ಕರ್ನಾಟಕದಲ್ಲಿ ಧರ್ಮಸ್ಥಳ ದೇವಸ್ಥಾನದ ಸುತ್ತಲಿನ ವಿವಾದಾತ್ಮಕ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಸುಜಾತ ಭಟ್ ಅವರು ತಮ್ಮ ಮಗಳು ಅನನ್ಯಾ ಭಟ್ ಎಂದು ಹೇಳಿಕೊಂಡು ಬಳಸುತ್ತಿರುವ ಫೋಟೋ ವಾಸಂತಿ ಎಂಬ ಮಹಿಳೆಯದ್ದು ಎಂದು ಆಕೆಯ ಸಹೋದರ ವಿಜಯ್ ಆರೋಪಿಸಿದ್ದಾರೆ. ಪಬ್ಲಿಕ್ ಟಿವಿ ಮತ್ತು ಇತರ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯ್, ತಮ್ಮ ತಂಗಿ ವಾಸಂತಿಯ ಫೋಟೋವನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಆಘಾತ ವ್ಯಕ್ತಪಡಿಸಿದ್ದಾರೆ. ವಾಸಂತಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವಳಲ್ಲ, ಆಕೆ ಕೊಡವ ಸಮಾಜದವಳು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣ ಧರ್ಮಸ್ಥಳದಲ್ಲಿ ಸಾಮೂಹಿಕ ಸಮಾಧಿ ಆರೋಪಗಳ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿದ್ದು, ಸುಜಾತ ಭಟ್ ಅವರು ತಮ್ಮ ಮಗಳು ಅನನ್ಯಾ ಧರ್ಮಸ್ಥಳದಲ್ಲಿ ಕಣ್ಮರೆಯಾಗಿದ್ದಾಳೆ ಎಂದು ಆರೋಪಿಸಿ ಫೋಟೋ ಬಿಡುಗಡೆ ಮಾಡಿದ್ದರು. ಆದರೆ, ಈ ಫೋಟೋ ವಾಸಂತಿಯದ್ದು ಎಂದು ಬಹಿರಂಗವಾಗಿದೆ. ವಿಜಯ್ ಅವರು, ತಮ್ಮ ತಂಗಿಯ ಚಿತ್ರವನ್ನು ನೋಡಿ ಕುಟುಂಬದವರು ಆಘಾತಕ್ಕೊಳಗಾಗಿದ್ದೇವೆ ಎಂದು ಹೇಳಿದ್ದಾರೆ. ಸುಜಾತ ಭಟ್ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಅವರು ಘೋಷಿಸಿದ್ದಾರೆ.
ಯಾರು ಈ ವಾಸಂತಿ?
ವಾಸಂತಿಯವರು ಶ್ರೀವತ್ಸ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಒಂದೇ ತಿಂಗಳಲ್ಲಿ ವಿರಾಜಪೇಟೆಗೆ ಬಂದಿದ್ದರು. ನಂತರ, ಕೆದ್ದಮುಳ್ಳುರು ಗ್ರಾಮದ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಪರಿಚಿತ ಶವ ಪತ್ತೆಯಾದ ನಂತರ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಶವದ ಬಟ್ಟೆ ಮತ್ತು ಮುಖದ ಗುರುತುಗಳಿಂದ ವಾಸಂತಿ ಎಂದು ದೃಢಪಟ್ಟಿತ್ತು ಎಂದು ವಿಜಯ್ ವಿವರಿಸಿದ್ದಾರೆ. ಶ್ರೀವತ್ಸ 2015ಲ್ಲಿ ನಿಧನರಾದರು.
ಇದನ್ನೂ ಓದಿ | ಧರ್ಮಸ್ಥಳ ಪ್ರಕರಣಕ್ಕೆ ಇಡಿ ತನಿಖೆ ಆಗ್ರಹ: ಕೋಟ, ಅಮಿತ್ ಶಾಗೆ ಪತ್ರ
ಈ ಫೋಟೋ ದುರ್ಬಳಕೆಯ ಹಿಂದೆ ದೊಡ್ಡ ಸಂಚು ಇದೆ ಎಂದು ಆರೋಪಗಳಿವೆ. ಸುಜಾತ ಭಟ್ ಬೆಂಗಳೂರಿನ ಕೆಂಗೇರಿಯ ರಂಗಪ್ರಸಾದ್ ಅವರೊಂದಿಗೆ ಸಹಜೀವನ ನಡೆಸುತ್ತಿದ್ದರು. ವಾಸಂತಿ ರಂಗಪ್ರಸಾದ್ ಅವರ ಸೊಸೆಯಾಗಿದ್ದಳು. ಸುಜಾತ ಅವರು ರಂಗಪ್ರಸಾದ್ ಮನೆಯಿಂದ ವಾಸಂತಿಯ ಕಾಲೇಜು ದಿನಗಳ ಫೋಟೋವನ್ನು ಕದ್ದು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.







