ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟ ಆರೋಪದಲ್ಲಿ ಕಲಬುರಗಿ ದಕ್ಷಿಣ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲಿಂಗರಾಜ್ ಕಣ್ಣಿ ಅವರನ್ನು ಮಹಾರಾಷ್ಟ್ರದ ಕಲ್ಯಾಣ ಪೊಲೀಸರು ಜುಲೈ 14, 2025ರಂದು ಬಂಧಿಸಿದ್ದಾರೆ. ಥಾಣೆ ನಗರದಲ್ಲಿ ನಿಷೇಧಿತ 120 ಕೊಡೆನೈನ್ ಸಿರಪ್ ಬಾಟಲ್‌ಗಳನ್ನು ಸಾಗಿಸುತ್ತಿದ್ದ ವೇಳೆ ಕಣ್ಣಿ ಸೇರಿದಂತೆ ತೌಸಿಫ್ ಆಸಿಫ್ ತುರವೇ ಮತ್ತು ಸಯ್ಯದ್ ಇರ್ಫಾನ್ ಎಂಬಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣವನ್ನು ನಾರ್ಕೊಟಿಕ್ಸ್ ಡ್ರಗ್ಸ್ ಆಂಡ್ ಸೈಕೊಟ್ರೋಪಿಕ್ ಸಬ್‌ಸ್ಟೆನ್ಸಸ್ (NDPS) ಕಾಯ್ದೆಯಡಿ ದಾಖಲಿಸಲಾಗಿದೆ.
ಬಂಧನದ ಕೂಡಲೇ, ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ್, ಲಿಂಗರಾಜ್ ಕಣ್ಣಿಯನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣವೇ ಉಚ್ಚಾಟಿಸಿದ್ದಾರೆ. “ಮಾದಕ ದ್ರವ್ಯ ಸಾಗಾಟದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದಿಂದ ಲಿಂಗರಾಜ್ ಕಣ್ಣಿಯನ್ನು ಪಕ್ಷದಿಂದ ಹೊರಹಾಕಲಾಗಿದೆ,” ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ | ಸುರ್ಜೇವಾಲ ಸಚಿವರ ಭೇಟಿ: ಕ್ಯಾಬಿನೆಟ್ ರದ್ದತಿಗೆ ಸಿದ್ಧತೆಯೇ?
ರಾಜಕೀಯ ಆರೋಪ-ಪ್ರತ್ಯಾರೋಪ
ಈ ಘಟನೆಯು ಕಲಬುರಗಿಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಲಿಂಗರಾಜ್ ಕಣ್ಣಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಆಪ್ತರಾಗಿದ್ದರು. ಪ್ರತಿಪಕ್ಷ ಬಿಜೆಪಿಯು ಈ ವಿಷಯವನ್ನು ಎತ್ತಿಕೊಂಡು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. “ಸಚಿವರ ಆಪ್ತರೇ ಮಾದಕ ದ್ರವ್ಯ ದಂಧೆಯಲ್ಲಿ ತೊಡಗಿದ್ದಾರೆ ಎಂಬುದು ಕಾಂಗ್ರೆಸ್ ಪಕ್ಷದ ನೈತಿಕ ಪತನವನ್ನು ತೋರಿಸುತ್ತದೆ,” ಎಂದು ಬಿಜೆಪಿಯು ಸಾಮಾಜಿಕ ಜಾಲಾತಾಣ ಏಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. “ಡ್ರಗ್ಸ್ ವ್ಯಾಪಾರಿಗಳನ್ನು ಆಪ್ತ ವಲಯದಲ್ಲಿ ಇಟ್ಟುಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆಗೆ ನಾಚಿಕೆಯಾಗುವುದಿಲ್ಲವೇ?” ಎಂದು ಬಿಜೆಪಿ ಪ್ರಶ್ನಿಸಿದೆ.
ಇದಕ್ಕೆ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ಪಕ್ಷವು ತಕ್ಷಣವೇ ಕಣ್ಣಿಯನ್ನು ಉಚ್ಚಾಟಿಸಿರುವುದಾಗಿ ತಿಳಿಸಿದ್ದಾರೆ. “ಕಾಂಗ್ರೆಸ್ ತನ್ನ ಶಿಷ್ಟಾಚಾರದಂತೆ ಕ್ರಮ ಕೈಗೊಂಡಿದೆ. ಆದರೆ ಬಿಜೆಪಿಯು ತನ್ನ ಶಾಸಕ ಮುನಿರತ್ನ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಆರೋಪಗಳ ಬಗ್ಗೆ ಏನು ಕ್ರಮ ಕೈಗೊಂಡಿದೆ?” ಎಂದು ಖರ್ಗೆ ಪ್ರಶ್ನಿಸಿದ್ದಾರೆ. “ಬಿಜೆಪಿಯಲ್ಲಿ ದಲಿತರನ್ನು ನಿಂದಿಸುವವರು, ಮಹಿಳೆಯರ ಮೇಲೆ ಅತ್ಯಾಚಾರ ಆರೋಪಿಗಳು, ಮತ್ತು ಪೋಕ್ಸೊ ಕೇಸ್‌ನ ಆರೋಪಿಗಳಿರುವಾಗ, ಅವರು ಮೊದಲು ತಮ್ಮ ಪಕ್ಷದ ತಪ್ಪುಗಳನ್ನು ಸರಿಪಡಿಸಿಕೊಂಡು ನಂತರ ನಮ್ಮ ಬಗ್ಗೆ ಮಾತನಾಡಲಿ,” ಎಂದು ಖರ್ಗೆ ಸವಾಲು ಹಾಕಿದ್ದಾರೆ.







