“ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಅಥವಾ ನಾನು ಪ್ರಸ್ತಾವ ಮಾಡಬೇಕು. ನಾವಿಬ್ಬರೂ ಪ್ರಸ್ತಾವ ಮಾಡಲಿಲ್ಲವಾದರೆ ಅದು ಗಾಳಿ ಸುದ್ದಿ. ಆತುರದಲ್ಲಿರುವವರು ಮಾಧ್ಯಮಗಳ ಮುಂದೆ ಮಾತನಾಡುತ್ತಾರೆ. ಏನೇ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದ ರಾಜಕೀಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಕೂಗು ಜೋರಾಗಿವೆ. ಲಾಲ್‌ಬಾಗ್‌ನಲ್ಲಿ ನಾಗರಿಕರೊಂದಿಗಿನ ನಡಿಗೆ ಮತ್ತು ಸಂವಾದದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ, ಈ ವದಂತಿಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ.
ಶನಿವಾರ ಬೆಳಿಗ್ಗೆ 7ಗಂಟೆಗೆ ಆರಂಭವಾದ ‘ವಾಕ್ ವಿಥ್ ಬೆಂಗಳೂರು’ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಅವರು ಲಾಲ್‌ಬಾಗ್‌ನಲ್ಲಿ 100ಕ್ಕೂ ಹೆಚ್ಚು ನಾಗರಿಕರೊಂದಿಗೆ ನಡೆದರು. ಟನಲ್ ರಸ್ತೆಯ ಆತಂಕ, ಕಸದ ಸಮಸ್ಯೆ, ಪಾರ್ಕಿಂಗ್ ಕಷ್ಟ ದಂತಹ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಿದರು.
ವಿಶೇಷವಾಗಿ, ನಾಗರಿಕರಿಗೆ ಟನಲ್ ರಸ್ತೆಯಿಂದ ಲಾಲ್‌ಬಾಗ್‌ಗೆ ಧಕ್ಕೆಯಾಗುವ ಭಯವನ್ನು ದೂರಮಾಡಿದ ಡಿಕೆಶಿ “ಇದು ನನ್ನ ಭರವಸೆ; ಟನಲ್ ರಸ್ತೆ ಲಾಲ್‌ಬಾಗ್‌ನ ಮೇಲೆ ಅಥವಾ ಕೆಳಗೆ ಹೋಗುವುದಿಲ್ಲ. ಅದು ಬೆಟ್ಟದ ಕೆಳಗೆ ಹೋಗಿ ಹೊರಬರುತ್ತದೆ” ಎಂದು ಭರವಸೆ ನೀಡಿದರು. ಇದಲ್ಲದೆ, ಲಾಲ್‌ಬಾಗ್ ಅಭಿವೃದ್ಧಿಗೆ 10ಕೋಟಿ ರೂಪಾಯಿಗಳ ಅನುದಾನ ಘೋಷಿಸಿ, ರೋಸ್ ಗಾರ್ಡನ್ ಅಭಿವೃದ್ಧಿ, ಉಚಿತ ಶೌಚಾಲಯಗಳು, ಡಾಕ್ಟರ್ ಮತ್ತು ಆಂಬುಲೆನ್ಸ್ ಸೌಲಭ್ಯಗಳನ್ನು ಒದಗಿಸುವ ಯೋಜನೆಯನ್ನು ತಿಳಿಸಿದರು.
ಕಸದ ಮಹಾಮಾರಿ ಬಗ್ಗೆ ಮಾತನಾಡುತ್ತಾ, “ಇದು ದೊಡ್ಡ ಮಾಫಿಯಾ. ಆದರೆ ನಾನು ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸುತ್ತೇನೆ” ಎಂದು ಹೇಳಿದ ಅವರು, ದೂರದ ಗ್ರಾಮಗಳಂತೆ ಬೆಂಗಳೂರಿನಲ್ಲೂ ಹಸಿರು ಉದ್ಯಾನಗಳನ್ನು ಹೆಚ್ಚಿಸುವ ಯೋಜನೆಯ ಬಗ್ಗೆಯೂ ಚರ್ಚಿಸಿದರು. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರೊಂದಿಗೆ ಚರ್ಚಿಸಿ ಹಸಿರು ಪ್ರದೇಶಗಳನ್ನು ವಿಸ್ತರಿಸುವುದಾಗಿ ತಿಳಿಸಿದರು. ಎಲ್ಲ ಸಮಸ್ಯೆಗಳಿಗೂ ಅಧಿಕಾರಿಗಳು ನಾಗರಿಕರ ವಿವರಗಳನ್ನು ದಾಖಲಿಸಿ ಪರಿಹಾರ ನೀಡುವಂತೆ ಸೂಚನೆ ನೀಡಿದರು.
ರಾಜಕೀಯ ವಲಯದಲ್ಲಿ ಸಂಪುಟ ಪುನರ್ರಚನೆಯ ವದಂತಿಗಳು ಬಿಹಾರ ಚುನಾವಣೆಗಳ ನಂತರ ನವೆಂಬರ್‌ನಲ್ಲಿ ಆಗುತ್ತದೆ ಎನ್ನುವ ಕೂಗು ಜೋರಾಗಿವೆ. ಸಿದ್ದರಾಮಯ್ಯ ಸರ್ಕಾರದ 2.5 ವರ್ಷಗಳ ಅವಧಿ ಮುಗಿಯುತ್ತಿರುವುದರಿಂದ, ಸುಮಾರು 15 ಹೊಸ ಮುಖಗಳನ್ನು ಸೇರಿಸಿ 50% ಸಚಿವರನ್ನು ಬದಲಾಯಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳುತ್ತಿವೆ. ಆದರೆ ಶಿವಕುಮಾರ್ “ಯಾವ ಸಂಪುಟ ವಿಸ್ತರಣೆಯೂ ಇಲ್ಲ, ಅಧಿಕಾರವೂ ಇಲ್ಲ. ಮಾಧ್ಯಮಗಳು ಗಾಳಿ ಸುದ್ದಿ ಪ್ರಕಟಿಸುತ್ತಿವೆ” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ | “ಜಾರಕಿಹೊಳಿ-ಮಹದೇವಪ್ಪ ಭೇಟಿ ರಾಜಕೀಯವಲ್ಲ”: ಪರಮೇಶ್ವರ್ ಸ್ಪಷ್ಟನೆ
ಇದೇ ರೀತಿ, ಡಾ. ಜಿ. ಪರಮೇಶ್ವರ್ ಸಹ “ಪುನರ್ರಚನೆಯ ಬಗ್ಗೆ ಮುಖ್ಯಮಂತ್ರಿಯನ್ನು ಕೇಳಿ” ಎಂದು ಹೇಳಿ, ಔತಣಕೂಟವು ಸಹಜ ಚರ್ಚೆಗೆ ಮಾತ್ರ ಎಂದು ಸ್ಪಷ್ಟಪಡಿಸಿದರು. ಅಕ್ಟೋಬರ್ 13ರಂದು ನಡೆಯುವ ಸಚಿವರ ಔತಣಕೂಟವು ಈ ವದಂತಿಗಳಿಗೆ ಹೊಸ ತಿರುವು ನೀಡಬಹುದು ಎಂದು ರಾಜಕೀಯ ವಿಶ್ಲೇಷಕರು ಭಾವಿಸುತ್ತಾರೆ.







