ಕಲಬುರಗಿಯಲ್ಲಿ ಪ್ರಧಾನಮಂತ್ರಿ ಮಿತ್ರಾ (PM MITRA) ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಜವಳಿ ಪಾರ್ಕ್‌ನ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಜವಳಿ, ಸಕ್ಕರೆ ಮತ್ತು ಕೃಷಿ ಉತ್ಪನ್ನ ಮಾರ್ಕೆಟಿಂಗ್ ಸಚಿವ ಶಿವಾನಂದ ಪಾಟೀಲ್ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ ಶಾಸಕ ಜಗದೇವ್ ಗುತ್ತೇದಾರ್ ಈ ಬಗ್ಗೆ ಪ್ರಶ್ನೆ ಕೇಳಿದ್ದರು. ಕಲಬುರಗಿಯಲ್ಲಿ ಜವಳಿ ಪಾರ್ಕ್ ಯಾವಾಗ ಆರಂಭವಾಗಲಿದೆ? 1,000 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಇದರಿಂದ ರೈತರು ಇತರ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಸರ್ಕಾರ ಇದನ್ನು ತಡೆಯಬೇಕು ಎಂದು ಗುತ್ತೇದಾರ್ ಒತ್ತಾಯಿಸಿದ್ದರು.
ಸಚಿವ ಶಿವಾನಂದ ಪಾಟೀಲ್, ಈ ಯೋಜನೆಯು ಕಲಬುರಗಿ ಜಿಲ್ಲೆಯ ಆರ್ಥಿಕತೆಯನ್ನು ಉತ್ತೇಜಿಸುವ ಜೊತೆಗೆ ರೈತರ ವಲಸೆಯನ್ನು ತಡೆಯಲಿದೆ ಎಂದು ತಿಳಿಸಿದ್ದಾರೆ. ಈ ಜವಳಿ ಪಾರ್ಕ್‌ಗಾಗಿ ಫಿರೋಜಾಬಾದ್, ನಡಿಸಿನ್ನೂರು ಮತ್ತು ಕಿರಣಗಿ ಗ್ರಾಮಗಳಲ್ಲಿ 1,550 ಎಕರೆ ಭೂಮಿಯನ್ನು ಕರ್ನಾಟಕ ಸರ್ಕಾರವು ಮೀಸಲಿಟ್ಟಿದೆ. ಈ ಯೋಜನೆಯು ₹1,834 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಸುಮಾರು ₹10,000 ಕೋಟಿ ಹೂಡಿಕೆಯನ್ನು ಆಕರ್ಷಿಸುವ ನಿರೀಕ್ಷೆಯಿದೆ.
ಕಲಬುರಗಿಯ ಜವಳಿ ಪಾರ್ಕ್‌ನ ಭೂಮಿಯನ್ನು 20232ರ ಆಗಸ್ಟ್‌ನಲ್ಲಿ 1,000ಎಕರೆಯಷ್ಟು ಜವಳಿ ಇಲಾಖೆಗೆ ಹಸ್ತಾಂತರಿಸಲು ಸಚಿವ ಪಾಟೀಲ್ ಅವರು ಕಲಬುರಗಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು. ಈ ಭೂಮಿಯ ಗಡಿಗಳನ್ನು ಗುರುತಿಸಿ, ಒತ್ತುವರಿ ರಕ್ಷಣೆಗಾಗಿ ಬೇಲಿ ಅಥವಾ ಗೋಡೆ ನಿರ್ಮಿಸಲು ಆದೇಶಿಸಲಾಗಿತ್ತು. 2023ರ ಮಾರ್ಚ್ 28ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲಬುರಗಿಯಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಕೇಂದ್ರ ಸರ್ಕಾರದಿಂದ ₹500 ಕೋಟಿ ಅನುದಾನವನ್ನು ಎರಡು ಹಂತಗಳಲ್ಲಿ ಒದಗಿಸಲಾಗುವುದು ಎಂದು ಘೋಷಿಸಲಾಗಿತ್ತು.
ಈ ಮೆಗಾ ಜವಳಿ ಪಾರ್ಕ್‌ನಿಂದ 1 ಲಕ್ಷ ನೇರ ಉದ್ಯೋಗಗಳು ಮತ್ತು 2 ಲಕ್ಷ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. 2024ರ ಸೆಪ್ಟೆಂಬರ್ 3ರಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ, ಕರ್ನಾಟಕ ಸರ್ಕಾರವು ಈ ಯೋಜನೆಗಾಗಿ ₹50ಕೋಟಿ ಬಜೆಟ್ ಮೀಸಲಿಟ್ಟಿದೆ ಎಂದು ಖರ್ಗೆ ದೃಢಪಡಿಸಿದ್ದಾರೆ. ಈ ಪಾರ್ಕ್‌ಗೆ ದಿನಕ್ಕೆ 16 ಮಿಲಿಯನ್ ಲೀಟರ್ ನೀರನ್ನು ಒದಗಿಸಲು ಮದ್ರಿ ಗ್ರಾಮದಲ್ಲಿ ಬ್ಯಾರೇಜ್ ನಿರ್ಮಾಣ, ಪಾರ್ಕ್‌ನಲ್ಲಿರುವ ಕೆರೆಯನ್ನು ಪುನಶ್ಚೇತನಗೊಳಿಸುವುದು ಮತ್ತು ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಸ್ಥಾಪಿಸುವ ಆಯ್ಕೆಗಳನ್ನು ಪರಿಶೀಲಿಸಲಾಗುತ್ತಿದೆ.
ಇದನ್ನೂ ಓದಿ | ಮುಂಗಾರು ಅಧಿವೇಶನದ ಬಳಿಕ BPL ಕಾರ್ಡ್ ಪರಿಷ್ಕರಣೆ: ಮುನಿಯಪ್ಪ
ಕಲಬುರಗಿ ಜವಳಿ ಪಾರ್ಕ್ ಯೋಜನೆಯು ಕೇಂದ್ರ ಸರ್ಕಾರದ PM MITRA ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರದ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ನಿರ್ಮಾಣವಾಗುತ್ತಿದೆ.







