ಮಂಡ್ಯ: ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯಕ್ಕೆ ಜೂನ್ 30, 2025 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಶ್ರೀರಂಗಪಟ್ಟಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ರಾಜ್ಯ ಸರ್ಕಾರದ ಸ್ಥಿರತೆ ಮತ್ತು ಕೃಷಿಗೆ ನೀಡಿರುವ ಬೆಂಬಲವನ್ನು ಒತ್ತಿಹೇಳಿದರು. “ನಮ್ಮ ಸರ್ಕಾರ ಐದು ವರ್ಷ ಬಂಡೆಯಂತೆ ಗಟ್ಟಿಯಾಗಿರುತ್ತದೆ. 2028ರ ಚುನಾವಣೆಯಲ್ಲೂ ನಾವೇ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ”. ವಿರೋಧ ಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದ ಅವರು, “ಸರ್ಕಾರ ಬಿದ್ದೋಗುತ್ತದೆ ಎಂದು ಸೋತ ಗಿರಾಕಿಗಳು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನಾನು ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಗ್ಗಟ್ಟಾಗಿದ್ದೇವೆ” ಎಂದು ಸ್ಪಷ್ಟಪಡಿಸಿದರು.
ಕೆಆರ್‌ಎಸ್ ಜಲಾಶಯ 93 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಗರಿಷ್ಠ 124.80 ಅಡಿ ತಲುಪಿದೆ, ಇದು ರೈತರಿಗೆ ಸಂತಸ ತಂದಿದೆ. ಈ ಐತಿಹಾಸಿಕ ಘಟನೆಯ ಸ್ಮರಣಾರ್ಥ ಕಾವೇರಿ ನೀರಾವರಿ ನಿಗಮಕ್ಕೆ ಸ್ಮಾರಕ ನಿರ್ಮಾಣಕ್ಕೆ ಸೂಚನೆ ನೀಡಿದ ಸಿಎಂ, “ಕಾವೇರಿ ತಾಯಿಯ ಕೃಪೆಯಿಂದ ರಾಜ್ಯದ ಎಲ್ಲಾ ಜಲಾಶಯಗಳು ತುಂಬಿವೆ. ಎಲ್ಲಾ ನಾಲೆಗಳಿಗೆ ತಕ್ಷಣ ನೀರು ಹರಿಸಿ” ಎಂದು ಆದೇಶಿಸಿದರು.
ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಯನ್ನು ಟೀಕಿಸುವ ಬಿಜೆಪಿಗೆ ತಿರುಗೇಟು ನೀಡಿದ್ದು. “ನಾಡಿನ ಜನರಿಗೆ ದಿವಾಳಿಯಾಗುತ್ತದೆ ಎಂದು ಬುರುಡೆ ಬಿಡುವ ಬಿಜೆಪಿಯವರು, 25,000 ಕೋಟಿ ರೂಪಾಯಿ ನೀರಾವರಿಗೆ ಎಲ್ಲಿಂದ ಬಂತು ಎಂದು ಉತ್ತರಿಸಬೇಕು” ಎಂದು ಪ್ರಶ್ನಿಸಿದರು. ಕೃಷಿಗೆ 19,000 ಕೋಟಿ ರೂಪಾಯಿ ಪಂಪ್ ಸೆಟ್ ಸಬ್ಸಿಡಿಯನ್ನು ಒದಗಿಸಿದ್ದೇವೆ ಎಂದು ತಿಳಿಸಿದ ಅವರು, ಕಾವೇರಿ ನೀರಾವರಿ ನಿಗಮಕ್ಕೆ 3,000 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದರು. “ವಿರೋಧಿಗಳು ಅಧಿಕಾರದಲ್ಲಿದ್ದಾಗ ಇಂತಹ ಹಣವನ್ನು ಕೊಟ್ಟಿರಲಿಲ್ಲ” ಎಂದು ಟೀಕಿಸಿದರು.
ಇದನ್ನೂ ಓದಿ | ಸರ್ಕಾರ ಐದು ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ: ಸಿಎಂ ಸಿದ್ದರಾಮಯ್ಯ
ಕೆಆರ್‌ಎಸ್ ಜಲಾಶಯದ 49.452 ಟಿಎಂಸಿ ಸಾಮರ್ಥ್ಯದಲ್ಲಿ 41.073 ಟಿಎಂಸಿ ಲೈವ್ ಸ್ಟೋರೇಜ್ ಇದೆ. 193 ವರ್ಷಗಳಲ್ಲಿ 76 ಬಾರಿ ಭರ್ತಿಯಾಗಿರುವ ಈ ಜಲಾಶಯ, 2023-24ರ ಬರಗಾಲದ ಸಂದರ್ಭದಲ್ಲಿ ವಿರೋಧಿಗಳಿಂದ “ಕಾಂಗ್ರೆಸ್ ಸರ್ಕಾರದ ಕಾಲುಗುಣ ಸರಿಯಿಲ್ಲ” ಎಂದು ಟೀಕೆಗೆ ಒಳಗಾಗಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ಉತ್ತಮ ಮಳೆಯಿಂದ ರಾಜ್ಯ ಸುಭಿಕ್ಷವಾಗಿದೆ. “ಈಗ ವಿರೋಧಿಗಳು ಏನು ಹೇಳುತ್ತಾರೆ?” ಎಂದು ಸಿಎಂ ಅಣಕಿಸಿದರು.
“ನಾವು ರೈತರಿಗೆ ಎಂದಿಗೂ ತೊಂದರೆ ಮಾಡಿಲ್ಲ. ಬೀಜ, ಗೊಬ್ಬರಕ್ಕೆ ಕೊರತೆಯಾಗಲಿಲ್ಲ, ಯಾರ ಮೇಲೂ ಗೋಲಿಬಾರ್ ಮಾಡಿಲ್ಲ”. ಬಿಜೆಪಿ ಮತ್ತು ಜೆಡಿಎಸ್‌ನವರು ಸುಳ್ಳು ಹೇಳುವ ಚಾಳಿಯಿಂದ ಜನರನ್ನು ದಡ್ಡರೆಂದು ಭಾವಿಸಬಾರದು. “ಕಾವೇರಿ ತಾಯಿ ಮತ್ತು ಚಾಮುಂಡೇಶ್ವರಿಯ ಕೃಪೆಯಿಂದ ರಾಜ್ಯದ ಬೆಳೆ, ಮಳೆ ಉತ್ತಮವಾಗಿದೆ” ಎಂದು ಹೇಳಿದ ಅವರು, ರಾಜ್ಯದ ಸಮೃದ್ಧಿಗೆ ಪ್ರಾರ್ಥಿಸಿದರು.
ಕಾವೇರಿ ನೀರಾವರಿ ನಿಗಮದ ಎಂಡಿ ರಘುರಾಮ್ ಅವರಿಗೆ ಸ್ಮಾರಕ ನಿರ್ಮಾಣಕ್ಕೆ ಸೂಚನೆ ನೀಡಿದ ಸಿಎಂ, ಕೃಷಿ ಭಾಗ್ಯ ಯೋಜನೆಯಡಿ 3 ಲಕ್ಷಕ್ಕೂ ಹೆಚ್ಚು ಕೃಷಿ ಹೊಂಡಗಳನ್ನು ನಿರ್ಮಿಸಿ ರೈತರ ಆದಾಯ ಹೆಚ್ಚಿಸಲಾಗಿದೆ ಎಂದರು. 2025-26ರ ಬಜೆಟ್‌ನಲ್ಲಿ 12,000 ಕೃಷಿ ಹೊಂಡಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.







