“ಸರ್ವ ಜನಾಂಗದ ಶಾಂತಿಯ ತೋಟ” ಎಂದು ಕವಿಗಳು ಬಣ್ಣಿಸಿದ ನಮ್ಮ ನಾಡು, ದಲಿತರ ಪಾಲಿಗೆ ಮಾತ್ರ ಕೇವಲ ಸಾಹಿತ್ಯದ ಸಾಲುಗಳಾಗಿ ಉಳಿದಿದೆಯೇ ಹೊರತು ವಾಸ್ತವವಾಗಿಲ್ಲ ಎಂಬ ಕಟು ಸತ್ಯವನ್ನು ರಾಜ್ಯದ ಇತಿಹಾಸ ಮತ್ತು ಪ್ರಸ್ತುತ ಅಂಕಿ-ಅಂಶಗಳು ಬಟಾಬಯಲು ಮಾಡಿವೆ.
ಆಧುನಿಕ ಸಮಾಜದಲ್ಲಿಯೂ ಮನುಷ್ಯರನ್ನು ಅಸ್ಪೃಶ್ಯರಂತೆ ಕಾಣುವ, ಊರಿನಿಂದಲೇ ಹೊರಗಿಡುವ ‘ಸಾಮಾಜಿಕ ಬಹಿಷ್ಕಾರ’ದಂತಹ ಅನಿಷ್ಟ ಪದ್ಧತಿಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯ ಸಚಿವ ಸಂಪುಟವು ನಿನ್ನೆ (ಡಿಸೆಂಬರ್ 4) ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಮಸೂದೆ – 2025’ ಕ್ಕೆ ಅನುಮೋದನೆ ನೀಡುವ ಮೂಲಕ ಗ್ರಾಮೀಣ ಭಾಗದ ಶೋಷಿತ ಸಮುದಾಯಗಳಿಗೆ ಬಲವಾದ ಕಾನೂನು ರಕ್ಷಣೆ ನೀಡಲು ಮುಂದಾಗಿದೆ. ಆದರೆ, ಈ ಹೊಸ ಕಾನೂನು ಜಾರಿಗೆ ಬರುತ್ತಿರುವ ಹೊತ್ತಿನಲ್ಲೇ, ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಮತ್ತು ಶಿಕ್ಷೆಯ ಪ್ರಮಾಣದ ವಾಸ್ತವ ಚಿತ್ರಣವು ಆತಂಕ ಹುಟ್ಟಿಸುವಂತಿದೆ.
ಇನ್ಮುಂದೆ ಬಹಿಷ್ಕಾರ ಹಾಕಿದರೆ ಜೈಲು ಮತ್ತು ದಂಡ
ಹೊಸ ಮಸೂದೆಯನ್ವಯ ಸಾಮಾಜಿಕ ಬಹಿಷ್ಕಾರವನ್ನು ಗಂಭೀರ ಅಪರಾಧವನ್ನಾಗಿ ಪರಿಗಣಿಸಲಾಗಿದ್ದು, ಬಹಿಷ್ಕಾರ ಹಾಕುವ ವ್ಯಕ್ತಿಗಳು ಅಥವಾ ಪಂಚಾಯ್ತಿ ಮುಖಂಡರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಕೇವಲ ಊರಿನಿಂದ ಹೊರಹಾಕುವುದಷ್ಟೇ ಅಲ್ಲ, ಅಂಗಡಿಗಳಲ್ಲಿ ದಿನಸಿ ನೀಡದಿರುವುದು, ಕ್ಷೌರ ಮಾಡದಿರುವುದು, ದೇವಸ್ಥಾನ ಪ್ರವೇಶ ತಡೆಯುವುದು, ಸಾರ್ವಜನಿಕ ನೀರು ಬಳಸಲು ಬಿಡದಿರುವುದು ಮತ್ತು ಶುಭ ಸಮಾರಂಭಗಳಿಗೆ ಆಹ್ವಾನಿಸದಿರುವುದು ಸೇರಿದಂತೆ ಒಟ್ಟು ಹತ್ತೊಂಬತ್ತು ಬಗೆಯ ಕೃತ್ಯಗಳನ್ನು ‘ಬಹಿಷ್ಕಾರ’ ಎಂದು ಪಟ್ಟಿ ಮಾಡಲಾಗಿದೆ.
ಅಷ್ಟೇ ಅಲ್ಲ, ಯಾರಾದರೂ ಬಹಿಷ್ಕಾರ ಹಾಕುವ ಉದ್ದೇಶದಿಂದ ಸಭೆ ಕರೆದರೆ ಅಥವಾ ಅಂತಹ ಚರ್ಚೆ ನಡೆಸಿದರೆ, ಅದು ಕೂಡ ಕಾನೂನುಬಾಹಿರವಾಗಲಿದ್ದು, ದಂಡ ವಿಧಿಸಲು ಅವಕಾಶವಿರುತ್ತದೆ. ಈ ಕಾಯ್ದೆಯನ್ನು ಸಮರ್ಥವಾಗಿ ಜಾರಿಗೊಳಿಸಲು ಮತ್ತು ಕಣ್ಗಾವಲಿಡಲು ಸರ್ಕಾರವು ಪ್ರತ್ಯೇಕವಾಗಿ ‘ಸಾಮಾಜಿಕ ಬಹಿಷ್ಕಾರ ನಿಷೇಧ ಅಧಿಕಾರಿ’ಯನ್ನು ನೇಮಿಸಲು ನಿರ್ಧರಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
ಈ ಕಠಿಣ ಕಾನೂನಿನ ಅಗತ್ಯವನ್ನು ಇತ್ತೀಚಿನ ಕೆಲವು ಘಟನೆಗಳು ಸಾಬೀತುಪಡಿಸಿದ್ದವು. ಕಳೆದ ಸೆಪ್ಟೆಂಬರ್‌ನಲ್ಲಿ ಯಾದಗಿರಿ ಜಿಲ್ಲೆಯ ಬಪ್ಪರಗಿ ಗ್ರಾಮದಲ್ಲಿ ನಡೆದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ದಲಿತ ಬಾಲಕಿಯೊಬ್ಬಳ ಪೋಷಕರು ಮೇಲ್ಜಾತಿಯ ಯುವಕನ ವಿರುದ್ಧ ‘ಪೋಕ್ಸೋ’ ಪ್ರಕರಣ ದಾಖಲಿಸಿದ್ದನ್ನು ಹಿಂಪಡೆಯಲು ಒಪ್ಪದಿದ್ದಾಗ, ಊರಿನ ಮೇಲ್ಜಾತಿಯ ಮುಖಂಡರು ಇಡೀ ದಲಿತ ಸಮುದಾಯಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರು. ಇದರಿಂದಾಗಿ ಐವತ್ತಕ್ಕೂ ಹೆಚ್ಚು ದಲಿತ ಕುಟುಂಬಗಳಿಗೆ ಊರಿನ ಅಂಗಡಿಗಳಲ್ಲಿ ಹಾಲು, ದಿನಸಿ ಸಿಗದೆ, ಮಕ್ಕಳಿಗೆ ಪೆನ್-ಪುಸ್ತಕವೂ ಇಲ್ಲದೆ ಪರದಾಡುವಂತಾಗಿತ್ತು.
ಬಾಗಲಕೋಟೆಯ ಬಾದಾಮಿ ತಾಲೂಕಿನಲ್ಲಿಯೂ ಅಂತರ್‌ಜಾತಿ ವಿವಾಹ ಅಥವಾ ದಲಿತ ಯುವಕರ ಮೇಲಿನ ಹಲ್ಲೆ ಪ್ರಕರಣಗಳಲ್ಲಿ ದೂರು ನೀಡಿದ್ದಕ್ಕಾಗಿ, ಇಡೀ ಕೇರಿಯನ್ನೇ ಬಹಿಷ್ಕರಿಸಿ, ಟ್ರಾಕ್ಟರ್‌ಗಳಲ್ಲಿ ನೀರು ಸರಬರಾಜು ನಿಲ್ಲಿಸಿ ಆರ್ಥಿಕವಾಗಿ ಮಣಿಸಲು ಯತ್ನಿಸಲಾಗಿತ್ತು. ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದು ಸಂವಿಧಾನದತ್ತ ಹಕ್ಕಾಗಿದ್ದರೂ, ದೂರು ನೀಡಿದ್ದಕ್ಕಾಗಿಯೇ ಇಡೀ ಸಮುದಾಯವನ್ನು ಬಹಿಷ್ಕರಿಸುವ ಪ್ರವೃತ್ತಿಗೆ ಈ ಹೊಸ ಮಸೂದೆ ಕಡಿವಾಣ ಹಾಕಲಿದೆ ಎಂದು ನಿರೀಕ್ಷಿಸಲಾಗಿದೆ.
ದೇಶದಲ್ಲೇ ಅತ್ಯಂತ ಕಡಿಮೆ ಶಿಕ್ಷೆಯ ಪ್ರಮಾಣ: ದಲಿತರ ಪಾಲಿಗೆ ಮರೀಚಿಕೆಯಾದ ನ್ಯಾಯ
ಸರ್ಕಾರದ ಈ ನಡೆ ಆಶಾದಾಯಕವಾಗಿದ್ದರೂ, ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯದ ಇತಿಹಾಸ ರಕ್ತಸಿಕ್ತವಾಗಿದೆ. ಕಂಬಾಲಪಲ್ಲಿ ಮತ್ತು ನಾಗಲಾಪಲ್ಲಿಯಂತಹ ಘೋರ ಹತ್ಯಾಕಾಂಡಗಳು ನಡೆದದ್ದು ಇದೇ ಮಣ್ಣಿನಲ್ಲಿ. ಅತ್ಯಂತ ನೋವಿನ ಸಂಗತಿಯೆಂದರೆ, ಇಂತಹ ಪೈಶಾಚಿಕ ಕೃತ್ಯ ಎಸಗಿದರೂ, ಸಾಕ್ಷ್ಯಾಧಾರಗಳ ಕೊರತೆ ಮತ್ತು ತನಿಖಾ ಲೋಪಗಳ ಕಾರಣದಿಂದ ತಪ್ಪಿತಸ್ಥರಿಗೆ ಶಿಕ್ಷೆ ಒದಗಿಸಲು ನಮ್ಮ ವ್ಯವಸ್ಥೆಗೆ ಸಾಧ್ಯವಾಗಲೇ ಇಲ್ಲ.
ಜಸ್ಟಿಸ್ ನಾಗಮೋಹನ್ ದಾಸ್ ಸಮಿತಿಯು ಕ್ರೋಡೀಕರಿಸಿರುವ ವರದಿಯ ಪ್ರಕಾರ, 2005 ರಿಂದ 2018 ರವರೆಗಿನ ಹದಿನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ದಲಿತರ ಮೇಲೆ ನಡೆದಿರುವ ದೌರ್ಜನ್ಯಗಳು ಬರೋಬ್ಬರಿ 36,989. ಇದರರ್ಥ ಈ ಹದಿನಾಲ್ಕು ವರ್ಷಗಳಲ್ಲಿ ಸರಾಸರಿ ಒಂದು ದಿನಕ್ಕೆ ಏಳು ದೌರ್ಜನ್ಯಗಳು ನಡೆದಿವೆ. ಇದರಲ್ಲಿ 529 ಕೊಲೆ ಹಾಗೂ 834 ಅತ್ಯಾಚಾರ ಪ್ರಕರಣಗಳಿದ್ದು, ಪ್ರತಿ ಆರು ದಿನಕ್ಕೊಂದು ಹತ್ಯೆ ಮತ್ತು ಹತ್ತು ದಿನಕ್ಕೊಂದು ಅತ್ಯಾಚಾರ ನಡೆದ ಲೆಕ್ಕಾಚಾರ ಸಿಗುತ್ತದೆ.
ದೌರ್ಜನ್ಯ ನಡೆಯುವುದೊಂದು ಆತಂಕವಾದರೆ, ಸಂತ್ರಸ್ತರಿಗೆ ನ್ಯಾಯ ಸಿಗದಿರುವುದು ವ್ಯವಸ್ಥೆಯ ಬಹುದೊಡ್ಡ ದುರಂತವಾಗಿದೆ. ಕರ್ನಾಟಕದಲ್ಲಿ ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆ ನೀಡುವ ಪ್ರಮಾಣ (Conviction Rate) ಕೇವಲ ಶೇ. 4.23 ರಷ್ಟಿದ್ದು, ಇದು ಇಡೀ ದೇಶದಲ್ಲೇ ಅತ್ಯಂತ ಕಡಿಮೆ ಎಂಬುದು ತಲೆ ತಗ್ಗಿಸುವ ವಿಷಯ.
ಇದನ್ನೂ ಓದಿ | ಒಂದು ಶೂ, ಒಂದು ಗುಂಡು ಹೇಳಿದ ಜಾತೀಯತೆಯ ಕ್ರೂರ ಕತೆ
ಸುಮಾರು ಶೇ. 80.40 ರಷ್ಟು ಪ್ರಕರಣಗಳನ್ನು ಸಾಕ್ಷಿ ಕೊರತೆ, ಸರಿಯಾದ ತನಿಖೆ ಹಾಗೂ ವಿಚಾರಣೆ ನಡೆಸದ ಕಾರಣದಿಂದ ಖುಲಾಸೆಗೊಳಿಸಲಾಗಿದೆ. 2018ರ ವೇಳೆಗೆ ಆರು ಸಾವಿರಕ್ಕೂ ಹೆಚ್ಚು ಪ್ರಕರಣಗಳು ತನಿಖಾ ಹಂತದಲ್ಲೇ ಬಾಕಿ ಉಳಿದಿದ್ದವು. ಅಭಿವೃದ್ಧಿಯ ಹೆಸರಿನಲ್ಲಿ ಬೀಗುವ ಸಿಲಿಕಾನ್ ಸಿಟಿ ಬೆಂಗಳೂರು ಕೂಡ ಇದಕ್ಕೆ ಹೊರತಾಗಿಲ್ಲ. 2021ರ ಎನ್‌ಸಿಆರ್‌ಬಿ ವರದಿ ಪ್ರಕಾರ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ದಲಿತರ ಮೇಲೆ ದೌರ್ಜನ್ಯ ನಡೆಯುವ ಮಹಾನಗರ ಎಂಬ ಅಪಖ್ಯಾತಿ ಬೆಂಗಳೂರಿಗಿದೆ.
ಒಟ್ಟಾರೆಯಾಗಿ, ಹೊಸ ಕಾನೂನು ಜಾರಿಯಾಗುತ್ತಿರುವುದು ಸಕಾರಾತ್ಮಕವಾದರೂ, ಶಿಕ್ಷೆಯ ಪ್ರಮಾಣ ಹೆಚ್ಚಾಗದ ಹೊರತು ಮತ್ತು ಸಮಾಜದ ಮನಸ್ಥಿತಿ ಬದಲಾಗದ ಹೊರತು ಕರ್ನಾಟಕ ದಲಿತರ ಪಾಲಿಗೆ ನಿಜವಾದ ಅರ್ಥದಲ್ಲಿ ಶಾಂತಿಯ ತೋಟವಾಗಲು ಸಾಧ್ಯವಿಲ್ಲ.







