ಉತ್ತರ ಕರ್ನಾಟಕದ ಪ್ರಸಿದ್ಧ ಹಾಸ್ಯನಟ ಮತ್ತು ವೃತ್ತಿಪರ ರಂಗಭೂಮಿ ಕಲಾವಿದ ರಾಜು ತಾಳಿಕೋಟೆ (ಮೂಲ ಹೆಸರು: ರಾಜೇಸಾಬ್ ಮಕ್ತುಮಸಾಬ್ ಯಂಕಚಿ) ಅವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.
46 ವರ್ಷ ವಯಸ್ಸಿನ ಅವರು ಉಡುಪಿಯಲ್ಲಿ ಸಿನಿಮಾವೊಂದರ ಚಿತ್ರೀಕರಣ ಮುಗಿಸಿ ಕೋಣೆಯಲ್ಲಿ ಮಲಗಿದ್ದಾಗ ಹಾರ್ಟ್ ಅಟ್ಯಾಕ್ ಆಗಿದೆ. ಕೂಡಲೇ ಅವರನ್ನು ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಅವರ ನಿಧನದಿಂದ ಕನ್ನಡ ಚಿತ್ರರಂಗ ಮತ್ತು ರಂಗಭೂಮಿ ವಲಯ ಶೋಕದಲ್ಲಿ ಮುಳುಗಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾದ ರಾಜು ತಾಳಿಕೋಟೆ ಅವರು, ಬಾಲ್ಯದಿಂದಲೇ ರಂಗಭೂಮಿಗೆ ಒಡ್ಡಿಕೊಂಡಿದ್ದರು. ತಂದೆ ಮಕ್ತುಮಸಾಬ್ ಯಂಕಚಿ ಅವರ ಸ್ಥಾಪಿಸಿದ ‘ಖಾಸ್ಗತೇಶ್ವರ್ ನಾಟಕ ಮಂಡಳಿ’ಯಲ್ಲಿ 7ವರ್ಷ ವಯಸ್ಸಿನಿಂದಲೇ ಚಿತ್ರಹಸ್ತರಾಗಿ ಆರಂಭಿಸಿದ ಅವರು, ಕುಡುಕನ ಪಾತ್ರಗಳ ಮೂಲಕ ಉತ್ತರ ಕರ್ನಾಟಕದ ರಂಗಭೂಮಿಯಲ್ಲಿ ಮನೆಮಾತಾಗಿದ್ದರು.
ಇದನ್ನೂ ಓದಿ | ಹಿರಿಯ ನಟ, ಕಲಾ ನಿರ್ದೇಶಕ ದಿನೇಶ್ ಮಂಗಳೂರು ನಿಧನ
35ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳನ್ನು ನಿರ್ವಹಿಸಿ, ‘ಪಂಚರಂಗಿ’, ‘ಟೋಪಿವಾಲ’, ‘ಜಾಕಿ’, ‘ಬಹದ್ದೂರ್’ ಮತ್ತು ‘ಭರ್ಜರಿ’ಯಂತಹ ಚಿತ್ರಗಳಲ್ಲಿ ಅವರ ಹಾಸ್ಯ ಚಮತ್ಕಾರ ಜನಪ್ರಿಯವಾಗಿತ್ತು. 2019ರಲ್ಲಿ ಬಿಗ್ ಬಾಸ್ ಕನ್ನಡ ಸೀಸನ್-7ರಲ್ಲಿ ಭಾಗವಹಿಸಿ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದರು. ರಾಜು ತಾಳಿಕೋಟೆ ಅವರ ನಿಧನ ಸುದ್ದಿ ತಿಳಿದು ಕನ್ನಡ ಚಿತ್ರರಂಗದ ಗಣ್ಯರು, ಸಹನಟರು ಮತ್ತು ಅಭಿಮಾನಿಗಳು ಆಘಾತಕ್ಕೀಡಾಗಿದ್ದಾರೆ.







