ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಕಳೆದ ಎರಡು ದಶಕಗಳಿಂದ ಸಂಭವಿಸಿರುವ ಎನ್ನಲಾದ ಅಸಹಜ ಸಾವುಗಳು, ನಾಪತ್ತೆ ಪ್ರಕರಣಗಳು, ಲೈಂಗಿಕ ದೌರ್ಜನ್ಯ ಮತ್ತು ಕೊಲೆಗಳ ಕುರಿತ ತನಿಖೆಗೆ ಕರ್ನಾಟಕ ಸರ್ಕಾರವು ರಚಿಸಿದ್ದ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಇಬ್ಬರು ಅಧಿಕಾರಿಗಳು ಹಿಂದೆ ಸರಿದಿರುವ ಘಟನೆ ತನಿಖೆಗೆ ಹೊಸ ತಿರುವು ನೀಡಿದೆ. ಐಪಿಎಸ್ ಅಧಿಕಾರಿ ಸೌಮ್ಯಲತಾ ಎಸ್.ಕೆ. ಮತ್ತು ಇನ್ನೊಬ್ಬ ಐಪಿಎಸ್‌ಯೇತರ ಅಧಿಕಾರಿಯು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ತಂಡದಿಂದ ಕೈಬಿಡುವಂತೆ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜುಲೈ 14, 2025 ರಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಧರ್ಮಸ್ಥಳದಲ್ಲಿ 20 ವರ್ಷಗಳಿಂದ ನಡೆದಿರುವ ಎನ್ನಲಾದ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ನಾಪತ್ತೆ, ಅಸಹಜ ಸಾವು, ಕೊಲೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ಕುರಿತು ತನಿಖೆಗೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದರು. ಇದರ ಬೆನ್ನಿಗೆ, ರಾಜ್ಯ ಸರ್ಕಾರವು ಜುಲೈ 19, 2025 ರಂದು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ಎಸ್‌ಐಟಿಯನ್ನು ರಚಿಸಿತ್ತು. ಈ ತಂಡದಲ್ಲಿ ಪೊಲೀಸ್ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್. ಅನುಚೇತ್, ಸಿಎಆರ್ ಕೇಂದ್ರದ ಡಿಸಿಪಿ ಸೌಮ್ಯಲತಾ, ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮಾ ಸೇರಿದ್ದರು. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದ 20 ಜನ ಇನ್ಸ್‌ಪೆಕ್ಟರ್‌ಗಳು, ಸಬ್-ಇನ್ಸ್‌ಪೆಕ್ಟರ್‌ಗಳು, ಹೆಡ್ ಕಾನ್ಸ್‌ಟೇಬಲ್‌ಗಳು ಮತ್ತು ಕಾನ್ಸ್‌ಟೇಬಲ್‌ಗಳನ್ನು ತಂಡಕ್ಕೆ ನಿಯೋಜಿಸಲಾಗಿತ್ತು.
ಆದರೆ, ಎಸ್‌ಐಟಿಯ ಕಾರ್ಯಾಚರಣೆ ಆರಂಭವಾಗುವ ಮುನ್ನವೇ, ಸೌಮ್ಯಲತಾ ಅವರು ವೈಯಕ್ತಿಕ ಕಾರಣಗಳಿಂದ ತಂಡದಿಂದ ಹೊರಗುಳಿಯಲು ಬಯಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಸಿಐಡಿ ಕಚೇರಿಯಲ್ಲಿ ತನಿಖೆಯ ರೂಪರೇಷೆಗಳ ಕುರಿತು ಆಯೋಜಿಸಿದ್ದ ಸಭೆಗೆ ಅವರು ಗೈರುಹಾಜರಾಗಿದ್ದರು. ಇದೇ ರೀತಿ, ಇನ್ನೊಬ್ಬ ಐಪಿಎಸ್‌ಯೇತರ ಅಧಿಕಾರಿಯೂ ತಂಡದಿಂದ ಕೈಬಿಡುವಂತೆ ಕೋರಿಕೆ ಸಲ್ಲಿಸಿದ್ದಾರೆ. ಸೌಮ್ಯಲತಾ ಅವರ ಕೋರಿಕೆಯನ್ನು ಒಪ್ಪಿಕೊಂಡಿರುವ ಪ್ರಣವ್ ಮೊಹಾಂತಿ, ಈ ಇಬ್ಬರನ್ನು ತಂಡದಿಂದ ಕೈಬಿಡಲು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆಯು ತನಿಖೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇದನ್ನೂ ಓದಿ | ಧರ್ಮಸ್ಥಳ ಪ್ರಕರಣ: ಸುಪ್ರೀಂ ಕೋರ್ಟ್‌ನಿಂದ ಮಾಧ್ಯಮ ಸ್ವಾತಂತ್ರ್ಯಕ್ಕೆ ಆಘಾತ!
ಗೃಹ ಸಚಿವ ಜಿ. ಪರಮೇಶ್ವರ್ ಈ ಕುರಿತು ಪ್ರತಿಕ್ರಿಯಿಸಿದ್ದು, “ಅಧಿಕೃತವಾಗಿ ನನಗೆ ಯಾವುದೇ ಮಾಹಿತಿ ಬಂದಿಲ್ಲ. ಆದರೆ, ಇಬ್ಬರು ಅಧಿಕಾರಿಗಳು ವೈಯಕ್ತಿಕ ಕಾರಣಗಳಿಂದ ತಂಡದಿಂದ ಹೊರಗುಳಿಯಲು ಪತ್ರ ಬರೆದಿದ್ದಾರೆ ಎಂಬ ವಿಷಯ ಗೊತ್ತಾಗಿದೆ. ಇದರಲ್ಲಿ ಬೇರೆ ಯಾವುದೇ ಕಾರಣಗಳಿದ್ದರೆ, ಅದನ್ನು ಪರಿಶೀಲಿಸಲಾಗುವುದು,” ಎಂದು ತಿಳಿಸಿದ್ದಾರೆ. ಈ ಘಟನೆಯು ಸಾರ್ವಜನಿಕರಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದ್ದು, ತನಿಖೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ.







