ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ತಾಲಿಬಾನ್‌ನ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಜೊತೆ ಮಾತುಕತೆ ನಡೆಸಿದ ಕೆಲವೇ ದಿನಗಳಲ್ಲಿ, ಚೀನಾ ಈಗ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳ ವಿದೇಶಾಂಗ ಸಚಿವರನ್ನು ಬೀಜಿಂಗ್‌ಗೆ ಕರೆದು ತ್ರಿಪಕ್ಷೀಯ ಸಭೆ ನಡೆಸಿದೆ. ಈ ಹಿಂದೆಂದೂ ಇರದ ರೀತಿಯಲ್ಲಿ ಚೀನಾ ಈ ಪ್ರದೇಶದ ರಾಜಕೀಯದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದೆ.
ಚೀನಾದ ತ್ರಿಪಕ್ಷೀಯ ಸಭೆ: ಏನು ನಿರ್ಧಾರಗಳು?
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಮುಖ್ಯವಾಗಿ ಮೂರು ವಿಷಯಗಳು ಚರ್ಚೆಯಾದವು:
1. CPEC ಅನ್ನು ಅಫ್ಘಾನಿಸ್ತಾನಕ್ಕೆ ವಿಸ್ತರಿಸುವುದು– ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಅನ್ನು ಈಗ ಅಫ್ಘಾನಿಸ್ತಾನದೊಳಗೆ ವಿಸ್ತರಿಸಲು ಒಪ್ಪಂದವಾಗಿದೆ.
2. ಪರಸ್ಪರ ರಾಯಭಾರಿಗಳ ನೇಮಕ– ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಮ್ಮ ರಾಯಭಾರಿಗಳನ್ನು ಪುನಃ ನಿಯೋಜಿಸಲು ಒಪ್ಪಿಕೊಂಡಿವೆ.
3. ಭಯೋತ್ಪಾದನೆ ವಿರುದ್ಧ ಹೋರಾಟ– ಪ್ರಾದೇಶಿಕ ಶಾಂತಿಗಾಗಿ ಭಯೋತ್ಪಾದಕ ಗುಂಪುಗಳ ವಿರುದ್ಧ ಒಟ್ಟಾಗಿ ಕೆಲಸ ಮಾಡಲು ನಿರ್ಧಾರ.
ಹಿನ್ನೆಲೆ:
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಸಂಬಂಧ ಇತ್ತೀಚೆಗೆ ಹದಗೆಟ್ಟಿತ್ತು. ಕಳೆದ ಡಿಸೆಂಬರ್‌ನಲ್ಲಿ ಪಾಕಿಸ್ತಾನದ ವಾಯುಪಡೆ ಅಫ್ಘಾನ್‌ನ ಪಕ್ತಿಕಾ ಪ್ರಾಂತ್ಯದಲ್ಲಿ ಬಾಂಬ್ ದಾಳಿ ನಡೆಸಿ 50 ಜನರನ್ನು ಕೊಂದಿತ್ತು. ಅಷ್ಟೇ ಅಲ್ಲದೆ, ಪಾಕಿಸ್ತಾನ ಸಾವಿರಾರು ಅಫ್ಘಾನ್ ನಿರಾಶ್ರಿತರನ್ನು ಗಡೀಪಾರು ಮಾಡುತ್ತಿದೆ. ಸದ್ಯ ಈದೀಗ ಚೀನಾ ತನ್ನ ಪ್ರಭಾವವನ್ನು ಬಳಸಿ ಎರಡೂ ದೇಶಗಳ ನಡುವೆ ಸಂಧಾನ ಮಾಡಲು ಪ್ರಯತ್ನಿಸಿದೆ.
ಕಳೆದ ವಾರ ಜೈಶಂಕರ್ ತಾಲಿಬಾನ್‌ನ ವಿದೇಶಾಂಗ ಸಚಿವರೊಂದಿಗೆ ಮೊದಲ ಬಾರಿಗೆ ದೂರವಾಣಿ ಮಾತುಕತೆ ನಡೆಸಿದ್ದರು. ತಾಲಿಬಾನ್ ಆಡಳಿತದ ಮಾನ್ಯತೆಗೆ ಇದು ಭಾರತದ ಮೊದಲ ಹಂತವಾಗಿತ್ತು. ಆದರೆ, ಚೀನಾ ಈಗ ಈ ಪ್ರಕ್ರಿಯೆಯಲ್ಲಿ ತಲೆಹಾಕಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸುತ್ತಿದೆ.







