ಕರ್ನಾಟಕದ 6.77 ಕೋಟಿ ಜನಸಂಖ್ಯೆಯನ್ನು ಜಾತಿ ಆಧಾರದಲ್ಲಿ ಗುರುತಿಸುವ ಈ ಸಮೀಕ್ಷೆ, ರಾಜ್ಯದ ಭವಿಷ್ಯವನ್ನು ಹೇಗೆ ಬದಲಾಯಿಸುತ್ತದೆ? ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ನಡೆಯಬೇಕಿದ್ದ ಜಾತಿ ಜನಗಣತಿ (ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ಈಗ ಅಕ್ಟೋಬರ್ 31ರವರೆಗೆ ವಿಸ್ತರಿಸಲ್ಪಟ್ಟಿದೆ. ಈ ಸಮೀಕ್ಷೆಯು ರಾಜ್ಯದಲ್ಲಿ ಜಾತಿ, ಶಿಕ್ಷಣ, ಆರ್ಥಿಕ ಸ್ಥಿತಿ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ನಿಖರ ಡೇಟಾವನ್ನು ಸಂಗ್ರಹಿಸುತ್ತದೆ. ಆದರೆ, ತಾಂತ್ರಿಕ ತೊಡಕುಗಳು, ರಾಜಕೀಯ ವಿರೋಧ ಮತ್ತು ಸಾಮಾನ್ಯರ ಸವಾಲುಗಳ ನಡುವೆ, ಈ ಸಮೀಕ್ಷೆಯು ಸಾಮಾನ್ಯರ ಜೀವನಗಳಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದು ಮುಖ್ಯ.
ತಾಂತ್ರಿಕ ತೊಡಕುಗಳು ಮತ್ತು ರಾಜಕೀಯ ವಿವಾದಗಳು
ಸಮೀಕ್ಷೆಯು ವಿವಿಧ ಸವಾಲುಗಳನ್ನು ಎದುರಿಸಿದೆ. ತಾಂತ್ರಿಕ ದೋಷಗಳು ಮತ್ತು ಸರ್ವರ್ ಸಮಸ್ಯೆಗಳು ಒಂದು ಕಡೆಯಾದರೆ ಬಿಜೆಪಿ ಈ ಸಮೀಕ್ಷೆಯನ್ನು ರಾಜಕೀಯಗೊಳಿಸಿ ಹಿಂದೂ ಸಮಾಜವನ್ನು ವಿಭಜಿಸುತ್ತದೆ ಎಂದು ಅಪಪ್ರಚಾರಗೊಳಿಸಿ ಜನರನ್ನು ಪಾಳ್ಗೊಳ್ಳದಂತೆ ಮಾಡಿದ್ದು ಇನ್ನಷ್ಟು ವಿಳಂಬಗೊಳಿಸಿದೆ. ಉದಾಹರಣೆಗೆ, ಶಿವಮೊಗ್ಗದಲ್ಲಿ BJP ನಾಯಕರು ಸಮೀಕ್ಷೆಯನ್ನು ಬಹಿಷ್ಕರಿಸಿದ್ದಾರೆ. ಆದರೂ ರಾಜ್ಯದ ಶೇ.91 ಪ್ರಗತಿ ಸಾಧ್ಯವಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.ಆಡಳಿತಾತ್ಮಕ ವಲಯದ ಕಾರ್ಯವಾಗಿರುವ ಈ ಸಮೀಕ್ಷೆಯಲ್ಲಿ ಜನಪ್ರತಿನಿಧಿಗಳೆನಿಸಿಕೊಂಡವರು ಭಾಗವಹಿಸಿ ಜನರನ್ನು ಈ ಕಾರ್ಯಕ್ಕೆ ಭಾಗವಹಿಸುವಂತೆ ಪ್ರೇರೆಪಿಸಬೇಕಿತ್ತು ಎನ್ನುವ ಮಾತು ಪ್ರಜ್ಞಾವಂತ ವಲಯಗಳಲ್ಲಿ ಕೇಳಿಬರುತ್ತಿದೆ.
ಅಕ್ಟೋಬರ್ 18ರ ವರೆಗೆ, ರಾಜ್ಯದ ಶೇ.85 ಮನೆಗಳು (ಸುಮಾರು 1.09 ಕೋಟಿ ಮನೆಗಳು) ಭಾಗಿಯಾಗಿ ಈ ಸಮೀಕ್ಷೆಯನ್ನು ಪೂರ್ಣಗೊಳಿಸಿವೆ. ಆದರೆ ಬೆಂಗಳೂರಿನಲ್ಲಿ ಕೇವಲ ಶೇ.45ಕ್ಕೆ ಸೀಮಿತವಾಗಿದೆ. ಇದಕ್ಕೆ ವೈಯಕ್ತಿಕ ಮಾಹಿತಿಯ ಗೌಪ್ಯತೆಯ ಆತಂಕಗಳು ಮತ್ತು 60 ಪ್ರಶ್ನೆಗಳ ದೀರ್ಘ ಪಟ್ಟಿಯು ನಗರ ನಿವಾಸಿಗಳನ್ನು ದೂರವಿಡುತ್ತಿದೆ. ಈ ಸವಾಲುಗಳು ಸಮೀಕ್ಷೆಯ ಯಶಸ್ಸನ್ನು ಪ್ರಶ್ನಿಸುತ್ತಿವೆ, ಆದರೆ ಅದು ಸಾಮಾಜಿಕ ನ್ಯಾಯಕ್ಕೆ ಮಾರ್ಗ ಸುಗಮಗೊಳಿಸುತ್ತದೆ ಎನ್ನುವ ನಂಬಿಕೆಯಿದೆ.
ಇದನ್ನೂ ಓದಿ | ಮತ್ತೆ ಮುನ್ನೆಲೆಗೆ ಬಂದ ಭಾರತೀಯ ಚುನಾವಣಾ ವ್ಯವಸ್ಥೆಯ ವೈಫಲ್ಯ
ಸಾಮಾಜಿಕ ನ್ಯಾಯದ ಹೊಸ ಹಾದಿ
ಸರ್ಕಾರವು ಈ ಸಮೀಕ್ಷೆಗೆ ರೂ.420 ಕೋಟಿ ವೆಚ್ಚ ಮಾಡಿದ್ದು, ಇದು 2015ರ ಸಮೀಕ್ಷೆಗಿಂತ ದ್ವಿಗುಣ (ರೂ.165 ಕೋಟಿ). ಈ ಡೇಟಾವು OBC ಜನಸಂಖ್ಯೆಯನ್ನು 70% ಎಂದು ಗುರುತಿಸುತ್ತದೆ, ಇದರಿಂದ ರಿಜರ್ವೇಷನ್‌ನ್ನು 32%ಯಿಂದ 51%ಗೆ ಹೆಚ್ಚಿಸುವ ಸಾಧ್ಯತೆಯಿದೆ. ಮುಸ್ಲಿಂ ಜನಸಂಖ್ಯೆ 18.08% ಆಗಿದ್ದು, ಅವರಿಗೆ 8% ರಿಜರ್ವೇಷನ್ ಸಿಗಬಹುದು. ST ಜನಸಂಖ್ಯೆ ಸುಮಾರು 42.49 ಲಕ್ಷ (ಶೇ.6.95). ಈ ಡೇಟಾ 2026ರ ಬಜೆಟ್‌ಗೆ ಆಧಾರವಾಗಿ, ಕಲ್ಯಾಣ ಯೋಜನೆಗಳನ್ನು ಸುಧಾರಿಸುತ್ತದೆ. ಈ ಸಮೀಕ್ಷೆಯು ಜಾತಿ ಆಧಾರಿತ ನೀತಿಗಳನ್ನು ದೃಢಪಡಿಸಿ, ಸಮಾನತೆಯನ್ನು ಖಾತರಿಪಡಿಸುತ್ತದೆ. ಆದರೆ, ದೇಶೀಯ ಸಮೀಕ್ಷೆಯಂತೆ, ಇದು ರಾಜಕೀಯ ಘರ್ಷಣೆಗಳನ್ನು ಹೆಚ್ಚಿಸಬಹುದು.







