ಭಾರತ ಚುನಾವಣೆ ವ್ಯವಸ್ಥೆಯ ಮೇಲೆ ವೋಟ್ ಚೋರಿ ಆರೋಪವು ಆಗಾಗ ಕೇಳಿಬರುತ್ತದೆ. ಆದರೆ ಇದೀಗ ಕಲಬುರಗಿ ಜಿಲ್ಲೆಯ ಆಳಂದ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಇತ್ತೀಚಿನ ವೋಟ್ ಚೋರಿ ಸಂಬಂಧಿತ ಎಸ್‌ಐಟಿ ತನಿಖೆಯು ಈ ಸತ್ಯವನ್ನು ಮತ್ತೊಮ್ಮೆ ಬಯಲಿಗೆಳೆದಿದೆ.
ಸೆಪ್ಟೆಂಬರ್ 18ರಂದು ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ರಾಹುಲ್ ಗಾಂಧಿಯವರು ಆಳಂದ್ ಕ್ಷೇತ್ರದ ಡೇಟಾವನ್ನು ತೋರಿಸಿ, 6,018 ಅರ್ಜಿಗಳಲ್ಲಿ 5,994 ಅಕ್ರಮವಾಗಿದ್ದವು ಎಂದು ಬಹಿರಂಗಪಡಿಸಿದರು. ಇದರ ತನಿಖೆಯನ್ನು ನಡೆಸಲು ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ರಚಿಸಿದ ಪೊಲೀಸ್‌ನ ವಿಶೇಷ ತನಿಖಾ ತಂಡ (SIT) ರಚಿಸಿದ್ದು, ಇದೀಗ ತನಿಖಾ ತಂಡ ವೋಟ್ ಚೋರಿಗೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿಗಳನ್ನು ಅಕ್ಟೋಬರ್ 22, 2025ರಂದು ಬಹಿರಂಗಪಡಿಸಿದೆ.
ವರದಿಯಲ್ಲಿ ಏನಿದೆ?
ವಿಶೇಷ ತನಿಖಾ ತಂಡ ಸಲ್ಲಿಸಿದ ಅರ್ಜಿಯಲ್ಲಿ, ಕರ್ನಾಟಕದ ಆಳಂದ್ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆಗೂ ಮುಂಚೆ, ಡಿಸೆಂಬರ್ 2022ರಿಂದ ಫೆಬ್ರುವರಿ 2023ರವರೆಗೆ, 6,018 ಮತದಾರರ ಹೆಸರುಗಳನ್ನು ಅಳಿಸಿಹಾಕಲು ಅಕ್ರಮ ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಕೇವಲ 24 ಅರ್ಜಿಗಳು ನಿಜವಾದವುಗಳು, ಉಳಿದ 5,994 ಸಂಪೂರ್ಣ ಸುಳ್ಳು ಅರ್ಜಿಗಳು. ಈ ಅರ್ಜಿಗಳನ್ನು ಫಾರ್ಮ್-7 ಮೂಲಕ ಸಲ್ಲಿಸಲಾಗಿತ್ತು, ಆದರೆ, ಇದು ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆಯಲು ಬಳಸುವ ದಾಖಲೆಯಾಗಿದೆ.
ಕಲಬುರಗಿ ಜಿಲ್ಲೆಯ ಒಂದು ಡೇಟಾ ಸೆಂಟರ್‌ನಿಂದ ಈ ಅರ್ಜಿಗಳನ್ನು ಸಲ್ಲಿಸಲಾಗಿತ್ತು, ಅಲ್ಲಿ ಮೊಹಮ್ಮದ್ ಅಕ್ರಮ್ ಮತ್ತು ಅಷ್ಫಾಕ್ ಎಂಬವರು ಕಾರ್ಯನಿರ್ವಹಿಸುತ್ತಿದ್ದರು. ಪ್ರತಿ ಅಕ್ರಮ ಅರ್ಜಿಗೆ ₹80 ಪಾವತಿ ಮಾಡಲಾಗಿತ್ತು, ಇದರಿಂದ ಒಟ್ಟು ₹4.8 ಲಕ್ಷ ಖರ್ಚಾಗಿದೆ. 75 ಮೊಬೈಲ್ ಸಂಖ್ಯೆಗಳನ್ನು ಬಳಸಿ, ಹರಿಯಾಣ, ಮಹಾರಾಷ್ಟ್ರ, ಬಿಹಾರ ಮತ್ತು ಉತ್ತರ ಪ್ರದೇಶದಿಂದ ಬಂದ ಸಂಖ್ಯೆಗಳನ್ನು ಉಪಯೋಗಿಸಿ ಈ ಕೆಲಸ ಮಾಡಲಾಗಿತ್ತು ಎಂದು ವರದಿಗಳ ಮೂಲಕ ತಿಳಿದು ಬಂದಿದೆ.
ಕರ್ನಾಟಕ ಪೊಲೀಸ್‌ನ ವಿಶೇಷ ತನಿಖಾ ತಂಡ (SIT) ಈ ಮಾಹಿತಿಯನ್ನು ಅಕ್ಟೋಬರ್ 22, 2025ರಂದು ಬಹಿರಂಗಪಡಿಸಿತು, ಇದು ಬಿಜೆಪಿ ನಾಯಕ ಸುಭಾಷ್ ಗುತ್ತೇದಾರ್ ಅವರ ಮನೆ ಮತ್ತು ಅವರ ಮಕ್ಕಳ ಮನೆಗಳಲ್ಲಿ ದಾಳಿ ಮಾಡಿ ದಾಖಲೆಗಳನ್ನು ವಶಪಡಿಸಿಕೊಂಡ ನಂತರ ಈ ವರದಿ ಬಂದಿದೆ. ಗುತ್ತೇದಾರ್ ಅವರು 2023ರಲ್ಲಿ ಆಳಂದ್‌ನಿಂದ ಸೋತಿದ್ದರು, ಮತ್ತು ಈ ಹಗರಣವು ಅವರ ಸೋಲಿನ ಹಿನ್ನೆಲೆಯಲ್ಲಿಯೇ ಸಂಭವಿಸಿದೆ.
ವೋಟ್ ಚೋರಿ ನಡೆದಿರುವುದು ಇದೇ ಮೊದಲೇನಲ್ಲ!
ಈ ಘಟನೆಯು ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ವೋಟ್ ಚೋರಿಯ ಮೊದಲ ಉದಾಹರಣೆಯಲ್ಲ. ಹಿಂದಿನ ವರ್ಷಗಳಲ್ಲಿ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಇಂತಹ ಹಗರಣಗಳು ಪದೇ ಪದೇ ನಡೆದಿವೆ ಎಂದು ಕೇಳಿಬಂದಿದೆ. ರಾಹುಲ್ ಗಾಂಧೀ ಅವರು ಆರೋಪಿಸಿರುವ ಹಾಗೇ “2024ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಮಹಾದೇವಪುರ ಕ್ಷೇತ್ರದಲ್ಲಿ 1,00,250ಕ್ಕೂ ಹೆಚ್ಚು ಮತಗಳು ಮೋಸದಿಂದ ಸೇರಿಸಲ್ಪಟ್ಟಿವೆ” ಎಂದು ಆರೋಪಿಸಿದ್ದರು.
ಈ ಆರೋಪದಲ್ಲಿ ಡುಪ್ಲಿಕೇಟ್ ಮತದಾರರು, ತಪ್ಪು ವಿಳಾಸ, ಒಂದೇ ಮನೆಯಲ್ಲಿ ನೂರಾರು ಮತದಾರರ ಹೆಸರುಗಳು ಸೇರಿದ್ದವು. ಬಿಜೆಪಿ ಗೆದ್ದ ಕ್ಷೇತ್ರಗಳಲ್ಲಿ ಇಂತಹ ದುರ್ಬಳಕೆಗಳು ಹೆಚ್ಚಾಗಿವೆ, ಮತ್ತು ಇದು ಬಿಜೆಪಿ ನಾಯಕರ ಸ್ಥಳೀಯ ಪ್ರಭಾವವನ್ನು ತೋರಿಸುತ್ತದೆ ಎಂದು ಕಾಂಗ್ರೇಸ್ ಆರೋಪಿಸಿದೆ. ಮಹಾರಾಷ್ಟ್ರದ ರಾಜುರಾ ಕ್ಷೇತ್ರದಲ್ಲಿ 2024ರ ವಿಧಾನಸಭಾ ಚುನಾವಣೆಗೆ ಮುಂಚೆ 6,000ಕ್ಕೂ ಹೆಚ್ಚು ಅಕ್ರಮ ಮತದಾರರ ಹೆಸರುಗಳನ್ನು ಸೇರಿಸಲಾಗಿತ್ತು, ಮತ್ತು ಇದರಲ್ಲಿ ಬಿಜೆಪಿ ನಾಯಕರ ಮನೆಗಳಲ್ಲಿ ನೂರಾರು ಮತಗಳು ನೋಂದಾಯಿಸಲ್ಪಟ್ಟಿವೆ. ಹರಿಯಾಣದಲ್ಲಿ 2024ರ ಚುನಾವಣೆಯ ಸಂದರ್ಭದಲ್ಲಿ ಸಮೀಕ್ಷೇಗಳ ಪ್ರಕಾರ ಕಾಂಗ್ರೆಸ್ ಮುಂದಿನ ಮುಂಚುಣಿಯಲ್ಲಿದ್ದರೂ ಫಲಿತಾಂಶಗಳು ಬಿಜೆಪಿಯ ಪರವಾಗಿದ್ದವು, ಇದು ಮತದಾರರ ಪಟ್ಟಿಯಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆಗಳಿಂದ ಆಗಿರಬಹುದು ಎಂದು ಆರೋಪಗಳಿವೆ.
ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರ ಕ್ಷೇತ್ರದಲ್ಲಿ ಡುಪ್ಲಿಕೇಟ್ ಹೆಸರುಗಳು ಮತ್ತು ಅಕ್ರಮ ಮತಗಳು ಸೇರಿಸಲ್ಪಟ್ಟಿವೆ ಎಂದು ಕಾಂಗ್ರೆಸ್ ನಾಯಕ ಅಜಯ್ ರಾಯ್ ಹೇಳಿದ್ದರು. ಇದು ಪ್ರಧಾನಿ ನರೇಂದ್ರ ಮೋದಿ ಅವರ ಕ್ಷೇತ್ರದಲ್ಲಿ ನಡೆದಿದ್ದು, ಬಿಜೆಪಿ ನಾಯಕರ ಸ್ಥಳೀಯ ಪ್ರಭಾವವನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಬಿಹಾರದಲ್ಲಿ 2025ರ ವಿಧಾನಸಭಾ ಚುನಾವಣೆಗೆ ಮುಂಚೆ ನಡೆದ ವಿಶೇಷ ತೀವ್ರ ಪರಿಶೀಲನೆ (SIR) ಪ್ರಕ್ರಿಯೆಯು ಇನ್ನೊಂದು ಉದಾಹರಣೆಯಾಗಿದೆ. ಜೂನ್ 25ರಿಂದ ಜುಲೈ 26ರವರೆಗೆ ನಡೆದ ಈ ಪ್ರಕ್ರಿಯೆಯಲ್ಲಿ 65 ಲಕ್ಷ ಮತದಾರರ ಹೆಸರುಗಳನ್ನು ಅಳಿಸಿಹಾಕಲಾಗಿತ್ತು, ಬಹುಪಾಲು ಮುಸ್ಲಿಮರ ಮತ್ತು ಪ್ರತಿಪಕ್ಷ ಬೆಂಬಲಿಗರ ಮತಗಳು ಇದರಲ್ಲಿ ಸೇರಿವೆ. ಬಿಹಾರದಲ್ಲಿ ಬಿಜೆಪಿ ಆಡಳಿತದಲ್ಲಿರುವುದರಿಂದ, ಈ ಬದಲಾವಣೆಗಳು ಸ್ಥಳೀಯ ಬಿಜೆಪಿ ನಾಯಕರ ಪ್ರಭಾವದಿಂದ ನಡೆದಿವೆ ಎಂದು ಆರೋಪಗಳಿವೆ.
ರಾಹುಲ್ ಗಾಂಧಿಯವರ “ಮತ ಚೋರಿ ಅಭಿಯಾನ”
ಈ ಎಲ್ಲಾ ಹಗರಣಗಳ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರ “ಮತ ಚೋರಿ ಅಭಿಯಾನ” ಮುಖ್ಯವಾಗಿದೆ. 2025ರ ಆಗಸ್ಟ್ 7ರಂದು, ರಾಹುಲ್ ಗಾಂಧಿಯವರು ಮಹಾದೇವಪುರ ಕ್ಷೇತ್ರದಲ್ಲಿ 1,00,250ಕ್ಕೂ ಹೆಚ್ಚು ಅಕ್ರಮ ಮತಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಿ, ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಸಹಯೋಗಿಸಿ ಮತ ಚೋರಿ ಮಾಡುತ್ತಿದೆ ಎಂದು ಆರೋಪಿಸಿದರು. ಇದು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಲ್ಲ, ಇದು ದೇಶಾದ್ಯಂತ ನಡೆಯುತ್ತಿರುವ ವ್ಯವಸ್ಥಿತ ಕಾರ್ಯಾಚರಣೆ ಎಂದು ಅವರು ಹೇಳಿದರು.
ಸೆಪ್ಟೆಂಬರ್ 18ರಂದು ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ರಾಹುಲ್ ಗಾಂಧಿಯವರು ಆಳಂದ್ ಕ್ಷೇತ್ರದ ಡೇಟಾವನ್ನು ತೋರಿಸಿ, 6,018 ಅರ್ಜಿಗಳಲ್ಲಿ 5,994 ಅಕ್ರಮವಾಗಿದ್ದವು ಎಂದು ಬಹಿರಂಗಪಡಿಸಿದರು. ಇದರಲ್ಲಿ ಒಂದು ಮಹಿಳೆಯ ಹೆಸರನ್ನು ಬಳಸಿ 12 ಮತಗಳನ್ನು ಅಳಿಸಿಹಾಕಲು ಪ್ರಯತ್ನಿಸಲಾಗಿತ್ತು, ಮತ್ತೊಂದರಲ್ಲಿ ಸೂರ್ಯಕಾಂತ್ ಅವರ ಹೆಸರನ್ನು ಬಳಸಿ 14 ನಿಮಿಷಗಳಲ್ಲಿ 12 ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಇದು ಸಾಫ್ಟ್‌ವೇರ್ ಬಳಸಿ ಸ್ವಯಂಚಾಲಿತವಾಗಿ ಮಾಡಲ್ಪಟ್ಟಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ | ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ?
ರಾಹುಲ್ ಗಾಂಧಿಯವರು ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು “ಮತ ಚೋರರನ್ನು ರಕ್ಷಿಸುತ್ತಿದ್ದಾರೆ” ಎಂದು ಆರೋಪಿಸಿ, ಕರ್ನಾಟಕ ಸಿಐಡಿಗೆ 18 ಪತ್ರಗಳನ್ನು ಬರೆದಿದ್ದರೂ, ಐಪಿ ವಿಳಾಸಗಳು, ಓಟಿಪಿ ಮತ್ತು ಸಾಧನಗಳ ಮಾಹಿತಿಯನ್ನು ನೀಡದಿರುವುದನ್ನು ಎತ್ತಿ ಹಿಡಿದರು.







