ಸಂದರ್ಭ 1
ಲಲ್ಲನ್ ಟಾಪ್‌ಗೆ ಸಂದರ್ಶನ ನೀಡಿದ ನಟ ಮನೋಜ್ ಬಾಜ್‌ಪಾಯಿ, ಶಾರುಖ್ ಖಾನ್ ಬಗ್ಗೆ ಅಪಾರ ಅಭಿಮಾನದಿಂದ ಮಾತನಾಡುತ್ತಾ, “ಅವರು ಈ ಎತ್ತರ ತಲುಪಿದ್ದನ್ನು ನೋಡೋಕ್ಕೆ ನನಗೆ ತುಂಬಾ ಖುಷಿಯಾಗುತ್ತದೆ. ಇದೇ ವ್ಯಕ್ತಿಯ ವ್ಯಕ್ತಿಗತ ಜಗತ್ತು ಸಂಪೂರ್ಣ ನಾಶವಾಗಿತ್ತು. 26ನೇ ವಯಸ್ಸಿಗೆ ತನ್ನವರನ್ನೆಲ್ಲಾ ಕಳೆದುಕೊಂಡಿದ್ದರು. ಆದರೆ ಅವರು ತಮ್ಮ ಜಗತ್ತನ್ನು ಮತ್ತೆ ಕಟ್ಟಿಕೊಂಡರು. ತಮ್ಮದೇ ಕುಟುಂಬವನ್ನು ಸೃಷ್ಟಿಸಿಕೊಂಡರು, ಹೆಸರು, ಗೌರವ ಸಂಪಾದಿಸಿಕೊಂಡರು”
ಸಂದರ್ಭ 2
2024, ಫೆಬ್ರವರಿ ತಿಂಗಳು. ಮೋದಿ ಕತಾರ್‌ಗೆ ಭೇಟಿ ನೀಡುವ ಕುರಿತು ಟ್ವೀಟ್ ಮಾಡಿದ್ದರು. ಆಗ ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, “ಮೋದಿ ತಮ್ಮೊಂದಿಗೆ ಶಾರುಖ್ ಖಾನ್ ಅವರನ್ನು ಕತಾರ್‌ಗೆ ಕರೆದೊಯ್ಯಲಿ. ಭಾರತದ ನೌಕಾಧಿಕಾರಿಗಳನ್ನು ಬಿಡುಗಡೆ ಮಾಡಿಸುವಲ್ಲಿ ವಿದೇಶಾಂಗ ವ್ಯವಹಾರ ಸಚಿವಾಲಯ ಮತ್ತು ರಾಷ್ಟ್ರೀಯ ಭದ್ರತಾ ದಳ ಕತಾರ್‍ನ ಶೇಖ್‌ನ ಮನವನ್ನು ಮನವೊಲಿಸುವಲ್ಲಿ ಸೋತಾಗ, ಖಾನ್ ಮಧ್ಯಸ್ಥಿಕೆ ವಹಿಸಲು ಮೋದಿ ಮನವಿ ಮಾಡಿದ್ದರು, ಆಗ ಅತ್ಯಂತ ದುಬಾರಿ ಒಪ್ಪಂದಕ್ಕೆ ಬರಲು ಸಾಧ್ಯವಾಯಿತು.”
ಇವೆರಡೂ ಸಂದರ್ಭಗಳು ಶಾರುಖ್‌ನ ವ್ಯಕ್ತಿಗತ ಬದುಕು ಮತ್ತು ಸಾರ್ವಜನಿಕ ಬದುಕಿನ ಒಂದು ನೋಟವನ್ನು ನೀಡುತ್ತವೆ. ಶಾರುಖ್‌ನ ಯೌವನದ ದಿನಗಳತ್ತ ಹೋಗುವ ಮುನ್ನ, ಇವತ್ತಿನ ಸಂದರ್ಭವನ್ನು ನೋಡಿ, ಮುಂದೆ ಹೋಗೋಣ.
ಶಾರುಖ್ ಖಾನ್ 60 ಪೂರೈಸಿದ್ದಾರೆ. ಖಾನ್ ತ್ರಯರ ಪೈಕಿ ಇಂದಿಗೂ ತನ್ನದೇ ಆ ಚಾರ್ಮ್ ಉಳಿಸಿಕೊಂಡಿರುವ ಶಾರುಖ್‌ಗೆ ವಿಶ್ವದಾದ್ಯಂತ ಅಭಿಮಾನಿಗಳು, ಪ್ರಶಂಸಕರ ದಂಡು ಇದೆ. ಮುಸ್ಲಿಮ್ ಸಮುದಾಯದಿಂದ ಬಂದ ಶಾರುಖ್‌ನ ಇಂದಿನ ಕೋಮುವಾದಿ ಪರಿಸರದಲ್ಲಿ ಅಮಿರ್ ಮತ್ತು ಸಲ್ಮಾನ್‌ನಂತೆ ಯಾವುದೇ ವಿವಾದಗಳಿಗೆ ಸಿಲುಕದೆ, ತನ್ನ ಪ್ರಭಾವವನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ಸಾಮಾನ್ಯವೇನಲ್ಲ.

ನನ್ನ ಅಭಿಮಾನದ ಆರಂಭ
ನಾನು ಶಾರುಖ್ ಖಾನ್ ಅಭಿಮಾನಿಯಾಗಿದ್ದು, ಚಕ್ ದೇ ಇಂಡಿಯಾ ನಂತರ. ಅಲ್ಲಿಯವರೆಗೆ ಡರ್, ಬಾದ್ ಶಾ, ರಾಜು ಬನ್ ಗಯಾ ಜಂಟಲ್‌ಮನ್, ಸ್ವದೇಸ್, ದಿಲ್ ಸೆ ಚಿತ್ರಗಳನ್ನು ನೋಡಿದ್ದೆ. ಆದರೆ ಆತನ ಮೇಲೆ ಅಭಿಮಾನ ಮೂಡಿರಲಿಲ್ಲ. ಫೌಜಿ ಧಾರಾವಾಹಿಯನ್ನು ನೋಡಿದ್ದೇನಾದರೂ ಆ ನೆನಪುಗಳು ಅಷ್ಟು ಆಳವಾಗಿ ನನ್ನೊಳಗೆ ಇಳಿಯಲಿಲ್ಲ. ನನಗೀಗಲೂ ನೆನಪಾಗುವ ಒಂದು ಘಟನೆ, ಸುಧಾ ವಾರಪತ್ರಿಕೆಯಲ್ಲಿ ಬರುವ ಸುದ್ದಿ ಸ್ವಾರಸ್ಯದಲ್ಲಿ ಪ್ರಕಟವಾದ, ಸೀರೆಯುಟ್ಟ ಶಾರುಖ್ ಖಾನ್ ಚಿತ್ರ. ನನ್ನ ಸಹಪಾಠಿ ಅವನ ದೊಡ್ಡ ಅಭಿಮಾನಿ. ಆಗಷ್ಟೇ ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೆ ಬಂದು, ಹೆಂಗಳೆಯರ ಹೃದಯ ಕದ್ದಿದ್ದ ಈ ಶಾರುಖ್ ಖಾನ್. ಸನ್ನಿ ದೇವಲ್‌ನ ‘ಢಾಯಿ ಕಿಲೋ ಕ ಹಾಥ್’ ಹೈ ಅನ್ನೋ ಗಂಡು ಅಹಂಕಾರದ ವಿಜೃಂಭಣೆಯ ಕಾಲದಲ್ಲಿ ಶಾರುಖ್ ಖಾನ್ ಸರಳ, ತೀರಾ ಹತ್ತಿರವಾಗುವ ಸಾಮಾನ್ಯನಂತೆ ಹುಡುಗಿಯರ ಹೃದಯ ಕದ್ದಿದ್ದ. ನನ್ನ ಸಹಪಾಠಿ ಕೂಡ ಅಂತಹವರಲ್ಲಿ ಒಬ್ಬಳು. ಆದರೆ ಸೀರೆಯುಟ್ಟ ಫೋಟೋವನ್ನು ಮುಂದಿಟ್ಟು ನಾನು ಖಾನ್‌ನನ್ನು ಇವನೆಂತಹ ಹೀರೋ ಅಂದಿದ್ದೆ.
ಹೀರೋಯಿಸಮ್‌ಗೆ ಒತ್ತುಕೊಡುತ್ತಿದ್ದ ನಾಯಕರ ನಡುವೆ, ನೆಗೆಟಿವ್ ಶೇಡ್ ಮುಖ್ಯಪಾತ್ರಗಳಲ್ಲೂ ಕಾಣಿಸಿಕೊಂಡ ಶಾರುಖ್ ತನ್ನನ್ನು ವಿವಿಧ ರೀತಿಯ ಪಾತ್ರಗಳಿಗೆ ಒಡ್ಡಿಕೊಂಡು, ನಟನಾಗಿ ಮಾಗುತ್ತಲೇ ಬಂದರು. ಅಷ್ಟೇ ಅಲ್ಲ, ಹಿಂದಿ ಸಿನಿಮಾಗಳಲ್ಲಿ ಮುಸ್ಲಿಮ್ ಪಾತ್ರಗಳು ಸ್ಟೀರಿಯೋ ಟೈಪ್ ಆಗುತ್ತಿದ್ದಾಗ, ಅವುಗಳನ್ನು ಮುರಿಯುವಂತಹ ಪಾತ್ರಗಳಲ್ಲಿ ಕಾಣಿಸಿಕೊಂಡರು. ಎಲ್ಲವೂ ಪ್ರಚಾರದ ಚೌಕಟ್ಟಿನಲ್ಲೇ ಯೋಚಿಸುವ ಚಿತ್ರರಂಗದಲ್ಲಿ ಸುಮ್ಮನೆ ಮಾಡಿಬಿಡುವ ವರಸೆಯನ್ನು ಶಾರುಖ್ ಖಾನ್ ರೂಢಿಸಿಕೊಂಡಿದ್ದರು.
ಅಪ್ಪಟ ವ್ಯವಹಾರಸ್ಥನಂತಿರುವ ಶಾರುಖ್, ನೇರನುಡಿ, ನಿಷ್ಠುರ ವ್ಯಂಗ್ಯದ ಮೂಲಕ ಸತ್ಯಗಳನ್ನು ಹೇಳುತ್ತಲೇ ಬೆಚ್ಚಿ ಬೀಳಿಸಿದವರು. ಶಾರುಖ್ ಖಾನ್ ಹೀಗಿರಲು ಸಾಧ್ಯವಾಯಿತು?
ಹೋರಾಟಗಾರರ ಕುಟುಂಬದ ಕುಡಿ
ಶಾರುಖ್ ಖಾನ್‌ಗೆ ಚಿತ್ರರಂಗದ ಹಿನ್ನೆಲೆಯಿಲ್ಲ. ಬದಲಿಗೆ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಿದೆ. ತಂದೆ ಮೀರ್ ತಾಜ್ ಮೊಹಮ್ಮದ್ ಖಾನ್, ಗಡಿನಾಡ ಗಾಂಧಿ ಎಂದೇ ಪ್ರಖ್ಯಾತರಾಗಿದ್ದ ಅಬ್ದುಲ್ ಗಫಾರ್ ಕಾನ್ ಅವರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದರು. ಅಪ್ಪಟ ದೇಶ ಭಕ್ತರಾಗಿದ್ದ ಇವರು, ನೇತಾಜಿ ಸ್ಥಾಪಿಸಿದ ಭಾರತೀಯ ರಾಷ್ಟ್ರೀಯ ಸೇನೆಯ ಮುಖ್ಯ ಸೇನಾಧಿಕಾರಿಯಾಗಿದ್ದ ಶಹ ನವಾಜ್ ಖಾನ್ ಅವರ ಸೋದರ ಕೂಡ.

ಇನ್ನು ಶಾರುಖ್ ತಾಯಿ, ಲತೀಫ್ ಫಾತಿಮಾ ವಿದ್ಯಾವಂತೆ, ರಾಜಕೀಯವಾಗಿ ಸಕ್ರಿಯರಾಗಿದ್ದರು. (ತಾಯಿಯ ಮೂಲಕ ಶಾರುಖ್ ಖಾನ್‌ಗೆ ಕರ್ನಾಟಕಕ್ಕೂ ಒಂದು ನಂಟು ಬೆಸೆದುಕೊಂಡಿದೆ ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕು. ಶಾರುಖ್ ತಾಯಿಯ ತಂದೆ ಇಫ್ತಿಕಾರ್ ಅಹ್ಮದ್, ಮಂಗಳೂರು ಬಂದರಿನಲ್ಲಿ ಮುಖ್ಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು. ಬಂದರಿನ ವಿನ್ಯಾಸ ಮತ್ತು ನಿರ್ಮಾಣದಲ್ಲಿ ಇವರ ಪಾತ್ರ ದೊಡ್ಡದು. ಹಾಗಾಗಿ ಶಾರುಖ್ ತಮ್ಮ ಬಾಲ್ಯದ ಆರಂಭದ 5 ವರ್ಷಗಳನ್ನು ಮಂಗಳೂರಿನಲ್ಲೇ ಕಳೆದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಶಾರುಖ್ ಖಾನ್ ಬಾಲ್ಯ ಕಳೆದ ಪಣಂಬೂರಿನ ಮನೆ ಈಗ ಪ್ರವಾಸಿ ಕೇಂದ್ರ. ಇರಲಿ.) ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂಜಯ್ ಗಾಂಧಿಯವರೊಂದಿಗೆ ಕೆಲಸ ಮಾಡಿದ್ದರು.
ರಾಜಕೀಯವಾಗಿ ಹೀಗೆ ಸಕ್ರಿಯವಾಗಿದ್ದ ಕುಟುಂಬದಲ್ಲಿ ಜನಿಸಿದ ಶಾರುಖ್ ಖಾನ್, ಪ್ರಗತಿಪರವಾದ, ಜಾತ್ಯತೀತವಾದ ಚಿಂತನೆಗಳಿಂದ ಪ್ರಭಾವಿತರಾಗಿಯೇ ಬೆಳೆದರು. ಬಡತನ, ಸಂಕಷ್ಟ ಹಾಗೂ ಎಲ್ಲ ರೀತಿಯ ದಬ್ಬಾಳಿಕೆಯಿಂದ ಸ್ವಾತಂತ್ರ್ಯ ಪಡೆಯಬೇಕೆಂದು ಅವರ ತಂದೆ ಶಾರುಖ್‌ಗೆ ಸದಾ ಹೇಳುತ್ತಿದ್ದರಂತೆ. ರಾಷ್ಟ್ರೀಯತೆ ಅಂದರೆ ಘೋಷಣೆಗಳಲ್ಲ ಎಂಬ ಬುದ್ಧಿವಾದ ಆಗಲೇ ಶಾರುಖ್‌ಗೆ ಸಿಕ್ಕಿತ್ತು.
ಕೋಮುವಾದಿ ಸವಾಲುಗಳು ಮತ್ತು ಶಾರುಖ್‌ನ ಪ್ರತಿಕ್ರಿಯೆ
ತೊಂಬತ್ತರ ದಶಕದ ಅಂತ್ಯದವರೆಗೆ ಶಾರುಖ್ ಖಾನ್ ಮುಸ್ಲಿಮ್ ಎಂಬುದು ಯಾರಿಗೂ ಮುಖ್ಯವಾಗಿರಲಿಲ್ಲ. ಆದರೆ ಕೋಮುವಾದ ರಾಜಕಾರಣ ಬಲಪಡೆಯುತ್ತಿದ್ದಂತೆ ಶಾರುಖ್ ಖಾನ್‌ಗೆ ಅದರ ಬಿಸಿ ತಟ್ಟದೇ ಇರಲಿಲ್ಲ. ಅನುಭವ, ಕಲಿತ ಮೌಲ್ಯಗಳು, ಬೆಳೆಸಿಕೊಂಡ ಎಚ್ಚರಗಳು ಇಂತಹ ಸಂದರ್ಭಗಳಿಗೆ ಪ್ರತಿಕ್ರಿಯಿಸುವುದಕ್ಕೆ ಸುಲಭವಾಗಿ ಪ್ರಚೋದಿಸುತ್ತಿದ್ದವು. ಆದರೆ ಅತ್ಯಂತ ಜಾಣ್ಮೆ ಹಾಗೂ ತಾಳ್ಮೆಗಳೆರಡನ್ನು ಪೋಷಿಸಿಕೊಂಡ ಶಾರುಖ್ ತನ್ನ ಸಿನಿಮಾಗಳ ಮೂಲಕವೇ ಉತ್ತರ ಕೊಡುವುದಕ್ಕೆ ಪ್ರಯತ್ನಿಸಿದ್ದು ಸಾಮಾನ್ಯ ನಟ ಗುಣ ಸ್ವಭಾವಗಳನ್ನು ಮೀರಿದ್ದು ಎಂಬುದಕ್ಕೆ ಸಾಕ್ಷಿ ಎನ್ನಬಹುದು. ಪಠಾಣ್, ಜವಾನ್, ಡಂಕಿ ಚಿತ್ರಗಳನ್ನೇ ನೋಡಿ.
ಶಾರುಖ್ ಸಮಕಾಲೀನ ಅತ್ಯುತ್ತಮ ಮತ್ತು ಶ್ರೇಷ್ಠ ಎಂದು ಗುರುತಿಸಲಾಗುವ ಎಲ್ಲ ನಟರ ನಡುವೆ ಭಿನ್ನವಾಗಿ ಕಾಣುವು ಹಲವು ಸಂಗತಿಗಳಿವೆ. ದೆಹಲಿ ಪುಟ್ಟದೊಂದು ಗಲ್ಲಿಯಿಂದ ಬಂದ ಮಧ್ಯಮ ವರ್ಗದ ಯುವಕ ಸಾಂಪ್ರದಾಯಿಕವಾದ ಚೌಕಟ್ಟುಗಳನ್ನು ಮೀರಿ ಬೆಳೆದ ಉದಾಹರಣೆ ನಮಗೆ ಹಿಂದಿ ಚಿತ್ರರಂಗದಲ್ಲಿ ಮತ್ತೊಂದು ಸಿಗುವುದು ವಿರಳ. ರಂಗಭೂಮಿ, ಸಾಹಿತ್ಯಿಕ ಗ್ರಹಿಕೆಗಳಿಂದಾಗಿ ತನ್ನ ನಟನೆಯನ್ನು ರೂಪಿಸಿಕೊಂಡ ರೀತಿಯೂ ತನ್ನ ಕಾಲದ ನಟರಿಗೆ ದಕ್ಕದ್ದು. ತನ್ನ ವ್ಯಂಗ್ಯಭರಿತ, ಹಾಸ್ಯದಿಂದ ಕೂಡಿದ ವಿಶಿಷ್ಟವಾದ ಮಾತುಗಾರಿಕೆ ಶಾರುಖ್‌ನ ಐಡೆಂಟಿಯನ್ನು ಕಟ್ಟಿರುವ ಬಗೆಯೇ ವಿಸ್ಮಯ ಉಂಟು ಮಾಡುವಂತಹದ್ದು.

ಸಾರ್ವಜನಿಕ ಬದುಕಿನಲ್ಲಿ ಎಂದಿಗೂ ತನ್ನನ್ನು ಮುಜುಗರಕ್ಕೆ ಈಡುಮಾಡಿಕೊಳ್ಳುವಂತಹ ಸಂದರ್ಭಗಳನ್ನು ತಂದುಕೊಳ್ಳದ ಶಾರುಖ್ ಖಾನ್, ಹಲವು ರಾಜಕೀಯ ಕಾರಣಗಳಿಗೆ ಹೊಟೆಲ್ ದಾಳಿ, ಮಗನ ಮೇಲೆ ಸುಳ್ಳು ಆರೋಪಗಳು ಬಂದಾಗಲೂ ಅತ್ಯಂತ ಘನತೆ, ಗಾಂಭೀರ್ಯದೊಂದಿಗೆ ನಿರ್ವಹಿಸಿದ ರೀತಿ ನಿಜಕ್ಕೂ ಎದೆಯ ಛಾತಿಯ ಕೆಲಸ.
ಶಾರುಖ್ ಇಂದು ಅತ್ಯಂತ ಅಪರೂಪದ ಸಾರ್ವಜನಿಕ ವ್ಯಕ್ತಿ ಕಾಣಿಸುತ್ತಾರೆ. ಆತ ಇಂದು ಪ್ರಭಾವಿಯಾಗಿರುವುದರಿಂದ ಹಿಂದೆ ಯಾವುದೇ ಅಬ್ಬರವಿಲ್ಲ. ಇಂದು ಅಸಹನೆಯೇ ಪ್ರದರ್ಶನವಾಗಿರುವಾಗ, ಅಸ್ಮಿತೆ ಅಸ್ತ್ರವಾಗಿರುವಾಗ, ತನ್ನ ಅಸ್ತಿತ್ವ ಸಾರಲು, ಚೀರದೆಯೂ ಸಾಬೀತು ಮಾಡಬಹುದು ಎಂಬ ಆತ್ಮವಿಶ್ವಾಸವನ್ನು ಶಾರುಖ್ ವ್ಯಕ್ತಿತ್ವ ಪ್ರತಿನಿಧಿಸುತ್ತದೆ. ಆರಂಭದಲ್ಲಿ ಮನೋಜ್ ಬಾಜಪಾಯಿ ಹೇಳಿದ ಮಾತುಗಳನ್ನು ಮತ್ತೆ ಇಲ್ಲಿ ಪ್ರಸ್ತಾಪಿಸುತ್ತಾ, ಈ ಅಭಿಮಾನದ ಸಾಲುಗಳಿಗೆ ವಿರಾಮ ಹೇಳುತ್ತೇನೆ.
ಶಾರುಖ್‌ರ ಇಪ್ಪತ್ತಾರನೇ ವಯಸ್ಸಿನಲ್ಲಿ ತಂದೆ ಕ್ಯಾನ್ಸರ್‍ನಿಂದ ತೀರಿಕೊಂಡರೆ, ತಾಯಿ ಮಧುಮೇಹದ ಸಮಸ್ಯೆಯಿಂದ ಅನಾರೋಗ್ಯ ಹೆಚ್ಚಿ ಸಾವನ್ನಪ್ಪುತ್ತಾರೆ. ತಂದೆ-ತಾಯಿಗಳ ಅಗಲಿಕೆಯಿಂದ ಅಕ್ಕನೂ ಮಾನಸಿಕವಾಗಿ ಕುಸಿದು ಹೋಗುತ್ತಾಳೆ. ಆಗ ಅಕ್ಕನ ಜವಾಬ್ದಾರಿ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳುವ ಹೊಣೆಗಾರಿಕೆ ಶಾರುಖ್ ಹೆಗಲಿಗೆ ಬೀಳುತ್ತದೆ. ಹೀಗೆ ಬದುಕು ಕಟ್ಟಿಕೊಳ್ಳುವ ದಾರಿಯಲ್ಲಿ ಹೆಜ್ಜೆ ಹಾಕಲಾರಂಭಿಸಿದ ಶಾರುಖ್ ಖಾನ್, ತಾಳ್ಮೆ, ಶ್ರಮ, ವೃತ್ತಿ ಜೀವನದ ಗಾಯಗಳಿಗೆ ಮಾಗಿ ಬೆಳೆದಿದ್ದಾರೆ. ಹಾಗಾಗಿ ಶಾರುಖ್ ವ್ಯಕ್ತಿತ್ವದಲ್ಲಿ ಕಾಣುವ ವಿನಮ್ರತೆ ಎಂಥವರನ್ನು ಸೆಳೆಯುತ್ತದೆ.
ಇದನ್ನೂ ಓದಿ | ರಾಷ್ಟ್ರೀಯ ಏಕತಾ ದಿನ: ಭಾರತದ ಉಕ್ಕಿನ ಮನುಷ್ಯನ ಜನ್ಮದಿನದ ಸ್ಮರಣೆ
ಕಡೆಯದಾಗಿ, ರಯೀಸ್ ಚಿತ್ರ ನನ್ನ ಶಾರುಖ್ ನೆಚ್ಚಿನ ಚಿತ್ರಗಳಲ್ಲಿ ಒಂದು. ಅದರಲ್ಲಿ ಶಾರುಖ್ ಖಾನ್ ಒಂದು ಡೈಲಾಗ್ ಹೀಗಿದೆ: “ಅಮ್ಮಿ ಜಾನ್ ಹೇಳ್ತಾಳೆ. ಯಾವುದೇ ದಂಧ(ಕೆಲಸ) ಸಣ್ಣದು ಅಂತಿರೋದಿಲ್ಲ. ಹಾಗೇ ದಂಧೆಗಿಂತ ದೊಡ್ಡ ಧರ್ಮ ಇನ್ನೊಂದಿಲ್ಲ”. ಶ್ರಮವನ್ನು ನಂಬಿದ ಶಾರುಖ್ ಇಂದು ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದ್ದು, ಲೋಕ ಮೆಚ್ಚಿದ್ದು ಎಂಬುದರಲ್ಲಿ ಅನುಮಾನವೇನಾದರೂ ಇದೆಯೇ?







