ಖ್ಯಾತ ಭಾರತೀಯ ಲೇಖಕಿ ಕಿರಣ್ ದೇಸಾಯಿ ಅವರ ಇತ್ತೀಚಿನ ಕಾದಂಬರಿ ‘ದಿ ಲೋನ್‌ಲಿನೆಸ್ ಆಫ್ ಸೋನಿಯಾ ಆಂಡ್ ಸನ್ನಿ’ 2025ರ ಪ್ರತಿಷ್ಠಿತ ಬುಕರ್ ಪ್ರಶಸ್ತಿಯ ಲಾಂಗ್‌ಲಿಸ್ಟ್‌ಗೆ ಆಯ್ಕೆಯಾಗಿದೆ. 2006ರಲ್ಲಿ ಅವರ ‘ದಿ ಇನ್‌ಹೆರಿಟನ್ಸ್ ಆಫ್ ಲಾಸ್’ ಕೃತಿಗೆ ಬುಕರ್ ಪ್ರಶಸ್ತಿ ಗೆದ್ದ 19 ವರ್ಷಗಳ ನಂತರ, ದೇಸಾಯಿ ಅವರ ಮತ್ತೊಂದು ಕೃತಿಯು ಈ ಗೌರವಕ್ಕೆ ಪಾತ್ರವಾಗಿದೆ.
ಈ ಕಾದಂಬರಿಯು ಸೆಪ್ಟೆಂಬರ್ 23ರಂದು ಪ್ರಕಾಶನಗೊಳ್ಳಲಿದ್ದು, 667 ಪುಟಗಳ ಈ ಕೃತಿಯು ಈ ವರ್ಷದ ಲಾಂಗ್‌ಲಿಸ್ಟ್‌ನಲ್ಲಿ ಅತ್ಯಂತ ದೀರ್ಘವಾದ ಕಾದಂಬರಿಯಾಗಿದೆ. ಬುಕರ್ ಪ್ರಶಸ್ತಿ ಫೌಂಡೇಶನ್ ಈ ಆಯ್ಕೆಯನ್ನು ಜುಲೈ 29ರಂದು ಘೋಷಿಸಿತು. ಈ ವರ್ಷದ ಲಾಂಗ್‌ಲಿಸ್ಟ್‌ನಲ್ಲಿ ಒಂಬತ್ತು ದೇಶಗಳ ಏಳು ಮಹಿಳೆಯರು ಮತ್ತು ಆರು ಪುರುಷರಿಂದ ರಚಿತವಾದ 13 ಕಾದಂಬರಿಗಳು ಸ್ಥಾನ ಪಡೆದಿವೆ.
‘ದಿ ಲೋನ್‌ಲಿನೆಸ್ ಆಫ್ ಸೋನಿಯಾ ಆಂಡ್ ಸನ್ನಿ’ ಕಾದಂಬರಿಯು ಭಾರತದಿಂದ ಅಮೆರಿಕಕ್ಕೆ ವಲಸೆ ಬಂದಿರುವ ಇಬ್ಬರು ಯುವಕರಾದ ಸೋನಿಯಾ ಮತ್ತು ಸನ್ನಿಯ ಕತೆಯನ್ನು ಹೇಳುತ್ತದೆ.
ಇದನ್ನೂ ಓದಿ | ಬಾನು ಮುಷ್ತಾಕ್-ದೀಪಾ ಭಾಸ್ತಿ ಜೋಡಿಗೆ ಬುಕರ್ ಪ್ರಶಸ್ತಿ
ಕಿರಣ್ ದೇಸಾಯಿ ಅವರ ತಾಯಿ ಖ್ಯಾತ ಲೇಖಕಿ ಅನಿತಾ ದೇಸಾಯಿಯವರು ಮೂರು ಬಾರಿ ಬುಕರ್ ಪ್ರಶಸ್ತಿಯ ಶಾರ್ಟ್‌ಲಿಸ್ಟ್‌ಗೆ ಆಯ್ಕೆಯಾಗಿದ್ದರು. ಕಿರಣ್ ದೇಸಾಯಿಯ ಮೊದಲ ಕಾದಂಬರಿ ‘ಹಲ್ಲಾಬಲೂ ಇನ್ ದಿ ಗಾವಾ ಆರ್ಚರ್ಡ್’ (1998) 22ಕ್ಕೂ ಹೆಚ್ಚು ಭಾಷೆಗಳಿಗೆ ಭಾಷಾಂತರಗೊಂಡಿತ್ತು. ‘ದಿ ಇನ್‌ಹೆರಿಟನ್ಸ್ ಆಫ್ ಲಾಸ್’ ಕೃತಿಯು 2006ರಲ್ಲಿ ಬುಕರ್ ಪ್ರಶಸ್ತಿಯ ಜೊತೆಗೆ ರಾಷ್ಟ್ರೀಯ ಪುಸ್ತಕ ವಿಮರ್ಶಕರ ವೃತ್ತದ ಪ್ರಶಸ್ತಿಯನ್ನೂ ಗೆದ್ದಿತ್ತು.







