ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಮತ್ತೊಂದು ಸಾಹಿತ್ಯ ಸಮ್ಮೇಳನಕ್ಕೆ ತೋಳೇರಿಸಿದ್ದಾರೆ. ಆದರೆ ಅವರ ಅವಧಿಯಲ್ಲಿ ಹುಟ್ಟು ಹಾಕಿದ ವಿವಾದಗಳು ಒಂದೊಂದೆ ಮುನ್ನೆಲೆಗೆ ಬಂದು ಗಂಭೀರ ಚರ್ಚೆ ಹುಟ್ಟು ಹಾಕಿದೆ.
ಕನ್ನಡ ಸಾಹಿತ್ಯ ಪರಿಷತ್ನ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಆಯ್ಕೆಯಾಗಿರುವುದು ಕನ್ನಡ ಸಾಹಿತ್ಯ ಸಾರಸ್ವತ ಲೋಕದಲ್ಲಿ ಸಂತಸದ ಸಂಗತಿಯಾದರೂ, ಈ ಆಯ್ಕೆಯ ಹಿಂದಿನ ರಾಜಕೀಯ ಮತ್ತು ಪರಿಷತ್ನ ಅಧ್ಯಕ್ಷ ಮಹೇಶ್ ಜೋಶಿಯವರ ದುರಾಡಳಿತದ ಆರೋಪಗಳು, ವಿವಾದಗಳು ಮುನ್ನೆಲೆಗೆ ಬಂದಿವೆ.
ಭ್ರಷ್ಟಚಾರ, ದುರಾಡಳಿತ, ಆರ್ಥಿಕ ದುರ್ಬಳಕೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಮಹೇಶ್ ಜೋಶಿ, ಬಳ್ಳಾರಿಯಲ್ಲಿ ನಡೆಸಲು ಉದ್ದೇಶಿಸಿರುವ 88ನೇ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡುವ ಮೂಲಕ ತಮ್ಮ ಮೇಲಿನ ಆರೋಪಗಳನ್ನು ಮರೆಮಾಚುವ ಯತ್ನ ಮಾಡಿದ್ದಾರೆ ಎಂದು ಟೀಕೆಗಳು ಕೇಳಿ ಬರಲಾರಂಭಿಸಿವೆ.
ಬಾನುಮುಷ್ತಾಕ್ ಅವರ ಅನುವಾದಿತ ಇಂಗ್ಲಿಷ್ ಕೃತಿಗೆ ಇತ್ತೀಚೆಗೆ ಅಂತಾರಾಷ್ಟ್ರೀಯ ಬುಕರ್ ಪುರಸ್ಕಾರ ಲಭಿಸಿತು. ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಇದೊಂದು ಮೈಲುಗಲ್ಲು. ಕರ್ನಾಟಕ ಸರ್ಕಾರ ಸೇರಿದಂತೆ ಎಲ್ಲ ಗಣ್ಯರು, ಸಂಸ್ಥೆಗಳು ಈ ಸಾಧನೆಯನ್ನು ಕೊಂಡಾಡಿದವು. ಆದರೆ ಶತಮಾನದ ಇತಿಹಾಸವಿರುವ ಕನ್ನಡ ಮತ್ತು ಕನ್ನಡ ಸಾಹಿತ್ಯದ ಏಳಿಗೆಗೆ ಶ್ರಮಿಸುತ್ತಿರುವ ಸಾಹಿತ್ಯ ಪರಿಷತ್ ಮುಷ್ತಾಕ್ ಹಾಗೂ ಅನುವಾದಕರಾದ ದೀಪಾ ಅವರನ್ನು ಅಭಿನಂದಿಸಿರಲಿಲ್ಲ.
ಆದರೆ ಸಚಿವ ಸ್ಥಾನದ ಸಂಬಂಧ ಸಾಕಷ್ಟು ಚರ್ಚೆಗೆ ಈಡಾದ ಮಹೇಶ್ ಜೋಶಿಯವರು ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಬಾನು ಮುಷ್ತಾಕ್ ಆಯ್ಕೆ ಮಾಡಿದ್ದು ಅಭಿಮಾನಕ್ಕಲ್ಲ, ತಂತ್ರ ಎಂಬ ಗಂಭೀರ ಆರೋಪವೂ ವ್ಯಕ್ತವಾಗುತ್ತಿದೆ. 15 ವರ್ಷಗಳ ನಂತರ ಅಲ್ಪಸಂಖ್ಯಾತ ಸಮುದಾಯದ, ಲೇಖಕಿಯೊಬ್ಬರು ಆಯ್ಕೆಯಾಗಿದ್ದಕ್ಕೆ ಸಂಭ್ರಮಿಸಬೇಕಾ? ಅಥವಾ ಸಾಹಿತ್ಯ ಪರಿಷತ್ ಅಧ್ಯಕ್ಷರ ರಾಜಕೀಯ ನಡೆಗೆ ವಿರೋಧಿಸಬೇಕಾ ಎಂಬ ಪ್ರಶ್ನೆ ಸಾಹಿತ್ಯ ಲೋಕವನ್ನು ಕಾಡುತ್ತಿದೆ ಎಂದು ಲೇಖಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಸಂಬಂಧ ‘ತಾಯ್ನಾಡು.ನ್ಯೂಸ್’ ಬಾನು ಮುಷ್ತಾಕ್ ಅವರ ಪ್ರತಿಕ್ರಿಯೆಗೆ ಸಂಪರ್ಕಿಸಿದಾಗ ʻಸದ್ಯಕ್ಕೆ ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲʼ ಎಂದಿದ್ದಾರೆ. ಅಭಿಮಾನದಿಂದ ಒಪ್ಪಿಕೊಳ್ಳಬೇಕಾದ ಸಂದರ್ಭದಲ್ಲಿ ಸ್ವತಃ ಬಾನು ಅವರು ಪ್ರತಿಕ್ರಿಯಿಸದೇ ಇದ್ದಿದ್ದೂ ಕೂಡ ಮಹೇಶ್ ಜೋಶಿಯವರ ನಡೆಯ ಬಗೆಗಿನ ಭಿನ್ನಾಭಿಪ್ರಾಯಾ ಕಾರಣವೇ ಎಂಬ ಅನುಮಾನಕ್ಕೂ ಎಡೆ ಮಾಡಿಕೊಟ್ಟಿದೆ.
ಪರ್ಯಾಯ ಸಮ್ಮೇಳನಕ್ಕೆ ಮುಷ್ತಾಕ್ ಅಧ್ಯಕ್ಷರಾಗಿದ್ದರು!
2023ರಲ್ಲಿ ಹಾವೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಒಬ್ನೇ ಒಬ್ಬ ಮುಸ್ಲಿಮ್ ಸಮುದಾಯದ ಸಾಹಿತಿಗೆ ಪ್ರಾತಿನಿಧ್ಯ ಸಿಗಲಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ‘ಜನಸಾಹಿತ್ಯ’ ಹೆಸರಿನಲ್ಲಿ ಒಂದು ದಿನದ ಪರ್ಯಾಯ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು. ಇದರ ಅಧ್ಯಕ್ಷತೆಯನ್ನು ಬಾನು ಮುಷ್ತಾಕ್ ಅವರು ವಹಿಸಿದ್ದರು.
ನಾಡಿನ ಅನೇಕ ಸಾಹಿತಿಗಳು, ಚಿಂತಕರು, ವಿಮರ್ಶಕರು, ಯುವ ಸಾಹಿತಿಗಳು, ಕವಿಗಳು ಈ ಪರ್ಯಾಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.
ಕೋಮುವಾದಿ ಮನಸ್ಥಿತಿ, ಅಧಿಕಾರಲೋಲುಪತೆಯನ್ನು ಪ್ರದರ್ಶಿಸುತ್ತಾ ಬಂದಿರುವ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರು ಅಧಿಕಾರ ವಹಿಸಿಕೊಂಡಾಗಿನಿಂದಲೂ ವಿವಾದಗಳನ್ನು ಸೃಷ್ಟಿಸಿಕೊಳ್ಳುತ್ತಲೇ ಬಂದಿದ್ದಾರೆ.
ಭ್ರಷ್ಟಾಚಾರಕ್ಕೆ ಕೊನೆಯುಂಟೆ!
ಜೋಶಿಯವರ ವಿರುದ್ಧ ಇರುವ ಆರೋಪಗಳ ಪಟ್ಟಿ ದೊಡ್ಡದು.
- ಬೈಲಾ ತಿದ್ದುಪಡಿ.
ಸಾಹಿತ್ಯ ಪರಿಷತ್ತಿನ 9ನೇ ಅಂಶದಲ್ಲಿ ಕೇಂದ್ರ ಪರಿಷತ್ತಿನ ಅಧ್ಯಕ್ಷರ ಅಧಿಕಾರ ವ್ಯಾಪ್ತಿಯ ನಿಯಮಗಳಿವೆ. ಈ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಅಧ್ಯಕ್ಷರ ವಿರುದ್ಧ ಬಹಿರಂಗವಾಗಿ ಮಾತನಾಡುವವರ ವಿರುದ್ಧ ಕ್ರಮಕೈಗೊಳ್ಳುವ ತಿದ್ದುಪಡಿಗಳನ್ನು ಮಾಡಲು ಯತ್ನಿಸಿದ್ದರು. ಇದು ಅಧಿಕಾರ ಕೇಂದ್ರೀಕರಣ, ಮತ್ತು ವಿರೋಧವನ್ನು ಹಣಿಯುವ ಪ್ರಯತ್ನ ಎಂದು ಆತಂಕವ್ಯಕ್ತವಾಗಿತ್ತು ಹಾಗೂ ತೀವ್ರವಾಗಿ ವಿರೋಧಿಸಲಾಗಿತ್ತು.
ಶತಮಾನದ ಇತಿಹಾಸವಿರುವ ಸಂಸ್ಥೆಯಲ್ಲಿ ಮೂರು ಬಾರಿ ಮಾತ್ರ ಬೈಲಾದಲ್ಲಿ ತಿದ್ದುಪಡಿಯಾಗಿತ್ತು. ಆದರೆ ಜೋಶಿ ಅಧಿಕಾರ ವಹಿಸಿಕೊಂಡ ಮೂರು ವರ್ಷಗಳಲ್ಲಿ ಮೂರು ಬಾರಿ ತಿದ್ದುಪಡಿ ಮಾಡಲಾಗಿದ್ದು, ಇದು ತಮ್ಮ ಅಧಿಕಾರವನ್ನು ಗಟ್ಟಿಮಾಡಿಕೊಳ್ಳುವ ಹುನ್ನಾರ ಎಂದು ಕಸಾಪ ಒಳಗಿನಿಂದಲೇ ವಿರೋಧ ಕೇಳಿ ಬಂದಿತ್ತು. - ಸ್ವಾಯತ್ತ ಸಂಸ್ಥೆಯಾಗಿ ದುಡಿಯುತ್ತಾ ಬಂದಿದ್ದ ಕಸಾಪ ಸಂಸ್ಥೆ ಅಧ್ಯಕ್ಷರಿಗೆ 2022ರಲ್ಲಿ ಸಚಿವ ದರ್ಜೆಯನ್ನು ನೀಡಲಾಯಿತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಈ ಸವಲತ್ತು ನೀಡಲಾಗಿತ್ತು. ಆದರೆ ಸೇವಾ ನಿಯಮ ಉಲ್ಲಂಘನೆ, ದುರಾಡಳಿತ, ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಾಗೂ ಜೋಶಿ ವಿರುದ್ಧ ವ್ಯಕ್ತವಾದ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸರ್ಕಾರ ಮೇ ತಿಂಗಳಲ್ಲಿ ಸಚಿವ ಸ್ಥಾನವನ್ನು ಹಿಂಪಡೆದುಕೊಂಡಿತು.
- ಕನ್ನಡ ಸಾಹಿತ್ಯ ಪರಿಷತ್ನ ಆರ್ಥಿಕ ನಿರ್ವಹಣೆಯ ಬಗ್ಗೆ ಗಂಭೀರ ಆರೋಪಗಳಿವೆ. ಅದರಲ್ಲೂ ಹಾವೇರಿ ಮತ್ತು ಮಂಡ್ಯ ಸಾಹಿತ್ಯ ಸಮ್ಮೇಳನಗಳ ಲೆಕ್ಕಪತ್ರವನ್ನು ಇದುವರೆಗೂ ಸಾರ್ವಜನಿಕವಾಗಿ ಒದಗಿಸಿಲ್ಲ. ವಿಶೇಷವಾಗಿ, ಮಂಡ್ಯ ಸಮ್ಮೇಳನಕ್ಕೆ ₹2.5 ಕೋಟಿ ಖರ್ಚು ಮಾಡಿದ್ದರ ಬಗ್ಗೆ ಯಾವುದೇ ಸ್ಪಷ್ಟ ಲೆಕ್ಕವಿಲ್ಲ. ತಮ್ಮ ಮನಸ್ಸಿಗೆ ಬಂದಂತೆ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂಬ ಆರೋಪವೂ ಇದೆ.
- ದಿ ಫೆಡರಲ್ ಸುದ್ದಿ ತಾಣ ಪ್ರಕಟಿಸಿದ ವರದಿಯಲ್ಲಿ ಉಲ್ಲೇಖಿಸಿದಂತೆ, ” 2024-25ರ ಕಸಾಪ ವಾರ್ಷಿಕ ಲೆಕ್ಕಪತ್ರದಲ್ಲಿ ಉಲ್ಲೇಖಿತ ಅಂಶಗಳ ಪ್ರಕಾರ ಅಧ್ಯಕ್ಷರಾದ ಮಹೇಶ್ ಜೋಶಿ ಅವರು 4,20,000 ರೂ. ವೇತನ ಪಡೆದುಕೊಂಡಿದ್ದಾರೆ. 7,62,329 ರೂ. ದಿನಭತ್ಯೆ, 6,70,267 ರೂ. ಪ್ರಯಾಣ ಭತ್ಯೆ, 93,319 ರೂ. ವಾಹನ ನಿರ್ವಹಣೆಗೆ, 33,419 ರೂ. ದಿನಪತ್ರಿಕೆಗಳ ಬಿಲ್, 43,519 ರೂ. ದೂರವಾಣಿ ವೆಚ್ಚ, 18,310 ಇಂಧನ ವೆಚ್ಚ… ಹೀಗೆ ಮಹೇಶ್ ಜೋಶಿ ಅವರು ವಾರ್ಷಿಕವಾಗಿ ಪರಿಷತ್ತಿನಿಂದ ಎರಡು ಕೋಟಿ ರೂಪಾಯಿಗೂ ಹೆಚ್ಚಿನ ಸವಲತ್ತು ಪಡೆದುಕೊಂಡಿದ್ದಾರೆ ” ಎಂದು ವರದಿ ವಿವರಗಳನ್ನು ನೀಡಿದೆ.
- ಸರ್ಕಾರಿ ಸಂಸ್ಥೆಯ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾದ ಮಹೇಶ್ ಜೋಶಿ, ಅಧಿಕಾರ ಲೋಲುಪತೆಯಿಂದ ಕಸಾಪಕ್ಕೆ ಅಧಿಕಾರ ಹಿಡಿದಿದ್ದೇ ಹೊರತು, ಕನ್ನಡ ಸೇವೆಗಾಗಿ ಅಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಸಾಹಿತ್ಯ ಪರಿಷತ್ತಿನ ಸದಸ್ಯರುಗಳು ದೂರುತ್ತಾರೆ. ಇತ್ತೀಚೆಗೆ ಜೋಶಿ ಅವರ ಕಾರ್ಯವೈಖರಿಯಿಂದ ಬೇಸತ್ತು ಪದ್ಮನಿ ನಾಗರಾಜು ಹಾಗೂ ನೇಭ ರಾಮಲಿಂಗ ಶೆಟ್ಟಿ ರಾಜೀನಾಮೆ ನೀಡಿದ್ದಾರೆ.
ಜೋಶಿಯವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ನ ಸಾಂಸ್ಕೃತಿಕ ವಾತಾವರಣ ಕೆಟ್ಟುಹೋಗಿದೆ. ಪರಿಷತ್ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಸಾಹಿತ್ಯ ಸೇವೆಗಾಗಿ ಸ್ಥಾಪಿತವಾಗಿದೆ. ಆದರೆ, ಜೋಶಿಯವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಹಿಂದೆಯೇ ಸಾಹಿತ್ಯ ಪರಿಷತ್ನ ಹಲವು ಸದಸ್ಯರು ದೂರಿದ್ದಾರೆ.
ಜೋಶಿಯವರು ಸರ್ವಾಧಿಕಾರತ್ವದಿಂದ ಬೈಲಾ ತಿದ್ದುಪಡಿ ಮಾಡಿ, ಪರಿಷತ್ನ ವಿಕೇಂದ್ರೀಕರಣ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ ವಕ್ತಾರರು ಮತ್ತು ಜನಪರ ಸಂಘಟನೆಗಳ ವೇದಿಕೆಯ ಸದಸ್ಯರು ಇತ್ತೀಚೆಗೆ ಜೋಶಿಯವರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯಮಟ್ಟದ ಯಾವುದೇ ಕಾರ್ಯಕ್ರಮವನ್ನು ಸಂಘಟಿಸದಿರುವುದು, ಪಕ್ಷ ರಾಜಕಾರಣದ ಮೂಲಕ ಸಂಸ್ಥೆಯನ್ನು ಕಲುಷಿತಗೊಳಿಸಿರುವುದು, ಮತ್ತು ಪರಿಷತ್ನ ಸಾಹಿತ್ಯಿಕ ಆಶಯಗಳಿಗೆ ವಿರುದ್ಧವಾಗಿ ವರ್ತಿಸಿರುವುದು ಈ ಆರೋಪಗಳಿಗೆ ಆಧಾರವಾಗಿವೆ. 2021ರ ಚುನಾವಣೆಯಲ್ಲಿ ಜೋಶಿಯವರು ಬಿಜೆಪಿಯ ಬೆಂಬಲದೊಂದಿಗೆ ಅಧ್ಯಕ್ಷರಾದದ್ದು ಮತ್ತು 2024ರ ಮಂಡ್ಯ ಸಮ್ಮೇಳನದಲ್ಲಿ “ಮಾಂಸಾಹಾರ ನಿಷೇಧ” ಘೋಷಣೆಯಂತಹ ವಿವಾದಾತ್ಮಕ ನಿರ್ಧಾರಗಳು ಈ ಆರೋಪಗಳನ್ನು ಮತ್ತಷ್ಟು ಪುಷ್ಟಿಕರಿಸುತ್ತವೆ ಎಂದು ಹೆಸರು ಹೇಳಲಿಚ್ಛಿಸದ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಒಂದು ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಸ್ಥೆಯಾಗಿ ತನ್ನ ಸ್ವಾಯತ್ತತೆ ಮತ್ತು ಸೇವಾಭಾವವನ್ನು ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ. ಮಹೇಶ್ ಜೋಶಿಯವರು ಅಧ್ಯಕ್ಷರಾಗಿ ಕೈಗೊಳ್ಳುತ್ತಿರುವ ಸಾಹಿತ್ಯಿಕ ಮೌಲ್ಯಗಳ ಸ್ಥಾನ ಪಲ್ಲಟದ ಕ್ರಮಗಳು ಪರಿಷತ್ನ ವಿಶ್ವಾಸಾರ್ಹತೆಗೆ ಕಳಂಕ ತಂದೊಡ್ಡುತ್ತಿವೆ ಎಂಬ ಆತಂಕ ಸಾಹಿತ್ಯ ವಲಯದಲ್ಲಿ ಕೇಳಿ ಬರುತ್ತಿದೆ.
ಕೇವಲ ಸಾಹಿತ್ಯವಲ್ಲದೆ, ಕನ್ನಡ, ಕನ್ನಡತನದ ಅಸ್ಮಿತೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ಆಡಳಿತವನ್ನು ಸುಧಾರಿಸಲು ಸಾಧ್ಯವಿರುವ ಎಲ್ಲಾ ಅಗತ್ಯ ತುರ್ತು ಕ್ರಮಗಳನ್ನು ಕರ್ನಾಟಕ ಸರ್ಕಾರ ಯಾವುದೇ ವಿಳಂಬ ಮಾಡದೆ ಅತ್ಯಂತ ತ್ವರಿತ ಗತಿಯಲ್ಲಿ ಕೈಗೆತ್ತಿಕೊಳ್ಳಲೇ ಬೇಕಾಗಿದೆ ಎಂಬ ಕೂಗು ಕೇಳಲಾರಂಭಿಸಿದೆ.







