ಗಣಿ ನಾಡು ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ಮತ್ತು ಗುಂಡಿನ ದಾಳಿಯ ನಂತರ ಈಗ ‘ಬೆಂಕಿ’ಯ ರಾಜಕೀಯ ಶುರುವಾಗಿದೆ. ನಗರದ ಬಳ್ಳಾರಿ-ಬೆಳಗಲ್ಲು ರಸ್ತೆಯಲ್ಲಿರುವ, ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಬಿ. ಶ್ರೀರಾಮುಲು ಅವರಿಗೆ ಸೇರಿದ ‘ಜಿ ಸ್ಕ್ವೇರ್’ (G-Square) ಲೇಔಟ್‌ನಲ್ಲಿದ್ದ ಸುಸಜ್ಜಿತ ಮಾಡೆಲ್ ಹೌಸ್‌ಗೆ ಶುಕ್ರವಾರ ಸಂಜೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ಸುಮಾರು 100 ಎಕರೆಗೂ ಅಧಿಕ ವಿಸ್ತೀರ್ಣದ ಈ ಲೇಔಟ್‌ನಲ್ಲಿ ನಿವೇಶನ ಖರೀದಿದಾರರಿಗೆ ಮಾದರಿಯಾಗಿ ತೋರಿಸಲು ಈ ಸುಂದರವಾದ ಮನೆಯನ್ನು ನಿರ್ಮಿಸಲಾಗಿತ್ತು. ಶುಕ್ರವಾರ ಸಂಜೆ 6:30ರ ಸುಮಾರಿಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಮನೆಯ ಬಹುಪಾಲು ಭಸ್ಮವಾಗಿದೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಜನಾರ್ದನ ರೆಡ್ಡಿ ಅವರ ಸಹೋದರ ಜಿ. ಸೋಮಶೇಖರ್ ರೆಡ್ಡಿ, “ಇದು ಉದ್ದೇಶಪೂರ್ವಕವಾಗಿ ನಡೆದ ಕೃತ್ಯ. ಕಿಡಿಗೇಡಿಗಳು ಪೆಟ್ರೋಲ್ ಮತ್ತು ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾರೆ” ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ
ಜನವರಿ 1ರಂದು ನಡೆದಿದ್ದ ಬ್ಯಾನರ್ ಗಲಾಟೆ ವೇಳೆ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗರು “ನಿಮ್ಮ ಆಸ್ತಿಗೆ ಬೆಂಕಿ ಹಚ್ಚುತ್ತೇವೆ” ಎಂದು ಬೆದರಿಕೆ ಹಾಕಿದ್ದರು. ಈಗ ಅದೇ ಬೆದರಿಕೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ ಎಂದು ಸೋಮಶೇಖರ್ ರೆಡ್ಡಿ ದೂರಿದ್ದಾರೆ. “ಬೆಂಕಿ ಹಚ್ಚುತ್ತಿದ್ದವರನ್ನು ಹಿಡಿಯಲು ಹೋದಾಗ ಅವರು ತಪ್ಪಿಸಿಕೊಂಡು ಓಡಿದ್ದಾರೆ. ಇದು ಶೇ. 100 ರಷ್ಟು ಕಾಂಗ್ರೆಸ್ ಕಾರ್ಯಕರ್ತರೇ ಮಾಡಿದ ಕೆಲಸ” ಎಂದು ಅವರು ಕಿಡಿಕಾರಿದ್ದಾರೆ.
ಇದನ್ನೂ ಓದಿ | ಪೌರಾಯುಕ್ತೆಗೆ ಧಮ್ಕಿ: ಶಿಡ್ಲಘಟ್ಟ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಪಕ್ಷದಿಂದ ಅಮಾನತು!
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಬ್ಯಾನರ್ ವಿವಾದಿಂದ ಕುದಿಯುತ್ತಿರುವ ಬಳ್ಳಾರಿಯಲ್ಲಿ ಈ ಹೊಸ ಘಟನೆಯು ಬೆಂಕಿಗೆ ತುಪ್ಪ ಸುರಿದಂತಾಗಿದ್ದು, ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.







