ಜಂಟಿ ಅಧಿವೇಶನದಲ್ಲಿ ಆದ ಮುಜುಗರದ ನಂತರ ರಾಜ್ಯ ಸರ್ಕಾರ ಗಣರಾಜ್ಯೋತ್ಸವದ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳಲು ಮುಂದಾಗಿಲ್ಲ. ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಾಡಲಿರುವ ಭಾಷಣದ ಪ್ರತಿಯನ್ನು ರಾಜ್ಯಪಾಲರು ಪರಿಶೀಲಿಸಿ, ಅದಕ್ಕೆ ತಮ್ಮ ಅಧಿಕೃತ ಮುದ್ರೆಯೊತ್ತುವ ಮೂಲಕ ಒಪ್ಪಿಗೆ ನೀಡಿದ್ದಾರೆ.
ವಿಧಾನಸಭೆಯ ಜಂಟಿ ಅಧಿವೇಶನದ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧದ ಟೀಕೆಗಳಿವೆ ಎಂಬ ಕಾರಣಕ್ಕೆ ರಾಜ್ಯಪಾಲರು ಅದನ್ನು ಓದಲು ನಿರಾಕರಿಸಿದ್ದರು. ಇದು ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ, ಗಣರಾಜ್ಯೋತ್ಸವದ ಭಾಷಣದಲ್ಲಿ ಅಂತಹ ಯಾವುದೇ ವಿವಾದಾತ್ಮಕ ಅಂಶಗಳು ಇರದಂತೆ ಸರ್ಕಾರ ಎಚ್ಚರವಹಿಸಿದೆ ಎನ್ನಲಾಗಿದೆ. ನಿನ್ನೆಯಷ್ಟೇ ಸರ್ಕಾರದ ಪ್ರಮುಖರು ಭಾಷಣದ ಕರಡು ಪ್ರತಿಯನ್ನು ರಾಜ್ಯಪಾಲರ ಪರಿಶೀಲನೆಗಾಗಿ ಕಳುಹಿಸಿಕೊಟ್ಟಿದ್ದರು.
ರಾಜ್ಯಪಾಲರಿಂದ ‘ಓಕೆ’ ಮುದ್ರೆ:
ಸರ್ಕಾರ ಕಳುಹಿಸಿದ ಭಾಷಣದ ಪ್ರತಿಯನ್ನು ರಾಜ್ಯಪಾಲರು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಮೂಲಗಳ ಪ್ರಕಾರ, ಈ ಬಾರಿ ಭಾಷಣದಲ್ಲಿ ಸರ್ಕಾರದ ಸಾಧನೆಗಳು, ಅಭಿವೃದ್ಧಿ ಯೋಜನೆಗಳು ಮತ್ತು ಸಂವಿಧಾನದ ಆಶಯಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ರಾಜಕೀಯ ಸಂಘರ್ಷಕ್ಕೆ ಎಡೆಮಾಡಿಕೊಡುವ ಅಂಶಗಳನ್ನು ಕೈಬಿಡಲಾಗಿದೆ ಅಥವಾ ಮೃದುಗೊಳಿಸಲಾಗಿದೆ. ಭಾಷಣದ ಬಗ್ಗೆ ತೃಪ್ತಿ ವ್ಯಕ್ತಪಡಿಸಿರುವ ರಾಜ್ಯಪಾಲರು, ಅದಕ್ಕೆ ಅಧಿಕೃತ ಮುದ್ರೆ ಒತ್ತಿ ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ. ಇದರಿಂದಾಗಿ ಗಣರಾಜ್ಯೋತ್ಸವದಂದು ನಡೆಯಬಹುದಾಗಿದ್ದ ಸಂಭಾವ್ಯ ‘ಹೈಡ್ರಾಮಾ’ ತಪ್ಪಿದಂತಾಗಿದೆ.
ಇದನ್ನೂ ಓದಿ | 77ನೇ ಗಣರಾಜ್ಯೋತ್ಸವ: ಬೆಂಗಳೂರಿನಲ್ಲಿ ಅದ್ಧೂರಿ ಪರೇಡ್, ಸಾರ್ವಜನಿಕರಿಗೆ 2,000 ಇ-ಪಾಸ್ ವ್ಯವಸ್ಥೆ!
ಗಣರಾಜ್ಯೋತ್ಸವ ದೇಶದ ಹಬ್ಬ. ಈ ದಿನದಂದು ರಾಜಕೀಯ ಬದಿಗಿಟ್ಟು ಸಂವಿಧಾನ ಮತ್ತು ದೇಶದ ಐಕ್ಯತೆಯನ್ನು ಎತ್ತಿಹಿಡಿಯುವುದು ಸಂಪ್ರದಾಯ. ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಿರುವ ರಾಜ್ಯಪಾಲರು, ನಾಡಿನ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ವೇಳೆ ರಾಜ್ಯದ ಅಭಿವೃದ್ಧಿಯ ಚಿತ್ರಣ ಮತ್ತು ಮುಂದಿನ ಗುರಿಗಳ ಬಗ್ಗೆ ಅವರು ಪ್ರಸ್ತಾಪಿಸಲಿದ್ದಾರೆ.







