ಕರ್ನಾಟಕದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ತಾನು ಸ್ಪರ್ಧಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಸ್ಟ್ 23, 2025ರಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವುದನ್ನು ಖಚಿತಪಡಿಸುತ್ತೇನೆ ಎಂದು ಹೇಳಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ನಾನು ಮುಂದಿನ ಸಿಎಂ ರೇಸ್‌ನಲ್ಲಿ ಇರುವುದಿಲ್ಲ. ಆದರೆ ನಮ್ಮ ಮತಗಳು ನಿಮಗೆ ಬರುವುದಿಲ್ಲ. ನೀವು ದಲಿತ ವಿರೋಧಿ, ಒಬಿಸಿ ವಿರೋಧಿ ಮತ್ತು ಅಲ್ಪಸಂಖ್ಯಾತ ವಿರೋಧಿಗಳು. ಬಿಜೆಪಿ ಮತ್ತು ಜೆಡಿಎಸ್ ಒಂದಾದರೂ ಕಾಂಗ್ರೆಸ್‌ನ 141 ಸೀಟುಗಳು ಕಡಿಮೆಯಾಗುವುದಿಲ್ಲ” ಎಂದು ಹೇಳಿದರು.
ಯತ್ನಾಳ್ ಅವರು ಸಿದ್ದರಾಮಯ್ಯ ಸಿಎಂ ರೇಸ್‌ನಲ್ಲಿ ಇಲ್ಲದಿದ್ದರೆ ಕಾಂಗ್ರೆಸ್ ಮತಗಳು ವಿರೋಧ ಪಕ್ಷಗಳಿಗೆ ಹೋಗುತ್ತವೆ ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಹೋರಾಡಿದರೂ ಕಾಂಗ್ರೆಸ್ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯತ್ನಾಳ್ ಅವರು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರನ್ನು ಹಿಂದೆ ದೇವೇಗೌಡರು ಉಚ್ಚಾಟಿಸಿದ್ದರು, ಆದರೆ ಅವರು ಸಿಎಂ ಆದರು. ನಾನೂ ಸಿಎಂ ಆಗುತ್ತೇನೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಹೇಳಿಕೆ ಕರ್ನಾಟಕ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. 2028ರ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದ್ದರೂ, ಸಿದ್ದರಾಮಯ್ಯ ಅವರ ನಿರ್ಧಾರ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಸೂಚನೆ ನೀಡಿದೆ. ಡಿ.ಕೆ. ಶಿವಕುಮಾರ್ ಅವರು ಸಿಎಂ ಹುದ್ದೆಗೆ ಪ್ರಬಲ ಸ್ಪರ್ಧಿಯಾಗಿದ್ದು, ಪಕ್ಷದಲ್ಲಿ ಗುಂಪುಗಾರಿಕೆಯ ಆರೋಪಗಳು ಕೇಳಿಬರುತ್ತಿವೆ. ಈ ಬಾರಿ ಪೂರ್ಣಾವಧಿಯ ಸಿಎಂ ಆಗಿ ಸಿದ್ದು ಮುಂದುವರೆದು ಮುಂದಿನ ಬಾರಿ ಡಿಕೆಶಿಗೆ ಸಿಎಂ ಅಭ್ಯರ್ಥಿಯನ್ನಾಗಿ ಮಾಡುವದಾಗಿ ಹೇಳಿದೆಯಾ ಕಾಂಗ್ರೇಸ್ ಹೈಕಮಾಂಡ್ ಎನ್ನುವದು ಅನುಮಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ | ಸಿದ್ದು V/S ಯತ್ನಾಳ್: ವಿಧಾನಸಭೆಯ ಉಚ್ಚಾಟನೆ ಜಗಳ ವೈರಲ್
ಸಿದ್ದರಾಮಯ್ಯ ಅವರು ತಮ್ಮ ಪೂರ್ಣಾವಧಿ ಪೂರೈಸುವುದಾಗಿ ಹೇಳಿದ್ದರೂ, ಮುಂದಿನ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯಾಗಿ ಕಾಣದಿರುವುದು ಪಕ್ಷಕ್ಕೆ ಹೊಸ ನಾಯಕತ್ವದ ಹುಡುಕಾಟಕ್ಕೆ ದಾರಿಮಾಡಬಹುದು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ 2023ರ ಚುನಾವಣೆಯಲ್ಲಿ ವಿಫಲವಾಗಿದ್ದರೂ, ಮುಂದಿನ ಚುನಾವಣೆಯಲ್ಲಿ ಅದು ಮುಂದುವರಿಯಬಹುದು ಎಂದು ಯತ್ನಾಳ್ ಸೂಚಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಿನ ಭಿನ್ನಾಭಿಪ್ರಾಯಗಳು ಇದರಿಂದ ಮತ್ತಷ್ಟು ತೀವ್ರಗೊಳ್ಳಬಹುದು.







