕ್ಕೇರಿದ ನಂತರ ಸಂವಹನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಲೋಕಸಭೆಯಲ್ಲಿ ಸ್ಪಷ್ಟೀಕರಣ ನೀಡಿದ್ದರು. ಅಪ್ಲಿಕೇಶನ್‌ನ ಉದ್ದೇಶ ಕೇವಲ ಸೈಬರ್ ವಂಚನೆ ತಡೆಯುವುದು, ಕಳುವಾದ ಫೋನ್‌ಗಳನ್ನು ಪತ್ತೆ ಹಚ್ಚುವುದು ಮತ್ತು ನಕಲಿ ಐಎಂಇಐ (IMEI) ಸಂಖ್ಯೆಗಳ ದುರುಪಯೋಗವನ್ನು ತಡೆಯುವುದಾಗಿದೆ. ಬಳಕೆದಾರರು ಬಯಸಿದರೆ ಅದನ್ನು ಡಿಲೀಟ್ ಮಾಡಬಹುದು ಮತ್ತು ನೋಂದಾಯಿಸದ ಹೊರತು ಅದು ಸಕ್ರಿಯವಾಗುವುದಿಲ್ಲ ಎಂದು ಸರ್ಕಾರ ಸಮರ್ಥಿಸಿಕೊಂಡಿತ್ತು.
ಆದರೆ, ಕೇವಲ 48 ಗಂಟೆಗಳ ನಂತರ, ಸರ್ಕಾರವು ಆದೇಶವನ್ನು ಹಿಂತೆಗೆದುಕೊಂಡು. “ಕೇವಲ ಕಳೆದ ಒಂದು ದಿನದಲ್ಲಿ, 6 ಲಕ್ಷಕ್ಕೂ ಹೆಚ್ಚು ನಾಗರಿಕರು ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ನೋಂದಾಯಿಸಿಕೊಂಡಿದ್ದಾರೆ. ಇದು ಹಿಂದಿನ ಡೌನ್‌ಲೋಡ್‌ಗಳಿಗೆ ಹೋಲಿಸಿದರೆ 10 ಪಟ್ಟು ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ, ಅಪ್ಲಿಕೇಶನ್‌ಗೆ ಉತ್ತಮ ಸ್ವೀಕಾರ ಮತ್ತು ಜನಜಾಗೃತಿ ದೊರಕಿದೆ. ಹಾಗಾಗಿ ಮೊಬೈಲ್ ತಯಾರಕರಿಗೆ ಕಡ್ಡಾಯ ಅಳವಡಿಕೆ ಮಾಡುವ ಅಗತ್ಯವಿಲ್ಲ” ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ | ‘ಸಂಚಾರ ಸಾಥಿ’ ಕಡ್ಡಾಯದಿಂದ ನಾಗರಿಕರ ಖಾಸಗಿತನಕ್ಕೆ ಧಕ್ಕೆಯೇ?
ಒಂದು ಕಡೆ ಸಂಚಾರ್ ಸಾಥಿ ಪೋರ್ಟಲ್ ಮೂಲಕ 1.4 ಕೋಟಿಗೂ ಹೆಚ್ಚು ಬಳಕೆದಾರರು ನೋಂದಾಯಿಸಿಕೊಂಡು ಸೈಬರ್ ಅಪರಾಧಗಳ ವರದಿ ಮಾಡಲು ಸಹಾಯ ಮಾಡುತ್ತಿದ್ದಾರೆ (ದಿನಕ್ಕೆ ಸುಮಾರು 2000 ವಂಚನೆ ಪ್ರಕರಣಗಳು ವರದಿಯಾಗುತ್ತಿವೆ) ಎಂಬ ಅಂಶ ನಿಜವಾದರೂ, ಕಡ್ಡಾಯ ಅಳವಡಿಕೆಗೆ ಆದೇಶ ನೀಡಿ ನಂತರ ಅದನ್ನು ವಾಪಸ್ ಪಡೆದಿದೆ.







