2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯು ಒಂದು “ದೊಡ್ಡ ಹಗರಣ” ಎಂದು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪ ಮಾಡಿ. ಇದು ಮತದಾರರ ಹಕ್ಕು ಕಸಿದುಕೊಳ್ಳುವ ತಂತ್ರ ಎಂದು ದೂರಿದ್ದಾರೆ.
ಮಂಗಳವಾರ ಬಂಕುರಾ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದು. “ಮತದಾರರ ಪಟ್ಟಿಯಿಂದ ಹೆಸರನ್ನು ಅಳಿಸಿಹಾಕಲು ಈಗ ಎಐ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಇದೊಂದು ಪಕ್ಕಾ ಹಗರಣ. ನಾನು ಎಚ್ಚರಿಕೆ ನೀಡುತ್ತಿದ್ದೇನೆ, ಒಬ್ಬನೇ ಒಬ್ಬ ಅರ್ಹ ಮತದಾರನ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿದರೆ, ದೆಹಲಿಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕುತ್ತೇವೆ (Gherao),” ಎಂದು ಮಮತಾ ಗುಡುಗಿದರು.
ಏನಿದು ‘SIR’ ವಿವಾದ?
ಚುನಾವಣಾ ಆಯೋಗವು ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯನ್ನು ಶುದ್ಧೀಕರಿಸಲು ‘ವಿಶೇಷ ತೀವ್ರ ಪರಿಷ್ಕರಣೆ‘ (SIR) ಕೈಗೊಂಡಿದೆ. ಮೃತಪಟ್ಟವರು, ಸ್ಥಳಾಂತರಗೊಂಡವರು ಮತ್ತು ನಕಲಿ ಮತದಾರರನ್ನು ಪತ್ತೆಹಚ್ಚಲು ಎಐ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ ಎಂದು ವರದಿಗಳು ಹೇಳಿವೆ. ಆದರೆ, ಮಮತಾ ಬ್ಯಾನರ್ಜಿ ಅವರ ಪ್ರಕಾರ, ಈ ತಂತ್ರಜ್ಞಾನದ ನೆಪದಲ್ಲಿ ಬಡವರು ಮತ್ತು ಸಾಮಾನ್ಯ ಜನರನ್ನು ಗುರಿಯಾಗಿಸಲಾಗುತ್ತಿದೆ.
“ಈ ಪರಿಷ್ಕರಣೆಯ ಹೆಸರಿನಲ್ಲಿ ಜನರಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ. ದಾಖಲೆಗಳ ಪರಿಶೀಲನೆ ನೆಪದಲ್ಲಿ ವೃದ್ಧರನ್ನು ಅಲೆದಾಡಿಸಲಾಗುತ್ತಿದೆ. ಈ ಮಾನಸಿಕ ಒತ್ತಡ ತಾಳಲಾರದೆ ರಾಜ್ಯದಲ್ಲಿ ಈಗಾಗಲೇ ಸುಮಾರು 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ,” ಎಂದು ಮಮತಾ ಬ್ಯಾನರ್ಜಿ ಆಘಾತಕಾರಿ ಹೇಳಿಕೆ ನೀಡಿದರು.
ಇದನ್ನೂ ಓದಿ | “ನಮಗೆ 5 ವರ್ಷ ಕೊಡಿ, ಚಿನ್ನದ ಬಂಗಾಳ ಮಾಡುತ್ತೇವೆ”: ದೀದಿ ಕೋಟೆಯಲ್ಲಿ ಅಮಿತ್ ಶಾ
ಬಿಜೆಪಿಯ ‘ಚಿನ್ನದ ಬಂಗಾಳ’ ಕನಸಿಗೆ ಟಾಂಗ್:
ಬಿಜೆಪಿಯ ಘೋಷವಾಕ್ಯವಾದ ‘ಸೋನಾರ್ ಬಾಂಗ್ಲಾ‘ (ಚಿನ್ನದ ಬಂಗಾಳ) ಬಗ್ಗೆ ವ್ಯಂಗ್ಯವಾಡಿದ ದೀದಿ, “ಚುನಾವಣೆ ಬಂದಾಗ ಇವರು ಬಂಗಾಳವನ್ನು ಚಿನ್ನದ ನಾಡಾಗಿಸುತ್ತೇವೆ ಎಂದು ಭಾಷಣ ಬಿಗಿಯುತ್ತಾರೆ. ಆದರೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಂಗಾಳಿ ಭಾಷಿಕರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅಲ್ಲಿ ಬಂಗಾಳಿಗಳನ್ನು ಥಳಿಸಲಾಗುತ್ತಿದೆ. ಹೀಗಿರುವಾಗ ಅವರು ಇಲ್ಲಿ ಬಂದು ಸೋನಾರ್ ಬಾಂಗ್ಲಾ ಕಟ್ಟುತ್ತಾರೆಯೇ?” ಎಂದು ಪ್ರಶ್ನಿಸಿದರು.
ಮುಂಬರುವ 2026ರ ವಿಧಾನಸಭೆ ಚುನಾವಣೆ ತೃಣಮೂಲ ಕಾಂಗ್ರೆಸ್ (TMC) ಪಾಲಿಗೆ ಮಾಡು ಇಲ್ಲವೇ ಮಡಿ ಹೋರಾಟವಾಗಿದೆ. ಹೀಗಾಗಿ, ಬೂತ್ ಮಟ್ಟದ ಕಾರ್ಯಕರ್ತರು ಎಚ್ಚರದಿಂದಿರಬೇಕು ಎಂದು ಮಮತಾ ಕರೆ ನೀಡಿದರು. “ಪ್ರತಿಯೊಂದು ಮನೆಗೆ ಹೋಗಿ ಮತದಾರರ ಪಟ್ಟಿ ಪರಿಶೀಲಿಸಿ. ಯಾರದ್ದಾದರೂ ಹೆಸರು ಬಿಟ್ಟುಹೋಗಿದ್ದರೆ ತಕ್ಷಣ ಗಮನಕ್ಕೆ ತನ್ನಿ. ಬಿಜೆಪಿ ಕುತಂತ್ರಕ್ಕೆ ನಾವು ಬಲಿಯಾಗಬಾರದು,” ಎಂದು ಅವರು ಕಾರ್ಯಕರ್ತರಿಗೆ ಸೂಚನೆ ನೀಡಿದರು.







