ಕಾಂಗ್ರೆಸ್‌ನ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಚುನಾವಣಾ ಆಯೋಗ (ಇಸಿಐ) ಆಡಳಿತಾರೂಢ ಬಿಜೆಪಿಗೆ ಪ್ರಯೋಜನವಾಗುವಂತೆ ‘ವೋಟ್ ಕಳ್ಳತನ’ದಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ. ವಿರೋಧ ಪಕ್ಷಗಳ ಸ್ವತಂತ್ರ ತನಿಖೆಯು ಕರ್ನಾಟಕದ ಲೋಕಸಭಾ ಕ್ಷೇತ್ರವೊಂದರಲ್ಲಿ ‘ನಿರ್ದಾಕ್ಷಿಣ್ಯ ಕಳ್ಳತನ’ವನ್ನು ಬಯಲಿಗೆಳೆದಿದೆ ಎಂದು ರಾಹುಲ್ ಗಾಂಧಿ ಆಗಸ್ಟ್ 1, 2025ರಂದು ಸಂಸತ್ ಆವರಣದಲ್ಲಿ ಮಾಧ್ಯಮದವರಿಗೆ ತಿಳಿಸಿದ್ದಾರೆ. “ನಮಗೆ 100% ಸಾಕ್ಷ್ಯವಿದೆ. ಆಯೋಗದ ಈ ಕೃತ್ಯ ರಾಷ್ಟ್ರದ್ರೋಹಕ್ಕೆ ಸಮಾನ. ತಪ್ಪಿತಸ್ಥರನ್ನು, ರಿಟೈರ್ ಆದರೂ, ಗುರುತಿಸಿ ಕಾನೂನಿನ ಮುಂದೆ ತರುತ್ತೇವೆ,” ಎಂದು ಎಚ್ಚರಿಕೆ ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಚುನಾವಣಾ ಆಯೋಗವು ಶುಕ್ರವಾರ ರಾಹುಲ್‌ರ ಆರೋಪಗಳನ್ನು ‘ಆಧಾರರಹಿತ’ ಎಂದು ತಿರಸ್ಕರಿಸಿದೆ. “ಕರ್ನಾಟಕದ 2024ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಒಂದೇ ಒಂದು ಅರ್ಜಿಯನ್ನೂ ಸಲ್ಲಿಸಲಿಲ್ಲ. ಚುನಾವಣಾ ಫಲಿತಾಂಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಿಲ್ಲ,” ಎಂದು ಆಯೋಗ ತಿಳಿಸಿದೆ. ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್, “ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿ ತಯಾರಿಸಲಾಗಿದ್ದು, ಕಾಂಗ್ರೆಸ್ ಸೇರಿ ಎಲ್ಲ ರಾಜಕೀಯ ಪಕ್ಷಗಳಿಗೆ ಒದಗಿಸಲಾಗಿತ್ತು,” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ | ಭಾರತದ ಆರ್ಥಿಕತೆ ‘ಸತ್ತಿದೆ’ : ರಾಹುಲ್ ಗಾಂಧಿ ತೀವ್ರ ಟೀಕೆ
ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಒಂದು ಕ್ಷೇತ್ರದಲ್ಲಿ 60,000ಕ್ಕೂ ಅಧಿಕ ಮತಗಳ ಕುಕೃತ್ಯಕ್ಕೆ ಸಾಕ್ಷ್ಯವಿದೆ,” ಎಂದು ರಾಹುಲ್‌ರ ಆರೋಪವನ್ನು ಬೆಂಬಲಿಸಿದ್ದಾರೆ. ಬಿಜೆಪಿಯ ಬಿ.ವೈ. ವಿಜಯೇಂದ್ರ, “ಕಾಂಗ್ರೆಸ್ ಕರ್ನಾಟಕದಲ್ಲಿ 136 ಶಾಸಕ ಸ್ಥಾನ ಗೆದ್ದಿದ್ದು ಆಯೋಗದ ಕೃಪೆಯಿಂದಲೇ ಎಂದಾದರೆ, ಈ ಆರೋಪ ತಮಾಷೆಯಲ್ಲವೇ?” ಎಂದು ವ್ಯಂಗ್ಯವಾಡಿದ್ದಾರೆ. ರಾಹುಲ್ ಗಾಂಧಿ ಆಗಸ್ಟ್ 5ರಂದು ಬೆಂಗಳೂರಿನಲ್ಲಿ ಪ್ರತಿಭಟನೆಯನ್ನು ಮುನ್ನಡೆಸಿ, ಆಯೋಗಕ್ಕೆ ಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.







