ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿಯ ನಾಯಕತ್ವದಲ್ಲಿ ಮಹತ್ವದ ಬದಲಾವಣೆಯಾಗಿದೆ. ಪಕ್ಷದ ಹಿರಿಯ ನಾಯಕ ಮತ್ತು ಸಂಘಟನಾ ಚತುರ ನಿತಿನ್ ನಬಿನ್ (Nitin nabin) ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸಾಂವಿಧಾನಿಕ ಹುದ್ದೆಯಲ್ಲಿದ್ದರೂ ಪಕ್ಷದ ಶಿಸ್ತಿಗೆ ತಾವು ಎಂದಿಗೂ ಬದ್ಧ ಎಂದು ಹೇಳುವ ಮೂಲಕ ಕಾರ್ಯಕರ್ತರ ಮನ ಗೆದ್ದಿದ್ದಾರೆ. ನೂತನ ಅಧ್ಯಕ್ಷರಿಗೆ ಶುಭ ಕೋರಿ ಮಾತನಾಡಿದ ಪ್ರಧಾನಿ ಮೋದಿ, “ಇಂದಿನಿಂದ ನಿತಿನ್ ನಬಿನ್ ಅವರು ನನ್ನ ಬಾಸ್ (ಮುಖ್ಯಸ್ಥರು). ನಾನು ಪಕ್ಷದ ಒಬ್ಬ ಶಿಸ್ತಿನ ಸಿಪಾಯಿ ಮತ್ತು ಕಾರ್ಯಕರ್ತ ಮಾತ್ರ. ಸರ್ಕಾರದ ಮುಖ್ಯಸ್ಥನಾಗಿ ನಾನು ದೇಶ ಸೇವೆ ಮಾಡುತ್ತಿರಬಹುದು, ಆದರೆ ಪಕ್ಷದ ವೇದಿಕೆಯಲ್ಲಿ ಅಧ್ಯಕ್ಷರೇ ಸರ್ವೋಚ್ಚ. ಅವರ ನಿರ್ದೇಶನದಂತೆ ನಾನು ಕೆಲಸ ಮಾಡುತ್ತೇನೆ,” ಎಂದು ಹೇಳುವ ಮೂಲಕ ಬಿಜೆಪಿಯಲ್ಲಿನ ಆಂತರಿಕ ಪ್ರಜಾಪ್ರಭುತ್ವದ ಶಕ್ತಿಯನ್ನು ಪ್ರದರ್ಶಿಸಿದರು.
ಬಿಜೆಪಿಯ ವಿಶೇಷತೆಯನ್ನು ಬಣ್ಣಿಸಿದ ಮೋದಿ, “ಬಿಜೆಪಿ ಎಂಬುದು ಕೇವಲ ರಾಜಕೀಯ ಪಕ್ಷವಲ್ಲ, ಇದೊಂದು ಸಂಸ್ಕೃತಿ ಮತ್ತು ದೊಡ್ಡ ಕುಟುಂಬ. ಬೇರೆ ಪಕ್ಷಗಳಲ್ಲಿ ಸಂಬಂಧಗಳು ಅಧಿಕಾರದ ಮೇಲೆ ನಿಂತಿರುತ್ತವೆ, ಆದರೆ ನಮ್ಮಲ್ಲಿ ಸಂಬಂಧಗಳು ಸದಸ್ಯತ್ವವನ್ನೂ ಮೀರಿವೆ. ಇಲ್ಲಿನ ಪ್ರತಿಯೊಬ್ಬ ಕಾರ್ಯಕರ್ತನೂ ಕುಟುಂಬದ ಸದಸ್ಯನಿದ್ದಂತೆ. ನಮ್ಮಲ್ಲಿ ಅಧ್ಯಕ್ಷರು ಬದಲಾಗಬಹುದು, ಮುಖಗಳು ಬದಲಾಗಬಹುದು, ಆದರೆ ನಮ್ಮ ಮೂಲಭೂತ ಆದರ್ಶಗಳು ಮತ್ತು ಸಿದ್ಧಾಂತಗಳು ಎಂದಿಗೂ ಬದಲಾಗುವುದಿಲ್ಲ. ನಾಯಕತ್ವ ಬದಲಾಗುತ್ತದೆ, ಆದರೆ ದೇಶವನ್ನು ಮುನ್ನಡೆಸುವ ನಮ್ಮ ನಿರ್ದೇಶನ (Direction) ಒಂದೇ ಆಗಿರುತ್ತದೆ,” ಎಂದು ಪ್ರತಿಪಾದಿಸಿದರು.
ಇದನ್ನೂ ಓದಿ | ಉಡುಪಿ ಶ್ರೀಕೃಷ್ಣ ಮಠದಲ್ಲಿ ಇನ್ಮುಂದೆ “ಸಾಂಪ್ರದಾಯಿಕ ಉಡುಗೆ” ಕಡ್ಡಾಯ!
ಯುವ ನಾಯಕತ್ವ ಮತ್ತು ಅನುಭವದ ಸಮ್ಮಿಲನ
ನಿತಿನ್ ನಬಿನ್ ಅವರ ಆಯ್ಕೆಯನ್ನು ಸಮರ್ಥಿಸಿಕೊಂಡ ಪ್ರಧಾನಿ, “ನಿತಿನ್ ಜೀ ಅವರಿಗೆ ಯುವ ಶಕ್ತಿಯ ಜೊತೆಗೆ ಸಂಘಟನೆಯಲ್ಲಿ ಕೆಲಸ ಮಾಡಿದ ದೀರ್ಘಕಾಲದ ಅನುಭವವಿದೆ. ವಿದ್ಯಾರ್ಥಿ ದೆಸೆಯಿಂದಲೇ ಸಂಘಟನೆಯಲ್ಲಿ ತೊಡಗಿಸಿಕೊಂಡು, ಬಿಹಾರದಂತಹ ರಾಜ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರಲ್ಲಿರುವ ಯುವ ಚೈತನ್ಯ ಮತ್ತು ಹಿರಿಯರ ಬಗೆಗಿನ ಗೌರವ ಪಕ್ಷವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಅವರ ಈ ಅನುಭವ ದೇಶದ ಪ್ರತಿಯೊಬ್ಬ ಕಾರ್ಯಕರ್ತರಿಗೂ ದಾರಿದೀಪವಾಗಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.







