ಕರ್ನಾಟಕದಾದ್ಯಂತ ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಟ್ರಸ್ಟ್‌ಗಳು, ಆಸ್ಪತ್ರೆಗಳು, ಮನರಂಜನಾ ಕೇಂದ್ರಗಳು, ಹೋಟೆಲ್‌ಗಳು ಸೇರಿದಂತೆ ಎಲ್ಲಾ ಸಂಸ್ಥೆಗಳು ಒಂದು ತಿಂಗಳೊಳಗೆ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು ತಿಳಿಸಿದ್ದಾರೆ.
ಚಳಿಗಾಲ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, “ರಾಜ್ಯದಲ್ಲಿ ಕನ್ನಡ ಭಾಷೆಯ ಕಡ್ಡಾಯ ಬಳಕೆಗೆ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಆದಷ್ಟು ಬೇಗ ಸಂಪೂರ್ಣ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದರು.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ತಿದ್ದುಪಡಿಯಡಿ ನಾಮಫಲಕಗಳಲ್ಲಿ 60:40 ಅನುಪಾತದಲ್ಲಿ ಕನ್ನಡವನ್ನು ಮೇಲ್ಭಾಗದಲ್ಲಿ ಪ್ರದರ್ಶಿಸುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು. ನಿಯಮಗಳ ಅಂತಿಮ ಅನುಮೋದನೆಗಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಗೆ ಕಳುಹಿಸಲಾಗಿದ್ದು, ಮುಂದಿನ ಕೆಲವು ವಾರಗಳಲ್ಲಿ ರಾಜ್ಯಾದ್ಯಂತ ಆದೇಶ ಹೊರಡಿಸಲಾಗುವುದು ಎಂದರು. ಈ ನಿಯಮವು 2024ರಿಂದಲೇ ಚರ್ಚೆಯಲ್ಲಿದ್ದು, ಈಗ ಕಟ್ಟುನಿಟ್ಟಿನ ಜಾರಿಗೆ ಸರ್ಕಾರ ಮುಂದಾಗಿದೆ.
ಅನುಷ್ಠಾನದ ಪ್ರಗತಿಯ ಕುರಿತು ಮಾತನಾಡಿದ ಸಚಿವರು, ಹನ್ನೊಂದು ಜಿಲ್ಲೆಗಳಲ್ಲಿ ಶೇ.100 ಅನುಷ್ಠಾನ ಸಾಧಿಸಲಾಗಿದೆಯೆಂದು ಹೇಳಿದರು. ಉಳಿದ ಜಿಲ್ಲೆಗಳಲ್ಲಿ ಶೇ.80-95 ರಷ್ಟು ಪ್ರಗತಿ ದಾಖಲಾಗಿದ್ದು, ಶೀಘ್ರದಲ್ಲೇ ಸಂಪೂರ್ಣ ಅಳವಡಿಕೆಗೆ ಗುರಿ ಹೊಂದಲಾಗಿದೆ. ಪರಿಣಾಮಕಾರಿ ಮೇಲ್ವಿಚಾರಣೆಗಾಗಿ ರಾಜ್ಯಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಇದರಲ್ಲಿ ಸಚಿವರು, ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸದಸ್ಯರಾಗಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ.
ಇದನ್ನೂ ಓದಿ | ಕಾಂಗ್ರೆಸ್‌ನಲ್ಲಿ ಭೋಜನ ಕೂಟಗಳ ಅಬ್ಬರ: ಶಾಸಕರ ಮನ ಗೆಲ್ಲಲು ಡಿಕೆಶಿ ‘ಡಿನ್ನರ್’ ಅಸ್ತ್ರ?
ಬೆಂಗಳೂರಿನಲ್ಲಿ ವಿಶೇಷವಾಗಿ 8 ಮೇಲ್ವಿಚಾರಣಾ ವಲಯಗಳನ್ನು ರಚಿಸಲಾಗಿದ್ದು, ವಿಶೇಷ ತಪಾಸಣಾ ತಂಡಗಳನ್ನು ಸ್ಥಾಪಿಸಲಾಗುವುದು ಎಂದು ಸಚಿವರು ತಿಳಿಸಿದರು. ಹೊರಗುತ್ತಿಗೆ ಆಧಾರದಲ್ಲಿ ವಾಹನಗಳನ್ನು ನೇಮಿಸಿ, ಮೇಲ್ವಿಚಾರಣಾ ಕೋಶಕ್ಕೆ ಪ್ರತ್ಯೇಕ ಕಚೇರಿ ಆಗಲೇ ಕಾರ್ಯಾರಂಭ ಮಾಡಿದೆ. ನಿಯಮ ಉಲ್ಲಂಘಿಸಿದರೆ ಮೊದಲ ಬಾರಿಗೆ ₹5,000, ಎರಡನೇ ಬಾರಿಗೆ ₹10,000 ಮತ್ತು ನಂತರದ ಪ್ರತಿ ಉಲ್ಲಂಘನೆಗೆ ₹20,000 ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಜೊತೆಗೆ, ಪರವಾನಗಿ ರದ್ದತಿ ಸೇರಿದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ವರದಿಯಲ್ಲಿ ಉಲ್ಲೇಖಿಸಿದೆ.







