ಬಿಹಾರ ವಿಧಾನಸಭಾ ಚುನಾವಣೆ 2025ರ ಫಲಿತಾಂಶಗಳು ರಾಜ್ಯದ ರಾಜಕಾರಣದಲ್ಲಿ ಭಾರೀ ಆಘಾತ ಮೂಡಿಸಿದೆ. ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಮೈತ್ರಿಕೂಟ 243 ಸದಸ್ಯ ಬಲದ ವಿಧಾನಸಭೆಯಲ್ಲಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ.
ಚುನಾವಣೋತ್ತರ ಸಮೀಕ್ಷೆಗಳನ್ನೂ ಮೀರಿ ಸಾಧನೆ ಮಾಡಿದ ಬಿಜೆಪಿ-ಜೆಡಿ(ಯು)-ಎಲ್‌ಜೆಪಿ(ರಾಂ ವಿಲಾಸ್) ಮೈತ್ರಿಕೂಟ ಮಹಾಗಠಬಂಧನ್‌ನ್ನು ಪೂರ್ಣ ಧೂಳೀಪಟ ಮಾಡಿದೆ. ಆದರೆ ಜಯದ ನಡುವೆಯೇ ಹೊಸ ಪ್ರಶ್ನೆ ಎದ್ದಿದ್ದು ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರು? ಎನ್ನುವುದೆ ಈಗ ಎಲ್ಲರಲ್ಲೂ ಪ್ರಶ್ನೆಯಾಗಿದೆ. ದಾಖಲೆಯ ಹತ್ತನೇ ಬಾರಿಗೆ ನಿತೀಶ್ ಕುಮಾರ್ ಕುರ್ಚಿ ಹಿಡಿಯುವರೇ ಅಥವಾ ಬಿಜೆಪಿ ಹೊಸ ಮುಖ ತಂದು ಎಲ್ಲರಿಗೂ ಶಾಕ್ ನೀಡುವುದೇ ಎನ್ನುವುದು ಕುತೂಹಲಕಾರಿ ಅಂಶವಾಗಿದೆ.
ನವೆಂಬರ್ 14ರಂದು ಮತ ಎಣಿಕೆ ಆರಂಭವಾದ ಕೂಡಲೇ ಎನ್‌ಡಿಎ ಭರ್ಜರಿ ಮುನ್ನಡೆ ಕಾಯ್ದುಕೊಂಡಿತು. ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ 90-95 ಸೀಟುಗಳಲ್ಲಿ ಮುನ್ನಡೆ ಸಾಧಿಸಿತು. ಜೆಡಿ(ಯು) 80-85 ಸೀಟುಗಳೊಂದಿಗೆ ಬಲಿಷ್ಠ ಸ್ಥಾನದಲ್ಲಿದ್ದರೆ, ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ(ರಾಂ ವಿಲಾಸ್) 19-22 ಸೀಟುಗಳೊಂದಿಗೆ ಮುನ್ನಡೆ ತಂದು ಅಚ್ಚರಿ ಮೂಡಿಸಿತು. ಜೀತನ್ ರಾಮ್ ಮಾಂಝಿ ಅವರ ಹ್ಯಾಮ್ ಮತ್ತು ಉಪೇಂದ್ರ ಕುಶ್ವಾಹ ಅವರ ಆರ್‌ಎಲ್‌ಎಂ ಕೂಡ ಯಶಸ್ವಿಯಾದವು. ಇದು 2010ರ ನಂತರ ಎನ್‌ಡಿಎಗೆ ದೊರೆತ ಅತಿದೊಡ್ಡ ಜಯವಾಗಿದೆ.
ಎನ್‌ಡಿಎ ಗೆಲುವಿನ ಕಾರಣ!
ಎನ್‌ಡಿಎಯ ಈ ಭರ್ಜರಿ ಜಯಕ್ಕೆ ಮೋದಿ ಅಲೆ, ಮಹಿಳಾ ಮತದಾರರ ಬೆಂಬಲ (ಮತದಾನ ಶೇ.71+) “ಸುಶಾಸನ್” ಮತ್ತು ಡಬಲ್ ಇಂಜಿನ್ ಸರ್ಕಾರದ ಗ್ಯಾರಂಟಿಗಳು ಮುಖ್ಯ ಕಾರಣಗಳು. ಮಹಿಳಾ ಮತದಾರರು ಎನ್‌ಡಿಎಗೆ ಭಾರೀ ಬೆಂಬಲ ನೀಡಿದ್ದು, ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಮತಗಳು ಬಂದಿವೆ. ಪ್ರಧಾನಿ ಮೋದಿ ಅವರು “ಬಿಹಾರದ ಜನತೆ ಅಭಿವೃದ್ಧಿ ಮತ್ತು ಸುಶಾಸನ್‌ಗೆ ಮತ ಹಾಕಿದ್ದಾರೆ” ಎಂದು ಹೇಳಿ ಜಯವನ್ನು ಆಚರಿಸಿದ್ದಾರೆ.
ಮತ್ತೊಂದೆಡೆ, ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ ಮತ್ತು ಕಾಂಗ್ರೆಸ್ ಸೇರಿದ ಮಹಾಘಟಬಂಧನ್ ಪೂರ್ಣ ವಿಫಲವಾಗಿದೆ. ಆರ್‌ಜೆಡಿ ಕೇವಲ 30-40 ಸೀಟುಗಳಿಗೆ ಸೀಮಿತವಾಗಿದ್ದು, ಕಾಂಗ್ರೆಸ್ 5ಕ್ಕಿಂತ ಕಡಿಮೆ ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷ ಸಹ ಯಾವುದೇ ಪ್ರಭಾವ ಬೀರದೇ ಅವರಿಗೆ ಖಾತೆಯನ್ನೇ ತೆಗೆಯಲು ಸಾಧ್ಯವಾಗಲಿಲ್ಲ.
ಆದರೆ ಜಯದ ಸಂಭ್ರಮದ ನಡುವೆಯೇ ದೊಡ್ಡ ಟ್ವಿಸ್ಟ್ ಎನೆಂದರೇ ಜೆಡಿ(ಯು) ಅಧಿಕೃತ ಎಕ್ಸ್ ಖಾತೆಯಲ್ಲಿ “ನ ಭೂತೋ ನ ಭವಿಷ್ಯತಿ… ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿ ಆಗಿದ್ದರು, ಇದ್ದಾರೆ ಮತ್ತು ಉಳಿಯುತ್ತಾರೆ” ಎಂಬ ಪೋಸ್ಟ್ ಹಾಕಿ ನಂತರ ಡಿಲೀಟ್ ಮಾಡಿತು. ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿರುವುದರಿಂದ ಸ್ಯಾಮ್ರಾಟ್ ಚೌಧರಿ ಅಥವಾ ಇತರ ಬಿಜೆಪಿ ನಾಯಕರ ಹೆಸರು ಕೇಳಿಬಂದಿದೆ. ಆದರೆ ಚಿರಾಗ್ ಪಾಸ್ವಾನ್, ಜೀತನ್ ರಾಮ್ ಮಾಂಝಿ ಸೇರಿದ ಮಿತ್ರಪಕ್ಷಗಳು ನಿತೀಶ್ ಅವರನ್ನೇ ಬೆಂಬಲಿಸುತ್ತಿವೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಇನ್ನೂಯಾವುದೆ ಸ್ಪಷ್ಟವಾದ ಹೇಳಿಕೆಯನ್ನು ನೀಡಿಲ್ಲ.
ಇದನ್ನೂ ಓದಿ | ಬಿಹಾರ್ ವೋಟ್ ಪೋಲ್ ವಿಶೇಷ ವರದಿ: ಇದು ಎಷ್ಟರ ಮಟ್ಟಿಗೆ ನಿಜ?
ನಿತೀಶ್ ಅವರು ತಮ್ಮ ಮನೆಯಲ್ಲಿ ಮಿತ್ರಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಿ “ಜನತೆಯ ಆಶೀರ್ವಾದಕ್ಕೆ ಕೃತಜ್ಞ” ಎಂದು ಹೇಳಿದ್ದಾರೆ. ಆದರೆ ಬಿಜೆಪಿ ಕಾರ್ಯಕರ್ತರು “ಈ ಬಾರಿ ಬಿಹಾರದಲ್ಲಿ ಬಿಜೆಪಿ ಸಿಎಂ” ಎಂಬ ಸ್ಲೋಗನ್‌ಗಳೊಂದಿಗೆ ಸಂಭ್ರಮಿಸುತ್ತಿದ್ದಾರೆ. ಈ ಒಳಗಿನ ಕದನ ಬಿಹಾರದ ರಾಜಕಾರಣಕ್ಕೆ ಹೊಸ ತಿರುವು ನೀಡುವ ಸಾಧ್ಯತೆಯಿದೆ. ಎನ್‌ಡಿಎಯ ಈ ದಾಖಲೆಯ ಜಯ ರಾಷ್ಟ್ರೀಯ ರಾಜಕಾರಣಕ್ಕೂ ದೊಡ್ಡ ಸಂದೇಶವಾಗಿದೆ. 2029 ಲೋಕಸಭಾ ಚುನಾವಣೆಗೆ ಮೋದಿ ಅಲೆ ಇನ್ನೂ ಬಲಿಷ್ಠವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ಬಿಹಾರದ ಜನತೆ ‘ಜಂಗಲ್ ರಾಜ್’ಗೆ ಹಿಂತಿರುಗುವುದಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.







