ರಾಜ್ಯದ ಪಡಿತರ ಚೀಟಿದಾರರು ತಮ್ಮ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎಂದು ಕರ್ನಾಟಕ ಸರ್ಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಸೂಚನೆ ನೀಡಿದ್ದಾರೆ. ಒಂದು ತಿಂಗಳ ಒಳಗೆ ಇ-ಕೆವೈಸಿ ಮಾಡಿಸದಿದ್ದರೆ, ಅಂತಹ ಸದಸ್ಯರ ಪಡಿತರ ಕಾರ್ಡ್ ರದ್ದುಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಮೈಸೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಇ-ಕೆವೈಸಿ ಪ್ರಕ್ರಿಯೆಯನ್ನು ವಿಳಂಬ ಮಾಡದೇ ಬೇಗ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು. “ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಿಸಲು ಒಂದು ತಿಂಗಳ ಕಾಲಾವಕಾಶ ನೀಡಬೇಕು. ಆ ಒಂದು ತಿಂಗಳ ಒಳಗೆ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ, ಸಂಬಂಧಪಟ್ಟ ಕಾರ್ಡ್‌ಗಳನ್ನು ರದ್ದುಗೊಳಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ಜಾಗೃತಿ ಸಮಿತಿಗಳನ್ನು ರಚಿಸಿ, ಜನರಿಗೆ ಈ ಬಗ್ಗೆ ಮಾಹಿತಿ ತಿಳಿಸಬೇಕು,” ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಚಿವರು ಮಾತನಾಡುತ್ತಾ, “ಅನರ್ಹ ವ್ಯಕ್ತಿಗಳಿಗೆ ಪಡಿತರ ಕಾರ್ಡ್‌ಗಳು ವಿತರಣೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಅನಗತ್ಯ ಕಾರ್ಡ್‌ಗಳು ವಿತರಣೆಯಾದರೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು,”.. ಇದರ ಜೊತೆಗೆ, ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ಬೇಕಾದ ವಾಹನ ಸೌಲಭ್ಯ ಮತ್ತು ಕಾನೂನು ಮಾಪನ ನಿರೀಕ್ಷಕರ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಆಹಾರ ಧಾನ್ಯಗಳ ಸಂರಕ್ಷಣೆ ಕುರಿತು ಮಾತನಾಡಿದ ಸಚಿವ ಮುನಿಯಪ್ಪ, “ಗೋದಾಮುಗಳಲ್ಲಿ ಆಹಾರ ಧಾನ್ಯಗಳು ಹಾಳಾಗದಂತೆ ಎಚ್ಚರಿಕೆ ವಹಿಸಬೇಕು. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಆಹಾರ ಧಾನ್ಯಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಸಂರಕ್ಷಣೆ ಮಾಡಬೇಕು. ಯಾವುದೇ ರೀತಿಯ ಲೋಪವಾದರೂ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಜವಾಬ್ದಾರರಾಗಿರುತ್ತಾರೆ,” ಎಂದು ಸ್ಪಷ್ಟಪಡಿಸಿದರು.
ಉಪಸ್ಥಿತಿ :
ಸಭೆಯಲ್ಲಿ ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಯೋಜನಾ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಕಾರ್ಯದರ್ಶಿಗಳಾದ ಮನೋಜ್ ಜೈನ್ ಅವರು ಮಾತನಾಡಿ, ಖಾಲಿ ಇರುವ ಆಹಾರ ನಿರೀಕ್ಷಕರ ಹುದ್ದೆಗಳಿಗೆ ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರಿಗೆ ಹೆಚ್ಚುವರಿ ಪ್ರಭಾರ ನೀಡುವಂತೆ ಸೂಚಿಸಿದರು. “ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ತಕ್ಷಣವೇ ಇತರ ಅಧಿಕಾರಿಗಳಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಲಾಗುವುದು. ಇದರಿಂದ ಸೇವೆಯಲ್ಲಿ ಯಾವುದೇ ವಿಳಂಬವಾಗದಂತೆ ನೋಡಿಕೊಳ್ಳಲಾಗುವುದು,” ಎಂದು ಅವರು ತಿಳಿಸಿದರು.
ಇದನ್ನೂ ಓದಿ | ಕಲಬುರಗಿಯ ಶಾಲೆಯಲ್ಲಿ ವಿಷ ಆಹಾರ: 25 ವಿದ್ಯಾರ್ಥಿಗಳು ಆಸ್ಪತ್ರೆಗೆ
ಈ ಸಭೆಯಲ್ಲಿ ಮೈಸೂರು ವಿಭಾಗದ ಜಿಲ್ಲೆಗಳ ಉಪಾಯುಕ್ತರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಆಹಾರ ಇಲಾಖೆಯ ಉಪನಿರ್ದೇಶಕರು ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಇ-ಕೆವೈಸಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲು ಜಿಲ್ಲಾಡಳಿತಗಳು ತಮ್ಮ ಕಾರ್ಯತಂತ್ರವನ್ನು ರೂಪಿಸಲು ಸಚಿವರು ಸೂಚಿಸಿದರು.







