ಬೆಂಗಳೂರು: ಭಾನುವಾರದಂದು ಕರ್ನಾಟಕದಲ್ಲಿ 9 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಯಾವುದೇ ಸಾವು ವರದಿಯಾಗಿಲ್ಲವಾದರೂ, ಪಾಸಿಟಿವಿಟಿ ದರ ಶೇ.8.65ರಷ್ಟಿದೆ. ಒಟ್ಟು 47 ಸಕ್ರಿಯ ಪ್ರಕರಣಗಳ ಪೈಕಿ 46 ಮಂದಿ ಮನೆಯಲ್ಲಿ ಪ್ರತ್ಯೇಕವಾಗಿದ್ದರೆ, ಒಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 24 ಗಂಟೆಗಳಲ್ಲಿ 104 ಆರ್‌ಟಿ-ಪಿಸಿಆರ್ ಮತ್ತು ರಾಪಿಡ್ ಆಂಟಿಜೆನ್ ಪರೀಕ್ಷೆಗಳನ್ನು ನಡೆಸಲಾಗಿದೆ.
ರಾಜ್ಯ ಆರೋಗ್ಯ ಇಲಾಖೆಯು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸಿನಂತೆ ದೈನಂದಿನ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು 150-200ಕ್ಕೆ ಹೆಚ್ಚಿಸಲು ತೀರ್ಮಾನಿಸಿದೆ. ಭಾನುವಾರದಿಂದ ತೀವ್ರ ಉಸಿರಾಟದ ಸೋಂಕು (SARI) ಪ್ರಕರಣಗಳ ಪರೀಕ್ಷೆಯನ್ನು ಆರಂಭಿಸಲಾಗಿದೆ. ಇದರ ಜೊತೆಗೆ, ಇನ್ಫ್ಲುಯೆನ್ಸ ತರಹದ ಅನಾರೋಗ್ಯ (ILI) ರೋಗಲಕ್ಷಣಗಳನ್ನು ಹೊಂದಿರುವ ವೃದ್ಧರು, ಮಕ್ಕಳು, ಮತ್ತು ಗರ್ಭಿಣಿಯರಂತಹ ಅತೀ-ಅಪಾಯದಳ್ಳಿ ಇರುವವರನ್ನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ನಿಮ್ಹಾನ್ಸ್, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (BMCRI), ರಾಷ್ಟ್ರೀಯ ವೈರಾಲಜಿ ಸಂಸ್ಥೆ (NIV) ಸೇರಿದಂತೆ 10 ಕೇಂದ್ರಗಳನ್ನು ಕೋವಿಡ್ ಪರೀಕ್ಷಾ ಕೇಂದ್ರಗಳಾಗಿ ಗೊತ್ತುಪಡಿಸಲಾಗಿದೆ. ರಾಜ್ಯದಲ್ಲಿ ಒಟ್ಟು 5,000 ಆರ್‌ಟಿ-ಪಿಸಿಆರ್ ಪರೀಕ್ಷಾ ಕಿಟ್‌ಗಳನ್ನು ಖರೀದಿಸಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ, ಇದು ಸುಮಾರು ಒಂದು ತಿಂಗಳ ಪರೀಕ್ಷೆಗೆ ಸಾಕಾಗಲಿದೆ. ಪ್ರಸ್ತುತ 2,500 ರಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್‌ಗಳು ಮತ್ತು 1.3 ಲಕ್ಷ RN ಕಿಟ್‌ಗಳು ಲಭ್ಯವಿದ್ದು, ಇವುಗಳನ್ನು ಜಿಲ್ಲೆಗಳಿಗೆ ರವಾನಿಸಲಾಗಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಪರಿಸ್ಥಿತಿ ಆತಂಕಕಾರಿಯಾಗಿಲ್ಲದಿದ್ದರೂ, ಮುನ್ನೆಚ್ಚರಿಕೆ ಕ್ರಮಗಳನ್ನು ತೀವ್ರಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. “ಜನರು ಆತಂಕಪಡುವ ಅಗತ್ಯವಿಲ್ಲ. ಆರೋಗ್ಯ ಇಲಾಖೆ ಮತ್ತು ತಜ್ಞರು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು,” ಎಂದು ಅವರು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಪರಿಸ್ಥಿತಿಯನ್ನು ಅವಲೋಕಿಸಿದ್ದು, ತಜ್ಞರ ಸಲಹೆಯಂತೆ ಕ್ಷಿಪ್ರ ಕಾರ್ಯಾಚರಣೆಗೆ ಸೂಚನೆ ನೀಡಿದ್ದಾರೆ.
ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ 35 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಇಲಾಖೆಯು ಎಸ್‌ಎಆರ್‌ಐ ಮತ್ತು ಐಎಲ್‌ಐ ರೋಗಿಗಳ ಮೇಲೆ ವಿಶೇಷ ಗಮನ ಹರಿಸಿದ್ದು, ಎಲ್ಲರಿಗೂ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಬೆಂಗಳೂರು ಈ ಸೋಂಕಿನ ಕೇಂದ್ರವಾಗಿದ್ದು, ರಾಜ್ಯದ ಒಟ್ಟು ಕೇಸ್‌ಗಳಲ್ಲಿ ಶೇ.88ರಷ್ಟು ಇಲ್ಲಿಂದಲೇ ವರದಿಯಾಗಿವೆ. ಆದರೂ, ಸರ್ಕಾರವು ಯಾವುದೇ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿಲ್ಲ, ಬದಲಿಗೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಕೈ ಶುಚಿತ್ವವನ್ನು ಕಾಪಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದೆ.
ರಾಜ್ಯದ ಆರೋಗ್ಯ ಇಲಾಖೆಯು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಆಧರಿಸಿ ಕಾರ್ಯನಿರ್ವಹಿಸುತ್ತಿದ್ದು, ಜನರಿಗೆ ಕೋವಿಡ್-19 ಸೂಕ್ತ ವರ್ತನೆಯನ್ನು ಅನುಸರಿಸಲು ಕರೆ ನೀಡಿದೆ. “ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲಾಗಿದೆ, ಆದರೆ ಎಚ್ಚರಿಕೆಯಿಂದ ಇರಬೇಕು,” ಎಂದು ಸಚಿವ ದಿನೇಶ್ ಗುಂಡೂರಾವ್ ಒತ್ತಿ ಹೇಳಿದರು.







