ಸತ್ಯ ಪ್ರಕಾಶ್ ನಿರ್ದೇಶನದ ʻಎಕ್ಸ್ ಅಂಡ್ ವೈʼ; ಕನ್ನಡ ಚಿತ್ರರಂಗಕ್ಕೆ ಬೇಕಿದ್ದ ಹೊಚ್ಚ ಹೊಸ ತಂಗಾಳಿ

ಕನ್ನಡ ಚಿತ್ರಗಳ ಸಕ್ಸಸ್‌ ರೇಟ್‌ ಕಡಿಮೆ ಇರುವ ಹೊತ್ತಲ್ಲಿ, ಡಿ ಸತ್ಯ ಪ್ರಕಾಶ್ ನಿರ್ದೇಶನದ 'ಎಕ್ಸ್ ಅಂಡ್ ವೈ' ಚಿತ್ರ ಬಿಡುಗಡೆಯಾಗುತ್ತಿದೆ. ಸ್ಟಾರ್ ನಟರ ಚಿತ್ರಗಳ ಅನುಪಸ್ಥಿತಿಯಲ್ಲಿ 'ಎಕ್ಸ್ ಅಂಡ್ ವೈಗಳಂತಹ ಚಿತ್ರ ಗೆಲ್ಲವುದು ಮುಖ್ಯ ಎನ್ನುತ್ತಾರೆ ಪತ್ರಕರ್ತ ಕುಮಾರ್‌ ಎಸ್‌.
X&Y Kannada Movie

ಇನ್ನು ನಾಲ್ಕೈದು ದಿನಗಳನ್ನು ಕಳೆದರೆ 2025ರ ಆರು ತಿಂಗಳು ಪೂರ್ಣವಾಗುತ್ತವೆ. ಈ ಅವಧಿಯಲ್ಲಿ ಕನ್ನಡದಲ್ಲಿ 100ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ. ಅವು ಯಾವುವು ಎಂದು ನೆನಪಿಸಿಕೊಳ್ಳುವುದಕ್ಕೆ ಸ್ವಲ್ಪ ಕೆರೆದುಕೊಳ್ಳಬೇಕು. ಹಾಗೊಮ್ಮೆ ಕೆರೆದುಕೊಂಡಾಗ ಉದುರುವು ಕೂದಲೋ, ತಲೆಹೊಟ್ಟೆಗಿಂತ ಕಡಿಮೆ ಸಂಖ್ಯೆಯ ಸಿನಿಮಾಗಳು ನಮಗೆ ನೆನಪಾಗುತ್ತವೆ. 

ರಂಗಾಯಣ ರಘು ಅವರ ವಿಭಿನ್ನ ಅಭಿನಯದ ಕಾರಣಕ್ಕೆ ಶಾಖಾಹಾರಿ, ಅಜ್ಞಾತವಾಸಿ, ಶಿವಣ್ಣ ಅಭಿನಯಿಸಿದ ಕಾರಣಕ್ಕೆ ವೀರ ಚಂದ್ರಹಾಸ, ಅತ್ಯಾಚಾರ, ನ್ಯಾಯಕ್ಕಾಗಿ ಹೋರಾಟ ಅನ್ನುವ ಕಥಾ ಹಂದರದ ಯುದ್ಧಕಾಂಡ -2, ಮೊದಲ ಚಿತ್ರ ಚೆನ್ನಾಗಿತ್ತು ಎಂಬ ಕಾರಣಕ್ಕೆ ಸಿದ್ಲಿಂಗು -2, ಯೋಗರಾಜ ಭಟ್ಟರ ಮನದ ಕಡಲು.. ಹೀಗೆ ಇನ್ನೊಂದೆರಡು ನೆನಪಾಗುತ್ತವೆ. 

ಪ್ಯಾನ್ ಇಂಡಿಯಾ ಅನ್ನೋ ಪ್ರಚಾರ, ಅಬ್ಬರಿಸುವ ಚಿತ್ರಗಳ ಹಾವಳಿಯಿಂದಾಗಿ ಭಾರತೀಯ ಚಿತ್ರರಂಗಕ್ಕೆ ಒಂದು ರೀತಿಯ ಗರ ಬಡಿದಿದೆ.  ಸಾವಿರಾರು ಕೋಟಿ ರೂ ಸುರಿದು ಸಿನಿಮಾ ಮಾಡುವುದೇ ಟ್ರೆಂಡ್ ಎಂಬಂತೆ ಬಿಂಬಿಸುವಾಗ ಯಾರಿಗೂ ಸಣ್ಣದೊಂದು ಚಿತ್ರ ಮಾಡಿ, ಬದುಕಬಲ್ಲೆವು ಎಂಬ ಧೈರ್ಯ ಮಾಡಲು ಆಗುವುದಿಲ್ಲ.

ಇದನ್ನೂ ಓದಿ| ನಮ್ಮ ಪ್ರಯತ್ನವನ್ನು ಕನ್ನಡದ ಪ್ರೇಕ್ಷಕರು ಗಟ್ಟಿಯಾಗಿ ನಂಬುತ್ತಾರೆ ಎಂಬ ಭರವಸೆ ಇದೆ; ‘ಎಕ್ಸ್‌ ಅಂಡ್‌ ವೈ’ ನಿರ್ದೇಶಕ ಸತ್ಯಪ್ರಕಾಶ್‌

ಸದ್ಯಕ್ಕೆ ಮಲಯಾಳಂ ಚಿತ್ರರಂಗ ಅಂತಹ ಪ್ಯಾನ್ ಇಂಡಿಯಾ ಹುಚ್ಚಿಗೆ ಬೀಳದೆ ಸುಮ್ಮನೆ ಚಿತ್ರಗಳನ್ನು ನಿರ್ಮಿಸಿ ಬಿಡುಗಡೆ ಮಾಡುತ್ತಿವೆ. ಇನ್ನು ಅಲ್ಲಿನ ಸೂಪರ್ ಸ್ಟಾರ್‌ಗಳಾದ ಮೋಹನ್‌ ಲಾಲ್‌, ಮುಮ್ಮೂಟಿ ವರ್ಷಕ್ಕೆ ಕನಿಷ್ಟ ಮೂರು ಚಿತ್ರಗಳನ್ನು ತೆರೆಗೆ ತರುತ್ತಾರೆ. ಆದರೆ ಕನ್ನಡ ಚಿತ್ರರಂಗ ಮಾತ್ರ ಗೊಂದಲದಲ್ಲೇ ಕೂತಿದೆ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವಂತಹ ಸಿನಿಮಾಗಳಿಲ್ಲ. ಕನ್ನಡದ ಜನಪ್ರಿಯ ತಾರೆಗಳದ್ದು ಸದ್ದೇ ಇಲ್ಲ. ಸುದೀಪ್  ನಟನೆಯ ಈ ವರ್ಷ ಯಾವುದೇ ಚಿತ್ರ ತೆರೆಗೆ ಬರುತ್ತಿಲ್ಲ. ಯಶ್ ಚಿತ್ರಕ್ಕಾಗಿ ಮುಂದಿನ ವರ್ಷಕ್ಕಾಗಿ ಕಾಯಬೇಕು. ಉಪೇಂದ್ರ ಚಿತ್ರ ಅವರಿನ್ನೂ ಯಾವುದೇ ಹೊಸ ಚಿತ್ರದ ಬಗ್ಗೆ ಮಾತಾಡಿಲ್ಲ. ಶಿವಣ್ಣ ಅವರ ಮಾತ್ರ ಕಳೆದ ವರ್ಷ 3 ಚಿತ್ರಗಳು ಬಂದಿವೆ. ಈ ವರ್ಷ ಎರಡು ಬಿಡುಗಡೆ, ಇನ್ನೂ ಮೂರರ ಚಿತ್ರೀಕರಣ ನಡೆಯುತ್ತಿದೆ. ಜನರನ್ನು ಚಿತ್ರಮಂದಿರಕ್ಕೆ ಎಳೆದು ತರುವ ಶಕ್ತಿ ಇರುವುದು ಮಾಸ್‌ ನಟರಾದ ದರ್ಶನ್‌ ಮತ್ತು ಧ್ರುವ ಸರ್ಜಾ ಅವರಿಗೆ. ದರ್ಶನ್‌ ವ್ಯಕ್ತಿಗತ ಬದುಕಿನ ಕಾರಣಕ್ಕೆ ಬ್ಯುಸಿ. ಇನ್ನು ಧ್ರುವ ಸರ್ಜಾ ಮಾರ್ಟಿನ್‌ ಕಳೆದ ವರ್ಷ ಬಿಡುಗಡೆಯಾಗಿತ್ತು. ಈ ವರ್ಷ ಕೆಡಿ ಸಾಲಿನಲ್ಲಿದೆ. ನಿರ್ದೇಶನಕ್ಕೂ ಇಳಿದ ಮೇಲೆ ದುನಿಯಾ ವಿಜಿ ಒಳ್ಳೆಯ ಸಿನಿಮಾಗಳ ಕೊಟ್ಟಿದ್ದಾರೆ. ಆದರೆ ಈ ವರ್ಷ ಯಾವುದೇ ಚಿತ್ರವಿಲ್ಲ. ಹಾಗಾದರೆ ಜನರನ್ನು ಚಿತ್ರಮಂದಿರಕ್ಕೆ ಕರೆತರುವುದು ಯಾರು? ಹೇಗೆ?

ಸ್ಟಾರ್ ನಟರ ಚಿತ್ರಗಳ ಅನುಪಸ್ಥಿತಿಯಲ್ಲಿ ಒಂದಿಷ್ಟು ಮಂದಿ ಚಿತ್ರ ಮಾಡುವ ಸಾಹಸ ಮಾಡುತ್ತಿದ್ದಾರೆ. ಆದರೆ ಹೊಸತನವಿಲ್ಲ, ಕತೆಯಿಲ್ಲ, ಚಿತ್ರಕತೆಯಿಲ್ಲ. ಸಿನಿಮಾ ಚಿತ್ರಮಂದಿರಕ್ಕೆ ಬಂದಿದ್ದು ಗೊತ್ತಾಗುವುದಿಲ್ಲ, ಹೋಗಿದ್ದೂ ಗೊತ್ತಾಗುವುದಿಲ್ಲ.  ಇದರ ನಡುವೆ ಪರಭಾಷೆಗಳಲ್ಲಿ ಸಿದ್ದವಾಗುತ್ತಿರುವ ಪ್ಯಾನ್ ಇಂಡಿಯಾ ಚಿತ್ರಗಳನ್ನು ಕನ್ನಡದಲ್ಲೂ ಬಿಡುಗಡೆಯಾಗಿವೆ. ಕನ್ನಡದ ಸಿನಿಮಾಗಳಿಗೆ ಪ್ರದರ್ಶನದ ಅವಕಾಶವೂ ಇಲ್ಲದಂತೆ ಮಾಡುತ್ತಿವೆ. ಒಂದು ವೇಳೆ ಉತ್ತಮ ಚಿತ್ರಗಳಿದ್ದಿದ್ದರೆ, ತೊಡೆ ತಟ್ಟುತ್ತಿದ್ದೇವೇನೊ. ನಿಮಗೆ ನೆನಪಿರಬಹುದು, ತೆಲುಗಿನ ಬಾಹುಬಲಿ ಬಿಡುಗಡೆಯಾದಾಗ, ಕನ್ನಡದ ರಂಗಿತರಂಗ ಸೆಡ್ಡು ಹೊಡೆದಿತ್ತು. ಅಂದರೆ ಅಬ್ಬರ, ಆಡಂಬರ ಏನೇ ಇರಲಿ, ಒಳ್ಳೆಯ ಕತೆ, ಒಳ್ಳೆಯ ಚಿತ್ರಕತೆ ಇದ್ದರೆ ಸಿನಿಮಾ ನೋಡಲು ಕನ್ನಡ ಪ್ರೇಕ್ಷಕರು ಸಿದ್ಧರಿದ್ದಾರೆ ಎಂಬುದನ್ನು ಸಾಬೀತು ಮಾಡಿತ್ತು.

ಈಗ ಅಂತಹದೇ ಮತ್ತೊಂದು ಸಂದರ್ಭ ಬಂದಿದೆ. ಕನ್ನಡ ಚಿತ್ರಗಳ ಸಕ್ಸಸ್‌ ರೇಟ್‌ ಕಡಿಮೆ ಇರುವ ಹೊತ್ತಲ್ಲಿ, ಡಿ ಸತ್ಯ ಪ್ರಕಾಶ್ ನಿರ್ದೇಶನದ ‘ಎಕ್ಸ್ ಅಂಡ್ ವೈ’ ಚಿತ್ರ ಬಿಡುಗಡೆಯಾಗುತ್ತಿದೆ. ರಾಮಾ ರಾಮ ರೇ ಚಿತ್ರದ ಮೂಲಕ ಗಮನಸೆಳೆದ ಸತ್ಯಪ್ರಕಾಶ್ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಟರೂ ಆಗಿ ಕಾಣಿಸಿಕೊಂಡಿದ್ದಾರೆ. ಕ್ರೀಡಾಪಟು ಎಂಬ ವಿಚಿತ್ರ ಹೆಸರಿನ, ಆಟೋ ಆಂಬುಲೆನ್ಸ್ ಡ್ರೈವರ್ ಆಗಿ, ಎಲ್ಲರಿಗೂ ಎಲ್ಲ ಕಾಲಕ್ಕೂ ಸ್ಪಂದಿಸುತ್ತಾ, ಒಳಿತು ಬಯಸುವ ನಾಯಕನಾಗಿ ಮಿಂಚಿದ್ದಾರೆ. 

‘ಎಕ್ಸ್ ಅಂಡ್ ವೈ’, ಫ್ಯಾಂಟಸಿ, ಕಾಮಿಡಿ ಚಿತ್ರ.  ಒಂದು ಮಗು ಹುಟ್ಟಬೇಕಾದರೆ ಗಂಡು-ಹೆಣ್ಣು ಕೂಡಬೇಕು. ಆದರೆ ಹುಟ್ಟುವ ಮಗು ಹೆಣ್ಣೋ ಗಂಡೋ ಎಂದು ನಿರ್ಧಾರವಾಗಲು ಎಕ್ಸ್  ಎಕ್ಸ್ ಅಥವಾ ಎಕ್ಸ್ ವೈ ಕ್ರೋಮೋಸೋಮ್ಗಳು ಜೊತೆಯಾಗಬೇಕು. ಈ ಎಳೆಯನ್ನು ಹಿಡಿದು ತಾನು ಯಾರ ಹೊಟ್ಟೆಯಲ್ಲಿ ಹುಟ್ಟಲಿದ್ದೀನಿ ಎಂದು ತಿಳಿಯಲು ಕ್ರೋಮೋಸೋಮ್ ಭೂಮಿಗೆ ಬರುವ ಫ್ಯಾಂಟಸಿಯೇ ಚಿತ್ರದ ಒಂದೆಳೆ ಕತೆ. 

ಭೂಮಿಯ ಯಾವ ಶಿಷ್ಟಾಚಾರ ಅರಿಯದ, ಅನ್ಯಗ್ರಹ ಜೀವಿಯಂತೆ ಅವತರಿಸಿ, ತಾನು ಭವಿಷ್ಯದಲ್ಲಿ ಮಗುವಾಗಲಿರುವ ತಂದೆ-ತಾಯಿಯನ್ನು ಹುಡುಕುವ ಜೊತೆಗೆ, ಪ್ರೀತಿ, ಸ್ನೇಹ, ತಂದೆ-ಮಕ್ಕಳ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳುತ್ತಾ ಹೋಗುವ ಜೀವವೊಂದರ ಮೂಲಕ ಎಂದಿನಂತೆ ಸತ್ಯ ಮನುಷ್ಯ ಪ್ರೀತಿ, ಬದುಕಿನ ತತ್ವಗಳನ್ನು ತಿಳಿ ಹಾಸ್ಯದಮೂಲಕ ಅದ್ಭುತವಾಗಿ ದಾಟಿಸಿದ್ದಾರೆ. 

ಹಿಂಸೆ, ಬೇಧ, ಅಸೂಯೆ, ಅನ್ಯಾಯಗಳು ನಮ್ಮನ್ನು ಕಂಗಾಲಾಗಿಸಿರುವ ಹೊತ್ತಲ್ಲಿ, ಭರವಸೆ, ಪ್ರೀತಿ, ಸಹೃದಯತೆ, ಜೀವನೋತ್ಸಾಹ ತುಂಬುವ ಕತೆಗಳು ಅಗತ್ಯ. ಇಂದು ಒಟಿಟಿ ಇರಲಿ, ದೊಡ್ಡ ತೆರೆಯಲ್ಲೇ ಇರಲಿ, ಹಿಂಸೆ, ವ್ಯಕ್ತಿ ವೈಭವೀಕರಣಗಳೇ ಹೆಚ್ಚು. ನವಿರಾದ, ಸಂವೇದನೆಯಿಂದ ಕೂಡಿದ, ಮನಸ್ಸು ಹಗುರಾಗಿಸುವ, ಕಣ್ಣುಒದ್ದೆಯಾಗಿಸುವ ಕತೆಗಳು ನಮ್ಮ ಅನುಭವಕ್ಕೆ ಬರುವುದು ಅಪರೂಪವೇ ಆಗಿದೆ. ಸತ್ಯ ‘ ಎಕ್ಸ್ ಅಂಡ್ ವೈ’ ಮೂಲಕ ಬಹುದಿನಗಳ ನಂತರ ಅಂತಹ ಅಪೂರ್ವವಾದ ಅನುಭವನ್ನು ಯಶಸ್ವಿಯಾಗಿ ಕಟ್ಟಿ ಕೊಟ್ಟಿದ್ದಾರೆ. 

ನಮ್ಮ ಸುತ್ತಲೂ ಘಟಿಸುತ್ತಿರುವ ವಿದ್ಯಮಾನಗಳು ನಮ್ಮನ್ನು ನಿಜಕ್ಕೂ ಅಧೀರರನ್ನಾಗಿಸುತ್ತವೆ. ಅತ್ಯಾಚಾರ, ಅಕ್ರಮ, ಹಿಂಸೆಗಳು ಬದುಕಿನ ಬಗ್ಗೆ, ಭವಿಷ್ಯದ  ಬಗ್ಗೆ ಅನಿಶ್ಚಿತತೆಯನ್ನೂ, ಅಸಹಾಯಕತೆಯನ್ನು ಹುಟ್ಟಿಸುತ್ತವೆ. ಚಿತ್ರದಲ್ಲಿ ಬರುವ ಏಲಿಯನ್ ಪಾತ್ರ, ಇಂತಹ ಅನಿಶ್ಚಿತತೆ ಮತ್ತು ಗೊಂದಲಗಳಿಂದಾಗಿ, ‘ ನಾನು ಮಗುವಾಗಿ ಹುಟ್ಟಿ ಬರುವುದಿಲ್ಲ. ನಗುನಗುತಾ ಇರುವ ಹೂವಾಗಿ ಹುಟ್ಟಿ ಬರುತ್ತೇನೆ’ ಎನ್ನುತ್ತದೆ.  ಇದು ಅತ್ಯಂತ ಮಾರ್ಮಿಕವಾಗಿ ನಾಟುವ ಮಾತು. 

ಸಿನಿಮಾ ಆಗಲಿ, ಸಮಾಜ ಆಗಲಿ, ನಮಗೆ ಬೇಕಿರುವುದು ಮನುಷ್ಯತ್ವ- ಸಹೃದಯತೆ. ಅವುಗಳನ್ನು ಕಳೆದುಕೊಂಡು ನಾವು ಏನನ್ನೂ ಕಟ್ಟಲು ಸಾಧ್ಯವಿಲ್ಲ. ಏನನ್ನೂ ಸಾಧಿಸಲು ಸಾಧ್ಯವಿಲ್ಲ. 

ಭ್ರಮಾತ್ಮಕವಾದ, ಯಾವ ಬದಲಾವಣೆಯೂ ತರದ ವಿಜೃಂಬಣೆಯ ಬದಲು,  ಸಹಜವಾದ, ಸರಳವಾದ, ಸಂವೇದನೆಯಿಂದ ಕೂಡಿ ಸ್ಪಂದನೆ ಹಾಗೂ ಸಂಬಂಧಗಳು ಬದಲಾವಣೆಯನ್ನು ತರಬಲ್ಲವು. ‘ಎಕ್ಸ್ ಅಂಡ್ ವೈ’ ಇಂತಹ ಹಲವು ಸಂಗತಿಗಳನ್ನು ಭಾವನಾತ್ಮಕವಾಗಿ ಪ್ರೇಕ್ಷಕರ ಎದೆಗೆ ದಾಟಿಸುತ್ತದೆ. 

ಚಿತ್ರದ ಮೊದಲರ್ಧ ಪ್ರೇಕ್ಷಕರನ್ನು ಚಿತ್ರದ ನಾಯಕನ ಜೊತೆಗೆ ನಗೆಗಡಲಲ್ಲಿ ತೇಲಿಸುತ್ತದೆ, ಎರಡನೆಯ ಭಾಗ ಭಾವನಾತ್ಮಕ ಅಲೆಗಳಲ್ಲಿ ಒಯ್ದಾಡಿಸುತ್ತದೆ. ಅಪ್ಪಟ ಮನರಂಜನೆಯನ್ನು ಒಳಗೊಂಡಿರುವ ಈ ಚಿತ್ರ,  ಸದ್ಯಕ್ಕೆ ಕನ್ನಡ ಚಿತ್ರರಂಗಕ್ಕೆ ಬೇಕಿದ್ದ ಹೊಸ ಗಾಳಿ ಎಂದೇ ನನ್ನ ಭಾವನೆ. ಸತ್ಯ ಮತ್ತು ಅವರ ತಂಡ ಕೇವಲ ಸದಭಿರುಚಿಯ ಚಿತ್ರವನ್ನು ನಿರ್ಮಿಸಿಲ್ಲ, ಕನ್ನಡ ಪ್ರೇಕ್ಷಕರನ್ನು ರಿಫ್ರೆಶ್ ಮಾಡುವ ಪ್ರಯತ್ನ ಮಾಡಿದ್ದಾರೆ. ಈ ಚಿತ್ರವನ್ನು ಸಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ಹೋಗಿ ಚಿತ್ರವನ್ನ ನೋಡಬಹುದು ಎಂಬುದರಲ್ಲಿ ಅನುಮಾನವಿಲ್ಲ. ಇಂತಹ ಚಿತ್ರಗಳು ಗೆದ್ದರೆ ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಬಲ ಹೆಚ್ಚುತ್ತದೆ.

Share:

ಮತ್ತಷ್ಟು ಸುದ್ದಿ

ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮ

ಅಲೆದಾಟ ಮುಕ್ತ ಆಡಳಿತದತ್ತ ಮೇಲುಕೋಟೆ ಮನೆ ಬಾಗಿಲಿಗೇ ಬಂದ ‘ಸರ್ಕಾರಿ ಸೇವೆ’ ಕಾರ್ಯಕ್ರಮ  ತಂತ್ರಜ್ಞಾನದ ಅರಿವನ್ನು ಆಡಳಿತ ಯಂತ್ರಕ್ಕೆ ವರ್ಗಾಯಿಸಿದ

ಬೆಂಗಳೂರಿನಲ್ಲಿ ಮೇ 25 ರಂದು 3ನೇ ಕರ್ನಾಟಕ ಸಂಘಟಕರ ಸಮಾವೇಶ

ಸಾಂಸ್ಕೃತಿಕ ನೀತಿ ಜಾರಿ ಮತ್ತು ಅಕಾಡೆಮಿಗಳ ಬಲವರ್ಧನೆಗೆ ಆಗ್ರಹಿಸಿ ರಂಗಕರ್ಮಿಗಳು ಹಾಗೂ ಸಾಂಸ್ಕೃತಿಕ ಸಂಘಟಕರ ಬೃಹತ್‌ ಸಮಾಲೋಚನೆ ಬೆಂಗಳೂರು: ಕರ್ನಾಟಕ

ಮುಂದೆ ಓದಿ »

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »