ಬೆಂಗಳೂರಿನ ಮಲ್ಲೇಶ್ವರದ ಹೃದಯಭಾಗದಲ್ಲಿ ನಡೆಯುವ ʼಕಾಡುಮಲ್ಲೇಶ್ವರ ಕಡಲೆಕಾಯಿ ಪರಿಷೆʼ ಕೇವಲ ಸಂತೆಯಲ್ಲ. ಬದಲಿಗೆ ರೈತರ ಉತ್ಪನ್ನಗಳನ್ನು ಸಂಭ್ರಮಿಸುವ, ಪರಂಪರೆಯನ್ನು ಉಳಿಸುವ, ಪರಿಸರ ಸ್ನೇಹಿ ಉತ್ಸವ.
ಕಾರ್ತಿಕ ಮಾಸದ ಶುಭ ಸಂದರ್ಭದಲ್ಲಿ ನಡೆಯುವ ಈ ಪರಿಷೆಯು 9 ವರ್ಷಗಳಿಂದ ಸತತವಾಗಿ ನಡೆಯುತ್ತಿದ್ದು, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶದ ರೈತರಿಗೆ ನೇರ ಮಾರಾಟದ ಅವಕಾಶವನ್ನು ಕಲ್ಪಿಸುತ್ತಿದೆ. ಮಧ್ಯವರ್ತಿಗಳನ್ನು ತಪ್ಪಿಸಿ, ಪ್ಲಾಸ್ಟಿಕ್ ಮುಕ್ತವಾಗಿ ನಡೆಸುವ ಈ ಸಂತೆಯು ಗ್ರಾಮೀಣ ಸಂಸ್ಕೃತಿಯ ಸೊಗಡಿನಂತೆ ಬೆಂಗಳೂರಿನ ಉತ್ತರ ಭಾಗಕ್ಕೆ ಹಸಿರು ರಂಗು ತುಂಬುತ್ತದೆ.
2025ರಲ್ಲಿ ನವೆಂಬರ್ 8ರಿಂದ 10ರವರೆಗೆ ನಡೆಯುವ 9ನೇ ವರ್ಷದ ಪರಿಷೆಯು ಇನ್ನಷ್ಟು ವಿಶಿಷ್ಟತೆಗಳೊಂದಿಗೆ ಬರುತ್ತಿದ್ದು, ಈ ಕುರಿತು ಕಾಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಯೂ ಆದ ಬಿ.ಕೆ. ಶಿವರಾಂ ಅವರು ಸಮಾಚಾರ.ಕಾಮ್‌ನೊಂದಿಗೆ ಹಲವು ಮಾಹಿತಿ ಹಂಚಿಕೊಂಡಿದ್ದಾರೆ.
- ಕಡಲೆಕಾಯಿ ಪರಿಷೆಯ ವಿಶೇಷತೆಗಳೇನು? ಇದರ ಉದ್ದೇಶ ಏನು?
ಇದು ‘ರೈತ ಸ್ನೇಹಿ’, ‘ಬೀದಿ ಬದಿ ವ್ಯಾಪಾರ ಸ್ನೇಹಿ’ ಮತ್ತು ‘ಪರಿಸರ ಸ್ನೇಹಿ’ ಪರಿಷೆ. ರೈತರು ದಲ್ಲಾಳಿಗಳನ್ನು ತಪ್ಪಿಸಿ ನೇರ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಕಡಲೆಕಾಯಿಯ ಜೊತೆಗೆ ಕರಕುಶಲ ವಸ್ತುಗಳು, ಗೊಂಬೆಗಳು, ಆಭರಣಗಳು, ತಿಂಡಿ-ತಿನಿಸು, ಚುರ್ಮುರಿ, ಉಳವಿ ಬಳೆ, ವಿಭೂತಿ – ಎಲ್ಲವೂ ದೊರೆಯುತ್ತದೆ. ಕೇವಲ ಕರ್ನಾಟಕದವರಲ್ಲ, ಇತರ ರಾಜ್ಯಗಳ ರೈತರೂ ಭಾಗವಹಿಸುತ್ತಾರೆ. ರಾಷ್ಟ್ರಕವಿ ಕುವೆಂಪುರವರಂತೆ, ಇದು ‘ಸರ್ವ ಜನಾಂಗದ ಶಾಂತಿಯ ತೋಟ’ – ಯಾವುದೇ ಭಾಷೆ, ಜಾತಿ, ಧರ್ಮ, ಪಕ್ಷ ಬೇದವಿಲ್ಲ. ಬೆಂಗಳೂರಿನ ಉತ್ತರ ಭಾಗದಲ್ಲಿ ಪರಿಷೆಗಳ ಕೊರತೆಯಿದ್ದರಿಂದ ಇಲ್ಲಿ ಆರಂಭಿಸಿದ್ದೇವೆ. ನಮ್ಮ ಧ್ಯೇಯ ವಾಕ್ಯ: “ನೆಲ-ಜಲ-ಹಸಿರು ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ನಮ್ಮ ಧ್ಯೇಯದಲ್ಲಿ ನೀವೂ ಭಾಗಿಯಾಗಿರಿ.” ಸಂಪ್ರದಾಯ ಪಾಲಿಸಿ, ಮೂಢನಂಬಿಕೆಗಳನ್ನು ತೊಡೆಯುವುದು ನಮ್ಮ ಗುರಿ.

- ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಇತಿಹಾಸದಿಂದಲೇ ಆರಂಭಿಸೋಣ, ಗೆಳೆಯರ ಬಳಗವು ಹೇಗೆ ರೂಪುಗೊಂಡಿತು?
ಬಿ.ಕೆ. ಶಿವರಾಂ: ನಮ್ಮ ಬಳಗವು ಕಳೆದ 30 ವರ್ಷಗಳ ಹಿಂದಿನಿಂದಲೇ ಕಾರ್ಯನಿರತವಾಗಿದೆ. ಇದು ಕಾಡುಮಲ್ಲೇಶ್ವರ ದೇವಸ್ಥಾನದ ಪರಂಪರೆಯನ್ನು ರಕ್ಷಿಸುವ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶದಿಂದ ಆರಂಭವಾಯಿತು. ಇಂದು ಸುಮಾರು 300 ಸದಸ್ಯರೊಂದಿಗೆ ನಾವು ಬೆಳೆದಿದ್ದೇವೆ. ಆದರೆ ಒಂದು ದೊಡ್ಡ ಸವಾಲು ಬಂದಿತು – ನಂದಿ ತೀರ್ಥ ದೇವಸ್ಥಾನದ ಜಾಗವನ್ನು ಕೆಲವರು ನಕಲಿ ದಾಖಲೆಗಳನ್ನು ಬಳಸಿ ವಶಪಡಿಸಿಕೊಳ್ಳಲು ಯತ್ನಿಸಿದ್ದರು, “ಇದು ನನ್ನ ಜಾಗ, ನಾನು ಕಟ್ಟಡ ನಿರ್ಮಿಸುತ್ತೇನೆ” ಎಂದು ಹೇಳಿದರು. ನಾವು ದಾಖಲೆಗಳನ್ನು ಪರಿಶೀಲಿಸಿದಾಗ, ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನದ ಜಾಗ ಅವರ ಹೆಸರಿನಲ್ಲೇ ಕಂದಾಯ ಖಾತೆಯಾಗಿತ್ತು. ಇದು ನಮಗೆ ದೊಡ್ಡ ಹೋರಾಟಕ್ಕೆ ಕಾರಣವಾಯಿತು.
- ಆ ಹೋರಾಟ ಹೇಗೆ ಗೆದ್ದೀರಿ? ದೇವಸ್ಥಾನದ ಉಳಿಸಲು ಹೇಗೆ ಸಾಧ್ಯವಾಯಿತು?
1923ರ ದಾಖಲೆಗಳು ನಮಗೆ ಸಹಾಯ ಮಾಡಿದವು. ಅದರಲ್ಲಿ ಕಾಡುಮಲ್ಲೇಶ್ವರ ದೇವಸ್ಥಾನದ ತೀರ್ಥ ಭಾವಿ ಮತ್ತು ನವರಂಗ ಮಂಟಪದ ಬಗ್ಗೆ ಉಲ್ಲೇಖವಿತ್ತು. ಇದನ್ನು ಆಧರಿಸಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಮಾಡಿದಾಗ, ಜಾಗ ದೇವಸ್ಥಾನಕ್ಕೆ ಸೇರಿದ್ದು ಇತ್ಯರ್ಥವಾಯಿತು. ನಂತರ ನಾವು ದೇವಸ್ಥಾನ ಪುನಶ್ಚೇತನಗೊಳಿಸಿದ್ದೇವೆ. ಕೊಳದಲ್ಲಿ ಹೂಳೆತ್ತುವ ಶ್ರಮದಾನದ ಸಂದರ್ಭದಲ್ಲಿ ಶಿವಲಿಂಗ ಮತ್ತು ತೀರ್ಥಭಾವಿ ಗೋಚರವಾಯಿತು. ನಂದಿ ಬಾಯಿಯಿಂದ ಬಂದ ನೀರು ಶಿವಲಿಂಗದ ಮೇಲೆ ಬಿದ್ದು, ದೇವಸ್ಥಾನದ ಮುಂದಿನ ನಂದಿಯ ಮೇಲೆ ಹರಿಯುತ್ತದೆ. ಅದು ಮತ್ತೆ ಬಾವಿಗೆ ಹೋಗಿ, ವೃಷಭಾವತಿ ನದಿಗೆ ಹರಿಯುತ್ತದೆ – ರಾಜಾ ಕಾಲುವೆಯ ಮೂಲಕ ಅರ್ಕಾವತಿ ಮತ್ತು ಕಾವೇರಿಗೆ ಸೇರುವ ವ್ಯವಸ್ಥೆಯಿದ್ದರೂ, ಈಗ ಅದು ಕೊಳಚೆ ನೀರಿನ ಚರಂಡಿಯಾಗಿ ಬದಲಾಗಿದೆ. ಈ ಐತಿಹ್ಯವನ್ನು ಉಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ.
- ದೇವಸ್ಥಾನದ ಅಭಿವೃದ್ಧಿ ಕೆಲಸಗಳು ಹೇಗೆ ನಡೆದವು?
ನಾವು ಮೊದಲು ದಕ್ಷಿಣ ಮುಖ ನಂದಿಯನ್ನು ನಿರ್ಮಿಸಿದ್ದೇವೆ – ಇದು ನಮ್ಮ ಬಳಗದ ಮೊದಲ ಕೊಡುಗೆ. ಎಲ್ಲ ಸದಸ್ಯರು ಸೇರಿ ಹಣ ಸಂಗ್ರಹಿಸಿ ಇದನ್ನು ಮಾಡಿದ್ದೇವೆ. ಉಳಿದ ಹಣದಿಂದ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಮತ್ತು ಮೆಟ್ಟಿಲುಗಳ ನವೀಕರಣ ಮಾಡಿದ್ದೇವೆ. ದೇವಸ್ಥಾನದ ಸುತ್ತಲಿನ ಜಾಗವು ದೊಡ್ಡದಾಗಿತ್ತು.ರುದ್ರಾಕ್ಷಿ, ಬನ್ನಿ, ಹೊಂಗೆ, ಪಾರಿಜಾತ, ದೇವಪಾರಿಜಾತ, ನಾಗಲಿಂಗ ಪುಷ್ಪ, ಕದಂಬ ಸೇರಿದಂತೆ ಅಪರೂಪದ ಮರಗಳನ್ನು ನೆಟ್ಟು ಪವಿತ್ರ ವನವನ್ನಾಗಿ ಮಾಡಿದ್ದೇವೆ. ಈ ಮರಗಳ ಹೆಸರಲ್ಲೇ ಜಾಗ ಉಳಿಯುವಂತಾಗಲಿ ಎಂಬುದು ಆಶಯ.

- ಹುಣ್ಣಿಮೆ ಹಾಡು ಕಾರ್ಯಕ್ರಮದ ಬಗ್ಗೆ ಹೇಳಿ. ಇದು ಹೇಗೆ ಆರಂಭವಾಯಿತು?
2010ರಲ್ಲಿ ಈ ಪವಿತ್ರ ವನದಲ್ಲಿ ಜಾಗ ಉಳಿದಿತ್ತು. ಆದ್ದರಿಂದ ‘ಹುಣ್ಣಿಮೆ ಹಾಡು ಕಾರ್ಯಕ್ರಮ’ ಆರಂಭಿಸಿದೆವು. ಇದು 16ನೇ ವರ್ಷಗಳಿಂದ ನಡೆಯುತ್ತಿದ್ದು ನಿರಂತರ 251 ತಿಂಗಳು ಪೂರೈಸಿದೆ. ಪ್ರತಿ ತಿಂಗಳು ಹುಣ್ಣಿಮೆಯಂದೇ ನಡೆಯುತ್ತದೆ, ಯಾವ ವಾರವಾದರೂ ಸರಿ. ಮೊದಲು ಹಿಂದೂಸ್ತಾನಿ ಗಾಯನದಿಂದ ಶುರು ಮಾಡಿದ್ದೇವೆ. ನಂತರ ಕರ್ನಾಟಕ ಶಾಸ್ತ್ರೀಯ ಗಾಯನ, ಸುಗಮ ಸಂಗೀತ, ಭಗವದ್ಗೀತೆ, ರಂಗಗೀತೆ, ಯಕ್ಷಗಾನ, ನಾಟಕ, ತಾಳವಾದ್ಯ, ಭರತನಾಟ್ಯ – ಎಲ್ಲವನ್ನೂ ಸೇರಿಸಿದ್ದೇವೆ. ಯಾವುದೇ ಸರ್ಕಾರ ಅನುದಾನ ಅಥವಾ ದೇಣಿಗೆ ಇಲ್ಲದೇ ನಾವು ಇದನ್ನು ನಡೆಸುತ್ತಿದ್ದೇವೆ. ಯಾವ ಕಾರಣಕ್ಕೂ ಒಂದು ತಿಂಗಳು ತಪ್ಪಿಸಿಲ್ಲ.
- ಈ ಕಾರ್ಯಕ್ರಮಗಳಲ್ಲಿ ಹಲವು ಗಣ್ಯ ಮಾನ್ಯರು ಭಾಗವಹಿಸಿದ್ದಾರೆಂದು ಕೇಳ್ಪಟ್ಟೆವು…
ಹೌದು, ಫಯಾಜ್ ಖಾನ್, ಆಫೀಸ್ ಖಾನ್, ರೈಸ್ ಖಾನ್, ಉಮಾಯುನ್ ಅಲ್ಲಾಪುರ್, ಬಿಚಳ್ಳಿ ಶ್ರೀನಿವಾಸ, ಅಪ್ಪಗೆರೆ ತಿಮ್ಮರಾಜು, ಆರ್ಯ ರಮಾಮಣಿ, ಎಂ.ಎಸ್. ಶೀಲಾ – ಇವರಂತಹ ದಿಗ್ಗಜರು ಹಾಡಿದ್ದಾರೆ. ಫೆಬ್ರುವರಿಯಲ್ಲಿ ‘ಪ್ರೇಮ ಗೀತೆಗಳು ಮತ್ತು ವಿರಹ ಗೀತೆಗಳು’ ಮತ್ತು ‘ಕನ್ನಡದ ಶ್ರೇಷ್ಠ ಕವಿಗಳ ಶ್ರೇಷ್ಠ ಗೀತೆಗಳು’ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ಹುಣ್ಣಿಮೆ ಹಾಡು ಪ್ರಶಸ್ತಿಯನ್ನು 9 ವರ್ಷಗಳಿಂದ ನೀಡುತ್ತಿದ್ದೇವೆ. ಈ ಬಾರಿ 90 ವರ್ಷದ ಹಿರಿಯ ಕಲಾವಿದ ಗರ್ತಿಕೆರೆ ರಾಮಣ್ಣ ಅವರಿಗೆ ನೀಡುತ್ತಿದ್ದೇವೆ. ಫಲಕ, ಗೌರವಧನ ಮತ್ತು ಸನ್ಮಾನ ಪತ್ರ ನೀಡುತ್ತೇವೆ. ಹಿಂದಿನ ಪ್ರಶಸ್ತಿ ಪಡೆದವರಲ್ಲಿ ಚಾರ್ಮಾಡಿ ಹಸನಬ್ಬ, ಸೂಲಗಿತ್ತಿ ನರಸಮ್ಮ, ಹರೆಕಾಳ ಆಜಪ್ಪ, ಸಾಲುಮರದ ತಿಮ್ಮಕ್ಕ, ಸುಕ್ರಿ ಬೊಮ್ಮನ ಗೌಡ್ರು, ಚೌಡಕಿ ರಾಧಮ್ಮ, ಕೆರೆತಾನೇ ಗೌಡ್ರು – ಇವರಲ್ಲಿ ಐದು ಜನರಿಗೆ ಪದ್ಮಶ್ರೀ ದೊರೆತಿದೆ!
ಇದನ್ನೂ ಓದಿ | ರಾಜ್ ಅಪಹರಣಕ್ಕೆ 25 ವರ್ಷ| ನಕ್ಕೀರನ್ ಹೇಳಿದ ದಂತವಿಲ್ಲದ ಆನೆ ಕಥೆ
- ಈ ಬಾರಿಯ ವಿಶೇಷತೆಗಳು ಮತ್ತು ಸೌಲಭ್ಯಗಳೇನು?
ಪ್ಲಾಸ್ಟಿಕ್ ಮುಕ್ತ ಪರಿಷೆಯಲ್ಲಿ 1.25 ಲಕ್ಷ ಪೇಪರ್ ಬ್ಯಾಗ್‌ಗಳನ್ನು ತಯಾರಿಸಿದ್ದೇವೆ. ಉದ್ಘಾಟನೆಯು ಐದು ಶ್ರೇಷ್ಠ ಕನ್ನಡತಿಯರ ಧರ್ಮಪತ್ನಿಗಳಿಂದ – ಮಾ. ರಾಮಮೂರ್ತಿ, ಸಿ. ಅಶ್ವಥ್, ಮೈಸೂರು ಅನಂತಸ್ವಾಮಿ, ದಶಗಾರ ಹಳ್ಳಿ ರಾಮಣ್ಣ, ಎಂ.ಪಿ. ಪ್ರಕಾಶ್ ಅವರ ಧರ್ಮಪತ್ನಿಗಳಿಂದ – ನಡೆಯುತ್ತದೆ. ಮೊದಲು ದೀಪ ಹಚ್ಚುವುದು ಹಿಂದಿಯೇ, ಏಕೆಂದರೆ ಅವರ ಗಂಡಂದಿರು ಇಲ್ಲ ಎಂದು. ಆದರೆ ನಾವು ಅವರಿಗೆ ಧೈರ್ಯ ತುಂಬಿ, ಸಾಧಕರಿಗೆ ಪ್ರೇರಣೆಯಾಗಿದ್ದೇವೆ. ಇನ್ನೊಂದು ಉದ್ಘಾಟನೆಯು ತೃತೀಯಲಿಂಗೆ ಅಕ್ಕಯ್ಯ ಅವರಿಂದ – ಕೆಲವು ದೇವಸ್ಥಾನಗಳಲ್ಲಿ ತೃತೀಯಲಿಂಗಿಗಳನ್ನು ಬಿಡುವುದಿಲ್ಲ, ಆದರೆ ನಾವು ಅವರಿಗೆ ಅವಕಾಶ ನೀಡುತ್ತೇವೆ. ವಿಶೇಷವಾಗಿ, ಒಂದು ವೆಂಡಿಂಗ್ ಮಷೀನ್ ಇಡುತ್ತಿದ್ದೇವೆ: ಎರಡು ಪ್ಲಾಸ್ಟಿಕ್ ಬಾಟಲ್ ಹಾಕಿದರೆ ಪೇಪರ್ ಬ್ಯಾಗ್ ಅಥವಾ ರೂಪಾಯಿ ನಾಣ್ಯ ಬರುತ್ತದೆ. ಇದರ ಯಶಸ್ಸನ್ನು ನಾವು ನೋಡುತ್ತೇವೆ. ಮಹಿಳೆಯರಿಗೆ ಮೆನ್ಸ್ಟ್ರುಯಲ್ ಕಪ್‌ಗಳ ಸಹಾಯಕ್ಕಾಗಿ ಒಂದು ಎನ್‌ಜಿಒದ ವಂಡರ್ ಮಷೀನ್, ಟಾಯ್ಲೆಟ್, ಆಂಬುಲೆನ್ಸ್ – ಮೂಲಭೂತ ಸೌಲಭ್ಯಗಳನ್ನು ಸರ್ಕಾರಕ್ಕಿಂತಲೂ ಹೆಚ್ಚು ಒದಗಿಸುತ್ತಿದ್ದೇವೆ. ಈ ಪರಿಷೆಯನ್ನು ಯಶಸ್ವಿಗೊಳಿಸುವುದೇ ನಮ್ಮ ಆಶಯ.







