ಧರ್ಮಸ್ಥಳದಲ್ಲಿ ನಡೆಯುತ್ತಿರುವ ಷಡ್ಯಂತರದ ಹಿಂದೆ ತಮಿಳುನಾಡು ಕಾಂಗ್ರೆಸ್ ಸಂಸದ ಮತ್ತು ದಕ್ಷಿಣ ಕನ್ನಡದ ಮಾಜಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರ ಕೈವಾಡವಿದೆ ಎಂದು ಬಿಜೆಪಿ ನಾಯಕ ಗಾಲಿ ಜನಾರ್ಧನ ರೆಡ್ಡಿ ಆಗಸ್ಟ್ 18, 2025ರಂದು ಆರೋಪಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸೆಂಥಿಲ್ ಮೂಲಕ ಈ ಪ್ರಕರಣವನ್ನು ಮಾಡಿಸುತ್ತಿದ್ದಾರೆ ಎಂದು ಹೇಳಿದರು. ದೂರುದಾರನು ಮುಸುಕುಧಾರಿ ಮತ್ತು ತಮಿಳುನಾಡು ಮೂಲದವನು ಎಂದು ರೆಡ್ಡಿ ತಿಳಿಸಿದ್ದಾರೆ. ಆತನಿಗೂ ಸೆಂಥಿಲ್ಗೂ ನಂಟಿದೆ ಎಂದು ಆರೋಪಿಸಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿಯಿಂದ ಸತ್ಯ ಬಯಲಾಗದು, ರಾಜ್ಯ ಸರ್ಕಾರದ ಸಂಸ್ಥೆಗಳಿಂದ ನ್ಯಾಯ ಸಿಗದು ಎಂದು ಹೇಳಿದ ಅವರು, ಸಿಬಿಐ ಮತ್ತು ಎನ್ಐಎ ತನಿಖೆಗೆ ಒತ್ತಾಯಿಸಿದ್ದಾರೆ. ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗುತ್ತೇನೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಧರ್ಮಸ್ಥಳದ ಬಗ್ಗೆ ದುಷ್ಟ ಎಡಪಂಥೀಯ ಶಕ್ತಿಗಳಿಂದ ಅಪಪ್ರಚಾರ ನಡೆಯುತ್ತಿದೆ ಎಂದು ರೆಡ್ಡಿ ಆರೋಪಿಸಿದರು. ಎಡಪಂಥೀಯ ಮನೋಭಾವನೆಯ ದುಷ್ಟ ಶಕ್ತಿಗಳು ಸೇರಿಕೊಂಡಿವೆ. ಹಿಂದೂ ಪುಣ್ಯಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಹುನ್ನಾರ ನಡೆದಿದೆ. 13 ಸ್ಥಳಗಳಲ್ಲಿ ಹೆಣಗಳನ್ನು ಹೂತಿಟ್ಟಿದ್ದ ಎಂಬುದು ಬೋಗಸ್ ಆಗಿದೆ. ಸೆಂಥಿಲ್ ಕಾಂಗ್ರೆಸ್ ಹೈಕಮಾಂಡ್ಗೆ ರೈಟ್ ಹ್ಯಾಂಡ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ | ಅನನ್ಯಾ ಭಟ್ ಎಂದು ನಕಲಿ ಫೋಟೋ ತೋರಿಸಿದ ತಾಯಿ ಸುಜಾತ ?
ಧರ್ಮಸ್ಥಳದ ನೇತ್ರಾವತಿ ನದಿ ತೀರದ ಕಾಡಿನಲ್ಲಿ ಸಾಮೂಹಿಕ ಶವಗಳನ್ನು ಹೂತಿರುವ ಆರೋಪದ ಪ್ರಕರಣದಲ್ಲಿ ಎಸ್ಐಟಿ ತನಿಖೆ ನಡೆಯುತ್ತಿದ್ದು, ದೂರುದಾರನು ತಪ್ಪು ಹೇಳಿಕೆ ನೀಡಲು ಒತ್ತಡಕ್ಕೊಳಗಾಗಿದ್ದನೆಂದು ಮಾಧ್ಯಮಗಳಲ್ಲಿ ವರದಿಗಳು ಬಂದಿದ್ದವು. ಆದರೆ, ಎಸ್ಐಟಿ ಇದನ್ನು ನಿರಾಕರಿಸಿದೆ. ಈ ಆರೋಪಗಳು ರಾಜಕೀಯವಾಗಿ ತೀವ್ರಗೊಂಡಿವೆ, ಮತ್ತು ನ್ಯಾಯಾಲಯದ ಮೂಲಕ ನ್ಯಾಯ ಕೋರಲು ರೆಡ್ಡಿ ನಿರ್ಧರಿಸಿದ್ದಾರೆ.







