“ಕಮ್ಯುನಿಸ್ಟರಿಗೆ 34 ವರ್ಷ ಅವಕಾಶ ಕೊಟ್ಟಿದ್ದೀರಿ, ಮಮತಾ ಬ್ಯಾನರ್ಜಿಗೆ 10 ವರ್ಷ ಅವಕಾಶ ಕೊಟ್ಟಿದ್ದೀರಿ. ಭಾರತೀಯ ಜನತಾ ಪಕ್ಷಕ್ಕೆ ಕೇವಲ 5 ವರ್ಷಗಳ ಒಂದು ಅವಕಾಶ ಕೊಡಿ. ಪಶ್ಚಿಮ ಬಂಗಾಳವನ್ನು ಭಯ, ಭ್ರಷ್ಟಾಚಾರ ಮತ್ತು ಹಿಂಸೆಯಿಂದ ಮುಕ್ತಗೊಳಿಸಿ, ‘ಸೋನಾರ್ ಬಾಂಗ್ಲಾ’ (ಚಿನ್ನದ ಬಂಗಾಳ)ವನ್ನಾಗಿ ಮಾಡುತ್ತೇವೆ,” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳದ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮಂಗಳವಾರ ಕೋಲ್ಕತ್ತಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮತ್ತು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನುಸುಳುಕೋರರ ವಿರುದ್ಧ ಸಮರ:
ತಮ್ಮ ಭಾಷಣದಲ್ಲಿ ಬಾಂಗ್ಲಾದೇಶಿ ಒಳನುಸುಳುವಿಕೆ (Infiltration) ವಿಚಾರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಅಮಿತ್ ಶಾ, ಮಮತಾ ಬ್ಯಾನರ್ಜಿ ಅವರ ಓಲೈಕೆ ರಾಜಕಾರಣವೇ ಇದಕ್ಕೆ ಕಾರಣ ಎಂದು ಆರೋಪಿಸಿದರು. “ದೀದಿ ಕೇವಲ ತಮ್ಮ ಮತಬ್ಯಾಂಕ್ ಭದ್ರಪಡಿಸಿಕೊಳ್ಳಲು ದೇಶದ ಭದ್ರತೆಯನ್ನು ಪಣಕ್ಕಿಟ್ಟಿದ್ದಾರೆ. ರಾಜ್ಯದಲ್ಲಿ ಬಾಂಗ್ಲಾದೇಶಿ ನುಸುಳುಕೋರರಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲಾಗುತ್ತಿದೆ. ಇದು ರಾಜ್ಯದ ಜನಸಂಖ್ಯಾ ಸಮತೋಲನವನ್ನು ಹಾಳುಮಾಡಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ, ನುಸುಳುಕೋರರನ್ನು ಗುರುತಿಸಿ, ಅವರನ್ನು ರಾಜ್ಯದಿಂದ ಹೊರಹಾಕುವ ಕೆಲಸವನ್ನು ಆದ್ಯತೆಯ ಮೇರೆಗೆ ಮಾಡಲಿದ್ದೇವೆ. ಗಡಿ ಭದ್ರತೆಯನ್ನು ಮತ್ತಷ್ಟು ಬಲಪಡಿಸಿ, ಪಕ್ಷಿ ಕೂಡ ಹಾರಾಡದಂತೆ ಕ್ರಮ ಕೈಗೊಳ್ಳುತ್ತೇವೆ,” ಎಂದರು.
ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದ ಶಾ, “ಬಂಗಾಳದಲ್ಲಿ ಈಗ ನಡೆಯುತ್ತಿರುವುದು ಸಂವಿಧಾನದ ಆಡಳಿತವಲ್ಲ, ಬದಲಿಗೆ ‘ಸಿಂಡಿಕೇಟ್ ರಾಜ್’. ಶಿಕ್ಷಕರ ನೇಮಕಾತಿಯಿಂದ ಹಿಡಿದು ಪಡಿತರ ವಿತರಣೆಯವರೆಗೆ ಎಲ್ಲದರಲ್ಲೂ ಹಗರಣಗಳೇ ತುಂಬಿವೆ. ಬಡವರ ಹಕ್ಕುಗಳನ್ನು ಟಿಎಂಸಿ ನಾಯಕರು ಲೂಟಿ ಮಾಡುತ್ತಿದ್ದಾರೆ. ಲಂಚ ಸಂಸ್ಕೃತಿಯಿಂದಾಗಿ ರಾಜ್ಯಕ್ಕೆ ಬರಬೇಕಿದ್ದ ಕೈಗಾರಿಕೆಗಳು ಮುಖ ತಿರುಗಿಸಿ ಹೋಗುತ್ತಿವೆ. ಯುವಕರಿಗೆ ಉದ್ಯೋಗವಿಲ್ಲದೆ ಪರದಾಡುವಂತಾಗಿದೆ,” ಎಂದು ಟೀಕಿಸಿದರು.
ಇದನ್ನೂ ಓದಿ | ಕಣ್ಣೀರಿನ ಕಡಲಲ್ಲಿ ಕಂಡ ದಡ: ಕೋಗಿಲು ನಿರ್ಗತಿಕರ ಬಾಳಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಮನೆ
ಮಹಿಳಾ ಸುರಕ್ಷತೆ ಮತ್ತು ಸಂದೇಶಖಾಲಿ ಪ್ರಸ್ತಾಪ:
ಇತ್ತೀಚೆಗೆ ನಡೆದ ಸಂದೇಶಖಾಲಿ ಘಟನೆಗಳನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಗೃಹ ಸಚಿವರು, “ರಾಜ್ಯದಲ್ಲಿ ತಾಯಂದಿರು ಮತ್ತು ಸಹೋದರಿಯರಿಗೆ ರಕ್ಷಣೆ ಇಲ್ಲದಂತಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಸರ್ಕಾರ ಆರೋಪಿಗಳನ್ನು ರಕ್ಷಿಸಲು ನಿಂತಿದೆ. ಬಿಜೆಪಿಗೆ ಅಧಿಕಾರ ನೀಡಿದರೆ, ಮಹಿಳೆಯರಿಗೆ ರಾತ್ರಿ ವೇಳೆ ನಿರ್ಭಯವಾಗಿ ಓಡಾಡುವಂತಹ ವಾತಾವರಣವನ್ನು ನಿರ್ಮಿಸುತ್ತೇವೆ,” ಎಂದು ಭರವಸೆ ನೀಡಿದರು.
“ನೀವು ಎಲ್ಲರ ಆಡಳಿತವನ್ನು ನೋಡಿದ್ದೀರಿ. ಕಾಂಗ್ರೆಸ್, ಕಮ್ಯುನಿಸ್ಟ್ ಮತ್ತು ಟಿಎಂಸಿ ಆಡಳಿತದಲ್ಲಿ ಬಂಗಾಳ ತನ್ನ ವೈಭವವನ್ನು ಕಳೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ದ ಕನಸಿನಲ್ಲಿ ಪಶ್ಚಿಮ ಬಂಗಾಳವೂ ಪ್ರಮುಖ ಪಾತ್ರ ವಹಿಸಬೇಕು. ಅದಕ್ಕಾಗಿ ಡಬಲ್ ಇಂಜಿನ್ ಸರ್ಕಾರ ಬರಬೇಕು. ಈ ಬಾರಿ ಬಂಗಾಳದ ಜನತೆ ಪರಿವರ್ತನೆಗೆ ಸಜ್ಜಾಗಿದ್ದಾರೆ ಎಂಬ ವಿಶ್ವಾಸ ನಮಗಿದೆ,” ಎಂದು ಶಾ ಹೇಳಿದರು.







