ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ದೂರವಾಣಿ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಚೇರಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದ ಕಾಂಗ್ರೆಸ್ ಮುಖಂಡ ಬಿ.ವಿ. ರಾಜೀವ್ ಗೌಡ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಮಾನತುಗೊಳಿಸಿದೆ. ಪಕ್ಷದ ಶಿಸ್ತು ಸಮಿತಿಯ ಶಿಫಾರಸಿನ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಕಳೆದ ಜನವರಿ 12ರಂದು ಶಿಡ್ಲಘಟ್ಟ ನಗರದಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದಂತೆ ಅಕ್ರಮವಾಗಿ ಅಳವಡಿಸಲಾಗಿದ್ದ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಪೌರಾಯುಕ್ತೆ ಅಮೃತಾ ಗೌಡ ನೇತೃತ್ವದಲ್ಲಿ ತೆರವುಗೊಳಿಸಲಾಗಿತ್ತು. ಇದರಿಂದ ಆಕ್ರೋಶಗೊಂಡ ರಾಜೀವ್ ಗೌಡ, ಅಧಿಕಾರಿಗೆ ಫೋನ್ ಮಾಡಿ ಅತ್ಯಂತ ಅಸಭ್ಯ ಭಾಷೆಯಲ್ಲಿ ನಿಂದಿಸಿದ್ದರು. “ನನ್ನ ಬ್ಯಾನರ್ ತೆರವುಗೊಳಿಸಿದರೆ ಕಚೇರಿಗೆ ಬೆಂಕಿ ಹಚ್ಚುತ್ತೇನೆ, ನಿಮ್ಮನ್ನು ಓಡಿಸುತ್ತೇನೆ” ಎಂದು ಆರ್ಭಟಿಸಿದ್ದರು ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಹೈಕೋರ್ಟ್ ಛೀಮಾರಿ ಮತ್ತು ಕಾನೂನು ಕ್ರಮ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀವ್ ಗೌಡ ಸಲ್ಲಿಸಿದ್ದ ಎಫ್‌ಐಆರ್ ರದ್ದತಿ ಅರ್ಜಿಯನ್ನು ಹೈಕೋರ್ಟ್ (ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ) ವಜಾಗೊಳಿಸಿದೆ. “ನಾಲಿಗೆ ಮೇಲಿನ ಹಿಡಿತ ತಪ್ಪಿದರೆ ಏನಾಗುತ್ತದೆ ಎಂಬುದಕ್ಕೆ ಇದೇ ಸಾಕ್ಷಿ. ಒಬ್ಬ ಮಹಿಳಾ ಅಧಿಕಾರಿಯ ವಿರುದ್ಧ ಇಂತಹ ಭಾಷೆ ಬಳಸುವುದು ಅಕ್ಷಮ್ಯ” ಎಂದು ನ್ಯಾಯಾಲಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಪೊಲೀಸರು ಅವರ ವಿರುದ್ಧ ಕಠಿಣ ಸೆಕ್ಷನ್‌ಗಳನ್ನು (BNS 79) ಏಕೆ ದಾಖಲಿಸಿಲ್ಲ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ | ಶಿಡ್ಲಘಟ್ಟ ಪೌರಾಯುಕ್ತರಿಗೆ ಬೆದರಿಕೆ: ವಾರ ಕಳೆದರೂ ರಾಜೀವ್ ಗೌಡ ಅರೆಸ್ಟ್ ಆಗಿಲ್ಲವೇಕೆ?
2023ರ ವಿಧಾನಸಭಾ ಚುನಾವಣೆಯಲ್ಲಿ ಶಿಡ್ಲಘಟ್ಟ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಜೀವ್ ಗೌಡ ಅವರ ಈ ವರ್ತನೆಯಿಂದ ಸರ್ಕಾರ ಮತ್ತು ಪಕ್ಷಕ್ಕೆ ಜಾಗತಿಕ ಮಟ್ಟದಲ್ಲಿ ಮುಜುಗರ ಉಂಟಾಗಿತ್ತು. ಜನವರಿ 15 ರಂದು ನೀಡಲಾಗಿದ್ದ ನೋಟಿಸ್‌ಗೆ ಯಾವುದೇ ಉತ್ತರ ನೀಡದ ಕಾರಣ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರ ಶಿಫಾರಸಿನ ಮೇರೆಗೆ ಈಗ ಅವರನ್ನು ಅಮಾನತು ಮಾಡಲಾಗಿದೆ.
ಪ್ರಸ್ತುತ ರಾಜೀವ್ ಗೌಡ ತಲೆಮರೆಸಿಕೊಂಡಿದ್ದು, ಪೊಲೀಸರು ಅವರ ಬಂಧನಕ್ಕಾಗಿ ಜಾಲ ಬೀಸಿದ್ದಾರೆ. ಮುನ್ಸಿಪಲ್ ನೌಕರರು ಮತ್ತು ಅಧಿಕಾರಿಗಳು ಈ ವರ್ತನೆಯನ್ನು ಖಂಡಿಸಿ ಈಗಾಗಲೇ ಪ್ರತಿಭಟನೆ ನಡೆಸಿದ್ದಾರೆ.







