ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ರಾಜ್ಯದಲ್ಲಿ ಕರ್ನಾಟಕ ಭಾಷಾ ನೀತಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ. ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ಪಠ್ಯಕ್ರಮವನ್ನು ಸರಳಗೊಳಿಸುವ ಅಗತ್ಯವಿದೆ ಎಂದು ಅವರು ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ತ್ರಿಭಾಷಾ ನೀತಿಯ ಬದಲಿಗೆ ದ್ವಿಭಾಷಾ ನೀತಿಯನ್ನು ಜಾರಿಗೊಳಿಸಬೇಕೆಂಬ ಆಶಯ ರಾಜ್ಯದಾದ್ಯಂತ ಕಂಡುಬರುತ್ತಿದೆ ಎಂದು ಅವರು ಒತ್ತಿ ಹೇಳಿದರು. ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ್ವಿಭಾಷಾ ನೀತಿಗೆ ಒಲವು ತೋರಿದ್ದಾರೆ. ಈ ಬಗ್ಗೆ ಸರಕಾರದ ಮುಂದಿನ ನಿರ್ಧಾರವನ್ನು ಆಧರಿಸಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸ್ಪಷ್ಟ ನಿಲುವು ತಾಳಲಿದೆ ಅಥವಾ ಸಮಿತಿಯೊಂದನ್ನು ರಚಿಸಲಿದೆ.
ಉಡುಪಿ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕನ್ನಡ ಭಾಷೆಯ ಅನುಷ್ಠಾನ ಉತ್ತಮವಾಗಿದೆ. ತುಳು, ಕೊಂಕಣಿ, ಬ್ಯಾರಿ, ಕುಂದಾಪ್ರ ಕನ್ನಡ ಸೇರಿದಂತೆ ಹಲವು ಭಾಷೆಗಳ ಜೊತೆಗೆ ಕನ್ನಡವೂ ಸಮೃದ್ಧವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ಆದರೆ, ಕನ್ನಡವನ್ನು ಪ್ರಾದೇಶಿಕ ಭಾಷೆಯಾಗಿ ಬಳಸದ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಕಡಿಮೆ ಅಂಕಗಳನ್ನು ಪಡೆದಿದ್ದಾರೆ.
ಕರ್ನಾಟಕದಲ್ಲಿ ಕನ್ನಡದ ಜೊತೆಗೆ 230 ಸಣ್ಣ ಭಾಷೆಗಳಿವೆ. ಈ ಭಾಷೆಗಳ ಸಶಕ್ತಿಕರಣಕ್ಕಾಗಿ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯು ಶೀಘ್ರದಲ್ಲಿ ಅಧ್ಯಯನ ವರದಿಯನ್ನು ಸಲ್ಲಿಸಲಿದ್ದು, ಸರಕಾರಕ್ಕೆ ಶಿಫಾರಸುಗಳನ್ನು ಮಾಡಲಿದೆ. ಈ ಶಿಫಾರಸುಗಳು ರಾಜ್ಯದ ಭಾಷಾ ವೈವಿಧ್ಯತೆಯನ್ನು ಗೌರವಿಸುವ ಜೊತೆಗೆ ಕನ್ನಡದ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲಿವೆ.
ಕನ್ನಡಕ್ಕೆ ಆದ್ಯತೆ: ಸೂಚನೆಗಳು
ಪ್ರವಾಸಿ ತಾಣಗಳಲ್ಲಿ ಕನ್ನಡ ಭಾಷೆಯ ಜೊತೆಗೆ ಸ್ಥಳೀಯ ಭಾಷೆಗಳಲ್ಲಿ ಸೂಚನ ಫಲಕಗಳನ್ನು ಮತ್ತು ಮಾಹಿತಿಯನ್ನು ಅಳವಡಿಸಲು ಇಲಾಖೆಗೆ ಸೂಚಿಸಲಾಗಿದೆ. ಕೈಗಾರಿಕೆಗಳಲ್ಲಿ ಮತ್ತು ವಾಣಿಜ್ಯ ಸಂಸ್ಥೆಗಳ ಬೋರ್ಡ್‌ಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕೆಂದು ನಿರ್ದೇಶಿಸಲಾಗಿದೆ. ಬ್ಯಾಂಕ್‌ಗಳಲ್ಲಿ ಕನ್ನಡ ಭಾಷಿಕ ಅಧಿಕಾರಿಗಳನ್ನು ನೇಮಿಸಿ ಸ್ಥಳೀಯ ವ್ಯವಹಾರಗಳಿಗೆ ಅನುಕೂಲ ಮಾಡಿಕೊಡಲು ಲೀಡ್ ಬ್ಯಾಂಕ್ ಮ್ಯಾನೇಜರ್‌ಗೆ ಸಲಹೆ ನೀಡಲಾಗಿದೆ.
ಇದನ್ನೂ ಓದಿ | ಕನ್ನಡ ಧ್ವಜ ಅಧಿಕೃತ ಮಾನ್ಯತೆಗೆ ಕೇಂದ್ರಕ್ಕೆ ಪತ್ರ: ಶಿವರಾಜ್ ತಂಗಡಗಿ
ಉಡುಪಿಯಲ್ಲಿ ಕನ್ನಡ ಭವನ
ಉಡುಪಿ ಜಿಲ್ಲೆಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕನ್ನಡ ಭವನವನ್ನು ಶೀಘ್ರವಾಗಿ ನಿರ್ಮಿಸಲಾಗುವುದು. ಈ ಯೋಜನೆಗೆ ಅಗತ್ಯವಿರುವ ಅನುದಾನವನ್ನು ಸರಕಾರದಿಂದ ಒದಗಿಸಲು ಮನವಿ ಸಲ್ಲಿಸಲಾಗುವುದು. ಈಗಾಗಲೇ ನಿರ್ಮಾಣಕ್ಕೆ ಜಾಗವನ್ನು ಗುರುತಿಸಲಾಗಿದೆ. ಆಡಳಿತದಲ್ಲಿ ಕಂಪ್ಯೂಟರೀಕರಣದಲ್ಲಿ ಕನ್ನಡಕ್ಕೆ ಆದ್ಯತೆ ನೀಡಲು ಸೂಚನೆಗಳನ್ನು ನೀಡಲಾಗಿದೆ. ಈ ಕನ್ನಡ ಭವನವು ಜಿಲ್ಲೆಯ ಸಾಂಸ್ಕೃತಿಕ ಮತ್ತು ಭಾಷಾ ಚಟುವಟಿಕೆಗಳಿಗೆ ಕೇಂದ್ರವಾಗಲಿದೆ.
ಉಡುಪಿಯ ಜಿಲ್ಲಾಧಿಕಾರಿ ಸ್ವರೂಪಾ ಕೆ.ಟಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ. ಸಂತೋಷ್, ಮತ್ತು ಸದಸ್ಯ ಯಾಕೂಬ್ ಗುಲ್ವಾಡಿ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







