ಕನ್ನಡ ಚಿತ್ರರಂಗದ ದಿಗ್ಗಜ ನಟಿ ಬಿ. ಸರೋಜಾದೇವಿ ಅವರು ಜುಲೈ 14, 2025 ರಂದು ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಒಕ್ಕಲಿಗ ಸಂಪ್ರದಾಯದಂತೆ, ಇಂದು ಮಧ್ಯಾಹ್ನ 1:30ಕ್ಕೆ ಅವರ ಹುಟ್ಟೂರಾದ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದಶವಾರದ ತೋಟದ ಮನೆಯಲ್ಲಿ, ತಾಯಿಯ ಸಮಾಧಿಯ ಪಕ್ಕದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿದೆ. ಸರೋಜಾದೇವಿ ಅವರ ಇಚ್ಛೆಯಂತೆ ಶವಸಂಸ್ಕಾರವನ್ನು ಹೂತಿಡಲಾಗುವುದು ಎಂದು ಅವರ ಪುತ್ರ ಗೌತಮ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ಮಲ್ಲೇಶ್ವರಂನ ಸರೋಜಾದೇವಿ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಡಿಕೆ ಶಿವಕುಮಾರ್ ಸೇರಿದಂತೆ ಇತರ ಗಣ್ಯರು ಕೂಡ ತಮ್ಮ ಸಂತಾಪ ಸೂಚಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಸರೋಜಾದೇವಿ ಅವರ ನಿಧನವು ಕನ್ನಡ, ತಮಿಳು, ತೆಲುಗು, ಮತ್ತು ಹಿಂದಿ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ ಎಂದು ಹೇಳಿದರು. ಅವರ ಸಾಧನೆಯನ್ನು ಸ್ಮರಿಸಲು, ಮಲ್ಲೇಶ್ವರಂ 11ನೇ ಕ್ರಾಸ್‌ಗೆ ಅವರ ಹೆಸರನ್ನು ಇಡುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಇದನ್ನೂ ಓದಿ | ಕನ್ನಡ ಚಿತ್ರರಂಗದ ‘ಅಭಿನಯ ಸರಸ್ವತಿ’ ಬಿ.ಸರೋಜಾದೇವಿ ವಿಧಿವಶ
ಸರೋಜಾದೇವಿ ಅವರು 17ನೇ ವಯಸ್ಸಿನಲ್ಲಿ ‘ಮಹಾಕವಿ ಕಾಳಿದಾಸ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ‘ಕಿತ್ತೂರು ಚೆನ್ನಮ್ಮ’, ‘ಅಣ್ಣಾತಂಗಿ’, ‘ಬಬ್ರುವಾಹನ’, ‘ಅಮರ ಶಿಲ್ಪಿ ಜಕಣಾಚಾರಿ’ ಮುಂತಾದ ಕನ್ನಡ ಚಿತ್ರಗಳ ಜೊತೆಗೆ, ತಮಿಳು, ತೆಲುಗು, ಮತ್ತು ಹಿಂದಿಯ ಸುಮಾರು 200 ಚಿತ್ರಗಳಲ್ಲಿ ನಟಿಸಿ ‘ಅಭಿನಯ ಸರಸ್ವತಿ’ ಎಂದು ಖ್ಯಾತರಾದರು. ಕೇಂದ್ರ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿಯನ್ನೂ ಪಡೆದಿದ್ದರು.







