ಭಾರತೀಯ ಚುನಾವಣಾ ಆಯೋಗ (ಇಸಿಐ) ಇಂದು ಸಂಜೆ 4ಗಂಟೆಗೆ ನಡೆಸುವ ಸುದ್ದಿಗೋಷ್ಠಿಯಲ್ಲಿ ಬಿಹಾರ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಲಿದೆ. 243 ಸ್ಥಾನಗಳಿಗೆ ನಡೆಯುವ ಈ ಚುನಾವಣೆಯು ನವೆಂಬರ್ 22ಕ್ಕೆ ಮುಕ್ತಾಯವಾಗುವ ಪ್ರಸ್ತುತ ವಿಧಾನಸಭೆಯ ಅವಧಿಗೂ ಮುಂಚೆ ಪೂರ್ಣಗೊಳ್ಳುವುದು ಖಚಿತವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಈ ಹಿಂದೆ ತಿಳಿಸಿದ್ದರು.
ಈ ಚುನಾವಣೆಯು ಚುನಾವಣಾ ಆಯೋಗದ ವಿಶೇಷ ತೀವ್ರ ಪುನರ್ಪರಿಶೋಧನೆ (ಎಸ್ಐಆರ್) ನಂತರದ ಮೊದಲ ವಿಧಾನಸಭಾ ಚುನಾವಣೆಯಾಗಿದ್ದು, ಜೂನ್ 24ರಿಂದ ಆರಂಭವಾದ ಈ ಪ್ರಕ್ರಿಯೆಯಲ್ಲಿ 68.5 ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದ್ದು, 21.53ಲಕ್ಷ ಹೊಸ ಹೆಸರುಗಳನ್ನು ಸೇರಿಸಲಾಗಿದೆ. ಇದರಿಂದ ಬಿಹಾರದಲ್ಲಿ ಒಟ್ಟು 7.42ಕೋಟಿ ಮತದಾರರು ದಾಖಲಾಗಿದ್ದಾರೆ, ಇದು 22ವರ್ಷಗಳ ನಂತರದ ಮೊದಲ ‘ಶುದ್ಧೀಕರಣ’ ಎಂದು ಜ್ಞಾನೇಶ್ ಕುಮಾರ್ ಹೇಳಿದ್ದಾರೆ. ಜ್ಞಾನೇಶ್ ಕುಮಾರ್ರವರು ಇದೇ ಫೆಬ್ರುವರಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರವಹಿಸಿಕೊಂಡ ನಂತರ ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿದೆ.
ಸುಪ್ರೀಂ ಕೋರ್ಟ್ನಲ್ಲಿ ಈ ಪುನರ್ಪರಿಶೋಧನೆಗೆ ಸವಾಲುಗಳು ಎದುರಾಗಿದ್ದರೂ, ಆಯೋಗವು ಚುನಾವಣೆಯ ಸಿದ್ಧತೆಯನ್ನು ತ್ವರಿತಗೊಳಿಸಿದೆ. ಪ್ರತಿ ಪೋಲಿಂಗ್ ಬೂತ್ಗೆ 1,200 ಮತದಾರರಿಗೆ ಸೀಮಿತಗೊಳಿಸುವಂತೆ ಬದಲಾವಣೆ ಮಾಡಲಾಗಿದೆ.
ಭಾರತದ ರಾಜಕೀಯ ಲೆಕ್ಕಾಚಾರಕ್ಕೆ ಬಿಹಾರದ ಚುನಾವಣೆಯು ನಿರ್ಣಾಯಕವಾಗಿದೆ. ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯಂತಹ ವಿಷಯಗಳು ಮುಖ್ಯವಾಗುತ್ತವೆ. ಮುಂಬರುವ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಸರ್ಕಾರವು ಆರ್ಜೆಡಿ ಮತ್ತು ಕಾಂಗ್ರೆಸ್ನ ವಿರೋಧ ಪಕ್ಷಗಳ ಮೈತ್ರಿಕೂಟವನ್ನು ಎದುರಿಸಲಿದೆ. 2020 ರಲ್ಲಿ, ಆರ್ಜೆಡಿ 75 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು, ಆದರೆ ಬಿಜೆಪಿ ಮತ್ತು ಜೆಡಿಯು ಒಟ್ಟಾಗಿ 117 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಪ್ರಶಾಂತ್ ಕಿಶೋರ್ರ ಜನ್ ಸುರಜ್ ಪಕ್ಷ ಹೊಸ ಸವಾಲು ಎದುರಿಸುತ್ತದೆ. ತೇಜಸ್ವಿ ಯಾದವ್ ಮತ್ತು ನೀತೀಶ್ ಕುಮಾರ್ ನಡುವೆ ಈಗ ಪ್ರಶಾಂತ್ ಕಿಶೋರ್ ಗೇಮ್ ಚೆಂಜರ್ ಆಗಲಿದ್ದಾರೆ ಇದು ರಾಜ್ಯ ರಾಜಕೀಯ ಭೂಪಟವನ್ನು ಬದಲಾಯಿಸಬಹುದು.
ಇದನ್ನೂ ಓದಿ | “ಜಿಎಸ್ಟಿ ಸರಳೀಕರಣದಿಂದ ರಾಜ್ಯಕ್ಕೆ ₹15,000 ಕೋಟಿ ನಷ್ಟ” : ಸಿಎಂ
ಚುನಾವಣಾ ಆಯೋಗವು 17ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದ್ದು. ಇವುಗಳು ದೇಶಾದ್ಯಂತ ಜಾರಿಗೊಳಿಸಲ್ಪಡುವುದಾಗಿ ಚುನಾವಣಾ ಆಯುಕ್ತರು ಹೇಳಿದ್ದಾರೆ. ರಾಜಕೀಯ ಪಕ್ಷಗಳೊಂದಿಗೆ ನಡೆದ ಸಭೆಯಲ್ಲಿ ಎನ್ಡಿಎ ಒಂದು ಹಂತದ ಚುನಾವಣೆಗೆ ಒತ್ತಾಯಿಸಿದರೆ, ವಿರೋಧ ಪಕ್ಷಗಳು ಎರಡು ಹಂತಗಳನ್ನು ಬೇಡಿಕೆ ಮಾಡಿವೆ. ಚೈತ್ರ ಹಬ್ಬದ ನಂತರ ಮತದಾನ ನಡೆಸುವಂತೆ ಎಲ್ಲ ಪಕ್ಷಗಳೂ ಕೋರಿವೆ, ಇದರಿಂದ ಮತದಾರ ಸೇರ್ಪಡೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಹಿಂದಿನ ಚುನಾವಣೆಗಳಲ್ಲಿ ಬಿಹಾರದ ಮತದಾರ ಸಂಖ್ಯೆ 56.93% ಇತ್ತು, ಮಹಿಳೆಯರು 59.69% ಮತ್ತು ಪುರುಷರು 54.45% ಇದ್ದರು. ಈ ಬಾರಿ ತೀವ್ರ ಸಿದ್ಧತೆಗಳೊಂದಿಗೆ ಮತದಾನದ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದೆ.







