ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಪ್ರಕರಣವು ದೇಶಾದ್ಯಂತ ಖಂಡನೆಗೆ ಗುರಿಯಾಗಿದ್ದು, ಈ ಕೃತ್ಯವನ್ನು ಬಿಜೆಪಿ ಮುಖಂಡ ಮತ್ತು ಬೆಂಗಳೂರು ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಶ್ಲಾಘಿಸುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಈ ಘಟನೆಯು ನ್ಯಾಯಾಂಗ ವ್ಯವಸ್ಥೆಯ ಮೇಲಿನ ದಾಳಿಯಾಗಿ ಕಂಡುಬಂದಿದ್ದು, ದೇಶವೇ ಒಕ್ಕೊರಲಿನಿಂದ ಖಂಡಿಸಿದೆ. ಆದರೆ, ಭಾಸ್ಕರ್ ರಾವ್ ಅವರ ಹೇಳಿಕೆಯು ಇನ್ನಷ್ಟು ಚರ್ಚೆಗೆ ಗುರಿಯಾಗಿದೆ.
ಅಕ್ಟೋಬರ್ 7ರಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆದ ತೀರ್ಪು ಆದೇಶದ ಸಂದರ್ಭದಲ್ಲಿ, ವಕೀಲ ರಾಕೇಶ್ ಕಿಶೋರ್ ಅವರು ಸಿಜೆಐ ಗವಾಯಿ ಅವರ ಹಿಂದು ಧರ್ಮಕ್ಕೆ ಸಂಬಂಧಿಸಿದ ಟಿಪ್ಪಣಿಗಳಿಗೆ ಕೋಪಗೊಂಡು ಶೂ ಎಸೆಯಲು ಪ್ರಯತ್ನಿಸಿದರು. ಈ ಕೃತ್ಯವು ನ್ಯಾಯಾಲಯದಲ್ಲಿ ಆಘಾತಕಾರಿ ವಾತಾವರಣವನ್ನು ಸೃಷ್ಟಿಸಿತು. ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಈ ವಕೀಲರನ್ನು ತಕ್ಷಣ ಸಸ್ಪೆಂಡ್ ಮಾಡಿದ್ದು, ಅವರು “ಅವರು ಈ ರೀತಿ ಮಾಡಿರುವುದಕ್ಕೆ ಯಾವುದೇ ಪಶ್ಚಾತ್ತಾಪ ಇಲ್ಲ ” ಎಂದಿದ್ದಾರೆ. ದೇಶದ ರಾಜಕೀಯ ನಾಯಕರು, ಸಿಎಂ ಎಂ.ಕೆ. ಸ್ಟಾಲಿನ್ ಸೇರಿದಂತೆ ಎಲ್ಲರೂ ಈ ದಾಳಿಯನ್ನು ಖಂಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಭಾಸ್ಕರ್ ರಾವ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, “ಕಾನೂನಾತ್ಮಕವಾಗಿ ಮತ್ತು ಭಯಂಕರವಾಗಿ ತಪ್ಪಾದರೂ, ನಿಮ್ಮ ವಯಸ್ಸಿನಲ್ಲಿ ನಿಲುವು ತೆಗೆದುಕೊಂಡು ಅದರೊಂದಿಗೆ ಜೀವಿಸುವ ನಿರ್ಧಾರ ಕೈಗೊಂಡ ಧೈರ್ಯವನ್ನು ನಾನು ಮೆಚ್ಚುತ್ತೇನೆ.” ಎಂದು ಶ್ಲಾಘಿಸಿದ್ದಾರೆ. ಈ ಹೇಳಿಕೆಯು ದೇಶದಾದ್ಯಂತ ಆಘಾತ ಮೂಡಿಸಿದೆ. ಮಾಜಿ ಐಪಿಎಸ್ ಅಧಿಕಾರಿಯಾಗಿ ಕಾನೂನು ರಕ್ಷಣೆ ಮಾಡಿದ್ದ ರಾವ್, ಇಂದು ನ್ಯಾಯಮೂರ್ತಿಯ ಮೇಲಿನ ದಾಳಿಯನ್ನು ಸಮರ್ಥಿಸುವಂತಿದೆ.

ಕಾಂಗ್ರೆಸ್ ಮುಖಂಡ ಮನ್ಸೂರ್ ಖಾನ್ ಅವರು ಎಕ್ಸ್ ಪೋಸ್ಟ್‌ನಲ್ಲಿ ತೀಕ್ಷ್ಣವಾಗಿ ಟೀಕಿಸಿದ್ದಾರೆ: “ಇದು ಕಾನೂನಾತ್ಮಕವಾಗಿ ಮತ್ತು ಭಯಾನಕ ಪ್ರಮಾದವಾಗಿದ್ದರೂ, ಆತನ ಸಾಹಸವನ್ನು ನೀವು ಶ್ಲಾಘಿಸುತ್ತೀರಾ? ಮಾಜಿ ಐಪಿಎಸ್ ಹಿನ್ನೆಲೆಯಿಂದ ಬಂದ ನಿಮಗೆ ಇದು ನಾಚಿಕೆಗೇಡು. ಒಮ್ಮೆ ಕಾನೂನು ಎತ್ತಿಹಿಡಿದ ನೀವು, ಸಿಜೆಐಯನ್ನು ಅವಮಾನಿಸಿದವನನ್ನು ಸಮರ್ಥಿಸುತ್ತಿದ್ದೀರಿ… ಎಂಥ ಪತನ!” ಎಂದು ಚಾಟಿ ಬೀಸಿದ್ದಾರೆ. ಈ ಟೀಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗುರಿಯಾಗಿದೆ.
ಇದನ್ನೂ ಓದಿ | “ಶೂ ಎಸೆದಿರುವುದು ಪಶ್ಚಾತ್ತಾಪ ಇಲ್ಲ, ಜೈಲಿಗೆ ಹೋಗಲು ಸಿದ್ಧ”: ವಕೀಲ ಕಿಶೋರ್
ಈ ವಿವಾದವು ರಾಜಕೀಯ ಮತ್ತು ಸಾಮಾಜಿಕ ಚರ್ಚೆಯನ್ನು ಉಂಟುಮಾಡಿದ್ದು, ಭವಿಷ್ಯದಲ್ಲಿ ಇಂತಹ ಕೃತ್ಯಗಳನ್ನು ತಡೆಯುವಂತಹ ಕ್ರಮಗಳ ಅಗತ್ಯವನ್ನು ಒತ್ತಿಹೇಳುತ್ತದೆ.







