ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮಭೂಷಣ ಸಮಾರಂಭದ ನಂತರ ಆಯೋಜಿಸಲಾದ ಹೈ ಟೀ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ರೊಂದಿಗೆ ಸಂವಾದ ನಡೆಸಿದ್ದಾರೆ.
ಮೇ 27, 2025ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕನ್ನಡದ ಹಿರಿಯ ನಟ ಅನಂತ್ ನಾಗ್, ಸಂಗೀತಗಾರ ರಿಕಿ ಕೇಜ್, ಉದ್ಯಮಿ ಪ್ರಶಾಂತ್ ಪ್ರಕಾಶ್, ಮತ್ತು ಶಿಕ್ಷಕ ವೆಂಕಪ್ಪ ಅಂಬಾಜಿ ಸುಗಟೇಕರ್ ಸೇರಿದಂತೆ ದೇಶಾದ್ಯಂತ 68 ಸಾಧಕರಿಗೆ ಪದ್ಮ ಪುರಸ್ಕಾರವನ್ನು ಪ್ರದಾನ ಮಾಡಿದರು.
ಸಮಾರಂಭದ ಬಳಿಕ ಆಯೋಜಿಸಲಾದ ಹೈ ಟೀ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನಂತ್ ನಾಗ್ರೊಂದಿಗೆ ನಡೆಸಿದ ಸಂವಾದವು ಕಾರ್ಯಕ್ರಮದ ಮುಖ್ಯಾಕರ್ಷಣೆಯಾಯಿತು. ಈ ಸಂವಾದದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನಂತ್ ನಾಗ್ರ ಸಾಧನೆಗೆ ಕನ್ನಡಿಗರಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ.

ಅನಂತ್ ನಾಗ್ ಅವರು ಕನ್ನಡ ಚಲನಚಿತ್ರ ರಂಗದಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದವರು. ಅವರ ಬಹುಮುಖ ನಟನೆ, ಸಾಮಾಜಿಕ ಸಂದೇಶದ ಚಿತ್ರಗಳ ಮೂಲಕ ಜನಮಾನಸದಲ್ಲಿ ಗುರುತು ಮೂಡಿಸಿದ್ದಾರೆ. 1970ರ ದಶಕದಿಂದ ಆರಂಭವಾದ ಅವರ ವೃತ್ತಿಜೀವನದಲ್ಲಿ, ಕನ್ನಡ, ತಮಿಳು, ತೆಲುಗು, ಹಿಂದಿ, ಮತ್ತು ಮಲಯಾಳಂ ಚಿತ್ರರಂಗದಲ್ಲಿ ಅವರು ತಮ್ಮ ಪ್ರತಿಭೆಯನ್ನು ತೋರಿದ್ದಾರೆ. ‘ಸಂಕಲ್ಪ’, ‘ಗಂಗವ್ವ ಗಂಗಾಮಾಯಿ’, ‘ಗೋಧಿ ಬಣ್ಣ ಸಾದಾರಣ ಮೈಕಟ್ಟು’ ಮುಂತಾದ ಚಿತ್ರಗಳ ಮೂಲಕ ಅವರು ಕನ್ನಡಿಗರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಈ ಸಾಧನೆಗಾಗಿ ರಾಷ್ಟ್ರಪತಿಗಳು ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.







