ಭಾರತೀಯ ಚುನಾವಣಾ ಆಯೋಗ (ಇಸಿಐ) ಇಂದು ನವದೆಹಲಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಬಿಹಾರ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಘೋಷಿಸಿದ್ದು, ಚುನಾವಣೆಯು ಎರಡು ಹಂತಗಳಲ್ಲಿ ನಡೆಯಲಿದೆ.
ನವೆಂಬರ್ 6ರಂದು ಮೊದಲ ಹಂತದಲ್ಲಿ 121ಕ್ಷೇತ್ರಗಳಿಗೆ ಮತದಾನ ನಡೆದರೆ, ನವೆಂಬರ್ 11ರಂದು ಎರಡನೇ ಹಂತದಲ್ಲಿ 122 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ನವೆಂಬರ್ 14ರಂದು ಫಲಿತಾಂಶ ಹೊರಬೀಳಲಿದೆ. 243 ಸ್ಥಾನಗಳಿಗೆ ನಡೆಯುವ ಈ ಚುನಾವಣೆಯು ಪ್ರಸ್ತುತ ವಿಧಾನಸಭೆಯ ಅವಧಿ ನವೆಂಬರ್ 22ರಂದು ಮುಕ್ತಾಯಗೊಳ್ಳುವುದರಿಂದ, ಈಗಾಗಲೇ ರಾಜ್ಯದಲ್ಲಿ ಮಾಡಲ್ ಕೋಡ್ ಆಫ್ ಕಂಡಕ್ಟ್ (ಎಮ್ಸಿಸಿ) ಜಾರಿಗೆ ಬಂದಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ, “ಬಿಹಾರದಲ್ಲಿ 7.43 ಕೋಟಿ ಮತದಾರರು ದಾಖಲಾಗಿದ್ದಾರೆ. ಇದರಲ್ಲಿ 3.29 ಕೋಟಿ ಪುರುಷ ಮತ್ತು 3.50 ಕೋಟಿ ಮಹಿಳಾ ಮತದಾರರಿದ್ದಾರೆ. ಮೊದಲ ಬಾರಿಗೆ 14 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ” ಎಂದು ತಿಳಿಸಿದರು.
ಇದನ್ನೂ ಓದಿ | ಇಂದು ಸಂಜೆ 4ಗಂಟೆಗೆ ಬಿಹಾರ ಚುನಾವಣೆಗೆ ದಿನಾಂಕ ಪ್ರಕಟ!
ಜೂನ್ 24ರಿಂದ ಆರಂಭವಾದ ವಿಶೇಷ ತೀವ್ರ ಪುನರ್ಪರಿಶೋಧನೆ (ಎಸ್ಐಆರ್)ನಿಂದ 6.85 ಲಕ್ಷ ಹೆಸರುಗಳನ್ನು ತೆಗೆದುಹಾಕಿ, 21.53 ಲಕ್ಷ ಹೊಸ ಹೆಸರುಗಳನ್ನು ಸೇರಿಸಲಾಗಿದ್ದು, ಇದು 22 ವರ್ಷಗಳ ನಂತರದ ಮೊದಲ ದೊಡ್ಡ ಶುದ್ಧೀಕರಣವಾಗಿದೆ. ಮಹಿಳಾ ಮತದಾರರ ಸಂಖ್ಯೆ ಪುರುಷರಿಗಿಂತ ಹೆಚ್ಚು ಇರುವುದು ರಾಜ್ಯದ ಜನಸಂಖ್ಯಾ ಬದಲಾವಣೆಯ ಸೂಚನೆಯಾಗಿದೆ.







