ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತವು ರಾಜ್ಯವನ್ನು ಆಘಾತಕ್ಕೀಡು ಮಾಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್ 2025ರಲ್ಲಿ ತನ್ನ ಮೊದಲ ಕಪ್ ಗೆದ್ದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ 11 ಅಮೂಲ್ಯ ಜೀವಗಳು ಬಲಿಯಾಗಿದ್ದು, 30ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರಂತಕ್ಕೆ ಯಾರು ಹೊಣೆ? ಸರ್ಕಾರನಾ, ಪೊಲೀಸ್ ಇಲಾಖೆಯಾ, ಆಯೋಜಕರಾ, ಮಾಧ್ಯಮನಾ ಅಥವಾ ಅಭಿಮಾನಿಗಳೇ? ಈ ವಿಷಯವು ರಾಜಕೀಯ, ಸಾಮಾಜಿಕ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಮಂಗಳವಾರ ನಡೆದ ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿಯ ಐತಿಹಾಸಿಕ ಗೆಲುವಿನ ಸಂಭ್ರಮವನ್ನು ಅಭಿಮಾನಿಗಳು ಬೆಂಗಳೂರಿನ ರಸ್ತೆಗಳಲ್ಲಿ ಆಚರಿಸಿದ್ದರು. ಕೆಲವು ಕಡೆ ಜನರ ಉತ್ಸಾಹವು ಕೈಮೀರಿದರೂ, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರು. ಆದರೆ, ಬುಧವಾರ ಬೆಳಗ್ಗೆ ದಿಢೀರ್ ಆಗಿ ಆರ್‌ಸಿಬಿ ತಂಡಕ್ಕೆ ಅಭಿನಂದನಾ ಕಾರ್ಯಕ್ರಮವನ್ನು ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲು ರಾಜ್ಯ ಸರ್ಕಾರ ನಿರ್ಧರಿಸಿತು.
ಐಪಿಎಲ್ ಒಂದು ಖಾಸಗಿ ಕ್ರೀಡಾಕೂಟವಾದರೂ, ಸರ್ಕಾರವೇ ಮುಂದೆ ನಿಂತು ವಿಜಯೋತ್ಸವದ ಕಾರ್ಯಕ್ರಮವನ್ನು ಆಯೋಜಿಸಿತು. ಇದು ಅನಗತ್ಯವಾಗಿತ್ತು. ಸರ್ಕಾರವು ತೆರೆದ ವಾಹನದ ಮೆರವಣಿಗೆಗೆ ಅನುಮತಿ ನೀಡದಿದ್ದರೂ, ಜನಸಂದಣಿಯ ನಿರ್ವಹಣೆಗೆ ಸೂಕ್ತ ಯೋಜನೆ ರೂಪಿಸಲಿಲ್ಲ. ಇದು ದುರಂತಕ್ಕೆ ದಾರಿ ಮಾಡಿಕೊಟ್ಟಿತು.
ಇದರ ಜೊತೆಗೆ ಮೊದಲು, ಮಾಧ್ಯಮಗಳು ಆರ್‌ಸಿಬಿ ತಂಡದ ಗೆಲುವನ್ನು ಐತಿಹಾಸಿಕ ಎಂದು ಉತ್ಪ್ರೇಕ್ಷಿಸಿದವು. ಈ ಉತ್ಪ್ರೇಕ್ಷೆನಿಂದಾಗಿ ಅಭಿಮಾನಿಗಳ ಉತ್ಸಾಹ ಇಮ್ಮಡಿಯಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ವಿಜಯೋತ್ಸವದ ವೀಡಿಯೊಗಳು, ಚಿತ್ರಗಳು ಮತ್ತು ಸುದ್ದಿಗಳು ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಕ್ರೀಡಾಂಗಣದತ್ತ ಧಾವಿಸಿದರು. ಆದರೆ, ಮಾಧ್ಯಮವು ಜನಸಂದಣಿಯ ಸಾಧ್ಯತೆಯ ಬಗ್ಗೆಯಾಗಲಿ, ಸುರಕ್ಷತೆಯ ಬಗ್ಗೆಯಾಗಲಿ ಜನರಿಗೆ ತಿಳಿಸಲೇ ಇಲ್ಲ. ಈ ಕುರಿತಂತೆ ಪೋಲೀಸ್ ಇಲಾಖೆಯಾದರು ಎಚ್ಚೆತ್ತುಕೊಳ್ಳಬೇಕಿತ್ತುಆದರೆ ಎಚ್ಚೆತ್ತುಕೊಳ್ಳಲಿಲ್ಲ. ಆರ್‌ಸಿಬಿ ತಂಡವು ಮೊದಲ ಬಾರಿಗೆ ಐಪಿಎಲ್ ಕಪ್ ಗೆದ್ದಿರುವುದರಿಂದ, ಜನಸಂದಣಿಯ ಒತ್ತಡವನ್ನು ಪೊಲೀಸ್ ಇಲಾಖೆಯು ಮೊದಲೇ ಊಹಿಸಬೇಕಿತ್ತು. ಅದಕ್ಕೆ ತಕ್ಕಂತೆ ಸೂಕ್ತ ಜನಸಂದಣಿ ನಿರ್ವಹಣೆ ಮತ್ತು ಭದ್ರತಾ ವ್ಯವಸ್ಥೆಯ ಕಲ್ಪಿಸುವಲ್ಲಿ ಕ್ರಮಕೈಗೊಳ್ಳಬೇಕಿತ್ತು. ಆದರೆ ಈ ವಿಷಯದಲ್ಲಿ ಇಲಾಖೆಯ ನಿರ್ಲಕ್ಷ ಎದ್ದು ಕಾಣುತ್ತಿದೆ. ಸರ್ಕಾರವು ಈ ಘಟನೆಯ ತನಿಖೆಗೆ ಮ್ಯಾಜಿಸ್ಟ್ರಿಯಲ್ ವಿಚಾರಣೆಗೆ ಆದೇಶಿಸಿದೆ, ಆದರೆ ಬಿಜೆಪಿಯಂತಹ ಪಕ್ಷಗಳು ಸುಪ್ರೀಂ ಕೋರ್ಟ್‌ನಿಂದ ತನಿಖೆಗೆ ಆಗ್ರಹಿಸಿವೆ.
ವಿಪರ್ಯಾಸವೆಂದರೆ, ಆರ್‌ಸಿಬಿ ಅಭಿಮಾನಿಗಳ ಉತ್ಸಾಹವು ಈ ದುರಂತಕ್ಕೆ ಪ್ರಮುಖ ಕಾರಣವಾಯಿತು. ಇತರ ತಂಡಗಳು ಸತತ ಕಪ್‌ಗಳನ್ನು ಗೆದ್ದಾಗಲೂ ಇಂತಹ ಘಟನೆಗಳು ಸಂಭವಿಸಿರಲಿಲ್ಲ. ಆದರೆ, ಆರ್‌ಸಿಬಿಯ ಮೊದಲ ಗೆಲುವಿನ ಸಂಭ್ರಮದಲ್ಲಿ, ಅಭಿಮಾನಿಗಳು ಸಂಯಮ ಕಳೆದುಕೊಂಡರು. ಒಂದು ದಶಕಕ್ಕೂ ಹೆಚ್ಚು ಕಾಲ ಸೋಲಿನ ಛಾಯೆಯಲ್ಲಿದ್ದ ತಂಡವನ್ನು ಬೆಂಬಲಿಸಿದ ಅಭಿಮಾನಿಗಳನ್ನು ಹಿಂದೆ ಹೃದಯವಂತರು ಎಂದು ಕೊಂಡಾಡಲಾಗಿತ್ತು. ಆದರೆ, ಈಗ ಸಾಮಾಜಿಕ ಜಾಲತಾಣಗಳಲ್ಲಿ ಆರ್‌ಸಿಬಿ ಅಭಿಮಾನಿಗಳನ್ನು “ಅವಿವೇಕಿಗಳು” ಎಂದು ಟೀಕಿಸಲಾಗುತ್ತಿದೆ. ಈ ಘಟನೆಯಿಂದ ಅವರ ವಿವೇಕವನ್ನು ಪ್ರಶ್ನಿಸಲಾಗುತ್ತಿದೆ.
ಬಿಜೆಪಿಯಂತಹ ವಿರೋಧ ಪಕ್ಷಗಳು ಈ ಘಟನೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸುತ್ತಿವೆ. ಮೊದಲಿಗೆ ಮೆರವಣಿಗೆಗೆ ಅನುಮತಿ ನೀಡದಿರುವುದಕ್ಕೆ ಸರ್ಕಾರವನ್ನು ಟೀಕಿಸಿದ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟವೊಂದನ್ನು ಹಾಕಿತ್ತು .ನಂತರ ಕಾಲ್ತುಳಿತವಾದ ಮೇಲೆ ಪೋಸ್ಟ್ ತೆಗೆದು ಈ ದುರಂತಕ್ಕೆ ಸರ್ಕಾರವನ್ನೇ ದೂಷಿಸಿ ಶುರು ಮಾಡಿದರು. ಈ ರಾಜಕೀಯ ಆರೋಪ-ಪ್ರತ್ಯಾರೋಪಗಳು ದುರಂತದ ಗಂಭೀರತೆಯನ್ನು ಮರೆಮಾಚುವಂತೆ ಮಾಡುತ್ತಿವೆ.
ಒಟ್ಟಾರೆಯಾಗಿ, ಈ ಕಾಲ್ತುಳಿತ ದುರಂತವು ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ತಪ್ಪಿನಿಂದ ಸಂಭವಿಸಿಲ್ಲ. ಮಾಧ್ಯಮದ ಉತ್ಪ್ರೇಕ್ಷೆ, ಪೊಲೀಸ್ ಇಲಾಖೆಯ ವೈಫಲ್ಯ, ಸರ್ಕಾರದ ನಿರ್ಲಕ್ಷ, ಮತ್ತು ಅಭಿಮಾನಿಗಳ ಬೇಜವಾಬ್ದಾರಿತನ ಎಲ್ಲವೂ ಈ ದುರಂತಕ್ಕೆ ಪ್ರಮುಖ ಕಾರಣವಾಗಿವೆ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು, ಎಲ್ಲಾ ಸಂಬಂಧಿತ ಪಕ್ಷಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಸೂಕ್ತ ಜನಸಂದಣಿ ನಿರ್ವಹಣೆ, ಭದ್ರತಾ ಕ್ರಮಗಳು, ಮತ್ತು ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುವುದು ಸರ್ಕಾರದ ಆದ್ಯತೆಯಾಗಿರಬೇಕು.







