ಕಿತ್ತಳೆ ಮರಕ್ಕೆ ಹತ್ತಿ ಹಣ್ಣುಗಳನ್ನು ಕುಯ್ದು, ಒಂದಾದ ಮೇಲಿನ್ನೊಂದರಂತೆ ಮರದ ಮೇಲೇ ಕುಳಿತು ಮನಸ್ಸು ಭರ್ತಿಯಾಗುವವರೆಗೂ ತಿನ್ನುವುದು ಗೌರೀಶ ಮತ್ತು ರಾಣಿ ಇಬ್ಬರಿಗೂ ರೂಢಿ. ಅವರು ಒಂದರ ಹಿಂದಿನ್ನೊಂದು ತಿನ್ನುತ್ತಿದ್ದ ಹಣ್ಣಿನ ಲೆಕ್ಕ ಇಡಲು ಸಾಧ್ಯವೇ ಇರಲಿಲ್ಲ. ಆದರೆ, ಕಿತ್ತಲೆಸಿಪ್ಪೆಯ ಸೊನೆಯು ಬೆರಳುಗಳ ನಡುವಿನ ಜಾಲಭಾಗದೊಳಗೆ ಸೇರಿ ಬೆಳ್ಳಗಾಗುತ್ತಿದ್ದ ಬಗೆಯಿಂದ ಇವರು ಎಷ್ಟು ತಿಂದಿರಬಹುದೆಂದು ಯಾರಾದರೂ ಅಂದಾಜು ಮಾಡಬಹುದಿತ್ತಷ್ಟೆ. ಇಬ್ಬರೂ ಮನಸ್ಸು ತೃಪ್ತಿ ತಿಂದಾದ ಮೇಲೆ ಮರ ಹತ್ತಲಾಗದೆ ಕೆಳಗೆ ಕಾಯುತ್ತಿರುತ್ತಿದ್ದ ಮಣಿ ಮತ್ತು ಕೃಷ್ಣನಿಗೆ ಹಣ್ಣನ್ನು ಕಿತ್ತು ಕೊಡುವ ಉಪಕಾರದ ಕೆಲಸವಾಗುತ್ತಿತ್ತು.
ಅವತ್ತೊಂದು ದಿನ, ಒಟ್ಟಿಗೇರಿ ಬಾವಿಯ ಹತ್ತಿರದ ಒಂದು ಕಿತ್ತಲೆ ಮರದ ಮೇಲೆ ಗೌರೀಶನಿಗೆ ಹಿಂದಿನ ದಿನವೇ ಕಣ್ಣು ಬಿದ್ದಿತ್ತು. ಮಾರನೆ ದಿನ ತೋಟಕ್ಕೆ ಹೋದಾಗ ತಾನೇ ಆ ಮರ ಹಿಡಿಯುವುದೆಂದು ಅವನು ಮನಸ್ಸಲ್ಲೇ ತೀರ್ಮಾನಿಸಿಕೊಂಡಿದ್ದ. ಗೌರೀಶ, ರಾಣಿ, ಮಣಿ, ಕೃಷ್ಣ ಮನೆಯಿಂದ ಒಟ್ಟಿಗೆ ಹೊರಟರಾದರೂ, ಬಾಗಿಲಿಗೆ ಬಂದಾಗ ಅವ್ವ ಗೌರೀಶನಿಗೆ ಏನೋ ಕೆಲಸ ಹೇಳಿದ್ದರಿಂದ ಇವನು ಸ್ವಲ್ಪ ಹಿಂದಾದ. ಹೇಳಿದ ಕೆಲಸ ನಿಪಟಾಯಿಸಿ ಬರುವಾಗಲೇ ಗೌರೀಶನು, ತಾನು ಮನಸ್ಸಿನಲ್ಲಿ ಹಿಡಿದಿಟ್ಟುಕೊಂಡಿದ್ದ ಮರಕ್ಕೆ ರಾಣಿ ಹೋಗದೆ ಇರಲೆಂದುಕೊಂಡ. ಒಂದು ವೇಳೆ ಅವಳೇನಾದರೂ ಅದನ್ನೇ ಹತ್ತಿಬಿಟ್ಟಿದ್ದರೆ? ಅನ್ನಿಸಿದ್ದೇ ಅವನ ಕರುಳು ಆತಂಕದಿಂದ ತಳಕಂಬಳಕ ಆಡತೊಡಗಿತು. ಕೊರಕಲು ಏರಿ ಹಾದಿಗೂ, ಅವನೊಳಗಿನ ಉದ್ವೇಗಕ್ಕೂ ತಾಳೆ ಹೊಂದದೆ ಕಾಲು ಜಾರಿಜಾರಿ ಹೋಗುತ್ತಿತ್ತು. ‘ಥೂ ಇದರ!’ ಎಂದು, ಹಾಕಿದ್ದ ಚಪ್ಪಲಿಯನ್ನು ಅವನು ಕಾಲಿಂದಲೇ ಎತ್ತೆಸೆದ ರಭಸಕ್ಕೆ ಒಂದು ಚಪ್ಪಲಿಯು ಅರಸಿ ಮನೆ ಪಕ್ಕದ ತೋಟಕ್ಕೂ, ಇನ್ನೊಂದು ಚಪ್ಪಲಿಯು ಮುನ್ನೂರ ಅರವತೈದು ದಿನವೂ ಸಣ್ಣಗೆ ಹರಿಯುತ್ತಿದ್ದ ಕಾಡುನೀರಿನ ಕೊರಕಲಿನ ಅತ್ತಿಮರದ ಬೊಡ್ಡೆಗೆ ಸಿಕ್ಕಿಕೊಂಡಿತು. ಎರಡೂ ಕಡೆಗೆ ಒಮ್ಮೆ ನೋಡಿದ ಗೌರೀಶ ‘ಸಾಯಲಿ’ ಎಂದು, ಅಲ್ಲೇ ಬಿದ್ದಿದ್ದ ಹೆಂಚಿನ ತುಂಡೊಂದನ್ನು ಎತ್ತಿ ಅತ್ತಇತ್ತ ಆಡಿಸುತ್ತ ಸರಸರನೆ ಹೆಜ್ಜೆ ಹಾಕಿದ.

ಅವನು ಅಂದುಕೊಂಡಂತೇ ಆಗಿತ್ತು. ರಾಣಿ ಅದೇ ಮರ ಹತ್ತಿ ಕೂತಿದ್ದಳು. ಸಾಲದ್ದಕ್ಕೆ ಗೌರೀಶ ನೋಡಿಟ್ಟಿದ್ದ ಅದೇ ಹಣ್ಣನ್ನು ಕಿತ್ತು ಸಿಪ್ಪೆ ಸುಲಿಯಲು ತೊಡಗಿದ್ದಳು. ಉಳಿದ ಇಬ್ಬರು ಕೆಳಗೆ ಅವಳನ್ನೇ ನೋಡುತ್ತ ನಿಂತಿದ್ದರು. ಇವನೂ ನಿಂತು ರಾಣಿಯನ್ನು ನೋಡಿದ. ಅವಳಿಗೋ ಲೋಕದ ಪರಿವೇ ಇದ್ದಂತಿರಲಿಲ್ಲ. ಎಡಗೈಯಲ್ಲಿ ಕಣ್ಣಿಗಾಸೆ ಹುಟ್ಟಿಸುವ ಕೆಂಪು ಕಿತ್ತಲೆ. ಆ ಹೊತ್ತು ಆ ಕಿತ್ತಲೆ ಮತ್ತು ಅದೇ ಕಿತ್ತಲೆ ಮಾತ್ರ ರಾಣಿ ಪಾಲಿಗೆ ಇಡೀ ಲೋಕವಾಗಿತ್ತು ಎಂಬುದು ಸಿಪ್ಪೆ ಎಡೆದು ಜುರುಜುರನೆ ತಿನ್ನಲು ತೊಡಗಿದ್ದ ಅವಳನ್ನು ನೋಡುವ ಯಾರಿಗಾದರೂ ಅನ್ನಿಸುತ್ತಿತ್ತು. ‘ನಾನು ನೋಡಿಟ್ಟಿದ್ ಮರ ಇದು ಇಳಿಯೇ ಕೆಳಗೆ’ ಎಂದು ಗೌರೀಶ ಕಿರುಚಿದ. ಬಾಲ್ಯದ ಮುಗ್ಧಗಂಟಲು ಒಡೆದು ಯೌವ್ವನದ ಹೊಸ್ತಿಲಿಗೆ ಕಾಲಿರಿಸಿದ್ದ ಗೌರೀಶನ ಧ್ವನಿಯು ಒಮ್ಮೆಗೇ ಜೋರಾಗಿ ತೆರೆದುಕೊಂಡು, ಪಕ್ಕ ನಿಂತಿದ್ದ ಮಣಿ, ಕೃಷ್ಣ ಇಬ್ಬರೂ ಗಾಬರಿ ಬಿದ್ದರು. ಒಂದು ಕ್ಷಣ ಅವನ ಗಂಟಲು ಅವನಿಗೇ ತಾನೂ ಗಾಬರಿಗೊಂಡೆನೆಂಬಂತೆ ಹೆದರಿಸಿತು. ಗೌರೀಶ ಗಂಟಲು ಸರಿಪಡಿಸಿಕೊಂಡ. ಅಷ್ಟರಲ್ಲಿ ರಾಣಿ ಕೈಯಲ್ಲಿ ಉಳಿದಿದ್ದ ಹಣ್ಣಿನ ನಾಲ್ಕು ತೊಳೆಗಳು ಸಿಪ್ಪೆಗೆ ಅಂಟಿಕೊಂಡು ಕೆಳಕ್ಕೆ ಬಿದ್ದವು. ಕೆಳಕ್ಕೆ ಬಿದ್ದ ಅದು ನೆಲಕ್ಕಾದರೂ ಬಿದ್ದಿದ್ದರಾಗಿತ್ತು. ಅದರ ಹಿಂದಿನ ಉದ್ದೇಶ ಇನ್ನೇನು ಇತ್ತೋ! ನಾಲ್ಕು ತೊಳೆಯ ಹಣ್ಣು ಕೆಳಗಿದ್ದ ಕಾಫಿ ಗಿಡದ ರೆಂಬೆಯ ಕವಲಿಗೆ ಸಿಕ್ಕಿಕೊಂಡಿತು. ಅಕ್ಷರಶಃ ಜೊಲ್ಲು ಸುರಿಸುತ್ತ ನಿಂತಿದ್ದ ಕೃಷ್ಣನು ಗಿಡದ ನಡುವಲ್ಲಿ ಸಿಕ್ಕಿಕೊಂಡ ಹಣ್ಣನ್ನು ಒಂದೇ ದಾಪಿಗೆ ನೆಗೆದು ತನ್ನ ವಶ ಮಾಡಿಕೊಂಡು ಒಂದುಸುರಿಗೆ ನುಂಗಿಬಿಟ್ಟ. ಎಲ್ಲಿತ್ತೋ ಸಿಟ್ಟು ಗೌರೀಶನಿಗೆ…ಕೈಯಲ್ಲಿದ್ದ ಹೆಂಚಿನ ತುಂಡನ್ನು ರಾಣಿ ಕಡೆಗೆ ರೊಂಯ್ಯನೆಸೆದು, ಅದೇ ರಭಸದಲ್ಲಿ ಕೃಷ್ಣನ ಕಡೆ ನುಗ್ಗಿ ಅವನನ್ನು ಬಗ್ಗಿಸಿ ಬೆನ್ನಿಗೆ ದಬದಬ ಗುದ್ದಿದ. ಒಂದು ಕ್ಷಣದಲ್ಲಿ ನಡೆದು ಹೋದ ಇದೆಲ್ಲವನ್ನು ನೋಡುತ್ತಲೇ ನಿಂತಿದ್ದ ಮಣಿಗೆ ಏನೂ ಮಾಡಲು ತೋಚದಾಯಿತು. ಅವಳು ಬೊಬ್ಬೆ ಹೊಡೆಯುತ್ತಿದ್ದ ಕೃಷ್ಣನನ್ನು ಬಿಡಿಸಲು ಓಡಬೇಕೆನ್ನುವಷ್ಟರಲ್ಲಿ ಮರದ ಮೇಲಿದ್ದ ರಾಣಿ ಅಮ್ಮಾ… ಎಂದು ಕೂಗಿಕೊಂಡು ಜರ‍್ರನೆ ಜಾರಿ ನೆಲಕ್ಕೆ ಕುಕ್ಕರಿಸಿಕೊಂಡಳು. ಮುಖವನ್ನು ಮುಚ್ಚಿ ಹಿಡಿದಿದ್ದ ಅವಳ ಕೈತುಂಬ ರಕ್ತ. ಗೌರೀಶನಿಗೆ ಕೋಪವೆಲ್ಲ ಇಳಿದು ಹೋಗಿ ಕಾಲು ಸೋಲು ಬಂದು ತಾನು ಮಾಡಿದ ತಪ್ಪಿನ ಅರಿವಾಯಿತು.
‘ಎಂತ ಮಾಡ್ದೆ ನೀನು? ಸಿಗ್ತದೆ ಇರು ಅಪ್ಪಯ್ಯನತ್ರ…ನಿನ್ ಹಾಳು ಕ್ವಾಪ ಮನೆ ಸುಡ್ತದೆ ಬೇವರ್ಸಿ’ ಎಂದು ಮಣಿಯು ಗೌರೀಶನನ್ನು ಬೈದು, ‘ಹೋಗಲ್ಲಿ ಬಾವಿಲಿ ನೀರು ಮೊಕ್ಕಂಬಾ’ ಎಂದಳು. ಗಾಬರಿಯಲ್ಲಿ ಅವನು ಎದ್ದುಬಿದ್ದು ಓಡಿ ಅಲ್ಲೇ ಒಟ್ಟಿಗೇರಿ ಬಾವಿಯಲ್ಲಿ ಮಟಮಟ ಆಡುತ್ತಿದ್ದ ನೀರನ್ನು ಕೊಡಪಾನದಲ್ಲಿ ಮೊಗೆದು ಓಡೋಡಿ ಬಂದ. ನೀರಿಂದ ರಾಣಿಯ ಮುಖ ತೊಳೆದರು. ಗೌರೀಶ ಎಸೆದ ಚೂಪು ಹೆಂಚಿನ ಚೂರು ರಾಣಿಯ ಬಾಗಿದ ಗಿಣಿಮೂಗಿನ ತಗ್ಗಿನಂಥ ಭಾಗಕ್ಕೆ ಬಡಿದು, ಚರ್ಮ ಕಿತ್ತು ರಕ್ತ ಹರಿಯುತ್ತಿತ್ತು. ಮೂಗಿನ ಕಂಬಕ್ಕೇ ಹೊಡೆತ ಬಿದ್ದಿದ್ದರಿಂದ ಹುಬ್ಬಿನ ಜಾಗ ಬರ‍್ರನೆ ಊದಿಕೊಂಡು ರಾಣಿಯ ಮುಖದ ಮೂಲರೂಪವೇ ಏಕ್‌ದಂ ಬದಲಾಗಿಬಿಟ್ಟಿತ್ತು. ತೊಳೆದಷ್ಟೂ ಉಕ್ಕುತ್ತಲೇ ಇದ್ದ ರಕ್ತವನ್ನು ಕಂಡು ಮಕ್ಕಳೆಲ್ಲ ಗಾಬರಿಯಾಗಿ, ಅದಾಗಲೇ ಬಿಳಿಚಿ ಹೋಗಿದ್ದ ರಾಣಿಯನ್ನು ಹೇಗೋ ಎಬ್ಬಿಸಿ, ಮನೆಗಂಟ ನಡೆಸಿಕೊಂಡು ಬರುವುದಕ್ಕೂ, ಮನೆ ಬಾಗಿಲಲ್ಲಿ ರಾಣಿ ಪ್ರಜ್ಞೆ ತಪ್ಪುವುದಕ್ಕೂ ಒಂದೇ ಆಯಿತು.
ಪ್ರಕಾಶಕರ ವಿವರಗಳು:
ಅಮೂಲ್ಯ ಪುಸ್ತಕ
ಮೊ: 9620796770, 9448696770
amulyapustaka@gmail.com







