ಗುಜರಾತ್‌ಗೆ ಬುಲೆಟ್ ಟ್ರೈನ್‌: ಇದರಿಂದ ಯಾರಿಗೆ ಲಾಭ?

"ಗುಜರಾತ್‌ನಲ್ಲಿ ಬುಲೆಟ್ ರೈಲು ನಿರ್ಮಾಣ ಮಾಡುತ್ತಿದ್ಗದಾರೆ ಆದರೆ ಬಿಹಾರದಲ್ಲಿ ಯುವಕರು ತಮ್ಮ ಸ್ವಗ್ರಾಮಕ್ಕೆ ಮರಳಲು ರೈಲು ಟಿಕೆಟ್‌ಗಾಗಿ ಪರದಾಡುತ್ತಿದ್ದಾರೆ" ಪ್ರಶಾಂತ್ ಕಿಶೋರ್‌.
bullet train

“ಚಾತ್ ಹಬ್ಬದ ಸಂದರ್ಭದಲ್ಲಿ ಬಿಹಾರದ ಯುವಕರು ತಮ್ಮ ಸ್ವಗ್ರಾಮಕ್ಕೆ ಮರಳಲು ರೈಲು ಟಿಕೆಟ್‌ಗಾಗಿ ಪರದಾಡುತ್ತಿರುವಾಗ, ಕೇಂದ್ರ ಸರ್ಕಾರ ಗುಜರಾತ್‌ನಲ್ಲಿ ಬುಲೆಟ್ ರೈಲು ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದೆ” ಎಂದು ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.  

ಸುದ್ದಿಗಾರರೊಂದಿಗೆ ಮಾತನಾಡುತ್ತಾ. “ಇದು ಜನ ಸುರಾಜ್‌ನ ಜನ್ಮ ಭೂಮಿ. ಇಲ್ಲಿಂದಲೇ ಮೂರುವರೆ ವರ್ಷಗಳ ಹಿಂದೆ ಪಕ್ಷ ಅಸ್ತಿತ್ವಕ್ಕೆ ಬಂದಿತು. ಬಿಹಾರದ ಜನರ ರಾಜಕೀಯ ಗುಲಾಮಗಿರಿಯನ್ನು ಕೊನೆಗೊಳಿಸುತ್ತೇವೆ,” ಎಂದು ಕಿಶೋರ್ ಹೇಳಿದ್ದಾರೆ. “ಇಲ್ಲಿನ ಜನ ಲಾಲುಗೆ ಹೆದರಿ ಬಿಜೆಪಿಗೆ ಮತ ಹಾಕುತ್ತಿದ್ದರು, ಇಲ್ಲ ಬಿಜೆಪಿಗೆ ಹೆದರಿ ಲಾಲುಗೆ ಮತ ಹಾಕುತ್ತಿದ್ದರು. ಈಗಿರುವ ವ್ಯವಸ್ಥೆಯನ್ನು ಮುಂದುವರಿಸಬೇಕೇ ಅಥವಾ ಬದಲಾವಣೆ ತರಬೇಕೇ ಎಂಬುದನ್ನು ಮುಂದಿನ 10-15 ದಿನಗಳಲ್ಲಿ ಜನ ನಿರ್ಧರಿಸಬೇಕು” ಎಂದರು.

ಬಿಹಾರವು ಭಾರತದ ಅತ್ಯಂತ ಬಡ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದ ಜಿಡಿಪಿಯು ದೇಶದ ಒಟ್ಟು ಜಿಡಿಪಿಯ ಶೇ. 3.1ಕ್ಕಿಂತ ಕಡಿಮೆಯಿದೆ, ಮತ್ತು ಪ್ರತಿ ವ್ಯಕ್ತಿಯ ಆದಾಯವು ರಾಷ್ಟ್ರೀಯ ಸರಾಸರಿಗಿಂತ ಶೇ. 30 ಕಡಿಮೆಯಾಗಿದೆ. ಸಾರಿಗೆ ವ್ಯವಸ್ಥೆಯ ಕೊರತೆಯು ರಾಜ್ಯದ ಅಭಿವೃದ್ಧಿಗೆ ದೊಡ್ಡ ಅಡ್ಡಿಯಾಗಿದೆ. ರೈಲು ಟಿಕೆಟ್‌ಗಳ ಕೊರತೆ, ಕಳಪೆ ರಸ್ತೆಗಳು, ಮತ್ತು ಅಪೂರ್ಣವಾದ ರೈಲು ಮಾರ್ಗಗಳಿಂದಾಗಿ ಜನರು ದೈನಂದಿನ ಜೀವನದಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಚಾತ್ ಹಬ್ಬದಂತಹ ಸಂದರ್ಭಗಳಲ್ಲಿ ಈ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುತ್ತದೆ, ಯುವಕರು ತಮ್ಮ ಗ್ರಾಮಗಳಿಗೆ ಮರಳಲು ಟಿಕೆಟ್‌ಗಾಗಿ ಗಂಟೆಗಟ್ಟಲೆ ಕಾಯಬೇಕಾಗುತ್ತದೆ.

ಗುಜರಾತ್‌ನ ಬುಲೆಟ್ ರೈಲು: ಯಾರಿಗಾಗಿ?

ಗುಜರಾತ್‌ನ ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಯು ಭಾರತದ ಆಧುನಿಕತೆಯ ಸಂಕೇತವಾಗಿ ಕಾಣಿಸುತ್ತದೆ. ಆದರೆ, ಈ ಯೋಜನೆಯು ಸಾಮಾನ್ಯ ಜನರಿಗೆ ಎಷ್ಟು ಉಪಯುಕ್ತ? ಬುಲೆಟ್ ರೈಲಿನ ಟಿಕೆಟ್‌ಗಳ ಬೆಲೆ ಸಾಮಾನ್ಯ ರೈಲು ಟಿಕೆಟ್‌ಗಿಂತ ಗಣನೀಯವಾಗಿ ಹೆಚ್ಚಿರುತ್ತದೆ, ಇದರಿಂದಾಗಿ ಇದು ಶ್ರೀಮಂತ ವರ್ಗಕ್ಕೆ ಮಾತ್ರ ಸೀಮಿತವಾಗಿರುವ ಸಾಧ್ಯತೆಯಿದೆ. ಬಿಹಾರ, ಕರ್ನಾಟಕ, ದೆಹಲಿ ಸೇರಿದಂತೆ ಭಾರತದ ಹಲವು ರಾಜ್ಯಗಳು ಮೂಲಭೂತ ಸಾರಿಗೆ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿರುವಾಗ, ಈ ರೀತಿಯ ಐಷಾರಾಮಿ ಯೋಜನೆಗೆ ಆದ್ಯತೆ ನೀಡುವುದು ಸರಿಯೇ ಎಂಬುವ ಪ್ರಶ್ನೆ ಕಾಡುತ್ತದೆ.

ಎಲ್ಲಾ ರಾಜ್ಯಗಳಿಗೂ ಸಮಾನ ಆದ್ಯತೆಯ ಅಗತ್ಯ

ಬಿಹಾರದಂತಹ ರಾಜ್ಯಗಳಲ್ಲಿ ರೈಲು ಮಾರ್ಗಗಳ ದುರಸ್ತಿ, ಹೆಚ್ಚಿನ ರೈಲುಗಳ ವ್ಯವಸ್ಥೆ, ಮತ್ತು ರಸ್ತೆ ಸಂಪರ್ಕದ ಸುಧಾರಣೆಯಂತಹ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡುವುದು ಅತ್ಯಗತ್ಯ. ಕೇಂದ್ರ ಸರ್ಕಾರವು 2023-24ರ ಬಜೆಟ್‌ನಲ್ಲಿ ಬಿಹಾರಕ್ಕೆ ₹7,616 ಕೋಟಿ ಮಂಜೂರು ಮಾಡಿದೆ, ಇದರಲ್ಲಿ ಮೋಕಾಮ-ಮುಂಗೇರ್ ಗ್ರೀನ್‌ಫೀಲ್ಡ್ ಹೈವೇ ಮತ್ತು ಭಾಗಲ್‌ಪುರ-ಡುಂಕಾ ರೈಲು ಡಬಲಿಂಗ್ ಯೋಜನೆಗಳು ಸೇರಿವೆ. ಆದರೆ, ಈ ಯೋಜನೆಗಳು ಜನರ ದೈನಂದಿನ ಸಾರಿಗೆ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸುವುದಿಲ್ಲ.

ಕರ್ನಾಟಕದಂತಹ ರಾಜ್ಯಗಳು ಸಹ ಸಾರಿಗೆ ವ್ಯವಸ್ಥೆಯ ಕೊರತೆಯನ್ನು ಎದುರಿಸುತ್ತಿವೆ. ಬೆಂಗಳೂರಿನಲ್ಲಿ ಸಾರ್ವಜನಿಕ ಬಸ್ ಸೇವೆಯ ಕೊರತೆ ಮತ್ತು ಮೆಟ್ರೋ ಯೋಜನೆಯ ವಿಳಂಬವು ಜನರಿಗೆ ತೊಂದರೆಯಾಗಿದೆ. ದೆಹಲಿಯಂತಹ ರಾಜಧಾನಿಯಲ್ಲಿಯೂ ಟ್ರಾಫಿಕ್‌ ಜಾಮ್ ಮತ್ತು ಸಾರ್ವಜನಿಕ ಸಾರಿಗೆಯ ಕೊರತೆಯ ಸಮಸ್ಯೆ ಇದೆ. ಇಂತಹ ಸಂದರ್ಭದಲ್ಲಿ, ಒಂದೇ ರಾಜ್ಯಕ್ಕೆ ಸೀಮಿತವಾದ ಐಷಾರಾಮಿ ಯೋಜನೆಗಿಂತ, ಎಲ್ಲಾ ರಾಜ್ಯಗಳಿಗೆ ಮೂಲಭೂತ ಸೌಕರ್ಯಗಳನ್ನು ಸುಧಾರಿಸುವ ಯೋಜನೆಗೆ ಒತ್ತು ನೀಡಬೇಕಾಗಿದೆ.

ಗುಜರಾತ್‌ನ ಬುಲೆಟ್ ರೈಲು ಭಾರತದ ಆರ್ಥಿಕ ಪ್ರಗತಿಯ ಸಂಕೇತವಾಗಿರಬಹುದು, ಆದರೆ ಇದು ಎಲ್ಲಾ ರಾಜ್ಯಗಳ ಜನರ ಜೀವನವನ್ನು ಸುಧಾರಿಸುವುದಿಲ್ಲ. ಸಾಮಾನ್ಯ ಜನರಿಗೆ ದೈನಂದಿನ ಸಾರಿಗೆ ಸೌಲಭ್ಯವೇ ಮೊದಲ ಆದ್ಯತೆ. ನಮ್ಮಲ್ಲಿಯೇ ನಾವೂ ನೋಡುವುದಾದರೆ ಉತ್ತರ ಕರ್ನಾಟಕದ ಯುವಕನೊಬ್ಬ ದಸರಾ ಅಥವಾ ದೀಪಾವಳಿಯಂತಹ ಹಬ್ಬಕ್ಕೆ ಮನೆಗೆ ಮರಳುವಾಗ ರೈಲಿನಲ್ಲಿ ಒಬ್ಬರಮೇಲೊಬ್ಬರು ಕೂತುಹೋಗುವುದನ್ನು ಪ್ರತಿ ಬಾರಿ ನಾವು ನೋಡುತ್ತೇವೆ, ಬುಲೆಟ್ ರೈಲಿನ ಐಷಾರಾಮಿ ಸೇವೆಯು ಅವನಿಗೆ ಯಾವ ಪ್ರಯೋಜನವನ್ನೂ ತರುವುದಿಲ್ಲ. ಎನ್‌ಡಿಎ ಸರ್ಕಾರವು ಈ ಆದ್ಯತೆಗಳನ್ನು ಪುನರ್‌ಪರಿಶೀಲಿಸಿ, ಎಲ್ಲಾ ರಾಜ್ಯಗಳಿಗೂ ಸಮಾನವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವತ್ತ ಗಮನ ಹರಿಸಬೇಕು.

ಇದನ್ನೂ ಓದಿ | ಬಿಹಾರ ಚುನಾವಣೆ: ತೇಜಸ್ವಿ ಯಾದವ್‌ಗೆ ಸಿಗುವುದೇ ಸಿಎಂ ಪಟ್ಟ?

ಪ್ರಶಾಂತ್ ಕಿಶೋರ್‌ರ ಟೀಕೆಯು ಕೇವಲ ಬಿಹಾರಕ್ಕೆ ಸೀಮಿತವಾಗಿಲ್ಲ; ಇದು ಭಾರತದ ಎಲ್ಲಾ ರಾಜ್ಯಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ಬೆಳಕಿಗೆ ತರುತ್ತದೆ. ಗುಜರಾತ್‌ನ ಬುಲೆಟ್ ರೈಲು ದೇಶದ ಆಧುನಿಕತೆಯನ್ನು ಪ್ರದರ್ಶಿಸಬಹುದು, ಆದರೆ ಇಡೀ ದೇಶದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದ ಹೊರತು, ಈ ರೀತಿಯ ಯೋಜನೆಗಳು ಕೇವಲ ಶ್ರೀಮಂತರಿಗೆ ಸೀಮಿತವಾಗಿರುತ್ತವೆ. ಎಲ್ಲಾ ರಾಜ್ಯಗಳಿಗೂ ಸಾರಿಗೆ, ಆರೋಗ್ಯ, ಮತ್ತು ಶಿಕ್ಷಣದಂತಹ ಮೂಲಭೂತ ಸೌಕರ್ಯಗಳಿಗೆ ಸಮಾನ ಆದ್ಯತೆ ನೀಡುವುದೇ ಭಾರತದ ನಿಜವಾದ ಅಭಿವೃದ್ಧಿಯ ಮಾರ್ಗವಾಗಿದೆ.

Share:

ಮತ್ತಷ್ಟು ಸುದ್ದಿ

ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮ

ಅಲೆದಾಟ ಮುಕ್ತ ಆಡಳಿತದತ್ತ ಮೇಲುಕೋಟೆ ಮನೆ ಬಾಗಿಲಿಗೇ ಬಂದ ‘ಸರ್ಕಾರಿ ಸೇವೆ’ ಕಾರ್ಯಕ್ರಮ  ತಂತ್ರಜ್ಞಾನದ ಅರಿವನ್ನು ಆಡಳಿತ ಯಂತ್ರಕ್ಕೆ ವರ್ಗಾಯಿಸಿದ

ಬೆಂಗಳೂರಿನಲ್ಲಿ ಮೇ 25 ರಂದು 3ನೇ ಕರ್ನಾಟಕ ಸಂಘಟಕರ ಸಮಾವೇಶ

ಸಾಂಸ್ಕೃತಿಕ ನೀತಿ ಜಾರಿ ಮತ್ತು ಅಕಾಡೆಮಿಗಳ ಬಲವರ್ಧನೆಗೆ ಆಗ್ರಹಿಸಿ ರಂಗಕರ್ಮಿಗಳು ಹಾಗೂ ಸಾಂಸ್ಕೃತಿಕ ಸಂಘಟಕರ ಬೃಹತ್‌ ಸಮಾಲೋಚನೆ ಬೆಂಗಳೂರು: ಕರ್ನಾಟಕ

ಮುಂದೆ ಓದಿ »

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »