ಹರ್ಮನ್‌ಪ್ರೀತ್ ಕೌರ್: ಸಮಾಜದ ಟೀಕೆಗಳಿಗೆ ವಿಶ್ವಕಪ್‌ ಮೂಲಕ ಉತ್ತರ

"ಹುಡುಗಿಯೊಬ್ಬಳು ಕ್ರಿಕೆಟ್ ಆಡಿ ಏನು ಸಾಧಿಸುತ್ತಾಳೆ?" ಎಂದು ಸಮಾಜ ಕೇಳುವ ಪ್ರಶ್ನೆಗಳಿಗೆ ವಿಶ್ವಕಪ್‌ ಗೆಲ್ಲುವುದರ ಮೂಲಕ ಉತ್ತರ ನೀಡಿದ ನಮ್ಮ ಭಾರತದ ಮಹಿಳಾ ಕ್ರಿಕೆಟ್‌ ತಂಡ ನಾಯಕಿ ಹರ್ಮನ್‌ಪ್ರೀತ್ ಕೌರ್.
Harmanpret Kaur
ಚಿತ್ರ ಕೃಪೆ : ND TV Sports

“ಹುಡುಗಿಯೊಬ್ಬಳು ಕ್ರಿಕೆಟ್ ಆಡಿ ಏನು ಸಾಧಿಸುತ್ತಾಳೆ?” ಎಂದು ಸಮಾಜ ಕೇಳುವ ಪ್ರಶ್ನೆಗಳಿಗೆ ವಿಶ್ವಕಪ್‌ ಮೂಲಕ ಉತ್ತರ ನೀಡಿರುವುದು ನಮ್ಮ ಭಾರತದ ಮಹಿಳಾ ಕ್ರಿಕೆಟ್‌ ತಂಡ. ಪಂಜಾಬ್‌ನಂತಹ ಗ್ರಾಮೀಣ ಭಾಗಗಳಲ್ಲಿ ಹುಡುಗಿಯರು ಕ್ರಿಕೆಟ್ ಆಡುವುದು ದೊಡ್ಡ ಸವಾಲು. ಅಂತಹದ್ದರಲ್ಲಿ ಪಂಜಾಬ್‌ನ ಮೋಗಾ ನಗರದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಒಂದು ಹುಡುಗಿ ಅಂದು ಟೆನ್ನಿಸ್ ಬಾಲ್‌ಗಳೊಂದಿಗೆ ಬ್ಯಾಟ್ ಹಿಡಿದು ಕ್ರಿಕೆಟ್ ಆಡುತ್ತಿದ್ದಳು. ಅದೇ ಇಂದು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿ, ವಿಶ್ವಕಪ್ ಗೆಲ್ಲಲು ತಂಡದ ಪ್ರಮುಖ ಸೂತ್ರಧಾರಿಯಾಗಿದ್ದಾರೆ.  

ಆದರೆ ಈ ಟ್ರೋಫಿ ಇಂದು ನಿನ್ನೆಯ ಕನಸಲ್ಲ. ಅದು ಅನೇಕ ರಾತ್ರಿಗಳ ಕಣ್ಣೀರು, ಅನೇಕ ದಿನಗಳ ಪರಿಶ್ರಮ, ಅನೇಕ ವರ್ಷಗಳ ತ್ಯಾಗದ ಕಥೆ. ಹುಡುಗಿಯರಿಗೆ “ಕ್ರಿಕೆಟ್ ಆಡುವುದು ಸಾಧ್ಯವೇ?” ಎಂದು ಕೇಳುತ್ತಿದ್ದ ಸಮಾಜದ ಮಧ್ಯೆ, ಒಂದು ಹುಡುಗಿ ತನ್ನ ಕನಸನ್ನು ಬೆನ್ನೇರಿ, ಇಂದು ಲಕ್ಷಾಂತರ ಹುಡುಗಿಯರ ಬಾಳಿಗೆ ಬೆಳಕಿನ ದಾರಿ ತೋರಿಸಿದ್ದಾಳೆ.   

ಬಾಲ್ಯ ಮತ್ತು ಕ್ರಿಕೆಟ್‌ನ ಮೊದಲ ಹೆಜ್ಜೆ

Harmanpret Kaur

ಹರ್ಮನ್‌ಪ್ರೀತ್ ಕೌರ್ ಭುಲ್ಲರ್ ಅವರು 1989 ಮಾರ್ಚ್ 8 ರಂದು ಪಂಜಾಬ್‌ನ ಮೋಗಾ ನಗರದಲ್ಲಿ ಜನಿಸಿದರು. ತಂದೆ ಹರ್ಮಂದರ್ ಸಿಂಗ್ ಭುಲ್ಲರ್ ಸ್ಥಳೀಯ ನ್ಯಾಯಾಲಯದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಮಾಜಿ ಕ್ರೀಡಾಪಟು (ಕ್ರಿಕೆಟ್, ವಾಲಿಬಾಲ್, ಬಾಸ್ಕೆಟ್‌ಬಾಲ್) ಕೂಡ ಹೌದು. ಕುಟುಂಬದ ಆದಾಯಕ್ಕೆ ನಾಲ್ಕು ಎಮ್ಮೆಗಳ ಹಾಲು ಮಾರಾಟವೇ ಮುಖ್ಯ ಮೂಲ ಆದಾಯ. ತಾಯಿ ಸತ್ವಿಂದರ್ ಕೌರ್ ಮನೆಯಲ್ಲೇ ಇದ್ದು, ಮನೆ ನಡೆಸುತ್ತಿದ್ದರು.  

ಹರ್ಮನ್‌ ಅವರ ಬಾಲ್ಯದ ಕ್ರಿಕೆಟ್ ಆಟಕ್ಕೆ ತಂದೆಯೇ ಮೊದಲ ಗುರು. ಮನೆಯಲ್ಲಿಯೇ ಟೆನ್ನಿಸ್ ಬಾಲ್‌ಗಳೊಂದಿಗೆ ಅಭ್ಯಾಸ ಮಾಡಿಸುತ್ತಿದ್ದರು. ಏಕೆಂದರೆ  ಕ್ರಿಕೆಟ್ ಸಾಮಗ್ರಿಗಳು ದುಬಾರಿ,  ಕುಟುಂಬಕ್ಕೆ ಅದನ್ನು ಖರೀದಿಸಲು ಸಾಧ್ಯವಾಗದ್ದು. ಆದರೂ ತಂದೆಯ ಶಿಸ್ತು, ಪ್ರೋತ್ಸಾಹ ಮತ್ತು ತ್ಯಾಗ ಅವಳಿಗೆ ದಾರಿದೀಪವಾಯಿತು. ತಂದೆ ತಮ್ಮ ಕನಸನ್ನು ಬಿಟ್ಟು ಮಗಳ ಕನಸಿಗೆ ಜೀವ ತುಂಬಿದರು. ಆರ್ಥಿಕ ತೊಂದರೆಗಳ ನಡುವೆ ಬೈಕ್‌ನಲ್ಲಿ 30 ಕಿ.ಮೀ. ಪ್ರಯಾಣ ಮಾಡಿ ತರಬೇತಿಗೆ ಕರೆದೊಯ್ಯುತ್ತಿದ್ದರು; ತಂದೆಯ ಕೋರ್ಟ್ ಸಂಬಳವನ್ನು ಕ್ರಿಕೆಟ್ ಕಿಟ್‌ಗೆ ಖರ್ಚು ಮಾಡುತ್ತಿದ್ದರು.

ಶಾಲಾ ಯೂನಿಫಾರ್ಮ್ ಧರಿಸಿ, ದುಪಟ್ಟಾ ಕಟ್ಟಿಕೊಂಡು ಗುರು ನಾನಕ್ ಕಾಲೇಜು ಮೈದಾನಕ್ಕೆ ಬಂದಾಗ, ಮಧ್ಯಮ ವೇಗದ ಬೌಲಿಂಗ್ ಮಾಡಿ ಹುಡುಗರನ್ನೆ ಗೊಂದಲಕ್ಕೀಡು ಮಾಡುತ್ತಿದ್ದಳು. ಕೋಚ್ ಕಮಲ್‌ದೀಪ್ ಸಿಂಗ್ ಸೋಢಿ ಅವರಿಗೆ “ಇದು ವಿಶೇಷ ಪ್ರತಿಭೆ” ಎಂದೆನಿಸಿ, ಗಿಯಾನ್ ಜ್ಯೋತಿ ಶಾಲಾ ಅಕಾಡೆಮಿಯಲ್ಲಿ ಸೇರಿದ ನಂತರ, ಪ್ರತಿದಿನ 30 ಕಿ.ಮೀ. ಬಂದು ಅಭ್ಯಾಸ ಮಾಡುತ್ತಿದ್ದಳು. ಖಾಸಗಿ ಶಾಲಾ ಶುಲ್ಕಕ್ಕೆ ತಂದೆ ಚಿಂತೆಯಲ್ಲಿದ್ದಾಗ, ಕೋಚ್ ಸೋಢಿ “ನಾನು ನೋಡಿಕೊಳ್ಳುತ್ತೇನೆ” ಎಂದು ಭರವಸೆ ನೀಡಿದರು. 10 ವರ್ಷದೊಳಗೆ ಹುಡುಗರ ತಂಡದೊಂದಿಗೆ ಆಡಲು ಆರಂಭಿಸಿದಳು.

ಜಲಂಧರ್‌ನ ಹಾನ್ಸ್ ರಾಜ್ ಮಹಿಳಾ ಮಹಾವಿದ್ಯಾಲಯದಲ್ಲಿ ಆರಂಭಿಕ ಶಿಕ್ಷಣ ಪಡೆದರು. 2009-11ರಲ್ಲಿ ಮೀರತ್‌ನ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಪಡೆದಿದ್ದಾರೆ.   ಆದರೆ 2018ರಲ್ಲಿ ಪಂಜಾಬ್ ಪೊಲೀಸ್ ಡಿಎಸ್‌ಪಿ ಹುದ್ದೆ ನೇಮಕದ ಸಂದರ್ಭದಲ್ಲಿ ವಿಶ್ವವಿದ್ಯಾಲಯ ರೆಕಾರ್ಡ್‌ನಲ್ಲಿ ನೋಂದಣಿ ಕಂಡುಬಂದಿಲ್ಲ. ಹಾಗಾಗಿ ಪದವಿ ನಕಲಿ ಎಂಬ ಆರೋಪ ಎದ್ದಿತು. ಇದರಿಂದ ಡಿಎಸ್‌ಪಿ ಹುದ್ದೆ ರದ್ದಾಗಿ ಕಾನ್‌ಸ್ಟೇಬಲ್ ಆಗಿ ಡಿಮೋಟ್ ಆಯಿತು. ಹರ್ಮನ್ ಮತ್ತು ಕುಟುಂಬ “ಪದವಿ ನಿಜ, ಪರೀಕ್ಷೆಗಳು ಉತ್ತೀರ್ಣ” ಎಂದು ಸ್ಪಷ್ಟಪಡಿಸಿದರೂ, ಕ್ರಿಕೆಟ್ ಷೆಡ್ಯೂಲ್ ಒತ್ತಡದಿಂದ ದಾಖಲೆ ತೊಂದರೆಯಾಯಿತು. ಈ ವಿವಾದ ಕ್ರಿಕೆಟ್ ವೃತ್ತಿಗೆ ಪರಿಣಾಮ ಬೀರದೇ ಹಳೆಯದಾಯಿತು; ನಂತರ ಭಾರತೀಯ ರೈಲ್ವೇಯಲ್ಲಿ ಆಫೀಸರ್ ಆನ್ ಸ್ಪೆಷಲ್ ಡ್ಯೂಟಿ (ಓಎಸ್‌ಡಿ) ಆಗಿ ಮುಂದುವರಿದರು.

ಸಮಾಜದ ವಿರೋಧ ಮತ್ತು ಲಿಂಗ ತಾರತಮ್ಯದ ಹೋರಾಟ

ಪಂಜಾಬ್‌ನ ಗ್ರಾಮೀಣ ಭಾಗಗಳಲ್ಲಿ ಹುಡುಗಿಯರು ಕ್ರಿಕೆಟ್ ಆಡುವುದು ದೊಡ್ಡ ಸವಾಲು. “ಹುಡುಗಿಯೊಬ್ಬಳು ಕ್ರಿಕೆಟ್ ಆಡಿ ಏನು ಸಾಧಿಸುತ್ತಾಳೆ?” ಎಂದು ಸಮಾಜ ಕೇಳುತ್ತಿತ್ತು. ಆದರೆ ಹರ್ಮನ್‌ ಅವರ ತಂದೆ ಯಾವುದೇ ವಿರೋಧಕ್ಕೂ ಮಣಿಯಲಿಲ್ಲ. ಮಗಳನ್ನು ಮೈದಾನಕ್ಕೆ ಬಿಟ್ಟರು. ಮಹಿಳಾ ತಂಡಗಳೇ ಇಲ್ಲದಿದ್ದ ಕಾಲದಲ್ಲಿ ಹುಡುಗರ ಜೊತೆ ಆಡಬೇಕಿತ್ತು ಹರ್ಮನ್‌. ಗ್ರಾಮದ ರಸ್ತೆಗಳಲ್ಲಿ, ದುರ್ಬಲ ಬ್ಯಾಟ್‌ಗಳೊಂದಿಗೆ, ಸಿಮ್‌ಲೆಸ್ ಬಾಲ್‌ಗಳೊಂದಿಗೆ ಆಡುತ್ತಿದ್ದಳು. ಆರ್ಥಿಕ ಕಷ್ಟಗಳು, ಸಾಮಾಜಿಕ ಒತ್ತಡಗಳು ಎಲ್ಲವನ್ನೂ ಎದುರಿಸಿ ಮೆಟ್ಟಿ ನಿಂತಳು.

ತರಬೇತಿಯಲ್ಲಿ ಮೈ ಮತ್ತು ಮನಸ್ಸನ್ನು ಗಟ್ಟಿಯಾಗಿ ಬೆಳೆಸಿಕೊಂಡಳು. ಕೋಚ್ ಸೋಢಿ ಅಕಾಡೆಮಿಯಲ್ಲಿ ದಿನಕ್ಕೆ 6 ಗಂಟೆ ತರಬೇತಿ: 100 ಮೀಟರ್ ಸ್ಪ್ರಿಂಟ್, 20 ಕೆ.ಜಿ. ಲೋಡ್ ಜೊತೆ ರನ್ನಿಂಗ್, ಯೋಗ, ಜಿಮ್, ಒಂದೇ ದಿನ 500 ಬಾಲ್‌ಗಳನ್ನು ಎದುರಿಸುವುದು. ಮೀಡಿಯಂ ಪೇಸ್‌ನಿಂದ ಆಫ್-ಸ್ಪಿನ್ ಬೌಲಿಂಗ್‌ಗೆ ಬದಲಾವಣೆ ಮಾಡಿದಳು.

ಕ್ರಿಕೆಟ್ ಜೀವನದ ದುಃಖಗಳು ಮತ್ತು ತ್ಯಾಗಗಳು

Harmanpret Kaur

2006-07ರಿಂದ ಪಂಜಾಬ್ ಮಹಿಳಾ ತಂಡಕ್ಕೆ ಆಡುತ್ತಾ ಬಂದಳು. 2009ರಲ್ಲಿ 20 ವರ್ಷ ವಯಸ್ಸಿನಲ್ಲಿ ಭಾರತೀಯ ತಂಡಕ್ಕೆ ಆಯ್ಕೆ. ಪಾಕಿಸ್ತಾನ ವಿರುದ್ಧ ವಿಶ್ವಕಪ್ ಡೆಬ್ಯೂ. ಆದರೆ ಆರಂಭದಲ್ಲಿ ಬೌಲಿಂಗ್‌ನಲ್ಲಿ ಅವಕಾಶ ಸಿಗಲಿಲ್ಲ. ಜುಲನ್ ಗೋಸ್ವಾಮಿ, ಅಮಿತಾ ಶರ್ಮಾ ಇದ್ದ ತಂಡದಲ್ಲಿ ಹೊಸ ಬೌಲರ್‌ಗೆ ಅವಕಾಶ ಕಷ್ಟವಾಯಿತು. ನಂತರ  ತಂದೆಯ ಸಲಹೆಯಂತೆ ಆಫ್-ಸ್ಪಿನ್ ಆರಂಭಿಸಿದ ಹರ್ಮನ್‌ಗೆ ಬ್ಯಾಟ್ ಮತ್ತು ಬಾಲ್ ಎರಡೂ ಶಕ್ತಿಯಾಯಿತು.

 ಪಂಜಾಬ್‌ನ ಮೊಗಾ ಊರಿನಿಂದ ಬಂದ ಹರ್ಮನ್‌ಪ್ರೀತ್ ಕೌರ್, 2014ರಲ್ಲಿ ಮುಂಬೈಗೆ ಬಂದು ಇಂಡಿಯನ್ ರೈಲ್ವೇಯಲ್ಲಿ OSP ಉದ್ಯೋಗ ಪಡೆದರು. ಮೊದಲ ಸಂಬಳ ₹25,000. ಕುಟುಂಬದಿಂದ ದೂರವಿದ್ದರೂ, ಈ ಉದ್ಯೋಗ ಕ್ರಿಕೆಟ್ ಪಯಣಕ್ಕೆ ಆರ್ಥಿಕ ಬೆಂಬಲ ನೀಡುತಿತ್ತು. ಇದೇ ರೀತಿ,  ಕುಟುಂಬದ ಜವಾಬ್ದಾರಿಗಾಗಿ ಧೋನಿಯವರೂ ರೈಲ್ವೇಯಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡಿ,ನಂತರ ಕ್ರಿಕೆಟ್‌ನಲ್ಲಿ ಸ್ಥಾನ ಪಡೆದು ತಮ್ಮ ಕೀಪಿಂಗ್‌, ನಾಯಕತ್ವ ಮತ್ತು ಫೀನಿಶಿಂಗ್‌ ಶೈಲಿಯಿಂದಲೇ ಇಡೀ ಜಗತ್ತಿನ ಗಮನ ಭಾರತದ ಕಡೆಗೆ ಸೆಳೆಯುವ ಹಾಗೆ ಮಾಡಿದರು. 

ಇಬ್ಬರೂ ಸಣ್ಣ ಹಳ್ಳಿಯಿಂದ ಉದಯಿಸಿ, ತಮ್ಮ ಪರಿಶ್ರಮದ ಮೂಲಕ ಭಾರತದ ನಾಯಕರಾದವರು. ಹರ್ಮನ್‌ಪ್ರೀತ್ 2025ರ ICC ಮಹಿಳಾ ODI ವರ್ಲ್ಡ್ ಕಪ್‌ನಲ್ಲಿ ಭಾರತವನ್ನು ಮೊದಲ ವಿಜಯಕ್ಕೆ ಕೊಂಡೊಯ್ದರು, ಧೋನಿಯಂತೆಯೇ ನಿರ್ಣಾಯಕ ಸಂದರ್ಭಗಳಲ್ಲಿ ಧಿಟ್ಟ ನಿರ್ದಾರಗಳ ಮೂಲಕವೇ ತಂಡವನ್ನು ಚಾಂಪಿಯನ್‌ ಆಗಿ ಮಾಡಿದರು. ಈಗ ಇಬ್ಬರು ಕ್ರಿಕೆಟ್‌ ಲೋಕದ ಅಪ್ರತಿಮ ನಾಯಕರಾಗಿ ಮಿನುಗುತ್ತಿದ್ದಾರೆ.

ರೈಲ್ವೇಸ್ (2014-2017), ಸಿಡ್ನಿ ಥಂಡರ್ (WBBL – ಮೊದಲ ಭಾರತೀಯ ಮಹಿಳಾ ಕ್ರಿಕೆಟರ್), ಮೆಲ್ಬರ್ನ್ ರೆನೆಗೇಡ್ಸ್, ಮ್ಯಾಂಚೆಸ್ಟರ್ ಒರಿಜಿನಲ್ಸ್, ಟ್ರೆಂಟ್ ರಾಕೆಟ್ಸ್ ತಂಡಗಳಲ್ಲಿ ಆಡಿದರು. WPLನಲ್ಲಿ ಮುಂಬೈ ಇಂಡಿಯನ್ಸ್ ನಾಯಕಿಯಾಗಿ 2023 ಮತ್ತು 2025ರಲ್ಲಿ ಟ್ರೋಫಿ ಗೆದ್ದರು.

2017 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 171* ರನ್ ಗೆದ್ದು ಫೈನಲ್‌ಗೆ ಬಂದರು. ಆದರೆ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 9 ರನ್‌ಗಳಿಂದ ಸೋತಾಗ ಕಣ್ಣೀರು ಸುರಿಸಿದರು. 2022ರಲ್ಲಿ ಮಿಥಾಲಿ ರಾಜ್ ಅವರ ನಿವೃತ್ತಿಯ ಸಂದರ್ಭದಲ್ಲಿ ಹರ್ಮನ್‌ಪ್ರೀತ್ ಕೌರ್ ಅವರೊಂದಿಗೆ ವಿವಾದ ಎದ್ದಿತು. ಅದೇನೆಂದರೆ 2018ರ T20 ವಿಶ್ವಕಪ್ ಸೆಮಿಯಲ್ಲಿ ಮಿಥಾಲಿ ರಾಜ್ ಅವರನ್ನು ಆಡಿಸದೆ ತಂಡದಲ್ಲಿ ವಿಭಜನೆ ಆಗಿತ್ತು.ಹಾಗೆ ಮಿಥಾಲಿಯ ಮ್ಯಾನೇಜರ್ “ಮ್ಯಾನಿಪ್ಯುಲೇಟಿವ್” ಎಂದು ಹರ್ಮನ್‌ ಅವರನ್ನು ಟೀಕಿಸಿದ್ದರು. ಆದರೆ ಹರ್ಮನ್‌ ತಮ್ಮ ವೈಯಕ್ತಿಕ ಜೀವನವನ್ನು ಬದಿಗಿಟ್ಟು ಕ್ರಿಕೆಟ್‌ಗೆ ಎಲ್ಲವನ್ನೂ ಸಮರ್ಪಿಸಿದರು.  

ನಾಯಕತ್ವದ ದಾರಿ ಮತ್ತು ಐತಿಹಾಸಿಕ ಗೆಲುವು

Harmanpret Kaur

2016ರಲ್ಲಿ ಟಿ-20 ನಾಯಕಿ, 2022ರಲ್ಲಿ ಮಿಥಾಲಿ ರಾಜ್ ನಿವೃತ್ತಿಯ ನಂತರ ಎಲ್ಲಾ ಫಾರ್ಮ್ಯಾಟ್‌ಗಳ ನಾಯಕಿ.   2016 ಏಷ್ಯಾ ಕಪ್, 2022 ಏಷ್ಯಾ ಕಪ್, 2022 ಏಷ್ಯನ್ ಗೇಮ್ಸ್ ಚಿನ್ನ, 2022 ಕಾಮನ್‌ವೆಲ್ತ್ ಸಿಲ್ವರ್, ಇಂಗ್ಲೆಂಡ್‌ನಲ್ಲಿ ಮೊದಲ ಒಡಿಐ ಸರಣಿ ಗೆಲುವು (2022), ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಗೆಲುವು (2023).

2025 ವಿಶ್ವಕಪ್ (ನವೆಂಬರ್ 2, ನವಿ ಮುಂಬೈ ಡಿವೈ ಪಾಟೀಲ್ ಸ್ಟೇಡಿಯಂ): ಗ್ರೂಪ್ ಸ್ಟೇಜ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 8 ರನ್ ಸೋತರೂ 47 ರನ್ ಗಳಿಸಿ ಧೈರ್ಯ ತುಂಬಿದರು. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 339 ಚೇಸ್  ಮಾಡಲು ಇವರು 89 ರನ್ ಭಾರಿಸಿ, ಜೆಮಿಮಾ ಜೊತೆ 167 ರನ್ ಪಾಲುದಾರಿಕೆಯ ಆಟ ಆಡಿದರು. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿ ಭಾರತಕ್ಕೆ ಮೊದಲ ಮಹಿಳಾ ವಿಶ್ವಕಪ್ ತಂದರು. ಕೊನೆಯ ಕ್ಯಾಚ್ ಪಡೆದು ಟ್ರೋಫಿ ಎತ್ತಿದರು. ಕೈಯಲ್ಲಿ ಟ್ರೋಫಿ ಹಿಡಿದ ಹರ್ಮನ್‌ ಕಣ್ಣಲ್ಲಿ ಆನಂದಬಾಷ್ಪ ಸುರಿಯುತ್ತಿತ್ತು. ತಂದೆಯ ಬಳಿ ಓಡಿದ ಆ ಒಲವಿನ ಕ್ಷಣ, ಎಲ್ಲರ ಹೃದಯ ತಟ್ಟಿತು. ಈ ಗೆಲುವು ಎಲ್ಲರ ಟೀಕೆಗಳನ್ನು ಮೌನ ಮಾಡಿತು.

ಅಂಕಿಅಂಶಗಳು (ನವೆಂಬರ್ 2025 ವರೆಗೆ):

  • ಒಡಿಐ: 161 ಪಂದ್ಯಗಳು, 4409 ರನ್, ಸರಾಸರಿ 37.05, 7 ಸೆಂಚುರಿ, 22 ಅರ್ಧಸೆಂಚುರಿ, ಅತ್ಯಧಿಕ 171*
  • ಟಿ20ಐ: 182 ಪಂದ್ಯಗಳು, 3654 ರನ್, ಸರಾಸರಿ 28.77, 1 ಸೆಂಚುರಿ, 14 ಅರ್ಧಸೆಂಚುರಿ
  • ಟೆಸ್ಟ್: 6 ಪಂದ್ಯಗಳು, 200 ರನ್, 12 ವಿಕೆಟ್

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »