ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಇತ್ತೀಚಿನ ಹೇಳಿಕೆಯು ಭಾರತದಲ್ಲಿ ಭಾಷಾ ವಿವಾದಕ್ಕೆ ಮತ್ತೊಮ್ಮೆ ಕಿಡಿಹಾಕಿದೆ. ಜೂನ್ 19, 2025ರಂದು, ಮಾಜಿ ಐಎಎಸ್ ಅಧಿಕಾರಿ ಅಶುತೋಷ್ ಅಗ್ನಿಹೋತ್ರಿ ಅವರ ‘ಮೈ ಬೂಂದ್ ಸ್ವಯಂ, ಖುದ್ ಸಾಗರ್ ಹೂಂ’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಶಾ ಮಾತನಾಡುತ್ತಾ, “ಈ ಭಾರತ ದೇಶದಲ್ಲಿ ಇಂಗ್ಲಿಷ್ ಮಾತನಾಡುವವರಿಗೆ ಶೀಘ್ರದಲ್ಲೇ ನಾಚಿಕೆ ಪಡುವ ಸಮಾಜ ಸೃಷ್ಟಿಯಾಗಲಿದೆ. ಭಾರತೀಯ ಭಾಷೆಗಳಿಲ್ಲದೆ ನಾವು ಭಾರತೀಯರಾಗಿರಲು ಸಾಧ್ಯವಿಲ್ಲ” ಎಂದು ಹೇಳಿದರು. ಈ ಹೇಳಿಕೆಯು ಸಾಮಾಜಿಕ ಜಾಲತಾಣ ‘X’ ಸೇರಿದಂತೆ ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಜೊತೆಗೆ, ಶಾ ಅವರ ಮಗ ಜಯ್ ಶಾ ಅವರ ಇಂಗ್ಲಿಷ್‌ನಲ್ಲಿ ಮಾತನಾಡುವ ವಿಡಿಯೊ ವೈರಲ್ ಆಗುತ್ತಿದ್ದು, ಈ ವಿವಾದಕ್ಕೆ ವಿರೋಧಾಭಾಸದ ಆಯಾಮವನ್ನು ಒಡ್ಡಿದೆ.
ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ ಭಾರತವು 2047ರ ವೇಳೆಗೆ ವಿಶ್ವದ ಶಿಖರದಲ್ಲಿರಲಿದೆ ಮತ್ತು ಈ ಪಯಣದಲ್ಲಿ ಭಾರತೀಯ ಭಾಷೆಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಶಾ ಭವಿಷ್ಯ ನುಡಿದರು. ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಪಂಚ ಪ್ರಾಣ’ (ಐದು ಶಪಥಗಳು) ಯೋಜನೆಯನ್ನು ಉಲ್ಲೇಖಿಸಿ, ಗುಲಾಮಗಿರಿಯ ಎಲ್ಲ ಗುರುತುಗಳನ್ನು ತೊಡೆದುಹಾಕಿ, ಸ್ವದೇಶಿ ಭಾಷೆಗಳಲ್ಲಿ ಆಡಳಿತ ಮತ್ತು ಸಂಶೋಧನೆ ನಡೆಸುವ ಬಗ್ಗೆ ಹೇಳಿದರು.
ಆದರೆ, ಈ ಹೇಳಿಕೆಯು ಇಂಗ್ಲಿಷ್‌ಗೆ ವಿರುದ್ಧವಾದ ಧೋರಣೆಯನ್ನು ತೋರಿಸುತ್ತದೆ ಎಂದು ಟೀಕಾಕಾರರು ಆಕ್ಷೇಪಿಸಿದ್ದಾರೆ. ತಮಿಳುನಾಡು, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು, ಕೇಂದ್ರದ ಹಿಂದಿ ಹೇರಿಕೆಯ ಆರೋಪವನ್ನು ಮಾಡಿವೆ, ಇದು ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಮೂರು ಭಾಷಾ ಸೂತ್ರದಿಂದ ಉದ್ಭವಿಸಿದೆ. ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, NEP ಶಿಕ್ಷಣವನ್ನು ಸುಧಾರಿಸುವ ಬದಲು ಹಿಂದಿಯನ್ನು ರಹಸ್ಯವಾಗಿ ಒತ್ತಾಯಿಸುವ ಸಾಧನವಾಗಿದೆ ಎಂದು ಟೀಕಿಸಿದ್ದಾರೆ.
ಅಮಿತ್ ಶಾ ಅವರ ಹೇಳಿಕೆಯು ‘X’ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಹಲವರು ಇದನ್ನ ಇಂಗ್ಲಿಷ್ ಭಾಷೆಯ ಮೇಲಿನ ದಾಳಿಯಾಗಿ ಭಾವಿಸಿದ್ದಾರೆ. ಉದಾಹರಣೆಗೆ ಒಂದು ವೈರಲ್ ಪೋಸ್ಟ್‌ನಲ್ಲಿ, `X’ ಬಳಕೆದಾರರೊಬ್ಬರು, “IT ಯಲ್ಲಿರುವ ಸಂಗಿಗಳು, ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು? ನಾಳೆ ನಿಮ್ಮ ಮಕ್ಕಳು USA, UK, Europe clients ಗಳ ಜೊತೆ, ‘No English, sirf Hindi’ ಅಂದ್ರೆ ನಡಿತ್ತದಾ?” ಎಂದು ಪ್ರಶ್ನಿಸಿದ್ದಾರೆ, ಇದು ಜಾಗತಿಕ ಕಾರ್ಪೊರೇಟ್ ಸೇರಿದಂತೆ ಜಗತ್ತಿನ ಎಲ್ಲಾ ಕ್ಷೇತ್ರಗಳಲ್ಲಿ ಇಂಗ್ಲಿಷ್‌ನ ಅನಿವಾರ್ಯತೆಯನ್ನು ಎತ್ತಿ ತೋರಿಸುತ್ತದೆ.
ಶಾ ಅವರ ಮಗ ಜಯ್ ಶಾ, ಇಂಗ್ಲಿಷ್‌ನಲ್ಲಿ ಸಂದರ್ಶನ ನೀಡಿರುವ ವಿಡಿಯೊ ವೈರಲ್ ಆಗಿದ್ದು, ಈ ವಿವಾದಕ್ಕೆ ವಿಡಂಬನಾತ್ಮಕ ತಿರುವು ನೀಡಿದೆ. ‘X’ನಲ್ಲಿ ಒಂದು ಕಾಮೆಂಟ್‌ನಲ್ಲಿ, “ಅಮಿತ್ ಶಾ ಅವರ ಮಗನ ಇಂಗ್ಲಿಷ್ ಜ್ಞಾನದ ಬಗ್ಗೆ ಅವರು ತಾವೇ ಒಪ್ಪಿಕೊಳ್ಳುತ್ತಿದ್ದಾರೆ, ಆದರೆ ಇಂಗ್ಲಿಷ್‌ಗೆ ಶರಮ್ ಎಂದಿರುವುದು ವಿರೋಧಾಭಾಸ” ಎಂದು ಟೀಕಿಸಲಾಗಿದೆ. ಏಕೆಂದರೆ ಜಯ್ ಶಾ BCCI ಕಾರ್ಯದರ್ಶಿಯಾಗಿ ಜಾಗತಿಕ ವೇದಿಕೆಯಲ್ಲಿ ಇಂಗ್ಲಿಷ್‌ನಲ್ಲೇ ಸಂವಹನ ನಡೆಸುತ್ತಾರೆ. ಈ ಕಾಮೆಂಟ್‌ಗಳು ಶಾ ಅವರ ಹೇಳಿಕೆಯ ವಿರುದ್ಧ ತಮಾಷೆಯ ರೀತಿಯಲ್ಲಿ ಟೀಕೆಯನ್ನು ವ್ಯಕ್ತಪಡಿಸಿವೆ.
ಶಾ ಅವರ ಹೇಳಿಕೆಯು ಭಾರತದ ಭಾಷಾ ರಾಜಕಾರಣದ ಸಂಕೀರ್ಣತೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು ಮತ್ತು ಕರ್ನಾಟಕದಲ್ಲಿ, ಇಂಗ್ಲಿಷ್‌ಗೆ ವಿರುದ್ಧವಾದ ಧೋರಣೆಯನ್ನು ಹಿಂದಿ ಹೇರಿಕೆಯ ಭಾಗವೆಂದು ಭಾವಿಸಲಾಗಿದೆ. ಶಾ ಅವರ ಈ ಹೇಳಿಕೆಯ ಬಗ್ಗೆ ಚರ್ಚೆಗೆ ಕರೆ ನೀಡಲಾಗಿದ್ದು, “ಯಾವುದೇ ಭಾಷೆಯನ್ನು ಶರಮ್‌ಗೊಳಿಸುವ ಬದಲು, ಎಲ್ಲ ಭಾಷೆಗಳಿಗೂ ಸಮಾನ ಗೌರವ ನೀಡಬೇಕು” ಎಂದು ಕಾಮೆಂಟ್‌ಗಳು ಸೂಚಿಸಿವೆ.
ಅಲ್ಲದೇ ಅಮಿತ್ ಶಾ ಅವರ ಈ ಹೇಳಿಕೆಯು BJPಯ ‘ಭಾರತೀಯತೆ’ಯ ಎಜೆಂಡಾದ ಭಾಗವೆಂದು ಭಾವಿಸಲಾಗಿದೆ, ಆದರೆ ಇದು ಇಂಗ್ಲಿಷ್‌ನ ಜಾಗತಿಕ ಪ್ರಾಮುಖ್ಯತೆಯನ್ನು ಕಡೆಗಣಿಸುವಂತಿದೆ. ಭಾರತದ ಐಟಿ, ಶಿಕ್ಷಣ, ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಇಂಗ್ಲಿಷ್‌ನ ಪಾತ್ರವು ಅನಿವಾರ್ಯವಾಗಿದ್ದು, ಈ ಹೇಳಿಕೆಯು ಯುವ ಜನತೆಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಎಂದು ಟೀಕಾಕಾರರು ಎಚ್ಚರಿಸಿದ್ದಾರೆ.







